Baidashree

Shree Brahma Baidarkala Garodi, Kurkal

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರ್ಕಾಲು

ಉಡುಪಿಯಿಂದ ಉದ್ಯಾವರ ಬೈಪಾಸಿನ ಹತ್ತಿರ ಎಡಕ್ಕೆ ಬೊಳ್ಜೆಗೆ ಹೋಗುವ ರಸ್ತೆಯಲ್ಲಿ ಸುಮಾರು 1.5 ಕಿ.ಮೀ. ಸಾಗಿದರೆ ಬೊಳ್ಜೆ ಗರೋಡಿ ಸಿಗುತ್ತದೆ. ಸುಮಾರು 350 ವರ್ಷಗಳ ಇತಿಹಾಸವಿರುವ ಉಡುಪಿ ಉದ್ಯಾವರ ಬೊಳ್ಜೆಯ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು 1992-1993ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಕುರ್ಕಾಲಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು, ಇಲ್ಲಿ ಷಡಾಧಾರ ಪ್ರತಿಷ್ಠೆಯಾಗಿದೆ.
ಬಹಳ ಪುರಾತನವಾದ ಗರೋಡಿಯಿದು. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಬಹಳ ಹಿಂದೆ ಕುರ್ಕಾಲಿನ ಗಟ್ಲೆಮನೆಗೆ ಬಂದ ಕೋಟಿ ಚೆನ್ನಯರು ಮನೆಯ ಯಜಮಾನ ಪೂಜಾರಿಯವರಲ್ಲಿ ಈ ಊರಿನಲ್ಲಿ ಗರೋಡಿಯನ್ನು ನಿರ್ಮಿಸಬೇಕೆಂದು ಹೇಳುತ್ತಾರೆ. ಪೂಜಾರಿಯವರು ಅಂದಿನ ಗುತ್ತಿನವರಾದ ಕುರ್ಕಾಲು ಬೂಡು ಮಡಸ್ಥಾನಕ್ಕೆ ಹೋಗಿ ವಿಷಯವನ್ನು ಅರುಹುತ್ತಾರೆ. ಮಡಸ್ಥಾನದ ಯಜಮಾನರು ಇಲ್ಲಿನ ನಾಡಗೋಳಿಯಲ್ಲಿ ಮಂದಿಯನ್ನು ಸೇರಿಸಲು ಹೇಳುತ್ತಾರೆ. ಅಲ್ಲಿ ತೀರ್ಮಾನವಾದಂತೆ ಅಲ್ಲಿಂದ ಎಸೆದ ತೆಂಗಿನಕಾಯಿ ಈಗಿರುವ ಗರೋಡಿ ಜಾಗದಲ್ಲಿದ್ದ ಚೂರಿ ಮುಳ್ಳಿನ ಬಲ್ಲೆಗೆ ಬೀಳುತ್ತದೆ. ಅಲ್ಲಿಂದ ಉರುಳುತ್ತಾ ‘ಬೊಳಿಪಾಲೆ’ ಮರದ ಬುಡಕ್ಕೆ ಬಂದು ನಿಲ್ಲುತ್ತದೆ. ಇದು ಕಾಣಿಯೂರು ಮಠಕ್ಕೆ ಸೇರಿದ ಜಾಗವಾಗಿದ್ದು ಇಲ್ಲಿ ಕೋಟಿ ಚೆನ್ನಯರ ಬಗ್ಗೆ ತಿಳಿದಿದ್ದ ಅಂದಿನ ಸ್ವಾಮೀಜಿಯವರೇ ಬೈ ಹುಲ್ಲಿನ ಮಾಡು ಮಾಡಿ ಗರೋಡಿ ಕಟ್ಟಿಸುತ್ತಾರೆ. ಮುಂದೆ ಮಠದವರ ಉಸ್ತುವಾರಿಯಲ್ಲಿಯೇ ಗರೋಡಿಯಲ್ಲಿ ನೇಮೋತ್ಸವಗಳು ಜರಗುತ್ತಿದ್ದವು. ಗರೋಡಿಯ ಒಳಗೆ ಬ್ರಹ್ಮರ ಗುಂಡದಲ್ಲಿ ಗಾಳಿದೇವರ ಸನ್ನಿಧಿಯಲ್ಲಿ ಕೃಷ್ಣನ ಮೂರ್ತಿ ಇರುವುದು, ಮಠಕ್ಕೂ ಇಲ್ಲಿಗೂ ಇರುವ ಸಂಬಂಧವನ್ನು ಸಾರುತ್ತದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ, ಬ್ರಹ್ಮರ ಕುದುರೆಯೇರಿ ನಿಂತ ಮೂರ್ತಿ. ಮೇಲಿನ ಅಂತಸ್ತಿನಲ್ಲಿ ಗಾಳಿ ದೇವರು ಹಾಗೂ ಶ್ರೀ ಕೃಷ್ಣನ ಮೂರ್ತಿ, ಗುಂಡದ ಎಡಭಾಗದಲ್ಲಿ ಕೋಟಿ ಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ಜೋಗಿ ಪುರುಷ ಇದೆ. ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗು, ಕುದುರೆ ಮೇಲೆ ಕುಳಿತ ಒಕ್ಕು ಬಲ್ಲಾಳರ ಪಾಪೆ, ಒಬ್ಬ ಹುಡುಗನ ಪಾಪೆ.
ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಗುರುಕಂಬ, ಆಳೆತ್ತರದ ಸವಾರಿ ಕುದುರೆ, ಸಾವಿರದ ಒಂದು ದೈವಗಳ ಎಂಟು ಮಂಚ, ಪಂಜುರ್ಲಿ ಮಂಚ ಇದೆ.
ಗರೋಡಿಯ ಆವರಣದ ಗುಡಿಯಲ್ಲಿ – ನಂದಿಗೋಣ, ಕೊಳತ ಜುಮಾದಿ, ಮಾಯಂದಾಳ್ ಮತ್ತು ಮಗು, ಹುಲಿ ಚಾಮುಂಡಿ, ಅಜಕಾಯಿ ಕಲ್ಲು ಹಾಗು ಆವರಣದ ಹೊರಭಾಗದಲ್ಲಿ ಬೊಬ್ಬರ್ಯ ಸನ್ನಿಧಿ ಇದೆ.
ಕುರ್ಕಾಲು ಗರೋಡಿ ಮನೆ ವಸಂತ ಪೂಜಾರಿಯವರು ಪೂಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ದೇಜು ಪೂಜಾರಿ (ವಸಂತ ಪೂಜಾರಿಯವರ ಮಾವ), ಬೂದ ಪೂಜಾರಿ (ದೇಜು ಪೂಜಾರಿಯವರ ಮಾವ) ಈ ಸೇವೆ ಮಾಡುತಿದ್ದರು.

ರವಿ ಪೂಜಾರಿ

ಇಸವಿ 2000 ದಿಂದ ರವಿ ಪೂಜಾರಿಯವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಯಾಗಿ ಸೇವೆಮಾಡುತಿದ್ದಾರೆ. ಇವರ ಮೊದಲು ಸೋಮಯ್ಯ ಪೂಜಾರಿ, ಮುತ್ತ ಪೂಜಾರಿ, ಕುರ್ಕಾಲು ಮಣ್ಣಗುರಿ ಕೋಟಿ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ಇಲ್ಲಿ ಗರೋಡಿಯ ನಿರ್ವಹಣೆಯನ್ನು ಗರೋಡಿ ಮನೆಯ ಯಜಮಾನರೇ ಮಾಡುತ್ತಾರೆ. ಗರೋಡಿ ಕೂಡುಕಟ್ಟಿನ ಗುರಿಕಾರರುಗಳು ಸಹಕರಿಸುತ್ತಾರೆ. ದೇಣಿಗೆ ರೂಪದಲ್ಲಿ ಊರಿನಲ್ಲಿ ಗರೋಡಿಗೆ ನೆರವು ಬರುತ್ತದೆ.
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುವುದು. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲ್ ಅನ್ನ ಸೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ, ಮಾಯಂದಾಳ್ ನೇಮ, ಕಟ್ಟು ಕಟ್ಟಲೆ ಹುಲಿ ಚಾಮುಂಡಿ ಕೋಲ ನಡೆಯುತ್ತದೆ. ಹರಕೆ ಅಗೆಲ್ ಅನ್ನ ನೈವೇದ್ಯ, ನೇಮೋತ್ಸವ ಇದೆ. ಅಷ್ಟಮಿಯಂದು ಪೂಜೆ, ಅರ್ಘ್ಯ ಬಿಡುವುದಿದೆ. ದೀಪಾವಳಿಗೆ-ದೀಪಕಂಬ ನೆಟ್ಟು ಬಲಿಯೇಂದ್ರನನ್ನು ಕರೆಯುವುದಿದೆ. ಸೋಣ ತಿಂಗಳಿನಲ್ಲಿ ಅಗೆಲ್ ಅನ್ನ ನೈವೇದ್ಯ ಇದೆ. (ಪ್ರತ್ಯೇಕ). ಪಗ್ಗು ತಿಂಗಳಲ್ಲಿ 18 ಹೋಗುವ ದಿನ ಬೀಡಿನ ಮನೆಯವರ ಲೆಕ್ಕದಲ್ಲಿ ಗಜ್ಜೆಯಿ ಅಗೆಲ್ ಸೇವೆ ನಡೆಯುತ್ತದೆ.
ಕುರ್ಕಾಲು, ಕುಲೇದು, ಮಣಿಪುರ, ದೆಂದೂರು, ಪಾಜೈ, ಬಿಳಿಯೂರು, ನೂಜಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ.
ಗುರಿಕಾರರುಗಳು :
ಗಟ್ಲೆಮನೆ – ಶೀನ ಪೂಜಾರಿ (9901912547)
ಮಣಿಪುರ – ದಿಲೀಪ್ ಪೂಜಾರಿ,
ದೆಂದೂರು – ಗೋಪುಪೂಜಾರಿ,
ಪಾಜೈ – ಕೃಷ್ಣಪ್ಪ ಪೂಜಾರಿ,
ನೂಜಿ – ಕುಟ್ಟಿ ಪೂಜಾರಿ,
ಕುರ್ಕಾಲು – ರಾಜು ಪೂಜಾರಿ,
ಕುರ್ಕಾಲು – ಚೋಂಗು ಪೂಜಾರಿ,
ಕುರ್ಕಾಲು – ರಾಘು ಪೂಜಾರಿ,
ದೆಂದೂರು – ಕೊರಗ ಪೂಜಾರಿ,
ಕುರ್ಕಾಲು – ಉಮೇಶ್ ಪೂಜಾರಿ
ಬಿಳಿಯಾರು – ನೇಮಕವಾಗಿಲ್ಲ
ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುವುದು, ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಅಶುದ್ಧ ನಿಮಿತ್ತ ಶುದ್ಧ ಮಾಡುವ ಕ್ರಮಗಳಿವೆ.
ಜೀರ್ಣೋದ್ಧಾರ ವಿವರ :
11-05-1932 ರಲ್ಲಿ ಜೀರ್ಣೋದ್ಧಾರ
11-12-1990 ರಲ್ಲಿ ಬ್ರಹ್ಮಕುಂಬಾಭಿಷೇಕ
28-04-2005 ರಲ್ಲಿ ಬ್ರಹ್ಮಕಲಶ ಜೀರ್ಣೋದ್ಧಾರ
ಚಲ್ಲಪರವ, ಸಂತೋಷ ಪರವ, ಅಪ್ಪು ಪರವ, ನರಸಿಂಹ ಪರವ ಇವರು ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ನರಂಗ ಪರವ, ಚಲ್ಲ ಪರವ, ದೇವು ಪರವ ಇವರು ಈ ಸೇವೆ ಮಾಡಿದ್ದರು.

ಗರೋಡಿಯ ವಿಳಾಸ :

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಕುರ್ಕಾಲು, ಅಂಚೆ-ಸುಭಾಸ್ನಗರ
ವಯಾ ಕಟಪಾಡಿ, ಕಾಪು ತಾಲೂಕು,
ಉಡುಪಿ ಜಿಲ್ಲೆ – 574 105

ಸ್ಥಳ ಪಾತ್ರಿಯ ವಿಳಾಸ :

ರವಿ ಪೂಜಾರಿ
“ಶ್ರೀ ಮುತ್ತು” ಕುರ್ಕಾಲು ಗ್ರಾಮ,
ಸುಭಾಸ್‌ನಗರ,
ಕಾಪು ತಾಲೂಕು, ಉಡುಪಿ ಜಿಲ್ಲೆ, ದೂರವಾಣಿ : 9845178797

ಮಾಹಿತಿ ಸಂಗ್ರಹಿಸಿದ ದಿನಾಂಕ:

13-07-2022

Shree Kodamanittaya & Shree Brahma Baidarkala Garodi, Kudigrama

ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕುದಿಗ್ರಾಮ

ಉಡುಪಿಯಿಂದ ಮಣಿಪಾಲ – ಹಿರಿಯಡಕ – ಬೊಮ್ಮರಬೆಟ್ಟು ಮಾರ್ಗವಾಗಿ ಮುಂದೆ ಸಾಗಿ ಕೊಂಡಾಡಿ ಬಸ್ಟಾಪನಲ್ಲಿ ಬಲಕ್ಕೆ ತಿರುಗಿ ಸುಮಾರು 2.8ಕಿ.ಮೀ. ದೂರ ಸಾಗಿದರೆ ಕುದಿಗ್ರಾಮ ಗರೋಡಿ ಸಿಗುವುದು.
ಇದೊಂದು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಡದಲ್ಲಿ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚಲೋಹದ ಮೂರ್ತಿ , ಮೆಲಂತಸ್ಥಿನಲ್ಲಿ ಗಾಳಿ ದೇವರಿಗೆ ಕೂಚಿಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಆರಾಧಿಸುತ್ತಾರೆ. ಬ್ರಹ್ಮ ಗುಡದ ಎಡಭಾಗದಲ್ಲಿ ಮಣೆಮಂಚದಲ್ಲಿ ಕೋಟಿಚೆನ್ನಯರ ಪಂಚಲೋಹದ ಮೂರ್ತಿ ಹಾಗೂ ಬಲಭಾಗದ ಮಣೆಮಂಚದಲ್ಲಿ ಕುಜುಂಬ ಕಾಂಜವರ ಪಂಚಲೋಹಸ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ, ಮಣೆ ಮಂಚದಲ್ಲಿ ಜುಮಾದಿ ಮತ್ತು ಪರಿವಾರ ದೈವ ಹಾಗೂ ಮರ್ಲು ಭೂತಗಳಿಗೆ ಪೂಜೆ ನಡೆಯುತ್ತದೆ. ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ ಇದೆ. ಗುರು ಕಂಬದ ಆರಾಧನೆಯೂ ನಡೆಯುತ್ತದೆ.

ಕರುಣಾಕರ ಪೂಜಾರಿ

ಗರಡಿಮನೆ

ಈ ಗರೋಡಿಯಲ್ಲಿ ಗರಡಿಮನೆ ಕರುಣಾಕರ ಪೂಜಾರಿಯವರು (62 ವರ್ಷ ಪ್ರಾಯ) ಪೂ ಪೂಜನೆಯವರಾಗಿದ್ದಾರೆ. ಹಿಂದೆ ಇವರ ಹಿರಿಯರುಗಳಾದ ನಾರಾಯನ ಪೂಜಾರಿ, ಬೈಕ್ಲ ಪೂಜಾರಿ, ಇವರುಗಳು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿದ್ದರು.
ಸತೀಶ್ ಪೂಜಾರಿಯವರು ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಾಗಿರುವರು. ಹಿಂದೆ ಕಿಟ್ಟು ಪೂಜಾರಿ, ಕೋತು ಪೂಜಾರಿ, ಪೆಗ್ಗು ಪೂಜಾರಿ, ಮೊದಲಾದ ಹಿರಿಯರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.

ರವಿ ಶೆಟ್ಟಿ

ರವಿ ಶೆಟ್ಟಿ (61 ವರ್ಷ ಪ್ರಾಯ) ಇವರು ಕೊಡಮಣಿತ್ತಾಯ ಮುಕ್ಕಾಲ್ದಿಯಾಗಿರುವರು.
ಪಡುಮನೆ ಎಂ.ಎಸ್. ಆಳ್ವರ ವಂಶಸ್ಥರು ಇಲ್ಲಿಯ ಆಡಳಿತ ಮೊಕ್ತೇಸರರಾಗಿರುವರು.
ಕೋಟಿಚೆನ್ನಯರು ಇಲ್ಲಿಗೆ ಭೇಟಿ ನೀಡಿ ಕೋಟಿ ಸುರಿಯ ಹಾಕಿ ನೀರು ತೆಗೆದ “ ಕೋಟಿತೀರ್ಥ ‘’ ದಲ್ಲಿ ನೀರು ಕುಡಿದು ನಾಗಬನಕ್ಕೆ ಭೇಟಿ ನೀಡಿ ಹತ್ತಿರದಲ್ಲೆ ನೆಲ್ಲಿಯ ಮರದ ಅಡಿಯಲ್ಲಿ ಆಶ್ರಯ ಪಡೆದರು. ಅದರ ಪ್ರತೀಕವಾಗಿಇಲ್ಲಿ ಗರಡಿ ಸ್ಥಾಪನೆಯಾಯಿತು ಎಂಬ ಸ್ಥಳ ಪುರಾಣವಿದೆ. ಇಂದಿಗೂ ಇದೇ ಕೋಟಿ ತೀರ್ಥದಿಂದ ನೀರು ತಂದು ಗರೋಡಿಯಲ್ಲಿ ಪೂಜೆ ನಡೆಯುತ್ತದೆ.

ಕೋಟಿ ತೀರ್ಥದಿಂದ ಗರೋಡಿ ಹಾಗು ಗರೋಡಿಮನೆಯ ದ್ರಶ್ಯ

ಗರೋಡಿಯ ಹೊರಗೆ ಆವರಣದ ಒಳಗೆ ಗುಡಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿಯ ಆರಾಧನೆ ಇದೆ.
ಕೊಡಮಣಿತ್ತಾಯ ದೈವದ ಗುಡಿಯಲ್ಲಿ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿಯಲ್ಲಿ ಆನೆಯ ಮೇಲೆ ಕುಳಿತ ದರ್ಮರಸು, ಕುದುರೆಯ ಮೇಳೆ ಕುಳಿತ ಕೊಡಮಣಿತ್ತಾಯ, ಗಿಂಡೆಯಲ್ಲಿ ನೀರಿಟ್ಟು ಕುಕ್ಕಿನಂತಾಯ ದೈವಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು ಹಾಗೂ ತುಳಸಿಕಟ್ಟೆ, ತೀರ್ಥಭಾವಿಗಳಿವೆ. ಹತ್ತರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ಬ್ರಹ್ಮ ಸ್ಥಾನವೂ ಇದೆ.
ಕುದಿ ಗ್ರಾಮ, ವರ್ವಾಡಿ, ಪೆರ್ಣಂಕಿಲ, ಪೆಲತ್ತೂರು, ಕಣಂಜಾರು, ಪಡುಬೆಟ್ಟು, ಕೊಂಡಾಡಿ, ಊರಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದ್ದು, ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮೊದಲಾದ ಸಂದರ್ಭಗಳಲ್ಲಿ ತೆಗೆದಿಟ್ಟ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಊರು ಸೇರಿ ಕಜ್ಜಾಯ ಸೇವೆ, ಕೊಡಿ ತಿಂಗಳಲ್ಲಿ ಅನ್ನ ನೈವೇದ್ಯದ ಅಗೆಲು, ಸುಗ್ಗಿ ತಿಂಗಳಲ್ಲಿ ಶ್ರೀ ರಾಮನವಮಿಯ ಮೊದಲ ದಿನ ಅಗೆಲು ಸೇವೆ, ನವಮಿಯಂದು ಬೈದೇರುಗಳ ನೇಮ, ಮರುದಿನ ಕೊಡಮಣಿತ್ತಾಯ, ಮಾಯಂದಾಲ್, ಜೋಗಿ ಪರುಷ, ಜುಮಾದಿ, ಹಾಗೂ ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ.
ಊರ ಭಕ್ತರ ವಂತಿಗೆ, ಹರಕೆ ಸಹಾಯಧನಗಳಿಂದ ಈ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಭರಿಸಲಾಗತ್ತದೆ.
ಗರೋಡಿಯು 2004ರಲ್ಲಿ ಜೀರ್ಣೋದ್ದಾರಗೊಂಡಿದ್ದು ಅದಕ್ಕೆ ಮೊದಲು 1928ರಲ್ಲಿ ಜೀರ್ಣೋದ್ಧರವಾಗಿತ್ತು.
ಈ ಗರೋಡಿಗೆ ನೃತ್ಯವಿಶಾರದರಾಗಿ ಬಾಬು ಪರವ ಬೈಲೂರು ಇವರು ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಕುದಿಗ್ರಾಮ,
ವಯಾ ಹಿರಿಯಡ್ಕ,
ಹಿರಿಯಡ್ಕ ಅಂಚೆ,
576113, ಉಡುಪಿ ತಾಲೂಕು.

ಪೂಪೂಜನೆಯವರ ವಿಳಾಸ:

ಕರುಣಾಕರ ಬಿ. ಪೂಜಾರಿ,
ಗರೋಡಿ ಮನೆ,
ಕುದಿಗ್ರಾಮ,
ಹಿರಿಯಡ್ಕ ಅಂಚೆ,
ಉಡುಪಿ ತಾಲೂಕು. – 576113
ಮೊಬೈಲ್ ನಂಬ್ರ: 88506 38215

ಕೊಡಮಣಿತ್ತಾಯ ಮುಕ್ಕಾಲ್ದಿ:

ರವಿ ಶೆಟ್ಟಿ,
ಚಿಮಿಣಿ ಬೆಟ್ಟು ಮನೆ,
ವಯಾ ಹಿರಿಯಡ್ಕ,
ಹಿರಿಯಡ್ಕ ಅಂಚೆ,
ಉಡುಪಿ ತಾಲೂಕು. – 576113

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shree Brahma Baidarkala Garodi, Shirva Maanibettu

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಶಿರ್ವ ಮಾಣಿಬೆಟ್ಟು

ಉಡುಪಿಯಿಂದ ಕಟಪಾಡಿ – ಶಂಕರಪುರ – ಬಂಟಕಲ್ಲು ದಾಟಿ ಕೋಡುಗುಡ್ಡೆಯಲ್ಲಿ ಎಡಕ್ಕೆ ತಿರುಗಿ ಸುಮರು 3ಕಿ.ಮೀ. ಸಾಗಿದ ನಂತರ ಪುನ: ಎಡಕ್ಕೆ ತಿರುಗಿ ಸುಮಾರು 1ಕಿ.ಮೀ. ಒಳಗೆ ಹೋದರೆ ಬಲಬದಿಯಲ್ಲಿ ಗರೋಡಿ ಇರುವುದು.
ಇದೊಂದು ಆಯದ ಗರೋಡಿಯಾಗಿದ್ದು ಪೂರ್ವಕ್ಕೆ ಮುಖ್ಯ ದ್ವಾರವಿದ್ದು ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಗರೋಡಿಯಲ್ಲಿ ಷಡಾಧಾರ ಪ್ರತಿಷ್ಠೆಯಾಗಿದೆ.
ಸ್ಥಳ ಪುರಾಣದಲ್ಲಿ ತಿಳಿಸಿದಂತೆ ಕೋಟಿಚೆನ್ನಯರು ಮೊದಲು ನಡಿಬೆಟ್ಟಿಗೆ ಬಂದು ಅಲ್ಲಿ ನಿಲ್ಲಲು ಸರಿಯಾದ ಸ್ಥಳ ಇಲ್ಲದ ಕಾರಣ ನಡಿಬೆಟ್ಟು ಮನೆಯವರು ಮಾಣಿಬೆಟ್ಟಿನ ಸ್ಥಳವನ್ನು ಬಿಟ್ಟುಕೊಟ್ಟು ಇಲ್ಲಿ ಗರೋಡಿ ಸ್ಥಾಪನೆಯಾಯಿತು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬಂಗಾರದ ಮೂರ್ತಿ ಇದೆ. ಮೇಲಂತಸ್ಥಿನಲ್ಲಿ ಗಾಳಿ ದೇವರಿಗೆ ಕೂಚಿಯಲ್ಲಿ ನೀರು ದೀಪ ಇಟ್ಟು ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಪಾಪೆ ಹಾಗೂ ಮಣೆ ಮಂಚಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಮೈಸಂದಾಯ ಹಾಗೂ ಮಣೆ ಮಂಚದಲ್ಲಿ ಪಿಲ್ಚಂಡಿಯ ಬೆಳ್ಳಿಯ ಮುಖವಾಡಕ್ಕೆ ಆರಾಧನೆ ಇದೆ. ಎಡಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಜಾರಂದಾಯ, ಬಂಟ ದೈವಗಳ ಆರಾಧನೆಯೂ ಇದೆ.
ಗರೋಡಿಯ ಒಳಗೆ ಬಲಭಾಗದಲ್ಲಿ ಗುರುಕಂಬಕ್ಕೆ ಪೂಜೆ ನಡೆಯುತ್ತದೆ.

ಗರೋಡಿಯ ಹೊರಾಂಗಣದಲ್ಲಿ ಕ್ಷೇತ್ರಪಾಲ(ಅಯ್ಯಕಲ್ಲು) ತುಳಸೀಕಟ್ಟೆ, ಹಾಗೂ ದೀಪದ ಕಂಬಗಳಿವೆ.

ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮ ಸ್ಥಾನದಲ್ಲಿ ಪಂಚದೈವಗಳ ಸಾನಿಧ್ಯವಿದೆ.

ಗರೋಡಿ ಮನೆ

ಗರೋಡಿ ಮನೆಯ ಒಳಗೆ ಗುಡಿಯಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಪಾಪಗಳಿಗೆ ಪೂಜೆ ನಡೆಯುತ್ತದೆ.

ಆನಂದ ಪೂಜಾರಿ

ಸತೀಶ್ ಪೂಜಾರಿ

ಗರೋಡಿ ಮನೆ ಆನಂದ ಪೂಜಾರಿಯವರು (62ವರ್ಷ) ಇವರು ಪೂ ಪೂಜನೆಯವರಾಗಿದ್ದು ಸತೀಶ್ ಪೂಜಾರಿ(45ವರ್ಷ) ಇವರು ಎರಡನೇ ಪೂಜಾರಿಯವರಾಗಿದ್ದಾರೆ. ಇವರಿಗೆ ಮೊದಲು ಇವರ ಹಿರಿಯರಾದ ಚೀಂಕ ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು. ಜಯ ಪೂಜಾರಿಯವರು ಇಲ್ಲಿ ಬೈದೇರುಗಳ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ.
ಗರೋಡಿ ಮನೆ ಆನಂದ ಪೂಜಾರಿಯವರು (62ವರ್ಷ) ಇವರು ಪೂ ಪೂಜನೆಯವರಾಗಿದ್ದು ಸತೀಶ್ ಪೂಜಾರಿ(45ವರ್ಷ) ಇವರು ಎರಡನೇ ಪೂಜಾರಿಯವರಾಗಿದ್ದಾರೆ. ಇವರಿಗೆ ಮೊದಲು ಇವರ ಹಿರಿಯರಾದ ಚೀಂಕ ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು. ಜಯ ಪೂಜಾರಿಯವರು ಇಲ್ಲಿ ಬೈದೇರುಗಳ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ.
ಶಿರ್ವ, ಮಾಣಿಬೆಟ್ಟು, ಮಟ್ಟಾರ್, ಕೋಡು, ಪಂಜಿಮಾರ್, ಕಟ್ಟಿಂಗೇರಿ, ಎಡ್ನೇರ್, ಬೆಳಿಂಜಾಲೆ, ಸೂಡ ಮಕ್ಕೇರಿ ಬೈಲು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದ್ದಾರೆ. ಊರವರ ವಂತಿಗೆ, ಕಾಣಿಕೆ, ಗರೋಡಿ ಮನೆ ಕುಟುಂಬದವರ ಸಹಾಯಧನಗಳಿಂದ ಎಲ್ಲಾ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಇತ್ತೀಚೆಗೆ 2023ರಲ್ಲಿ ಗರೋಡಿಯು ಜೀರ್ಣೋದ್ಧಾರಗೊಂಡಿದೆ. ಅದಕ್ಕೆ ಮೊದಲು 2008 ಹಾಗೂ 1970ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ ಮೂಡುಬೆಳ್ಳೆ ಮತ್ತು ಸಂಘಟಿಗರು, ಮಡಿವಾಳರಾಗಿ ಸತೀಶ್ ಮಡಿವಾಳ ಸೂಡ, ವಾದ್ಯದವಾಗಿ ಲಕ್ಷಣ ಸೇರಿಗಾರ ಎಲ್ಲೂರು, ಹಾಗೂ ಹನೀಪ್ ಮುದರಂಗಡಿ ಇವರುಗಳು ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮಾಣಿಬೆಟ್ಟು,
ಶಿರ್ವ ಗ್ರಾಮ, ಅಂಚೆ ಮಟ್ಟಾರು,
ಕಾಪು ತಾಲೂಕು,
ಉಡುಪಿ ಜಿಲ್ಲೆ, 574116.

ಪೂಪೂಜನೆಯವರು:

ಆನಂದ ಪೂಜಾರಿ, ,
ಮಾಣಿಬೆಟ್ಟು ಗರಡಿಮನೆ,
ಶಿರ್ವಗ್ರಾಮ, ಅಂಚೆ ಮಟ್ಟಾರು,
ಕಾಪು ತಾಲೂಕು,
ಉಡುಪಿ ಜಿಲ್ಲೆ. 574116
ಮೊಬೈಲ್ : 9071544952.
ಸತೀಶ್ ಪೂಜಾರಿ – 9901635299.

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shree Brahma Baidarkala & Dhoomavati Garodi, Kidiyoor

ಶ್ರೀ ಬ್ರಹ್ಮಬೈರ್ಕಳ ಹಾಗೂ ಧೂಮಾವತಿ ಗರೋಡಿ, ಕಿದಿಯೂರು-ಕಡೆಕಾರು

ಉಡುಪಿಯಿಂದ ಅಂಬಲಪಾಡಿ ಬೈಪಾಸ್ ದಾಟಿ ಅಂಬಲಪಾಡಿ ಕಿದಿಯೂರು ತಲುಪಿ ಕಿದಿಯೂರು ಜಂಕ್ಷನ್ನಿಂದ ಎಡಕ್ಕೆ ತಿರುಗಿ 500ಮೀ. ಸಾಗಿದರೆ ಬಲಕ್ಕೆ, ಕಿದಿಯೂರು ಗರೋಡಿ ರಸ್ತೆಯಲ್ಲಿ ಸುಮಾರು 1ಕಿ.ಮೀ. ಸಾಗಿದರೆ ನೇರ ಕಿದಿಯೂರು ಗರೋಡಿ ತಲುಪ ಬಹುದು. ಈ ಗರೋಡಿಯು ಉದ್ಯಾವರ ಹೊಳೆಯ ರಮಣೀಯ ಸ್ಥಳದಲ್ಲಿದೆ.
ಈ ಗರೋಡಿಯು ಪರಿಪೂರ್ಣ ಆಯದಲ್ಲಿ ಕಟ್ಟಲ್ಪಟ್ಟಿದ್ದು, ಇದು ಆಯದ ಗರಡಿಯೆಂದೇ ಪ್ರಸಿದ್ದಿ. ಷಢಾದಾರ ಪ್ರತಿಷ್ಠೆಯಲ್ಲಿರುವ ಈ ಗರೋಡಿಯ ಮುಖ್ಯದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೊಂದು ದ್ವಾರವು ಪಶ್ಚಿಮ ದಿಕ್ಕಿಗಿದೆ. ಸ್ಥಳ ಪುರಾಣದಲ್ಲಿ ತಿಳಿಸಿದಂತೆ ಹಿಂದೊಮ್ಮೆ ಕೋಟಿಚೆನ್ನಯರು ಗಂಗೆಗೆ ಸಂಧಿ ಹೇಳಿ (ವಡಂಬಡಿಕೆ ಮಾಡಿ ಹೊಳೆಯ ಒಂದು ಪಾರ್ಶವನ್ನು ಮುಟ್ಟಿ ಅಲ್ಲಿ ಗರೋಡಿ ನಿರ್ಮಿಸಲು ಸೂಚಿಸಿದಂತೆ) ಈ ಗರೋಡಿಯ ನೆಲೆಯಾಯಿತು ಎಂಬ ನಂಬಿಕೆ ಇದೆ.
ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ಕುದುರೆಯಲ್ಲಿ ಕುಳಿತ ನಾಗ ಬ್ರಹ್ಮರ ಮುಖಕ್ಕೆ ಬಂಗಾರ ಹೊದಿಸಿದ ಬೆಳ್ಳಿಯ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾದನೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ
ಬಲಭಾಗದಲ್ಲಿ ಕುದುರೆಯಲ್ಲಿ ಕುಳಿತ ಒಕ್ಕು ಬಲ್ಲಾಳರ ಪಾಪೆ ಹಾಗೂ ಕುಜುಂಬ ಕಾಂಜವರ ಪಾಪೆ ಇದೆ. ಪಕ್ಕದಲ್ಲಿ ಮರದ ಉಯ್ಯಾಲೆಯೂ ಇದೆ.
ಬ್ರಹ್ಮರ ಗುಡಿಯ ಹೊರಗೆ ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ, ಮಣೆ ಮಂಚದಲ್ಲಿ ಪಿಲ್ಚಂಡಿಯ ಆರಾಧನೆಯಿದೆ. ಬಲಭಾಗದಲ್ಲಿ ಮಣೆಮಂಚದಲ್ಲಿ ಬೆಳ್ಳಿಯ ಮತ್ತು ಪಂಚಲೋಹದ ಜುಮಾದಿಯ ಮುಖವಿದೆ.(ಎರಡಕ್ಕೂ ಬಂಗಾರದ ನಾಲಗೆ ಇದೆ) ಇನ್ನೊಂದು ಮಣೆಮಂಚದಲ್ಲಿ ಪಂಜುರ್ಲಿಗೆ ಆರಾಧನೆಯಿದೆ.
ಬ್ರಹ್ಮರ ಗುಡಿಯ ಎದುರು ಭಾಗದಲ್ಲಿ ಗುರುಕಂಬವಿದೆ.
ಗರೋಡಿಯ ಆವರಣದ ಒಳಗೆಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಮತ್ತು ಕುಲತ ಜುಮಾದಿಯ ಕಲ್ಲಿನ ಮಂಚವಿದೆ. ಗರೋಡಿಯ ಅವರಣದ ಒಳಗೆ ಅಯ್ಯಕಲ್ಲು ಹಾಗೂ ತುಳಸೀಕಟ್ಟೆಗಳು ಇವೆ.
ಗರೋಡಿಯ ಪಕ್ಕದಲ್ಲಿ ಅಯ್ಯಪ್ಪ ಮಂದಿರವಿದೆ. ಗರೋಡಿಯ ಎದುರಿಗೆ ಕೆರೆ ಹಾಗೂ ಗರೋಡಿಯಿಂದ ಸ್ವಲ್ಪ ದೂರದಲಿ ನಾಗಬ್ರಹ್ಮಸ್ಥಾನವಿದೆ. ಗರೋಡಿಗೆ ಸಂಬಂಧಪಟ್ಟ ಜುಮಾದಿ ಮತ್ತು ಪಿಲ್ಚಂಡಿಯ 1ನೇ ಗಡುವಾಡು ಸ್ಥಾನ ಕಿದಿಯೂರಿನಲ್ಲಿಯೂ ಎರಡನೇ ಗಡುವಾಡು ಸ್ಥಾನ ಕಡೆಕಾರಿನಲ್ಲಿದೆ. ಎರಡೂ ಗಡುವಾಡು ಸ್ಥಾನಗಳಲ್ಲಿ ಗರೋಡಿಯಿಂದ ಬಾಲು ಬಂಡಾರ ಬಂದು ವರ್ಷಕ್ಕೊಮ್ಮೆ ಕೋಲ ನಡೆಯುತ್ತದೆ. ಕೋಲ ಇಲ್ಲದ ವರ್ಷ ಮಂಜ ಸೇವೆ ನಡೆಯುತ್ತದೆ.

ಸತೀಶ್ ಪೂಜಾರಿ

ಹರಿ ಪೂಜಾರಿ

ಸತೀಶ್ ಪೂಜಾರಿಯವರು ಈಗ ಗರೋಡಿಯ ಪೂಪೂಜನೆಯವರಾಗಿ ಹಾಗು ಹರಿ ಪೂಜಾರಿಯವರು ಇಲ್ಲಿಯ ಬೈದ್ಯರ ದರ್ಶನ ಸ್ಥಳ ಪಾತ್ರಿಯಾಗಿದ್ದಾರೆ. ಹರಿ ಪೂಜಾರಿಯವರಿಗಿಂತ ಮೊದಲು ಗುಡ್ಡ ಪೂಜಾರಿ, ಪಪ್ಪು ಪೂಜಾರಿಯವರು ಸ್ಥಳ ಪಾತ್ರಿಯಾಗಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ (ಸೂಡ) ಪೂಜೆ ಚೌತಿಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಜುಮಾದಿಗೆ ಮುದ್ರೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜಯಿ ಸೇವೆ, ಸೋಣ ತೀಂಗಳಲ್ಲಿ ಅಗೆಲು ಸೇವೆ, ಬೈದೇರುಗಳ ನೇಮ, (ಪಂಬದರಿಂದ) ಕೊಡಿ ತಿಂಗಳಲ್ಲಿ ಅಗೆಲು, ಬೈದೇರುಗಳ ನೇಮ(ಪಂಬದರು) ಜುಮಾದಿ, ಮಾಯಂದಾಲ್,ಜೋಗಿಪರಯಷರಿಗೆ ಕೋಲ ಸೇವೆ ನಡೆಯುತ್ತದೆ. ಸುಗ್ಗಿ ತಿಂಗಳಲ್ಲಿ ಅಗೆಲು ಸೇವೆ ಹಾಗೂ ಬೈದೇರುಗಳ ನೇಮ ಸೇವೆ ಪರವರಿಂದ ನಡೆಯುತ್ತದೆ.
ಕಿದಿಯೂರು ಮತ್ತು ಕಡೆಕರು ಗ್ರಾಮದ ಮನೆಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಟ್ಟ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಇತ್ಯಾದಿ ಸೇವೆಗಳಲ್ಲಿ ಊರ ಭಕ್ತರು ಭಾಗಿಯಾಗುತ್ತಾರೆ.
ಸದ್ಯ ಗರೋಡಿಯ ಆಡಳಿತವು ಸರಕಾರದ ದತ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿದೆ. ಸ್ಥಿರ ಆದಾಯವಲ್ಲದ ಕಾರಣ ವಂತಿಗೆ, ಹರಕೆ, ಸಹಾಯಧನಗಳಿಂದ ಗರೋಡಿಯ ಎಲ್ಲಾ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
28-11-2003ರಲ್ಲಿ ಗರೋಡಿಯ ಜೀರ್ಣೋದ್ಧಾರಗೊಂಡಿತ್ತು.
ಬೊಗ್ಗು ಪರವ ಮೂಡುಬೆಳ್ಳೆ, ಕೃಷ್ಣ ಪಂಬದ ಕುತ್ಪಾಡಿ ಇವರುಗಳು ನೃತ್ಯವಿಶಾರದರಾಗಿ, ಮಡಿವಾಳರಾಗಿ ರಾಮ ಮಡಿವಾಳ, ವಾದ್ಯಕ್ಕೆ ಮೋಹನ ಕನ್ನರ್ಪಾಡಿ, ಡೋಲಿಗೆ ರವಿ ಮತ್ತು ಬಳಗ, ಅಂಬಲಪಾಡಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯ ಪರಿಸರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾಮಂಡಳಿ(ರಿ) ಕಿದಿಯೂರು ಎಂಬ ಯಕ್ಷಗಾನ ಸಂಘವಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಾಗೂ ಧೂಮಾವತಿ ಗರೋಡಿ,
ಕಿದಿಯೂರು-ಕಡೆಕಾರು
ಕಿದಿಯೂರು ಅಂಚೆ, 576103.

ಮಾಹಿತಿ ಸಂಗ್ರಹಿಸಿದ ದಿನಾಂಕ:

19-11-2024

Shree Brahma Baidarkala Garodi, Padubelle

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಡುಬೆಳ್ಳೆ

ಉಡುಪಿಯಿಂದ ಕಟಪಾಡಿ ಪೇಟೆಯಲ್ಲಿ ಎಡಕ್ಕೆ ತಿರುಗಿ ಸುಭಾಶ್‌ನಗರ ಮೂಲಕ ಪಾಜಕ ಕ್ಷೇತ್ರದ ಹತ್ತಿರದ ಪಡುಬೆಳ್ಳೆ ಪೇಟೆಯ ಮೂಲಕ ಒಂದು ಕಿ.ಮೀ ಸಾಗಿ ಎಡಕ್ಕೆ ತಿರುಗಿದರೆ ಪಡುಬೆಳ್ಳೆ ಗರೋಡಿ ಸಿಗುವುದು.
ಉಡುಪಿ ಪಡುಬೆಳ್ಳೆಯಲ್ಲಿರುವ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯು ಬಹಳ ಪುರಾತನವಾದುದು. ಇದು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಪಡುಬೆಳ್ಳೆ- ಮೂಡುಬೆಳ್ಳೆ ನಡುವೆ ಪಾಪನಾಶಿನಿ ನದಿ ಹರಿಯುತ್ತದೆ. ಪಡುಬೆಳ್ಳೆಗೆ ಪಾಪನಾಶಿನಿ ನದಿಯಾಚೆಗಿನ ಮೂಡುಬೆಳ್ಳೆ ಗರೋಡಿ ಮೂಲ ಗರೋಡಿಯಾಗಿತ್ತು. ಹಾಗೇಯೇ ಕಟ್ಟಿಂಗೇರಿಯಲ್ಲಿರುವ ದೈವ ಜುಮಾದಿ ಪ್ರಧಾನವಾಗಿತ್ತು.ಮೂಡುಬೆಳ್ಳೆ ಗರೋಡಿಯಲ್ಲಿ ಏನೇ ಪೂಜೆ ಪುನಸ್ಕಾರಗಳು ನಡೆಯ ಬೇಕಾದರೂ ಪಡುಬೆಳ್ಳೆಯಲ್ಲಿರುವ ಬೆಳ್ಳೆ ದೊಡ್ಡಮನೆ ಯಜಮಾನರು ಉಪಸ್ಥಿತರಿರಲೇ ಬೇಕಿತ್ತು. ಇದು ಅಂದಿನ ಅಳಿಯ ಕಟ್ಟಿನ ವ್ಯವಸ್ಥೆಯಲ್ಲಿ ಅವರಿಗೆ ಬಂದ ಪಟ್ಟ. ಹೀಗಿರುವಾಗ ಒಂದು ಚೌತಿ ಹಬ್ಬದಂದು ಪಾಪನಾಶಿನಿ ಹೊಳೆಯಲ್ಲಿ ನೆರೆಯುಕ್ಕಿದ್ದರಿಂದ ಯಜಮಾನರಿಗೆ ಸಕಾಲದಲ್ಲಿ ಮೂಡುಬೆಳ್ಳೆ ಗರೋಡಿಗೆ ತಲುಪಲಾಗಲಿಲ್ಲ. ಚೌತಿ ಪೂಜೆ ವಿಳಂಬವಾಗುವುದನ್ನು ಕಂಡು ಅಂದು ಅಲ್ಲಿ ಗರೋಡಿಯಲ್ಲಿ ಉಪಸ್ಥಿತರಿದ್ದ ಯಜಮಾನರ ಮಗ ತಾನೇ ಹೊಣೆಗಾರಿಕೆ ವಹಿಸಿಕೊಂಡು ಗರೋಡಿ ಅರ್ಚಕರಿಗೆ ಪೂಜೆ ನೆರವೆರಿಸಲು ಆದೇಶಿಸುತ್ತಾರೆ. ದೊಡ್ಡಮನೆ ಯಜಮಾನರು ಗರೋಡಿ ತಲುಪುವಾಗ ಚೌತಿ ಪೂಜೆ ಮುಗಿದಿತ್ತು. ಇದರಿಂದ ಯಜಮಾನರು ನೊಂದುಕೊಂಡರು. ಪೂಜೆಗೆ ಅನುಮತಿ ನೀಡಿದ್ದು ಅವರ ಸ್ವಂತ ಮಗನೇ ಆಗಿದ್ದರೂ ಅಂದಿನ ಕಟ್ಟುಕಟ್ಟಳೆಯ ಪ್ರಕಾರ ಆತನಿಗೆ ಅಧಿಕಾರವಿರಲಿಲ್ಲ. ಯಾರು ಏನೇ ಹೇಳಿದರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ದೊಡ್ಡಮನೆ ಯಜಮಾನರು ಗರೋಡಿಯಲ್ಲಿ ಅರ್ಚಕರಿಂದ ಕಾಯಿ ಕಾಣಿಕೆಯನ್ನು ಪಡೆದು ಕೊಂಡರು. ಶ್ರೀ ಬ್ರಹ್ಮ ಬೈದೇರುಗಳನ್ನು ಪ್ರಾರ್ಥಿಸಿಕೊಂಡು ತಾನು ಪಡುಬೆಳ್ಳೆಗೆ ವಾಪಾಸು ಬರುತ್ತಾರೆ. ಕಟ್ಟಿಂಗೇರಿಯ ದೈವ ಜುಮಾದಿಯನ್ನು ಪ್ರಾರ್ಥಿಸಿಕೊಂಡು ಅಲ್ಲಿಂದಲೇ ತೆಂಗಿನಕಾಯಿ ಹಾರಿಸುತ್ತಾರೆ. ಕಾಯಿ ಬಿದ್ದ ಜಾಗ ಮುಳ್ಳಿನ ಬಲ್ಲೇಯಾಗಿದ್ದರೂ ಅದನ್ನು ಸ್ವಚ್ಛಗೊಳಿಸಿ ಚಪ್ಪರ ಹಾಕಿಸುತ್ತಾರೆ. ಅದೇ ದಿನ ಪಡುಬೆಳ್ಳೆಯಲ್ಲಿ ಚೌತಿ ಪೂಜೆಯನ್ನು ನೇರವೆರಿಸುತ್ತಾರೆ. ಬಳಿಕ ನೂತನ ಗರೋಡಿಯನ್ನು ಕಟ್ಟಿಸುತ್ತಾರೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಗಿಂಡೆ ಇವೆ. ಗುಂಡದ ಎಡಬದಿಯಲ್ಲಿ ಉಯ್ಯಾಲೆಯಲ್ಲಿ ಕೋಟಿಚೆನ್ನಯ್ಯರು, ಜೋಗಿ ಪುರುಷ- ಮಂಚ, ಬಲಬದಿಯಲ್ಲಿ: ಕುಜುಂಬ ಕಾಂಜವ-ಮಂಚ, ಒಕ್ಕು ಬಳ್ಳಾಲ- ಮಂಚ, ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ: ಹುಲಿ ಚಾಮುಂಡಿ, ಕೊಳತ ಜುಮಾದಿ. ಮಾಯಂದಾಳ ಮತ್ತು ಮಗು, ಗುರುಕಂಬ ಗಳಿವೆ. ಈ ಗರೋಡಿಯಲ್ಲಿ ಯಾವುದೇ ಪಾಪೆಗಳಿಲ್ಲ. ಮುಂದಿನ ದಿನಗಳಲ್ಲಿ ಪಾಪೆ ಮಾಡುವ ಯೋಜನೆಯಿದೆ.
ಗರೋಡಿ ಆವರಣದಲ್ಲಿ – ಹಾಲೆಮರ ಇದೆ, ಅಯ್ಯ ಕಲ್ಲು, ತುಳಸಿ ಕಟ್ಟೆ ಇದೆ. ಆವರಣದ ಹೊರಗೆ- ನಾಗ ಸನ್ನಿದಿ, ಭೈರವ ದೈವವಿದ್ದು ಇದಕ್ಕೆ ಭೋಗ ಇದೆ.

ಸದಾನಂದ ಪೂಜಾರಿ

ಸದಾನಂದ ಪೂಜಾರಿ, ಗರೋಡಿಮನೆ, ಇವರು 10-4-2008 ರಿಂದ ಪೂಪೂಜನೆಯವರಾಗಿ ಸೇವೆ ಮಾಡುತಿದ್ದಾರೆ.
ಇವರಿಗೆ ಮೊದಲು :
ಆನಂದ ಪೂಜಾರಿ – 1993 -2008 (ಸದಾನಂದ ಪೂಜಾರಿ ಅವರ ತಮ್ಮ)
ಪಪ್ಪು ಪೂಜಾರಿ- 1963-1993 (ಸದಾನಂದ ಪೂಜಾರಿ ಅವರ ತಂದೆ)
ತೌಡ ಪೂಜಾರಿ – 1663 ರ ಮೊದಲು (ಪಪ್ಪು ಪೂಜಾರಿಯವರ ಅಜ್ಜ)
ಕಾಂತು ಪೂಜಾರಿ – ತೌಡ ಪೂಜಾರಿಯವರ ಅಣ್ಣ ಇವರುಗಳು ಈ ಸೇವೆಯನ್ನು ಮಾಡುತಿದ್ದರು.

ಸಂತೋಷ ಪೂಜಾರಿ

ಈ ಗರೋಡಿಯ ಬೈದೇರುಗಳ ದರ್ಶನದ ಸ್ಥಳ ಪಾತ್ರಿಗಳಾಗಿ 2005 ರಿಂದ ಸಂತೋಷ ಪೂಜಾರಿ (9845323118) ಇವರು ಸೇವೆ ಮಾಡುತಿದ್ದಾರೆ. ಇವರ ಮೊದಲು ಬೆಳ್ಳೆ ರಾಮ ಪೂಜಾರಿ (ಸಂತೋಷ್ ಪೂಜಾರಿಯವರ ಅಜ್ಜ), ಮೋಹನ್ ಪೂಜಾರಿ (ರಾಮ ಪೂಜಾರಿಯವರ ಮಾವ) ಇವರು ಸ್ಥಳ ಪಾತ್ರಿಗಳಾಗಿದ್ದರು.
ಸುಭಾಶ್ಚಂದ್ರ ಶೆಟ್ಟಿ, ಬೆಳ್ಳೆ ದೊಡ್ಡಮನೆ, ಇವರು ಗರೋಡಿಯ ಮೊಕ್ತೇಸರರು. (ದೂರವಾಣಿ: 9341213275)
ಗರೋಡಿಯಲ್ಲಿ ಸಂಕ್ರಾತಿಯ ದಿನ ಊರು ಸೇರಿ ಗಜ್ಜೆಯಿ ಸೇವೆ ಇದೆ. ಚೌತಿಪೂಜೆ, ಅಷ್ಟಮಿ ಪೂಜೆ ಇದೆ. ಆ ದಿನ ಬೆಳ್ಳೆ ದೊಡ್ಡಮನೆಯವರ ವತಿಯಿಂದ ಅಗೆಲ್ ಅನ್ನ ನೈವೇದ್ಯ ಸೇವೆ ಇದೆ. ದೀಪಾವಳಿಯಂದು ಕಂಬ ನೆಟ್ಟು ದೀಪಾರಾಧನೆ, ಸೋಣ ತಿಂಳಲ್ಲಿ ಚೌತಿ ಹಬ್ಬದ ಮರುದಿನ ಹರಕೆಯ ಹೂವಿನ ಪೂಜೆಗಳು ಜರಗುತ್ತದೆ. ಕದಿರು ಕಟ್ಟುವುದು ಇದೆ. ಸುಬ್ರಹ್ಮಣ್ಯ ಷಷ್ಟಿಯ ಬಳಿಕ ಅಷ್ಟಮಿಯಂದು ಗರೋಡಿ ಮನೆಯ ವತಿಯಿಂದ ಅಗೆಲ್ ಅನ್ನ ನೈವೇದ್ಯ ಸೇವೆ ಇದೆ. ನವಮಿಯಂದು ಕಾಲಾವಧಿ ನೇಮೋತ್ಸವ ಜರಗುತ್ತದೆ. ಬೆಳಿಗ್ಗೆ ಮಾಯಂದಾಳ ನೇಮವಾಗುತ್ತದೆ. ಬಳಿಕ ಜರಗುವ ಶುದ್ಧದ ಅಗೆಲ್ ಅನ್ನ ನೈವೇದ್ಯ ಸೇವೆಯು ಬೆಳ್ಳೆ ಪಟೇಲರ ಮನೆಯ ವತಿಯಿಂದ ಜರಗುತ್ತದೆ.
ಪಡುಬೆಳ್ಳೆ, ಪಾಜಕ ಕ್ಷೇತ್ರ, ಪಾಂಬೂರು, ಪೊದುಮಲೆ, ತಡಂಬೈಲು ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಸುಮಾರು 250ಕ್ಕೂ ಹೆಚ್ಚು ಮನೆಗಳಿವೆ. ಕೂಡುಕಟ್ಟಿಗೆ ಸೇರಿದ ಜನರು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಕೂಡುಕಟ್ಟಿನ ಸಂಪರ್ಕ ಸಂವಹನ :
ಪಟೇಲ್ ಮನೆ- ದಯಾನಂದ ಶೆಟ್ಟಿ , 9482434206
ಬೆಳ್ಳೆ ದೊಡ್ಡಮನೆ- ಸುಭಾಶ್ಚಂದ್ರ ಶೆಟ್ಟಿ ಸತೀಶ ಪೂಜಾರಿ, ಶೇಖರ ಪೂಜಾರಿ ನಟ್ಟಿಲ್ಲ ಮನೆ – ನಾಲ್ಕರೆ ಗುರಿಕಾರರು ಉಡುಪಿ- ಉದ್ಯಾವರದ ಮಠ ಉಂಬಳಿ ನೀಡಿದ ಹತ್ತು ಕೊಯಿಲು ಜಾಗದ ಉತ್ಪತ್ತಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇಲ್ಲಿನ ನೇಮೋತ್ಸವದ ದಿನ ಇಲ್ಲಿಂದ ಉದ್ಯಾವರ ಮಠಕ್ಕೆ ಗೌರವ ಕಾಣಿಕೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಇದೆ.
10-4-2008 ರಂದು ಗರೋಡಿಯ ಜೀರ್ಣೋದ್ಧಾರ ಹಾಗು ಬ್ರಹ್ಮಕಲಶ ನಡೆದಿದೆ. 22-1-2022 ಹಿತ್ತಾಳೆ ಹೊದಿಕೆಯ ಮಾಡು- ಬ್ರಹ್ಮಕಲಶ, ಬೆಳ್ಳೆ ದೊಡ್ಡಮನೆಯ ಸೀತಾರಾಮ್ ಶೆಟ್ಟಿ ಅವರ ಕೊಡುಗೆಯಾಗಿ ನಡೆದಿವೆ. ಸುಮಾರು 114 ವರ್ಷಗಳ ಮೊದಲು ಗರೋಡಿಯ ಬೈ ಹುಲ್ಲಿನ ಮಾಡು ತೆಗೆದು ಹೆಂಚು ಹೊದಿಸಲಾಗಿತ್ತು.
ಬೂಬ ಪರವ, ಸಂತು ಪರವ, ಅಪ್ಪು ಪರವ ಇವರು ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಚಲ್ಲ ಪರವ, ಬೆರ್ಮು ಪರವ, ಕೋತು ಪರವ, ಪಿಜಿನ ಪರವ ಇವರುಗಳು ಈ ಸೇವೆ ಮಾಡಿದ್ದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಡುಬೆಳ್ಳೆ,
ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ-576116

ಪೂಪೂಜನೆಯವರು:

ಸದಾನಂದ ಪೂಜಾರಿ, ಗರೋಡಿಮನೆ, ಪಡುಬೆಳ್ಳೆ
ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ-576116
ದೂರವಾಣಿ: 9987223184

ಮಾಹಿತಿ ಸಂಗ್ರಹಿಸಿದ ದಿನಾಂಕ:

17-07-2022
ಮಾಹಿತಿ ನೀಡಿದವರು – ದೊಡ್ಡಮನೆ ವಸಂತ ಶೆಟ್ಟಿ, ಪಟೇಲ್ ಮನೆ ದಯಾನಂದ ಶೆಟ್ಟಿ, ಗರೋಡಿಮನೆ ಸದಾನಂದ ಪೂಜಾರಿ, ಗರೋಡಿಮನೆ ಸಂತೋಷ ಪೂಜಾರಿ ಮಾಹಿತಿ ಸಂಗ್ರಹಿಸಿದವರು : ದಾಮೋದರ ಕಲ್ಮಾಡಿ, ಚೆಲುವರಾಜ್ ಪೆರಂಪಳ್ಳಿ, ಹರೀಶ್ ಎಮ್. ಕೆ. ಕಲ್ಮಾಡಿ

Shree Brahma Baidarkala Vyagra Chamundi Garodi, Kappettu

ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿ, ಕಪ್ಪೆಟ್ಟು

ಉಡುಪಿ – ಅಂಬಲಪಾಡಿ ರಸ್ತೆಯ ಮೂಲಕ ಅಂಬಲಪಾಡಿ ಬೈಪಾಸ್ ದಾಟಿ ಅಂಬಲಪಾಡಿಯ ಕಡೆಗೆ 300ಮೀ.ಸಾಗಿ ಎಡಕ್ಕೆ ತಿರುಗಿ ಸುಮಾರು 500ಮೀ. ಸಾಗಿದಾಗ ಕಪ್ಪೆಟ್ಟು ಗರೋಡಿ ಸಿಗುವುದು.
ಇದು ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ಮುಖ್ಯ ದ್ವಾರ ಹಾಗೂ ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಹಿಂದೆ 1974ರಲ್ಲಿ ಜೀರ್ಣೋದ್ಧಾರ ಗೊಂಡಿದ್ದ ಈ ಗರೋಡಿಯು 2019ರಲ್ಲಿ ಷಢಾಧಾರ ಪ್ರತಿಷ್ಠೆಯೊಂದಿಗೆ ಪುನ: ಜೀರ್ಣೋದ್ಧಾರ ಗೊಂಡಿದೆ.
ಬ್ರಹ್ಮ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ನಾಗ ಬ್ರಹ್ಮರ ಬೆಳ್ಳಿಯ ಮೂರ್ತಿ, ಗಾಳಿದೇವರು ಬ್ರಹ್ಮ ಗುಂಡದ ಬಲಭಾಗದಲ್ಲಿ ಕುದುರೆ ಏರಿಕುಳಿತ ಒಕ್ಕು ಬಲ್ಲಾಳರ ಹಾಗೂ ಕುಜುಂಬ ಕಾಂಜವರ ನಿಂತಿರುವ ಮರದ ಪಾಪೆ ಇದೆ. ಬ್ರಹ್ಮ ಗುಂಡದ ಎಡದಲ್ಲಿ ಕೋಟಿಚೆನ್ನಯರ ಮರದ ಪಾಪೆ ಇದೆ. ಕೋಟಿಚೆನ್ನಯರ, ಒಕ್ಕು ಬಲ್ಲಾಳರ, ಹಾಗೂ ಕುಜುಂಬ ಕಾಂಜವರ ಪಾಪೆಯ ಹತ್ತಿರ ಮಕ್ಕಳಪಾಪೆ ಇದೆ. ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷರ ಪಾಪೆ ಇದೆ.
ಗರಡಿಯ ಹೊರಗೆ ಆವರಣದಲ್ಲಿ ಗುಡಿಯೊಳಗೆ ಮಾಯಂದಾಲ್, ಹಾಗೂ ಮಗುವಿನ ಮರದ ಪಾಪೆ, ಪಿಲ್ಚಂಡಿಯ ಕಂಚಿಗೆ ಬೆಳ್ಳಿ ಮುಚ್ಚಿದ ಮುಖ ಇದೆ.
ಗರಡಿಯ ಹತ್ತಿರ ನಾಗಬನ, ನಂದಿಗೋಣ, ಬೊಬ್ಬರ್ಯ ಕ್ಷೇತ್ರಪಾಲ, ಅಯ್ಯ ಕಲ್ಲುಗಳನ್ನು ಹೊಂದಿದ ಬ್ರಹ್ಮಸ್ಥಾನವಿದೆ.
ಮುದ್ದು ಪೂಜಾರಿಯವರು (ಪ್ರಾಯ 75 ವರ್ಷ) ಗರಡಿ ಪೂಜಾರಿಯಾಗಿದ್ದು, ಪ್ರವೀಣ್ ಕುಮಾರ್ ಶೆಟ್ಟಿ ಇವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
ಮುದ್ದು ಪೂಜಾರಿಯವರ ಮೊದಲು ಅವರ ಹಿರಿಯರಾದ ಗೋಪಾಲ ಪೂಜಾರಿ, ಲಚ್ಚು ಪೂಜಾರಿಯವರು ಪೂ ಪೂಜನೆಕಾರರಾಗಿದ್ದರು. ಸದ್ಯ ಇಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಮೊದಲು ಮಂಜಪ್ಪ ಪೂಜಾರಿ, ಕಿಟ್ಟು ಪೂಜಾರಿ, ಬೋಳ ಪೂಜಾರಿ ಇವರುಗಳು ಪಾತ್ರಿಗಳಾಗಿ ಸೇವೆ ಸಲ್ಲಿಸಿರುವರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜಯಿ ಸೇವೆ, ಮುಂತಾದ ಪೂಜಾ ಕಂಕರ್ಯಗಳು ನಡೆಯುತ್ತವೆ. ಕೊಡಿ ತಿಂಗಳಲ್ಲಿ ಅಂದರೆ ನವಂಬರ್ ತಿಂಗಳ 30ನೇ ತಾರೀಕು ಹಾಗೂ ಡಿಸೆಂಬರ್ 01 ರಂದು ಹಾಗೂ ಸುಗ್ಗಿ ತಿಂಗಳಲ್ಲಿ ಏಪ್ರಿಲ್ ತಿಂಗಳ 3 ಮತ್ತು 4ನೇ ತಾರೀಖಿನಂದು ಬೈದೇರುಗಳ ಅಗೆಲ್ ಹಾಗೂ ನೇಮೋತ್ಸವವು ನಡೆಯುವುದು. ಪಿಲ್ಚಂಡಿ, ಮಾಯಂದಾಲ್ ಹಾಗೂ ಜೋಗಿ ಪುರುಷರಿಗೂ ಸೇವೆ ನಡೆಯುತ್ತದೆ.
ಗರೋಡಿಯ ಕೂಡು ಕಟ್ಟಿಗೆ ಕಪ್ಪೆಟ್ಟು, ನಲ್ಲೂರು ಹಾಗೂ ಅಂಬಲಪಾಡಿಯಕೆಲವು ಮನೆಗಳು ಸೇರುತ್ತವೆ. ಇಲ್ಲಿ ಗುರಿಕಾರರಾಗಿ ಗಟ್ಲೆ ವಿಜಯ ಪೂಜಾರಿ, ಅಂಬಲಪಾಡಿಗೆ ಜಯ ಪೂಜಾರಿ, ಕಪ್ಪೆಟ್ಟಿಗೆ ದಯಾನಂದ ಪೂಜಾರಿ, ಶೆಟ್ಟಿ ಬಾಲೆಯಾಗಿ, ರತ್ನಾಕರ ಶೆಟ್ಟಿ, ಬಟ್ಟಲು ಗಂಧ ಚಿಕ್ಕು ಶೆಟ್ಟಿ ಇವರುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಕೂಡು ಕಟ್ಟಿಗೆ ಸೇರಿದ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ,ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗರೊಡಿಗೆ ಸ್ಥಿರ ಆದಾಯ ಇಲ್ಲದ ಕಾರಣ ವಂತಿಗೆ, ಹರಕೆ, ಸಹಾಯಧನಗಳಿಂದ ಗರೋಡಿ ಕಾರ್ಯಕ್ರಮಗಳು ನಡೆಯುತ್ತವೆ.
ಕೊಡಿ ತಿಂಗಳ ನೇಮೋತ್ಸವಕ್ಕೆ ಕಿಟ್ಟ ಪಂಬದರು ಹಾಗೂ ಸುಗ್ಗಿ ತಿಂಗಳಲ್ಲಿ ನೀರೆಯ ಜಯ ಪರವರು ನೃತ್ಯವಿಶಾದರಾಗಿ ಸೇವೆ ಸಲ್ಲಿಸುತ್ತಾರೆ. ಜಯ ಪರವರಿಗೆ ಮೊದಲು ಅವರ ಹಿರಿಯರಾದ ಮೆಣ್ಕ, ಪಿಜಿನ, ಬಾಬು, ನರಂಗ, ಪರವ ಮೊದಲಾದವರು ಇಲ್ಲಿ ಸೇವೆ ಸಲ್ಲಿಸಿರುವರು.
ವಾದ್ಯದವರಾಗಿ ಕನ್ನರ್ಪಾಡಿ ಮೋಹನನವರಿಗೂ ಮಡಿವಾಳರಾಗಿ ಅಪ್ಪು ಮಡಿವಾಳ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿ ಕಪ್ಪೆಟ್ಟು,
ಅಂಬಲಪಾಡಿ ಅಂಚೆ,
ಕಿದಿಯೂರು ಗ್ರಾಮ,
ಉಡುಪಿ ತಾಲೂಕು 576103.

ಪೂ ಪೂಜನೆಯವರ ವಿಳಾಸ:

ಮುದ್ದು ಪೂಜಾರಿ,
ಅಕ್ಷಿತಾ ನಿವಾಸ,
ಕುರ್ಕಾಲು ಮದಗ, ಸುಭಾಷ್ ನಗರ ಅಂಚೆ,
ಉಡುಪಿ ತಾಲೂಕು, 576103.
ಮೊಬೈಲ್ :9535269382

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2024

Yenagudde – Shree Brahma Baiderugala Garodi, Yenagudde Katapadi

ಶ್ರೀ ಬ್ರಹ್ಮಬೈದೇರುಗಳ ಗರೋಡಿ, ಏಣಗುಡ್ಡೆ ಕಟಪಾಡಿ

ಉಡುಪಿ ಕಟಪಾಡಿ ಪೇಟೆಯಲ್ಲಿ ಬಲಕ್ಕೆ ಮಟ್ಟು ರಸ್ತೆಯಲ್ಲಿ ಸುಮಾರು ಎರಡು ಫರ್ಲಾಂಗು ದೂರದಲ್ಲಿ ಬಲಕ್ಕೆ ಸಿಗುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಸುಮಾರು 350 ಮೀಟರ್ ಮುಂದೆ ಹೋದರೆ ಗರೋಡಿ ಸಿಗುವುದು.
ಉಡುಪಿಯ ಕಟಪಾಡಿಯ ಏಣಗುಡ್ಡೆ ಗರೋಡಿಯು ಶಿಲಾಮಯವಾಗಿದ್ದು ಕೊಡಿ ಕಂಬ ಹೊಂದಿದ ಅತಿ ಪುರಾತನ ಗರೋಡಿ. ಇದು ಆಯದ ಗರೋಡಿಯಾಗಿದ್ದು 2022ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕಟಪಾಡಿ ಬಳ್ಳಾಲರ ಬೀಡಿಗೆ ಬರುವ ಈರ್ವರು ಸುಂದರ ಕಾಯದ ಯುವಕರು ಇಲ್ಲಿ ತಮಗೆ ಗರೋಡಿ ಕಟ್ಟಲು ಜಾಗ ಕೊಡಿ ಎಂದು ಕೇಳುತ್ತಾರೆ. ಬಳ್ಳಾಲರು ಇಲ್ಲಿ ಗರೋಡಿ ಕಟ್ಟಲು ಜಾಗವಿಲ್ಲ ಎಂದಾಗ ಯುವಕರು ಅಲ್ಲಿಯೇ ಇದ್ದ ಬೃಹತ್ ಕಲ್ಲಿನ ಮರಿಗೆಯನ್ನು (ದಂಬೆ) ಕವುಚಿ ಹಾಕಿ ಮುಂದೆ ಅಗ್ರಹಾರದ ಕಡೆಗೆ ಸಾಗುತ್ತಾರೆ. ಅವರು ಅತ್ತ ಹೋಗುತ್ತಲೆ ಬಳ್ಳಾಲರು ಹೊಟ್ಟೆ ನೋವಿನಿಂದ ನರಳುತ್ತಾರೆ. ಅವರಿಬ್ಬರು ಯಾರೋ ಮಹಾತ್ಮರೇ ಇರಬೇಕು. ತನ್ನಿಂದ ಅಪಚಾರವಾಯಿತು ಎಂದು ಅವರನ್ನು ವಾಪಾಸು ಕರೆಸಲು ಆಳುಗಳನ್ನು ಕಳುಹಿಸುತ್ತಾರೆ. ಆ ಯುವಕರು ಕೋಟಿ ಚೆನ್ನಯ್ಯರಾಗಿದ್ದರು. ಅವರು ನಾವು ಒಮ್ಮೆ ಮುಂದಡಿ ಇಟ್ಟವರು ಹಿಂದೆ ಬರುವುದಿಲ್ಲ ಎನ್ನುತ್ತಾರೆ. ಅಲ್ಲಿಗೆ ಬಂದ ಬಳ್ಳಾಲರು ಕೈ ಮುಗಿಯುತ್ತಾ ಕೋಟಿ ಚೆನ್ನಯ್ಯರು ಬಯಸಿದ ಜಾಗದಲ್ಲೇ ಗರೋಡಿ ಕಟ್ಟಲು ಸಮ್ಮತಿಸುತ್ತಾರೆ. ಅಗ್ರಹಾರದಲ್ಲಿ ಎಸೆದ ತೆಂಗಿನಕಾಯಿ ಈಗ ಗರೋಡಿ ಇರುವಲ್ಲಿ ಬಂದು ಬೀಳುತ್ತದೆ ಅದೊಂದು ನೀರು ಇದ್ದ ಹೊಂಡ ಪ್ರದೇಶವಾಗಿತ್ತು. ಬಳ್ಳಾಲರೇ ಇಲ್ಲಿ ಗರೋಡಿ ಕಟ್ಟಿಸಿ ಕೊಟ್ಟರು ಎಂಬ ಇತಿಹಾಸ ಚಾಲ್ತಿಯಲ್ಲಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ನಾಗಬ್ರಹ್ಮರ ಮೂರ್ತಿ ಹಾಗು ಗಾಳಿ ದೇವರು- ಆಂಜನೇಯ ಮೂರ್ತಿ ಇದೆ.
ಗುಂಡದ ಎಡಕ್ಕೆ ಕೋಟಿ ಚೆನ್ನಯರ ಹಾಗು ಇಬ್ಬರು ಮಕ್ಕಳ ಮರದ ಪಾಪೆ ಇದೆ.
ಗುಂಡದ ಬಲಕ್ಕೆ ಕುಜುಂಬ ಕಾಂಜವ ಮತ್ತು ಮಗು, ಕುದುರೆಯ ಮೇಲೆ ಕುಳಿತ ಒಕ್ಕು ಬಳ್ಳಾಲರ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದ ಮಣೆಮಂಚದಲ್ಲಿ ಹುಲಿ ಚಾಮುಂಡಿ ದೈವದ ಕಂಚಿನ ಮುಖ, ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ ಹಾಗು ಮಣೆಮಂಚದಲ್ಲಿ ಪಂಜುರ್ಲಿ ದೈವದ ಕಂಚಿನ ಮುಖಗಳಿವೆ.
ಬ್ರಹ್ಮಗುಡಿಯ ಎದುರಿನಲ್ಲಿ ಗುರುಕಂಬಕ್ಕೆ ಪೂಜೆಯಿದೆ.
ಗರೊಡಿಯ ಹೊರಗೆ ಆವರಣದೊಳಗೆ ಮಾಯಂದಾಳ್ ಗುಡಿಯಲ್ಲಿ ಮಾಯಂದಾಳ್, ಮಗು, ಮಗುವನ್ನು ನೋಡಿಕೊಳ್ಳುವ ಪರಿಚಾರಿಕೆಯವಳ ಹಾಗು ಕೊಳತ ಜುಮಾದಿಯ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯಲ್ಲಿ ಕಾಂತಾರ ಜುಮಾದಿ ಮತ್ತು ಬಂಟ ಸಾನಿದ್ಯವಿದೆ.
ಗರೋಡಿಯ ಆವರಣದೊಳಗೆ ಬೊಬ್ಬರ್ಯ ಗುಡಿ, ಅಯ್ಯಕಲ್ಲು ತೀರ್ಥಬಾವಿ, ಕೊಡಿಕಂಬ ಹಾಗು ತುಳಸಿ ಕಟ್ಟೆಗಳಿವೆ.

ಇಂಪು ಪೂಜಾರಿ

ಗರೋಡಿಮನೆಯ ಇಂಪು ಪೂಜಾರಿಯವರು ಪೂಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ನಾಗಪ್ಪ ಪೂಜಾರಿ (ಇಂಪು ಪೂಜಾರಿಯವರ ಅಣ್ಣ), ಗೋಪಾಲ ಪೂಜಾರಿ (ನಾಗಪ್ಪ ಪೂಜಾರಿಯವರ ಮಾವ), ಅನಂತ ಪೂಜಾರಿ (ಗೋಪಾಲ ಪೂಜಾರಿಯವರ ಮಾವ), ಕೊರಗ ಪೂಜಾರಿ (ಅನಂತ ಪೂಜಾರಿಯವರ ಅಣ್ಣ) ಈ ಗರೋಡಿಯ ಪೂಪೂಜನೆಯವರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಏಣಗುಡ್ಡೆ ಗುರುವ ಪೂಜಾರಿ, ಏಣಗುಡ್ಡೆ ಜಾರು ಪೂಜಾರಿ ಇವರುಗಳು ಗರೋಡಿಯ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿದ್ದರು. ಹಿಂದೆ ಇಲ್ಲಿ ಕೊಡಿ ತಿಂಗಳಿನಲ್ಲಿ ಹೊಸಭತ್ತ ಅನ್ನ ನೈವೇದ್ಯ ಅಗೆಲು ದಿನ ದೈವ ಕಾಂತಾರ ಜುಮಾದಿ ದರುಶನದಲ್ಲಿ ಬೈದೇರುಗಳ ಪಾತ್ರಿಗಳನ್ನು ಆಯ್ಕೆ ಮಾಡುವ ಪದ್ಧತಿ ಇತ್ತು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆಗಳು ಜರಗುತ್ತವೆ. ಅಗೆಲ್ ಅನ್ನ ನೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ, ಕಟ್ಟುಕಟ್ಟಳೆ ನೇಮೋತ್ಸವ ಇದೆ. ವಿಶೇಷವಾಗಿ ಊರು ಸೇರಿ ವಂತಿಗೆ ಹಾಕಿ ‘ಊರೊಟ್ಟು ನೇಮ’ ಯುವಕರ ವಂತಿಗೆಯ ‘ಜವನರ‍್ನ ನೇಮ’ ಆಗುತ್ತದೆ. ಮಾಯಿ ತಿಂಗಳಲ್ಲಿ ಕೋಲ ಕಳೆದ ಬಳಿಕ ‘ಗಾಡಿಯವರ ನೇಮ’ಜರಗುತ್ತದೆ. ಮಾಯಿ ತಿಂಗಳ ಅಗೆಲ್ ಅನ್ನ ನೈವೇದ್ಯ ಸೇವೆ ಗರೋಡಿ ಮನೆಯವರಿಂದ, ಬೈದರುಗಳ ನೇಮ ಊರವರ ವಂತಿಗೆಯಿಂದ, ಮಾಯಂದಾಳ ಕೋಲ ಗರೋಡಿ ಮನೆಯವರಿಂದ. ಜುಮಾದಿ,ಕಾಂತಾರ ಜುಮಾದಿ,ಹುಲಿ ಚಾಮುಂಡಿ, ಬೊಬ್ಬರ್ಯ ಕೋಲ ಊರವರ ವಂತಿಗೆಯಿಂದ ನಡೆಯುತ್ತದೆ.
ಏಣಗುಡ್ಡೆ ಗರೋಡಿಯ ಕೂಡುಕಟ್ಟಿನಲ್ಲಿ ಕಟಪಾಡಿ, ಅಂಬಾಡಿ, ಕೋಟೆ, ಪಡು ಏಣುಗುಡ್ಡೆ, ಮೂಡು ಏಣಗುಡ್ಡೆ, ಮಟ್ಟು ಕೊಪ್ಪಲ ಹೀಗೆ ಆರು ಮಾಗಣೆಗಳಿವೆ. (ಗ್ರಾಮಗಳು- ಏಣಗುಡ್ಡೆ, ಮೂಡುಬೆಟ್ಟು, ಕೋಟೆ, ಮಟ್ಟು, ಉದ್ಯಾವರ ಪಡು.) ಕೂಡುಕಟ್ಟಿಗೆ ಸೇರಿದ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಈಗಿನ ಪೂಪೂಜನೆಯವರ ಮಾಹಿತಿಯಂತೆ 1964, 2006, 2022 ರಲ್ಲಿ ಗರೋಡಿಯ ಜೀರ್ಣೋದ್ಧಾರದ ನಡೆದಿವೆ.
ಬೈದೇರುಗಳ ನೇಮೋತ್ಸವದಲ್ಲಿ ಮೂವರು ನೇಮ ಕಟ್ಟುತ್ತಾರೆ. ಇಬ್ಬರು ಬೈದೇರುಗಳಾದರೆ ಮೂರನೆಯವರು ಯಾರು ಎಂಬ ಕುತೂಹಲದ ಪ್ರಶ್ನೆ ಎಲ್ಲರದ್ದು. ಬಹುತೇಕರು ‘ಕುಜುಂಬ ಕಾಂಜವ’ಅಂತ ಹೇಳುತ್ತಾರೆ. ಈ ಕುಜುಂಬ ಕಾಂಜವ ಯಾರು ಅಂತ ಸ್ಪಷ್ಟ ಚಿತ್ರಣ ನೀಡಿದವರು ಏಣಗುಡ್ಡೆ ಗರೋಡಿಯ ಅರ್ಚಕ ಇಂಪು ಪೂಜಾರಿಯವರು.
ಕೋಟಿಚೆನ್ನಯ್ಯರ ಅವಸಾನವಾಗಿ ಅವರು ದೈವತ್ವಕ್ಕೇರಿದ ನಂತರ ಅವರ ವೀರಗಾಥೆಯನ್ನು, ಮಹಿಮೆಯನ್ನು ಪಾರ್ದನದ ರೂಪದಲ್ಲಿ ಎಣ್ಮೂರು ಬಳ್ಳಾಲರ ಚಾವಡಿಯಲ್ಲಿ ಹೇಳಲು ಆರಂಭಿಸಿದವನು ಪಂಬದ ರಾಮು. ಹರಿವಾಣದಲ್ಲಿ ಒಂದು ಸೂಜಿಯನ್ನು ನೆಟ್ಟು ಅದರ ಮೇಲೆ ಒಂದು ಹರಿವಾಣ ನಿಲ್ಲಿಸಿ ಒಂಟಿಕಾಲಲ್ಲಿ ನಿಂತು ಪಾರ್ದನ ಹೇಳಿ ಬೈದೇರುಗಳನ್ನು ಸಾಕ್ಷಾತ್ಕರಿಸಿ ಕೊಂಡವನು ಪಂಬದ ರಾಮುವಂತೆ. ಪಂಬದ ರಾಮು ಹೇಳುವಂತೆ ಕೋಟಿ ಚೆನ್ನಯರು ತಾವು ಅತೀವ ಪ್ರೀತಿಯಿಂದ ಉತ್ತು ಬೆಳೆಸಿದ ಪೈರಿನ ಫಲವನ್ನು ಉಣ್ಣುವ ಮೊದಲೇ ಅವರು ಊರು ಬಿಡಬೇಕಾಯಿತು. ಇದರಿಂದ ನೊಂದ ಅವರು ಈ ಜಾಗದಲ್ಲಿ ಮುಂದೆ ಯಾರೇ ಏನೇ ಬೆಳೆದರೂ ಅದರ ಫಲ ಅವರಿಗೆ ದಕ್ಕಲಾರದು ಅಂತ ಶಾಪ ಕೊಟ್ಟಿದ್ದರಂತೆ. ಕುಜುಂಬ ಕಾಂಜವ ಎಲ್ಕಟೆ ಕಾಂಜವ ಹಾಗೂ ಬೀರಗ ಕಾಂಜವೆದಿಯ ಪುತ್ರ. ದುರಹಂಕಾರಿ. ಕೋಟಿ ಚೆನ್ನಯರ ಶಾಪಕ್ಕೆ ತುತ್ತಾದ ಜಾಗವೆಂದು ತಿಳಿದಿದ್ದರೂ ಅದರಲ್ಲಿ ಬೇಸಾಯ ಮಾಡಲು ಹೊರಡುತ್ತಾನೆ . ‘ಏನಾಗುತ್ತದೆ ನೋಡಿಯೇ ಬಿಡೋಣ’ಎಂಬ ಉದ್ಧಟತನ. ಆ ಕ್ಷಣದಿಂದ ಆತನ ತಾಯಿ ಬೀರಗ ಕಾಂಜವೇದಿ ಮಣ್ಣಿನ ಮಡಕೆ, ಕಟ್ಟಿಗೆ, ಅಕ್ಕಿ, ವಸ್ತ್ರ ಇವೆಲ್ಲವೂ ಪದೇ ಪದೇ ಕಣ್ಣಿಗೆ ಗೋಚರಿಸುವಂತಹ ಭ್ರಮೆಗೆ ಒಳಗಾಗುತ್ತಾಳೆ. ಕನಸೂ ಬೀಳ ತೊಡಗುತ್ತದೆ. ಇದು ಅಪಶಕುನ ಎಂದರಿತ ತಾಯಿ ‘ಮಗನಲ್ಲಿ ಏನೋ ಕೆಡುಕಾಗಲಿಕ್ಕಿದೆ. ನೀನು ಆ ಜಾಗದಲ್ಲಿ ಬೇಸಾಯ ಮಾಡಬೇಡ’ಎಂದು ಗೋಗರೆಯುತ್ತಾರೆ. ತಾಯಿ ಮಾತನ್ನು ಅಪಹಾಸ್ಯ ಮಾಡುವ ಕುಜುಂಬ ಕಾಂಜವ ಗಡಿಗೆಯನ್ನು ಒಲೆಗೆ ಇಟ್ಟರಾಯಿತು. ಕಟ್ಟಿಗೆಯಲ್ಲಿ ಬೆಂಕಿ ಮಾಡಿದರಾಯಿತು. ಅಕ್ಕಿಯಿಂದ ಅನ್ನ ಬೇಯಿಸಿದರಾಯಿತು. ಬಟ್ಟೆ ಹೊದಿಕೆಯಾಯಿತು ಅಂತ ಬೇಸಾಯವನ್ನು ಮಾಡಿಯೇ ಬಿಡುತ್ತಾನೆ. ಇದು ಆತ ಮಾಡಿದ ಮೊದಲ ತಪ್ಪು ! ಇಷ್ಟು ಮಾತ್ರವಲ್ಲ ಪಂಬದ ರಾಮು ಎಣ್ಮೂರ ಬಳ್ಳಾಲರ ಚಾವಡಿಗೆ ಬೀರ (ಪಾರ್ದನ) ಕರೆಯಲು ಹೋಗುವಾಗ ತಡೆದು ನಿಲ್ಲಿಸಿ ವ್ಯಂಗ್ಯ ಕುಹಕದ ನಗೆ ಬೀರುತ್ತಾ ‘ಏ ರಾಮು ನನ್ನನ್ನೂ ಸೇರಿಸಿ ನೀನು ಬೀರ ಕರೆಯಬೇಕು’ಎನ್ನುವನು. ಇದು ಕುಜುಂಬ ಮಾಡಿದ ಎರಡನೇ ಅಪರಾಧ. ಕೋಟಿಚೆನ್ನಯ್ಯರ ಮಹಿಮೆ ಅರಿತಿದ್ದ ಪಂಬದ ರಾಮು ಹೇಳಿದರಂತೆ ‘ಆಯಿತಲ್ಲ ಎರಡು ಹೋಗಿ ಮೂರು! ನಿನ್ನನ್ನೂ ಸೇರಿಸಿ ಕರೆಯುತ್ತೇನೆ ಬಿಡು’. ಅದರಂತೆ ಈ ಮಾತು ಸತ್ಯವಾಯಿತು. ಕುಜುಂಬ ಕಾಂಜವ ಗದ್ದೆಯಲ್ಲಿ ಪೈರು ಬೆಳೆಯುವಷ್ಟರಲ್ಲೇ ಉದರ ಬೇನೆಯ ಕಾಯಿಲೆಗೆ ಬಿದ್ದ. ಇನ್ನೇನು ಕೊನೆಯ ಕ್ಷಣ ಬಂತು ಅನ್ನುವಾಗ ಆತನ ತಾಯಿ ಬೀರಗ ಕಾಂಜವೆದಿ ಓಡಿ ಹೋಗಿ ಆತ ಬೆಳೆದ ಭತ್ತವನ್ನು ತಂದು ಅರೆದು ಸೋಸಿ ಗಂಜಿ ಮಾಡಿ ಕುಡಿಸುವಷ್ಟರಲ್ಲಿ ಪ್ರಾಣಬಿಟ್ಟು ಕೋಟಿಚೆನ್ನಯ್ಯರನ್ನು ಸೇರಿಕೊಂಡ! ತಪ್ಪಿಗೆ ತಕ್ಕ ಪ್ರಾಯಶ್ಚಿತ್ತ ಎಂಬಂತೆ ಇದೀಗ ಕುಜುಂಬ ಕಾಂಜವ ಬೈದರನ್ನು ನೇಮೋತ್ಸವದಲ್ಲಿ ಹಿಂಬಾಲಿಸುತ್ತಿದ್ದಾನೆ. ಆತನಿಗೆ ಯಾವುದೇ ಪ್ರಾಶಸ್ತ್ಯವಿಲ್ಲ. ಇದು ಒಂಥರಾ ಶಿಕ್ಷೆಯೇ ಆಗಿದೆ. ಇದು ಕುಜುಂಬ ಕಾಂಜವನ ದುರಂತ ಕಥೆ.
ಇಂಪು ಪೂಜಾರಿಯವರು ಬೋಜು ಪೂಜಾರ್ತಿ ಹಾಗೂ ತೋಮ ಪೂಜಾರಿ ಅವರ ಪುತ್ರ. ಬಿಬ್ರಿ ಪೂಜಾರ್ತಿ ಇವರ ಚಿಕ್ಕಮ್ಮ- ಪೂವ ಪೂಜಾರಿ ಚಿಕ್ಕಪ್ಪ. ಭೋಜು ಪೂಜಾರ್ತಿ ಹಾಗೂ ಬಿಬ್ರಿ ಪೂಜಾರ್ತಿಯವರು ಹೇಳುತ್ತಿದ್ದ ಪಾರ್ದನವನ್ನು ಕೇಳಿಸಿಕೊಂಡ ಇಂಪು ಪೂಜಾರಿಯವರು ಈ ಕುಜುಂಬ ಕಾಂಜವ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದೇರುಗಳ ಗರೋಡಿ,
ಏಣಗುಡ್ಡೆ
ಕಟಪಾಡಿ ಅಂಚೆ,
ಉಡುಪಿ – 574105

ಮಾಹಿತಿ ಸಂಗ್ರಹಿಸಿದ ದಿನಾಂಕ:

28-11-2024

Shree Brahma Baidarkala Garodi, Bolje-Udyavara

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬೊಳ್ಜೆ-ಉದ್ಯಾವರ

ಉಡುಪಿಯಿಂದ ಉದ್ಯಾವರ ಬೈಪಾಸಿನ ಹತ್ತಿರ ಎಡಕ್ಕೆ ಬೊಳ್ಜೆಗೆ ಹೋಗುವ ರಸ್ತೆಯಲ್ಲಿ ಸುಮಾರು 1.5 ಕಿ.ಮೀ. ಸಾಗಿದರೆ ಬೊಳ್ಜೆ ಗರೋಡಿ ಸಿಗುತ್ತದೆ. ಸುಮಾರು 350 ವರ್ಷಗಳ ಇತಿಹಾಸವಿರುವ ಉಡುಪಿ ಉದ್ಯಾವರ ಬೊಳ್ಜೆಯ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು 1992-1993ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.

ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕೋಟಿ ಚೆನ್ನಯರು ಕುರ್ಕಾಲಿನಿಂದ ಇಲ್ಲಿಗೆ ಬಂದರೆಂಬ ಪ್ರತೀತಿ. ಮೊದಲು ಅಲೆವೂರು ನೈಲಪಾದೆಗೆ ಬಂದು ವಿಷ್ಣುಮೂರ್ತಿ ದೇವರಲ್ಲಿ ಗರೋಡಿ ಕಟ್ಟಲು ಸ್ಥಳ ಕೇಳುತ್ತಾರೆ. ಆಗ ವಿಷ್ಣುಮೂರ್ತಿ ದೇವರು ಇದು ಸಣ್ಣ ಊರು, ಪಡುಭಾಗದಲ್ಲಿ ದುರ್ಗಾಪರಮೇಶ್ವರೀ ದೇವಿ ಇದ್ದಾಳೆ, ಮಧ್ಯಭಾಗದಲ್ಲಿ ಜುಮಾದಿ ನೆಲೆಸಿದ್ದಾನೆ. ನೀವು ಇನ್ನೂ ಸ್ವಲ್ಪ ಮುಂದೆ ಸಾಗಿದರೆ ನಿಮಗೆ ಅನುಕೂಲವಾದ ಜಾಗ ಸಿಗುವುದು ಎನ್ನುತ್ತಾರೆ. ಅಲ್ಲಿಂದ ಮುಂದೆ ಬಂದು ತೆಂಗಿನಕಾಯಿ ಹಾರಿಸುತ್ತಾರೆ. ಬೊಳ್ಜೆಯ ಈಗ ಗರೋಡಿ ಇರುವ ಜಾಗದಲ್ಲಿ ಚೆಂಡೆ ಮುಳ್ಳಿನ ಬಲ್ಲೆಯೊಂದು ವಿಸ್ಮಯಕರವಾಗಿ ನಡುಗತೊಡಗುತ್ತದೆ. ಇದನ್ನು ಕಂಡ ಇಲ್ಲಿನ ಜನ ದಂಗಾಗಿ ಹೋಗುತ್ತಾರೆ. ಪ್ರಶ್ನಾ ಚಿಂತಕರ ಬಳಿ ತೆರಳುತ್ತಾರೆ. ಕೋಟಿ ಚೆನ್ನಯರು ಇಲ್ಲಿಗೆ ಬಂದ ವಿಚಾರ ತಿಳಿದು ಗರೋಡಿ ಕಟ್ಟಿಸುತ್ತಾರೆ. ಅಲೆವೂರಿನ ನೈಲಪಾದೆಯಲ್ಲಿ ಕೋಟಿ ಚೆನ್ನಯರು – ಬ್ರಹ್ಮರು ಬಂದು ನಿಂತ ಹೆಜ್ಜೆ ಗುರುತಿನ ಕುರುಹುಗಳು ಈಗಲೂ ಇವೆ.
ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ನಾಗಬ್ರಹ್ಮರ ಮೂರ್ತಿ, ಮೇಲೆ ಗಾಳಿ ದೇವರಿಗೆ ಗಿಂಡೆ ಇದೆ. ಗುಂಡದ ಎಡಕ್ಕೆ ಬೈದೇರುಗಳ ಹಾಗು ಎರಡು ಮಕ್ಕಳ ಮರದ ಪಾಪೆ, ಮುಹೂರ್ತ ಕಂಬ (ಲಕ್ಷ್ಮಿ ಕಂಬ), ಬಲಕ್ಕೆ ಕುಜುಂಬ ಕಾಂಜವ, ಮಗು, ಕುದುರೆ ಮೇಲೆ ಒಕ್ಕು ಬಲ್ಲಾಳ ಹಾಗೂ ಸಾರಥಿ, ಮೂಲ ಮೈಸಂದಾಯ ದೈವಗಳಿಗೆ ಪೂಜೆ ಸಲ್ಲುತ್ತದೆ. ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಚಿಕ್ಕಮ್ಮ ದೇವಿ, ಹಾಯ್ಗುಳಿ, ಧೂಮಾವತಿ-ಬಂಟ, ಪಂಜುರ್ಲಿ, ಜೋಗಿಪುರುಷ, ಹುಲಿಚಾಮುಂಡಿ-ಬಂಟ, ಕೊಳತ ಧೂಮಾವತಿ, ಮಾಯಂದಾಳ್ ಮತ್ತು ಮಗು, ಗುರುಕಂಬಗಳ ಆರಾಧನೆಯಿದೆ.
ಗರೋಡಿ ಆವರಣದಲ್ಲಿ ಹುಲಿಚಾಮುಂಡಿಯ ಬಂಡಿ ಹಾಗು ಬ್ರಹ್ಮಸ್ಥಾನವಿದೆ. ಬ್ರಹ್ಮಸ್ಥಾನದಲ್ಲಿ ನಾಗಬ್ರಹ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ನಂದಿಕೋಣ, ಬೊಬ್ಬರ್ಯ, ನಾಗಬನ ಸನ್ನಿಧಿಗಳಿವೆ.
ಗರಡಿಯ ಆವರಣದಲ್ಲಿ ಹೆಬ್ಬಾಗಿಲ ಗುಡಿಯಲ್ಲಿ ಮಾಯಂದಾಲ್ ದೈವದ ಮರದ ಪಾಪೆ ಇದೆ. ಗರೋಡಿಗೆ ಸ್ಥಿರ ಆದಾಯವಿಲ್ಲ. ಹರಕೆ, ವಂತಿಗೆ, ಸಹಾಯಧನದಿಂದ ಕಾರ್ಯಕ್ರಮಗಳು ನಡೆಯುತ್ತವೆ.

ಅಶೋಕ್ ಪೂಜಾರಿ

ಗರೋಡಿಮನೆ ಅಶೋಕ್ ಪೂಜಾರಿಯವರು 2006ರಿಂದ ಪೂಪೂಜನೆ ಸೇವೆ ಮಾಡುತಿದ್ದಾರೆ. ಹಿಂದೆ ರಾಮ ಪೂಜಾರಿ (ಅಶೋಕ್ ಪೂಜಾರಿ ಅವರ ತಂದೆ) 1935-2006 ಹಾಗು ಮುದುಕರ ಪೂಜಾರಿ 1935ರ ಮೊದಲು ಈ ಸೇವೆ ಮಾಡುತಿದ್ದರು. ಈಗ ಬೈದೇರುಗಳ ದರ್ಶನದ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಗಿರಿಯ ಪೂಜಾರಿ, ಕುಪ್ಪ ಪೂಜಾರಿ, ರಾಮ ಪೂಜಾರಿ, ಕರಿಯ ಪೂಜಾರಿ, ಜಗನ್ನಾಥ ಪೂಜಾರಿ ಇವರು ಸ್ಥಳ ಪಾತ್ರಿಗಳಾಗಿದ್ದರು. ಪ್ರಕಾಶ್ ಟಿ. ಕೋಟ್ಯಾನ್ ಇವರು ಗರೋಡಿಯ ಆಡಳಿತ ಸಮಿತಿ ಅಧ್ಯಕ್ಷರು.
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುತ್ತದೆ. ಮಂಗಳವಾರದ ಪೂಜೆ ಇದೆ. ಚಿಕ್ಕಮ್ಮ ದೇವಿ ಇರುವುದರಿಂದ ಶುಕ್ರವಾರದ ಪೂಜೆಯೂ ಇದೆ. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಸೋಣಾರತಿ ಸೇವೆ, ಊರು ಸೇರಿ ಗಜ್ಜೆಯಿ ಸೇವೆ ಕೊಡಿ ತಿಂಗಳಿನಲ್ಲಿ ಅಗೆಲು ಅನ್ನ ನೈವೇದ್ಯ ಸೇವೆ ಮರುದಿನ ಇಡೀ ರಾತ್ರಿ ಕಾಲಾವಧಿ ನೇಮೋತ್ಸವ ಬಳಿಕ ಮಧ್ಯಾಹ್ನ ಮಾಯಂದಾಲ್ ನೇಮ. ರಾತ್ರಿ ಹುಲಿ ಚಾಮುಂಡಿ ಕೋಲ-ಭೋಗ ಇದೆ. ವಾರ ಕಳೆದು ಪೂಜಾರಿ ಶುದ್ಧ ಕಲಶ ಅಗೆಲ್ ನಡೆಯುತ್ತದೆ. ಮೇ 1 ರಂದು ಅಗೆಲ್ ಅನ್ನನೈವೇದ್ಯ ಸೇವೆ ಪ್ರತಿವರುಷ ಜರಗುತ್ತದೆ. ಮೇ 2ರಂದು ಚಿಕ್ಕಮ್ಮ ದರುಶನವಿದೆ.
ಬೊಳ್ಜೆ ಗರೋಡಿಯ ಕೂಡುಕಟ್ಟಿನಲ್ಲಿ ಸುಮಾರು 200 ಮನೆಗಳಿವೆ. ಉದ್ಯಾವರ, ಬೊಳ್ಜೆ, ಅಲೆವೂರು, ಕೆಳಮಣಿಪುರ, ಭಾಗಶಃ ಕೊರಂಗ್ರಪಾಡಿ ಊರುಗಳು ಕೂಡುಕಟ್ಟಿನಲ್ಲಿವೆ.
ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುವ ಪದ್ಧತಿ, ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಕಲಶ ಕಟ್ಟಿ ತೀರ್ಥಸ್ನಾನ ಮೊದಲಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗುರಿಕಾರರು : ನಾಲ್ಕರೆ ಗುರಿಕಾರರು ಪ್ರಭಾಕರ ಪೂಜಾರಿ, ವಿಠಲ ಪೂಜಾರಿ ಮೇಲ್ಮನೆ, ವೇಣುಗೋಪಾಲ ಉದ್ಯಾವರ, ವಿಠಲ ಅಂಚನ್, ಉದ್ಯಾವರ, ದಿವಾಕರ ಪೂಜಾರಿ ಉದ್ಯಾವರ.
ಗರೋಡಿಗೆ ಸಂಬಂಧಪಟ್ಟ 45 ಸೆಂಟ್ಸು ಜಾಗ ದಾಖಲಾತಿಯಲ್ಲಿ ಇದೆ.
ಜೀರ್ಣೋದ್ಧಾರದ ವಿವರ :
1961ರಲ್ಲಿ ಬೈಹುಲ್ಲಿನ ಮಾಡು ತೆಗೆದು ಹಂಚಿನ ಮಾಡು ಮಾಡಿ ಬ್ರಹ್ಮಕಲಶ
1993-94ರಲ್ಲಿ ಹಳೆ ಗರೋಡಿಯನ್ನು ಕಳಚಿ ಹೊಸತು ಗರೋಡಿಯ ನಿರ್ಮಾಣ – ಬ್ರಹ್ಮಕಲಶ
2001ರಲ್ಲಿ ಜೀರ್ಣೋದ್ಧಾರ-ಬ್ರಹ್ಮಕಲಶ
2017ರಲ್ಲಿ ಜೀರ್ಣೋದ್ಧಾರ-ಬ್ರಹ್ಮಕಲಶ
ನೃತ್ಯ ವಿಶಾರದರಾಗಿ ನೀರೆ ಸಂತೋಷ ಪರವ, ಬೊಗ್ಗು ಪರವ ಇವರುಗಳು ಸೇವೆ ಮಾಡುತ್ತಿದ್ದು, ಹಿಂದೆ ಮೆಣ್ಕ ಪರವ, ಪಿಜಿನ ಪರವ, ಅಮ್ಮು ಪರವ, ನರಂಗ ಪರವ, ಚಲ್ಲ ಪರವ, ಬಾಬು ಪರವ ಇವರುಗಳು ಈ ಸೇವೆ ಮಾಡಿದ್ದರು.
ಈ ಗರೋಡಿಯ ಹೆಸರಿನಲ್ಲಿ ಶ್ರೀ ಬ್ರಹ್ಮಬೈದರ್ಕಳ ಯಕ್ಷಗಾನ ಕಲಾ ಸಂಘ, ಬೊಳ್ಜೆ ಉದ್ಯಾವರ 1987ರಲ್ಲಿ ಹುಟ್ಟಿಕೊಂಡಿದ್ದು ಪ್ರತೀ ವರ್ಷ ಇಲ್ಲಿನ ರಜತಾಂಗಣದಲ್ಲಿ ಇವರ ಸೇವೆ ಆಟ ಜರಗುತ್ತದೆ. ಇವರು ಶನಿಕಥೆ (ಪೂಜೆ)ಯನ್ನೂ ತಾಳಮದ್ದಲೆಯಾಗಿ ಆಡುತ್ತಾರೆ.
ಬೊಳ್ಜೆ ಗರೋಡಿಯಲ್ಲಿ “ರಜತಾಂಗಣ” ಸಭಾಂಗಣವಿದೆ.

ಗರೋಡಿಯ ಪೂರ್ಣ ವಿಳಾಸ :

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಬೊಳ್ಜೆ ಉದ್ಯಾವರ ಅಂಚೆ,
ಉಡುಪಿ ಜಿಲ್ಲೆ-574118

ಪೂಪೂಜನೆಯವರ ವಿಳಾಸ :

ಅಶೋಕ್ ಪೂಜಾರಿ,
ಗರೋಡಿಮನೆ,
ಬೊಳ್ಜೆ ಉದ್ಯಾವರ
ದೂರವಾಣಿ : 9901954629

ಆಡಳಿತ ಸಮಿತಿ :

ಪ್ರಕಾಶ್ ಟಿ. ಕೋಟ್ಯಾನ್,
ಅಧ್ಯಕ್ಷರು,
ಬೊಳ್ಜೆ ಗರೋಡಿ ಆಡಳಿತ ಸಮಿತಿ.
ಗಣಪತಿ ದೇವಸ್ಥಾನದ ಹತ್ತಿರ,
ಉದ್ಯಾವರ,
ದೂರವಾಣಿ : 99645 83685

ಮಾಹಿತಿ ಸಂಗ್ರಹಿಸಿದ ದಿನಾಂಕ:

11-07-2022

Balkatta Shree Brahma Baidarkala Garodi-Hirebettu

ಬಾಲ್ಕಟ್ಟ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ -ಹಿರೆಬೆಟ್ಟು

ಉಡುಪಿಯಿಂದ ಮಣಿಪಾಲ, ಪರ್ಕಳ ಮಾರ್ಗವಾಗಿ ಆತ್ರಾಡಿ ತಲುಪಿ ಆತ್ರಾಡಿ ಜಂಕ್ಷನ್ನಿಂದ ಬಲಕ್ಕೆ ತಿರುಗಿ ಸುಮಾರು 5ಕಿ.ಮೀ.ದೂರದಲ್ಲಿ ಹಿರೆಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ 400 ಮೀಟರ್ ದೂರ ಸಾಗಿದರೆ ಬಾಲ್ಕಟ್ಟ ಗರೋಡಿ ಸಿಗುವುದು.
ಇದು ಪುರಾತನ ಗರೋಡಿ. ಗರೋಡಿಗೆ ಒಂದೇ ದ್ವಾರವಿದ್ದು ಪೂರ್ವಾಭಿಮುಖವಾಗಿದೆ.
ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಬ್ರಹ್ಮ ಗುಂಡದ ಬಲದಲ್ಲಿ ಒಕ್ಕು ಬಲ್ಲಾಳ್ ಮತ್ತು ಕುಜುಂಬ ಕಾಂಜವರಿಗೆ ಮಣೆ ಮಂಚದಲ್ಲಿ ಪೂಜೆ ಇದೆ. ಎಡಭಾಗದಲ್ಲಿ ಕೋಟಿಚೆನ್ನಯರಿಗೆ ಮಣೆ ಮಂಚದಲ್ಲಿ ಪೂಜೆ ನಡೆಯುತ್ತದೆ. ಬ್ರಹ್ಮ ಗುಡಿಯ ಹೊರಭಾಗದಲ್ಲಿ ಪಿಲ್ಚಂಡಿ, ಮರ್ಲಜುಮಾದಿ ಜೋಗಿ ಪುರುಷರಿಗೆ ಪೂಜೆ ನಡೆಯುತ್ತದೆ.
ಗರಡಿಯ ಆವರಣದಲ್ಲಿ ಹೆಬ್ಬಾಗಿಲ ಗುಡಿಯಲ್ಲಿ ಮಾಯಂದಾಲ್ ದೈವದ ಮರದ ಪಾಪೆ ಇದೆ. ಗರೋಡಿಗೆ ಸ್ಥಿರ ಆದಾಯವಿಲ್ಲ. ಹರಕೆ, ವಂತಿಗೆ, ಸಹಾಯಧನದಿಂದ ಕಾರ್ಯಕ್ರಮಗಳು ನಡೆಯುತ್ತವೆ.

ಬೊಗ್ರ ಪೂಜಾರಿ

ಬಾಲ್ಕಟ್ಟ ಬೊಗ್ರ ಪೂಜಾರಿಯವರು (80ವರ್ಷ) ಪೂ ಪೂಜನೆಯವರಾಗಿದ್ದು, ಬಾಲ್ಕಟ್ಟ ಬೀಡು ಶಶಿಧರ ಹೆಗ್ಡೆಯವರು ಮೊಕ್ತೇಸರರಾಗಿದ್ದು ಸುಕೇಶ ಪೂಜಾರಿಯವರು ದರ್ಶನ ಸ್ಥಳ ಪಾತ್ರಿಯವರಾಗಿರುತ್ತಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ), ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಬೈದೇರುಗಳಿಗೆ ಕಾಲಾವಧಿ ಅಗೆಲು, ನೇಮೋತ್ಸವ ಸೇವೆಗಳು ನಡೆಯುತ್ತವೆ. ಇತರ ದೈವಗಳಾದ ಪಿಲ್ಚಂಡಿ, ಮರ್ಲ್ ಜುಮಾದಿ ಬಂಟ, ಮಾಯಂದಾಲ್, ಜೋಗಿ ಪುರುಷರಿಗೆ ಕೋಲ ನಡೆಯುತ್ತದೆ.
ಈ ಗರೋಡಿಯ ಕೂಡುಕಟ್ಟಿಗೆ ಬಾಲ್ಕಟ್ಟ ಮತ್ತು ಹಿರಬೆಟ್ಟು ಗ್ರಾಮದ ಕೆಲವು ಮನೆಗಳು ಸೇರಿವೆ. ಕೂಡು ಕಟ್ಟಿಗೆ ಸೇರಿದ ಮಂದಿ ಇಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆಗಳನ್ನು ನೀಡುವ ಸಂಪ್ರದಾಯವಿದೆ. ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ದ ಮಾಡುವ ಕ್ರಮಗಳು ಇವೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ, ವಾದ್ಯದವರಾಗಿ ಪ್ರಭಾಕರ ಸೇರಿಗಾರ್ ಕೊಳಂಬೆ, ಮಡಿವಾಳರಗಿ ರಾಮ ಮಡಿವಾಳ ಬಾಲ್ಕಟ್ಟ, ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಬಾಲ್ಕಟ್ಟ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಹಿರೆಬೆಟ್ಟು, ಹಿರೆಬೆಟ್ಟು ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು 576107.

ಪೂ ಪೂಜನೆಯವರ ವಿಳಾಸ:

ಬಾಲ್ಕಟ್ಟ ಬೊಗ್ರಪೂಜಾರಿ,
ಗರಡಿಮನೆ, ಹಿರೆಬೆಟ್ಟು ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು, 576107.

Shree Brahma Baidarkala Garodi Anjaru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು

ಈ ಗರೋಡಿಯು ಪೂವಾಭಿಮುಖವಾಗಿದೆ. ಉಡುಪಿ ಹಿರಿಯಡ್ಕ ಮಾರ್ಗವಾಗಿ ಹಿರಿಯಡ್ಕ ನಾರಾಯಣಗುರು ಮಂದಿರದ ಎದುರಿನಲ್ಲಿ ಅಂಜಾರು ರಸ್ತೆಯಲ್ಲಿ ಒಂದೂವರೆ ಕಿ.ಮೀ.ಸಾಗಿದರೆ ಗರೋಡಿ ಸಿಗುತ್ತದೆ.
ಉಡುಪಿಯ ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು ಇಲ್ಲಿ ಷಡಾಧಾರ. ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರು, ಮೇಲಂತಸ್ತಿನಲ್ಲಿ ಗಾಳಿದೇವರು, ಮಧ್ಯದ ಅಂತಸ್ತಿನಲ್ಲಿ, ಪಾರ್ದನದ ಉಲ್ಲೇಖ ಪ್ರಕಾರ ಕಾಂತನ ಬೈದ ಹಾಗು ದೇಯಿ ಬೈದೆತಿಗೆ ಆರಾಧನೆ ಇರಬೇಕು ಎನ್ನುತ್ತಾರೆ ಪೂಪೂಜನೆಯವರು. ಇವರಿಗೆ ಹಿರಿಯರಿಂದ ಈ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎನ್ನುತ್ತಾರೆ. ಗುಂಡದ ಎಡ ಭಾಗದಲ್ಲಿ ಕೋಟಿ ಚೆನ್ನಯ್ಯರ ಹಾಗು ಇಬ್ಬರು ಬಾಲಕರ ಮರದ ಪಾಪೆ, ಬಲ ಭಾಗದಲ್ಲಿ ಕುಜುಂಬ ಕಾಂಜವ ಹಾಗು  ಒಬ್ಬ ಬಾಲಕನ ಮರದ ಪಾಪೆಗಳಿವ. ದೇಯಿ ಬೈದತಿ ಮಂಚ [ದೇಯಿ ಬೈದತಿಯು  ಪೆಜನಾರ್ ಓಪೆತ್ತಿ ಬ್ರಾಹ್ಮಣ ದಂಪತಿಗಳ ಮನೆಯಲ್ಲಿ ಬೆಳೆದುದರಿಂದ ಈ ಮಂಚವನ್ನು ಬ್ರಾಣೆದಿ ಮಂಚ ಅಂತ ಬಹಳ ಹಿಂದೆ ಕರೆಯುತ್ತಿದ್ದರಂತೆ.] ವಾಲಗ ಚಾವಡಿಯಲ್ಲಿ ಮಾಯಂದಾಳ್ ಮತ್ತು ಮಗು , ಜೋಗಿ ಪುರುಷ ರ ಮರದ ಪಾಪೆ  ಹುಲಿ ಚಾವುಂಡಿ ದೈವದ ಮಣೆಮಂಚಗಳಿವೆ.
ಗರೋಡಿಯ ಆವರಣದಲ್ಲಿ ಮಾರಿ ಶಿವರಾಯ ಗುಡಿ, ಜುಮಾದಿ-ಬಂಟ ಗುಡಿ, ಆಯದ ಕಲ್ಲು, ಅಮ್ನೂರು (ದುರ್ಗಾಪರಮೇಶ್ವರಿ) ಪೀಠಗಳಿವೆ.

ಸುಂದರ ಪೂಜಾರಿ

1999 ರಿಂದ ಸುಂದರ ಪೂಜಾರಿ, ಅಂಜಾರು ಗರೋಡಿಮನೆ.ಅಂಚೆ ಹಿರಿಯಡ್ಕ, (ದೂರವಾಣಿ: 94494 70205) ಇವರು ಗರೋಡಿ ಪೂಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಅಬ್ಬು ಪೂಜಾರಿ (1959-1999), ಪಿಜಿನ ಪೂಜಾರಿ (1959 ರ ಮೊದಲು) ಈ ಸೇವೆ ಮಾಡುತಿದ್ದರು.
ಕೃಷ್ಣ ಪೂಜಾರಿ ಹಾಗು ರಮೇಶ್ ಪೂಜಾರಿ ಇವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು.  ಇವರ ಮೊದಲು  ಕಾಂತಪ್ಪ ಪೂಜಾರಿ, ಹೆರಿಯಣ್ಣ ಪೂಜಾರಿ, ಶೇಖರ ಪೂಜಾರಿ ಇವರು ಈ ಸೇವೆ ಮಾಡಿದ್ದರು.
ಸುಭಾಶ್ಚಂದ್ರ ಹೆಗ್ಡೆ, ಅಂಜಾರು ಬೀಡು, ಅಂಚೆ ಹಿರಿಯಡ್ಕ, ಉಡುಪಿ ತಾಲೂಕು & ಜಿಲ್ಲೆ (ದೂರವಾಣಿ-9481447474) ಇವರು ಗರೋಡಿಯ ಮೊಕ್ತೇಸರರು. ಗರೋಡಿಗೆ ಆಡಳಿತ ಸಮಿತಿ ಇದ್ದು, ಶ್ರೀ ಸುಭಾಶ್ಚಂದ್ರ ಹೆಗ್ಡೆ ಅಧ್ಯಕ್ಷರಾಗಿ, ಶ್ರೀ ಕೆ. ಸುಧೀರ್ ಹೆಗ್ಡೆ ಕಾರ್ಯದರ್ಶಿಯಾಗಿದ್ದಾರೆ.
ಈ ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾತಿ ಪೂಜೆ, ಸೋಣ ತಿಂಗಳಿಡೀ ಸೋಣಾರ್ತಿ ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೇಯಿ ಸೇವೆ, ಅಗೆಲು ಅನ್ನ ನೈವೇದ್ಯ ಸೇವೆ ಇದೆ. ಕಾಲಾವಧಿ ನೇಮೋತ್ಸವ,ಮಾಯಂದಾಳ ನೇಮ, ಹುಲಿ ಚಾಮುಂಡಿ, ಜುಮಾದಿ- ಬಂಟ ಕೋಲವಿದೆ. ಶಿವರಾಯ ದರ್ಶನ ಸೇವೆ ಇದೆ,ಅಮ್ನೂರ ದರ್ಶನ ಸೇವೆ ಇದೆ, ದೀಪಾವಳಿಗೆ ಕಂಬ ನೆಟ್ಟು ದೀಪ ಉರಿಸಿ ಬಲಿಯೇಂದ್ರ ಪೂಜೆ ಇದೆ.
ಅಂಜಾರು ಗರೋಡಿ ಕೂಡುಕಟ್ಟಿನಲ್ಲಿ ಸುಮಾರು 150 ಮನೆಗಲಿವೆ. ಮೂಡು ಅಂಜಾರು, ಪಡು ಅಂಜಾರು, ಪಾಪುಜೆ, ವಾಂಕಡೆಬೆಟ್ಟು, ಬಜೆ, ಮಾಂಬೆಟ್ಟು, ಪಂಜಡ್ಕ, ಬೈರಂಜೆ, ಕಾಜಾರ ಗುತ್ತು, ಮೂತ್ತೂರು ಇವು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ ಊರುಗಳು. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ತೆಗೆದಿಡುವ ಪದ್ಧತಿ, ಹೆರಿಗೆಯ ನಂತರದ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಈ ಊರಿನ ಮಂದಿ ಭಾಗಿಯಾಗುತ್ತಾರೆ.
1989 ರಲ್ಲಿ ಜೀರ್ಣೋದ್ಧಾರ- ಬ್ರಹ್ಮಕಲಶ ಹಾಗು 2014 ರಲ್ಲಿ ಬ್ರಹ್ಮಕಲಶ ನಡೆದಿದೆ.
ಪಾಡಿಗಾರ ಶೇಖರ ಪರವ, ಉಗ್ಗಪ್ಪ ಪರವ, ಪೂವಪ್ಪ ಪರವ, ಅಣ್ಣಪ್ಪ ಪರವ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ. ಹಿಂದೆ ಮೆಣ್ಕ ಪರವ, ಅಮ್ಮು ಪರವ, ಪಿಜಿನ ಪರವ ಇವರುಗಳು ಈ ಸೇವೆ ಮಾಡಿದ್ದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು,
ಅಂಚೆ- ಹಿರಿಯಡ್ಕ,
ಉಡುಪಿ ತಾಲೂಕು &
ಜಿಲ್ಲೆ -576113M

ಮಾಹಿತಿ ಸಂಗ್ರಹಿಸಿದ ದಿನಾಂಕ:

14-7-2022