Baidashree

Doddakere Bettu Mane Garodi, Bommarabettu

ದೊಡ್ಡಕೆರೆಬೆಟ್ಟು ಮನೆ ಗರೋಡಿ, ಬೊಮ್ಮರಬೆಟ್ಟು

ಈ ಮನೆ ಗರೋಡಿಯು ಬೊಮ್ಮರಬೆಟ್ಟು ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರೋಡಿಯ ಹತ್ತಿರದಲ್ಲಿದೆ.
ಈ ಮನೆಗರೋಡಿ ಹಾಗೂ ಬೊಮ್ಮರಬೆಟ್ಟು ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರೋಡಿಯ ಐತಿಹ್ಯಕ್ಕೂ ನಿಕಟ ಸಂಬಂಧವಿದೆ. ಜೈನರ ಬೀಡು ಇಲ್ಲಿ ಇದ್ದ ಕಾರಣ ಬೀಡನ್ನು ಅರಸಿ ಬಂದ ಕೋಟಿಚೆನ್ನಯರು ಮೊದಲು ಭೇಟಿ ನೀಡಿದ್ದು ದೊಡ್ಡಕೆರೆಬೆಟ್ಟು ಪೂಜಾರಿಯವರ ಮನೆಗೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಅಂದು ಕೋಟಿಚೆನ್ನಯರು ಬೆಳಗ್ಗೆ ಬಂದು ಬೀಡಿನ ದಾರಿ ಕೇಳುವಾಗ ದೊಡ್ಡಕೆರೆಬೆಟ್ಟು ಮನೆ ಪೂಜಾರಿಯವರು ಏನೋ ಕೆಲಸದಲ್ಲಿ ನಿರತರಾಗಿದ್ದರು. ಕೆಲಸ ಮುಗಿದ ಮೇಲೆ ದಾರಿ ತೋರಿಸುವುದಾಗಿ ಸ್ವಲ್ಪ ಹೊತ್ತು ಕುಳಿತು ಕೊಳ್ಳುವಂತೆ ಹೇಳಿದರು. ಒಂದು ಕ್ಷಣ ಕುಳಿತ ಕೋಟಿಚೆನ್ನಯರು ಮತ್ತೊಂದು ಕ್ಷಣದಲ್ಲಿ ಮಾಯವಾಗಿದ್ದರು. ನಂತರ ಅವರು ಅಂಗಡಿಬೆಟ್ಟು ಪೂಜಾರಿಯವರ ಮನೆಗೆ ಹೋಗಿ ದಾರಿ ಕೇಳಿ, ಪೂಜಾರಿಯವರು ದಾರಿ ತೋರಿಸುತ್ತಾರೆ. ಮುಂದೆ ಬೀಡಿನ ಯಜಮಾನರು, ಮೈಂದಾಳ ಪಟ್ಟದವರು, ಊರಮಂದಿ ಸೇರಿ ಬೊಮ್ಮರಬೆಟ್ಟು ಗರಡಿ ನಿರ್ಮಾಣವಾಗುತ್ತದೆ.
ದೊಡ್ಡಕೆರೆಬೆಟ್ಟು ಪೂಜಾರಿಯವರಿಗೆ ತನ್ನ ಮನೆಗೆ ಬಂದಿದ್ದ ಇಬ್ಬರು ಸುಂದರ ದೃಢಕಾಯರು ಕೋಟಿಚೆನ್ನಯರೆಂಬುದು ತಡವಾಗಿ ಅರಿವಾಗಿ ನೊಂದುಕೊಳ್ಳುತ್ತಾರೆ. ಕೋಟಿಚೆನ್ನಯರು ತನ್ನ ಮನೆಗೆ ಬಂದಿದ್ದು ತನ್ನ ಭಾಗ್ಯವೆಂದು ಕೊಳ್ಳುತ್ತಾರೆ. ಮನೆ ಮಂದಿ ಕೂಡಿ ಕೋಟಿಚೆನ್ನಯರು ಕುಳಿತ ಆ ಪುಣ್ಯ ನೆಲವನ್ನು ಗರೋಡಿಯೆಂದು ಭಾವಿಸುತ್ತಾರೆ. ಅಂದಿನಿಂದ ಗರೋಡಿಯಲ್ಲಿ ನಡೆಯುವ ಎಲ್ಲಾ ಪೂಜೆ ಪುರಸ್ಕಾರಗಳು ಈ ಮನೆಯಲ್ಲೂ ನಡೆಯುತ್ತದೆ.
ಈ ಮನೆ ಗರೋಡಿಯ ಕೋಣೆಯಲ್ಲಿ ಕಟ್ಟಿದ ಉಯ್ಯಾಲೆಯಲ್ಲಿ ಕೋಟಿಚೆನ್ನಯ ಭಾವ ಚಿತ್ರದ ಮುಂದೆ ಎರಡು ಕಲಶ, ದೀಪಗಳನ್ನಿಟ್ಟು ಪೂಜಿಸುತ್ತಾರೆ. ಉಯ್ಯಾಲೆಯ ಹಿಂದಿನ ಗೋಡೆಯಲ್ಲಿ ಬ್ರಹ್ಮರ ಗುಂಡದ ಕಲ್ಪನೆಯುಳ್ಳ ಚಿತ್ರವಿದೆ. ಮೂಲ ಮೈಸಂದಾಯ, ಜುಮಾದಿ ಬಂಟ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ವರ್ತೆ ಕಲ್ಕುಡ ದೈವಗಳ ಆರಾಧನೆಯೂ ಇದೆ.

ಗೋಪಾಲ ಪೂಜಾರಿ

ಗೋಪಾಲ ಪೂಜಾರಿಯವರು ಈ ಮನೆಯ ಮುಖ್ಯಸ್ಥರು. ಇವರ ಮೊದಲು ಹಿರಿಯರು ಬಾಬು ಪೂಜಾರಿ, ಬೊಳ್ಳು ಪೂಜಾರಿ, (ದರ್ಶನ ಪಾತ್ರಿ) ಬೊಗ್ಗು ಪೂಜಾರಿ, (ದರ್ಶನ ಪಾತ್ರಿ) ದುಗ್ಗಪ್ಪ ಪೂಜಾರಿ, ಕೋಟಿ ಪೂಜಾರಿ, ರಾಮ ಪೂಜಾರಿಯವರು.

ಸಚಿನ್ ಪೂಜಾರಿ

ಸಚಿನ್ ಪೂಜಾರಿಯವರು ಈ ಮನೆ ಗರೋಡಿಯ ಪೂ ಪೂಜನೆಯವರು.
ದೊಡ್ಡಕೆರೆಬೆಟ್ಟು ಮನೆ ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮಗಳಿವೆ. ಎರಡು ವರ್ಷಗಳಿಗೊಮ್ಮೆ ಅಗೆಲು, ಅನ್ನ ನೈವೇದ್ಯ ಸೇವೆ ಬೊಮ್ಮರಬೆಟ್ಟು ಗರೋಡಿಯಲ್ಲಿ ನಡೆಯುತ್ತದೆ. ಆ ದಿನ ಇಲ್ಲಿ ಮನೆ ಗರೋಡಿಯಲ್ಲಿ ಸಾಂಕೇತಿಕವಾಗಿ ಅಗೆಲ್ ನಡೆಯುತ್ತದೆ. ವ್ರತ ಫಲಾಹಾರದಲ್ಲಿ ಕುಳಿತ ಮನೆಯ ಹೆಣ್ಣು ಮಗಳೊಬ್ಬಳನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಕೈಯಲ್ಲಿ ವೀಳ್ಯದೆಲೆ, ಅಡಿಕೆ, ಪಿಂಗಾರ ಹೂ ಹಿಡಿದುಕೊಂಡು ಕೂರಿಸುತ್ತಾರೆ. ಜೋಡು ದೀಪಗಳನ್ನು ಬೆಳಗಿಸಿ ಇಡಲಾಗುತ್ತದೆ. ಬೊಮ್ಮರಬೆಟ್ಟು ಗರೋಡಿಯಲ್ಲಿ ಅನ್ನ ನೈವೇದ್ಯವಾದ ಬಳಿಕ ಇಲ್ಲಿ ಕುಳಿತ ಹೆಣ್ಣು ಮಗಳನ್ನು ಗರೋಡಿಯ ಅರ್ಚಕರೇ ಬಂದು ಎಬ್ಬಿಸುವ ಕ್ರಮ ಇದೆ.

ಗರೋಡಿಯ ವಿಳಾಸ:

ದೊಡ್ಡಕೆರೆಬೆಟ್ಟು ಮನೆ,
ಬೊಮ್ಮರಬೆಟ್ಟು ಗ್ರಾಮ,
ಅಂಚೆ ಹಿರಿಯಡ್ಕ 576113.

ಪೂ ಪೂಜನೆಯವರು:

ಸಚಿನ್ ಪೂಜಾರಿ:
ಮೊಬೈಲ್: 9739968443

ಮಾಹಿತಿ ಸಂಗ್ರಹಿಸಿದ ದಿನಾಂಕ:

25-07-2022