Baidashree

Shree Brahma Baidarkala Vyagra Chamundi Garodi, Kappettu

ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿ, ಕಪ್ಪೆಟ್ಟು

ಉಡುಪಿ – ಅಂಬಲಪಾಡಿ ರಸ್ತೆಯ ಮೂಲಕ ಅಂಬಲಪಾಡಿ ಬೈಪಾಸ್ ದಾಟಿ ಅಂಬಲಪಾಡಿಯ ಕಡೆಗೆ 300ಮೀ.ಸಾಗಿ ಎಡಕ್ಕೆ ತಿರುಗಿ ಸುಮಾರು 500ಮೀ. ಸಾಗಿದಾಗ ಕಪ್ಪೆಟ್ಟು ಗರೋಡಿ ಸಿಗುವುದು.
ಇದು ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ಮುಖ್ಯ ದ್ವಾರ ಹಾಗೂ ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಹಿಂದೆ 1974ರಲ್ಲಿ ಜೀರ್ಣೋದ್ಧಾರ ಗೊಂಡಿದ್ದ ಈ ಗರೋಡಿಯು 2019ರಲ್ಲಿ ಷಢಾಧಾರ ಪ್ರತಿಷ್ಠೆಯೊಂದಿಗೆ ಪುನ: ಜೀರ್ಣೋದ್ಧಾರ ಗೊಂಡಿದೆ.
ಬ್ರಹ್ಮ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ನಾಗ ಬ್ರಹ್ಮರ ಬೆಳ್ಳಿಯ ಮೂರ್ತಿ, ಗಾಳಿದೇವರು ಬ್ರಹ್ಮ ಗುಂಡದ ಬಲಭಾಗದಲ್ಲಿ ಕುದುರೆ ಏರಿಕುಳಿತ ಒಕ್ಕು ಬಲ್ಲಾಳರ ಹಾಗೂ ಕುಜುಂಬ ಕಾಂಜವರ ನಿಂತಿರುವ ಮರದ ಪಾಪೆ ಇದೆ. ಬ್ರಹ್ಮ ಗುಂಡದ ಎಡದಲ್ಲಿ ಕೋಟಿಚೆನ್ನಯರ ಮರದ ಪಾಪೆ ಇದೆ. ಕೋಟಿಚೆನ್ನಯರ, ಒಕ್ಕು ಬಲ್ಲಾಳರ, ಹಾಗೂ ಕುಜುಂಬ ಕಾಂಜವರ ಪಾಪೆಯ ಹತ್ತಿರ ಮಕ್ಕಳಪಾಪೆ ಇದೆ. ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷರ ಪಾಪೆ ಇದೆ.
ಗರಡಿಯ ಹೊರಗೆ ಆವರಣದಲ್ಲಿ ಗುಡಿಯೊಳಗೆ ಮಾಯಂದಾಲ್, ಹಾಗೂ ಮಗುವಿನ ಮರದ ಪಾಪೆ, ಪಿಲ್ಚಂಡಿಯ ಕಂಚಿಗೆ ಬೆಳ್ಳಿ ಮುಚ್ಚಿದ ಮುಖ ಇದೆ.
ಗರಡಿಯ ಹತ್ತಿರ ನಾಗಬನ, ನಂದಿಗೋಣ, ಬೊಬ್ಬರ್ಯ ಕ್ಷೇತ್ರಪಾಲ, ಅಯ್ಯ ಕಲ್ಲುಗಳನ್ನು ಹೊಂದಿದ ಬ್ರಹ್ಮಸ್ಥಾನವಿದೆ.
ಮುದ್ದು ಪೂಜಾರಿಯವರು (ಪ್ರಾಯ 75 ವರ್ಷ) ಗರಡಿ ಪೂಜಾರಿಯಾಗಿದ್ದು, ಪ್ರವೀಣ್ ಕುಮಾರ್ ಶೆಟ್ಟಿ ಇವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
ಮುದ್ದು ಪೂಜಾರಿಯವರ ಮೊದಲು ಅವರ ಹಿರಿಯರಾದ ಗೋಪಾಲ ಪೂಜಾರಿ, ಲಚ್ಚು ಪೂಜಾರಿಯವರು ಪೂ ಪೂಜನೆಕಾರರಾಗಿದ್ದರು. ಸದ್ಯ ಇಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಮೊದಲು ಮಂಜಪ್ಪ ಪೂಜಾರಿ, ಕಿಟ್ಟು ಪೂಜಾರಿ, ಬೋಳ ಪೂಜಾರಿ ಇವರುಗಳು ಪಾತ್ರಿಗಳಾಗಿ ಸೇವೆ ಸಲ್ಲಿಸಿರುವರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜಯಿ ಸೇವೆ, ಮುಂತಾದ ಪೂಜಾ ಕಂಕರ್ಯಗಳು ನಡೆಯುತ್ತವೆ. ಕೊಡಿ ತಿಂಗಳಲ್ಲಿ ಅಂದರೆ ನವಂಬರ್ ತಿಂಗಳ 30ನೇ ತಾರೀಕು ಹಾಗೂ ಡಿಸೆಂಬರ್ 01 ರಂದು ಹಾಗೂ ಸುಗ್ಗಿ ತಿಂಗಳಲ್ಲಿ ಏಪ್ರಿಲ್ ತಿಂಗಳ 3 ಮತ್ತು 4ನೇ ತಾರೀಖಿನಂದು ಬೈದೇರುಗಳ ಅಗೆಲ್ ಹಾಗೂ ನೇಮೋತ್ಸವವು ನಡೆಯುವುದು. ಪಿಲ್ಚಂಡಿ, ಮಾಯಂದಾಲ್ ಹಾಗೂ ಜೋಗಿ ಪುರುಷರಿಗೂ ಸೇವೆ ನಡೆಯುತ್ತದೆ.
ಗರೋಡಿಯ ಕೂಡು ಕಟ್ಟಿಗೆ ಕಪ್ಪೆಟ್ಟು, ನಲ್ಲೂರು ಹಾಗೂ ಅಂಬಲಪಾಡಿಯಕೆಲವು ಮನೆಗಳು ಸೇರುತ್ತವೆ. ಇಲ್ಲಿ ಗುರಿಕಾರರಾಗಿ ಗಟ್ಲೆ ವಿಜಯ ಪೂಜಾರಿ, ಅಂಬಲಪಾಡಿಗೆ ಜಯ ಪೂಜಾರಿ, ಕಪ್ಪೆಟ್ಟಿಗೆ ದಯಾನಂದ ಪೂಜಾರಿ, ಶೆಟ್ಟಿ ಬಾಲೆಯಾಗಿ, ರತ್ನಾಕರ ಶೆಟ್ಟಿ, ಬಟ್ಟಲು ಗಂಧ ಚಿಕ್ಕು ಶೆಟ್ಟಿ ಇವರುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಕೂಡು ಕಟ್ಟಿಗೆ ಸೇರಿದ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ,ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗರೊಡಿಗೆ ಸ್ಥಿರ ಆದಾಯ ಇಲ್ಲದ ಕಾರಣ ವಂತಿಗೆ, ಹರಕೆ, ಸಹಾಯಧನಗಳಿಂದ ಗರೋಡಿ ಕಾರ್ಯಕ್ರಮಗಳು ನಡೆಯುತ್ತವೆ.
ಕೊಡಿ ತಿಂಗಳ ನೇಮೋತ್ಸವಕ್ಕೆ ಕಿಟ್ಟ ಪಂಬದರು ಹಾಗೂ ಸುಗ್ಗಿ ತಿಂಗಳಲ್ಲಿ ನೀರೆಯ ಜಯ ಪರವರು ನೃತ್ಯವಿಶಾದರಾಗಿ ಸೇವೆ ಸಲ್ಲಿಸುತ್ತಾರೆ. ಜಯ ಪರವರಿಗೆ ಮೊದಲು ಅವರ ಹಿರಿಯರಾದ ಮೆಣ್ಕ, ಪಿಜಿನ, ಬಾಬು, ನರಂಗ, ಪರವ ಮೊದಲಾದವರು ಇಲ್ಲಿ ಸೇವೆ ಸಲ್ಲಿಸಿರುವರು.
ವಾದ್ಯದವರಾಗಿ ಕನ್ನರ್ಪಾಡಿ ಮೋಹನನವರಿಗೂ ಮಡಿವಾಳರಾಗಿ ಅಪ್ಪು ಮಡಿವಾಳ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿ ಕಪ್ಪೆಟ್ಟು,
ಅಂಬಲಪಾಡಿ ಅಂಚೆ,
ಕಿದಿಯೂರು ಗ್ರಾಮ,
ಉಡುಪಿ ತಾಲೂಕು 576103.

ಪೂ ಪೂಜನೆಯವರ ವಿಳಾಸ:

ಮುದ್ದು ಪೂಜಾರಿ,
ಅಕ್ಷಿತಾ ನಿವಾಸ,
ಕುರ್ಕಾಲು ಮದಗ, ಸುಭಾಷ್ ನಗರ ಅಂಚೆ,
ಉಡುಪಿ ತಾಲೂಕು, 576103.
ಮೊಬೈಲ್ :9535269382

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2024