Baidashree

Shree Brahma Baidarkala Garodi Belthadi, Kadur

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬೆಳ್ತಾಡಿ ಕಾಡೂರು

ಉಡುಪಿಯಿಂದ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸಾಗಿ ಕುಂಜಾಲಿನ ನಂತರ ನೀಲಾವರ ದೇವಸ್ಥಾನದ ರಸ್ತೆಯಲ್ಲಿ ಮುಂದುವರಿದು ಕುರಾಡಿಯ ನಂತರ ಕಾಡೂರು ತಲುಪಿ ಕಾಡಿನ ನಡುವಿನ ಮಣ್ಣಿನ ರಸ್ತೆಯಲ್ಲಿ ಸುಮಾರು 1 ಕಿ.ಮೀ ಸಾಗಿದರೆ ಬೆಳ್ತಾಡಿ ಗರೋಡಿ ಸಿದುವುದು.
ಇದು ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯೊಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ ಹಾಗೂ ಕಿನ್ನಿದಾರುವಿನ ಮಣೆಮಂಚ, ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಹಾಗೂ ಕುಜುಂಬ ಕಾಂಜವ ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿ ಹಾಗೂ ಚಾಮುಂಡೇಶ್ವರಿಯ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಕಲ್ಕುಡ ಹಾಗೂ ಹೈಗುಳಿ ಮಣೆಮಂಚಗಳಿವೆ. ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪಂಜುರ್ಲಿ ಮಣೆಮಂಚ, ಉಳಿದ ಆರು ಮಣೆಮಂಚಗಳಲ್ಲಿ ಪರಿವಾರ ದೈವಗಳು, ಮಾಯಂದಾಳ್ ಮತ್ತು ಮಗುವಿನ ಮರದ ಮೂರ್ತಿಗಳೂ ಇವೆ.
ಬ್ರಹ್ಮಗುಡಿಯ ಎದುರಿಗೆ ಚಿಕ್ಕುವಿನ ಮರದ ಮೂರ್ತಿ ಹಾಗೂ ಗುರುಕಂಭವಿದೆ. ಹಾಗೂ ಜೋಗಿಪುರುಷರ ಮರದ ಮೂರ್ತಿಗಳೂ ಇವೆ.
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಮಲಸಾವರ ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.

ಸಂತೋಷ ಪೂಜಾರಿ

2021 ರಿಂದ ಸಂತೋಷ ಪೂಜಾರಿ (41 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಜಬ್ಬ ಪೂಜಾರಿ, ಸಂಕು ಪೂಜಾರಿ, ಕೂಸ ಪೂಜಾರಿ ಇವರು ಇಲ್ಲಿಯ ಅರ್ಚಕರಾಗಿದ್ದರು.
ಮಹಾಬಲ ಪೂಜಾರಿ (62 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿ. ಹಿಂದೆ ತಿಮ್ಮ ಪೂಜಾರಿ ಹಾಗೂ ಸುಬ್ಬ ಪೂಜಾರಿ ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸತೀಶ್ ಶೆಟ್ಟಿ ಇವರು ಗರೋಡಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಹೆಗ್ಡೆಯವರು ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಒಂದು ದಿನ ಊರಿನವರಿಂದ ಅಗೆಲು ಸೇವೆ, ಮರುದಿನ ಹಾಲುಹಬ್ಬ, ಹಾಗೂ ಮೊಕ್ತೇಸರರಿಂದ ಅಗೆಲು ಸೇವೆ ನಡೆಯುತ್ತದೆ. ಅಷ್ಟಮಿಯ ಮೂರನೇ ದಿನ ಅಗೆಲು ಸೇವೆ ಮೊಕ್ತೇಸರರಿಂದ ನಡೆಯುತ್ತದೆ. ಪುನ: ಏಪ್ರಿಲ್ ತಿಂಗಳ 16ನೇ ತಾರೀಖಿನಂದು ಅಗೆಲು ಸೇವೆ, 17ಕ್ಕೆ ಬೈದೇರುಗಳ ನೇಮ, ಶಿವರಾಯ ಕೋಲ, ಮಾಯಂದಾಳ್ ಕೋಲ ಜೋಗಿಪುರುಷ ಕೋಲ ನಡೆಯುತ್ತದೆ.
ಹೆಗ್ಗುಂಜೆ, ಕಾಡೂರು, ನಡೂರು, ಮುಂಡಾಡಿ, ಮಂದಾರ್ತಿ, ಕೊತ್ತೂರು, ಬೆಳ್ತಾಡಿ ಗ್ರಾಮದ ಜನರು ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವಗಳಲ್ಲಿ ಊರಜನರು ಭಾಗವಹಿಸುತ್ತಾರೆ.
ಗರೋಡಿಗೆ ಸಂಬಂಧಪಟ್ಟ 36ಸೆಂಟ್ಸ ಜಾಗವಿದೆ. ಊರಜನರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2013 ರಲ್ಲಿ ಜೀರ್ಣೋದ್ದಾರಗೊಂಡ ಈ ಗರೋಡಿಯನ್ನು 2025-26ರಲ್ಲಿ ಜೀರ್ಣೋದ್ಧಾರಗೊಳಿಸುವ ಯೋಜನೆಯಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಬು ಮಡಿವಾಳ, ಕಾಡೂರು ಇವರು ಮಡಿವಾಳರಾಗಿ, ವಿಜೇತ ದೇವಡಿಗ ನೀಲಾವರ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಾಡೂರು, ಬೆಳ್ತಾಡಿ,
ಕಾಡೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576234.

ಗರೋಡಿಯ ಅರ್ಚಕರು:

ಸಂತೋಷ ಪೂಜಾರಿ – 9482040719

ಮಾಹಿತಿ ನೀಡಿದವರು :

ಸಂತೋಷ ಪೂಜಾರಿ, ಅಶೋಕ್ ಶೆಟ್ಟಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025