ಶ್ರೀ ಬ್ರಹ್ಮಬೈದೇರುಗಳ ಗರೋಡಿ, ಏಣಗುಡ್ಡೆ ಕಟಪಾಡಿ
ಉಡುಪಿ ಕಟಪಾಡಿ ಪೇಟೆಯಲ್ಲಿ ಬಲಕ್ಕೆ ಮಟ್ಟು ರಸ್ತೆಯಲ್ಲಿ ಸುಮಾರು ಎರಡು ಫರ್ಲಾಂಗು ದೂರದಲ್ಲಿ ಬಲಕ್ಕೆ ಸಿಗುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಸುಮಾರು 350 ಮೀಟರ್ ಮುಂದೆ ಹೋದರೆ ಗರೋಡಿ ಸಿಗುವುದು.
ಉಡುಪಿಯ ಕಟಪಾಡಿಯ ಏಣಗುಡ್ಡೆ ಗರೋಡಿಯು ಶಿಲಾಮಯವಾಗಿದ್ದು ಕೊಡಿ ಕಂಬ ಹೊಂದಿದ ಅತಿ ಪುರಾತನ ಗರೋಡಿ. ಇದು ಆಯದ ಗರೋಡಿಯಾಗಿದ್ದು 2022ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕಟಪಾಡಿ ಬಳ್ಳಾಲರ ಬೀಡಿಗೆ ಬರುವ ಈರ್ವರು ಸುಂದರ ಕಾಯದ ಯುವಕರು ಇಲ್ಲಿ ತಮಗೆ ಗರೋಡಿ ಕಟ್ಟಲು ಜಾಗ ಕೊಡಿ ಎಂದು ಕೇಳುತ್ತಾರೆ. ಬಳ್ಳಾಲರು ಇಲ್ಲಿ ಗರೋಡಿ ಕಟ್ಟಲು ಜಾಗವಿಲ್ಲ ಎಂದಾಗ ಯುವಕರು ಅಲ್ಲಿಯೇ ಇದ್ದ ಬೃಹತ್ ಕಲ್ಲಿನ ಮರಿಗೆಯನ್ನು (ದಂಬೆ) ಕವುಚಿ ಹಾಕಿ ಮುಂದೆ ಅಗ್ರಹಾರದ ಕಡೆಗೆ ಸಾಗುತ್ತಾರೆ. ಅವರು ಅತ್ತ ಹೋಗುತ್ತಲೆ ಬಳ್ಳಾಲರು ಹೊಟ್ಟೆ ನೋವಿನಿಂದ ನರಳುತ್ತಾರೆ. ಅವರಿಬ್ಬರು ಯಾರೋ ಮಹಾತ್ಮರೇ ಇರಬೇಕು. ತನ್ನಿಂದ ಅಪಚಾರವಾಯಿತು ಎಂದು ಅವರನ್ನು ವಾಪಾಸು ಕರೆಸಲು ಆಳುಗಳನ್ನು ಕಳುಹಿಸುತ್ತಾರೆ. ಆ ಯುವಕರು ಕೋಟಿ ಚೆನ್ನಯ್ಯರಾಗಿದ್ದರು. ಅವರು ನಾವು ಒಮ್ಮೆ ಮುಂದಡಿ ಇಟ್ಟವರು ಹಿಂದೆ ಬರುವುದಿಲ್ಲ ಎನ್ನುತ್ತಾರೆ. ಅಲ್ಲಿಗೆ ಬಂದ ಬಳ್ಳಾಲರು ಕೈ ಮುಗಿಯುತ್ತಾ ಕೋಟಿ ಚೆನ್ನಯ್ಯರು ಬಯಸಿದ ಜಾಗದಲ್ಲೇ ಗರೋಡಿ ಕಟ್ಟಲು ಸಮ್ಮತಿಸುತ್ತಾರೆ. ಅಗ್ರಹಾರದಲ್ಲಿ ಎಸೆದ ತೆಂಗಿನಕಾಯಿ ಈಗ ಗರೋಡಿ ಇರುವಲ್ಲಿ ಬಂದು ಬೀಳುತ್ತದೆ ಅದೊಂದು ನೀರು ಇದ್ದ ಹೊಂಡ ಪ್ರದೇಶವಾಗಿತ್ತು. ಬಳ್ಳಾಲರೇ ಇಲ್ಲಿ ಗರೋಡಿ ಕಟ್ಟಿಸಿ ಕೊಟ್ಟರು ಎಂಬ ಇತಿಹಾಸ ಚಾಲ್ತಿಯಲ್ಲಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ನಾಗಬ್ರಹ್ಮರ ಮೂರ್ತಿ ಹಾಗು ಗಾಳಿ ದೇವರು- ಆಂಜನೇಯ ಮೂರ್ತಿ ಇದೆ.
ಗುಂಡದ ಎಡಕ್ಕೆ ಕೋಟಿ ಚೆನ್ನಯರ ಹಾಗು ಇಬ್ಬರು ಮಕ್ಕಳ ಮರದ ಪಾಪೆ ಇದೆ.
ಗುಂಡದ ಬಲಕ್ಕೆ ಕುಜುಂಬ ಕಾಂಜವ ಮತ್ತು ಮಗು, ಕುದುರೆಯ ಮೇಲೆ ಕುಳಿತ ಒಕ್ಕು ಬಳ್ಳಾಲರ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದ ಮಣೆಮಂಚದಲ್ಲಿ ಹುಲಿ ಚಾಮುಂಡಿ ದೈವದ ಕಂಚಿನ ಮುಖ, ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ ಹಾಗು ಮಣೆಮಂಚದಲ್ಲಿ ಪಂಜುರ್ಲಿ ದೈವದ ಕಂಚಿನ ಮುಖಗಳಿವೆ.
ಬ್ರಹ್ಮಗುಡಿಯ ಎದುರಿನಲ್ಲಿ ಗುರುಕಂಬಕ್ಕೆ ಪೂಜೆಯಿದೆ.
ಗರೊಡಿಯ ಹೊರಗೆ ಆವರಣದೊಳಗೆ ಮಾಯಂದಾಳ್ ಗುಡಿಯಲ್ಲಿ ಮಾಯಂದಾಳ್, ಮಗು, ಮಗುವನ್ನು ನೋಡಿಕೊಳ್ಳುವ ಪರಿಚಾರಿಕೆಯವಳ ಹಾಗು ಕೊಳತ ಜುಮಾದಿಯ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯಲ್ಲಿ ಕಾಂತಾರ ಜುಮಾದಿ ಮತ್ತು ಬಂಟ ಸಾನಿದ್ಯವಿದೆ.
ಗರೋಡಿಯ ಆವರಣದೊಳಗೆ ಬೊಬ್ಬರ್ಯ ಗುಡಿ, ಅಯ್ಯಕಲ್ಲು ತೀರ್ಥಬಾವಿ, ಕೊಡಿಕಂಬ ಹಾಗು ತುಳಸಿ ಕಟ್ಟೆಗಳಿವೆ.
ಇಂಪು ಪೂಜಾರಿ
ಗರೋಡಿಮನೆಯ ಇಂಪು ಪೂಜಾರಿಯವರು ಪೂಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ನಾಗಪ್ಪ ಪೂಜಾರಿ (ಇಂಪು ಪೂಜಾರಿಯವರ ಅಣ್ಣ), ಗೋಪಾಲ ಪೂಜಾರಿ (ನಾಗಪ್ಪ ಪೂಜಾರಿಯವರ ಮಾವ), ಅನಂತ ಪೂಜಾರಿ (ಗೋಪಾಲ ಪೂಜಾರಿಯವರ ಮಾವ), ಕೊರಗ ಪೂಜಾರಿ (ಅನಂತ ಪೂಜಾರಿಯವರ ಅಣ್ಣ) ಈ ಗರೋಡಿಯ ಪೂಪೂಜನೆಯವರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಏಣಗುಡ್ಡೆ ಗುರುವ ಪೂಜಾರಿ, ಏಣಗುಡ್ಡೆ ಜಾರು ಪೂಜಾರಿ
ಇವರುಗಳು ಗರೋಡಿಯ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿದ್ದರು. ಹಿಂದೆ ಇಲ್ಲಿ ಕೊಡಿ ತಿಂಗಳಿನಲ್ಲಿ ಹೊಸಭತ್ತ ಅನ್ನ ನೈವೇದ್ಯ ಅಗೆಲು ದಿನ ದೈವ ಕಾಂತಾರ ಜುಮಾದಿ ದರುಶನದಲ್ಲಿ ಬೈದೇರುಗಳ ಪಾತ್ರಿಗಳನ್ನು ಆಯ್ಕೆ ಮಾಡುವ ಪದ್ಧತಿ ಇತ್ತು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು
ಸೇರಿ ಗಜ್ಜೆಯಿ ಸೇವೆಗಳು ಜರಗುತ್ತವೆ. ಅಗೆಲ್ ಅನ್ನ ನೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ, ಕಟ್ಟುಕಟ್ಟಳೆ ನೇಮೋತ್ಸವ ಇದೆ. ವಿಶೇಷವಾಗಿ ಊರು ಸೇರಿ ವಂತಿಗೆ ಹಾಕಿ ‘ಊರೊಟ್ಟು ನೇಮ’ ಯುವಕರ ವಂತಿಗೆಯ ‘ಜವನರ‍್ನ ನೇಮ’ ಆಗುತ್ತದೆ. ಮಾಯಿ ತಿಂಗಳಲ್ಲಿ ಕೋಲ ಕಳೆದ ಬಳಿಕ ‘ಗಾಡಿಯವರ ನೇಮ’ಜರಗುತ್ತದೆ. ಮಾಯಿ ತಿಂಗಳ ಅಗೆಲ್ ಅನ್ನ ನೈವೇದ್ಯ ಸೇವೆ ಗರೋಡಿ ಮನೆಯವರಿಂದ, ಬೈದರುಗಳ ನೇಮ ಊರವರ ವಂತಿಗೆಯಿಂದ, ಮಾಯಂದಾಳ ಕೋಲ ಗರೋಡಿ ಮನೆಯವರಿಂದ. ಜುಮಾದಿ,ಕಾಂತಾರ ಜುಮಾದಿ,ಹುಲಿ ಚಾಮುಂಡಿ, ಬೊಬ್ಬರ್ಯ ಕೋಲ ಊರವರ ವಂತಿಗೆಯಿಂದ ನಡೆಯುತ್ತದೆ.
ಏಣಗುಡ್ಡೆ ಗರೋಡಿಯ ಕೂಡುಕಟ್ಟಿನಲ್ಲಿ ಕಟಪಾಡಿ, ಅಂಬಾಡಿ, ಕೋಟೆ, ಪಡು ಏಣುಗುಡ್ಡೆ, ಮೂಡು ಏಣಗುಡ್ಡೆ, ಮಟ್ಟು ಕೊಪ್ಪಲ ಹೀಗೆ
ಆರು ಮಾಗಣೆಗಳಿವೆ. (ಗ್ರಾಮಗಳು- ಏಣಗುಡ್ಡೆ, ಮೂಡುಬೆಟ್ಟು, ಕೋಟೆ, ಮಟ್ಟು, ಉದ್ಯಾವರ ಪಡು.) ಕೂಡುಕಟ್ಟಿಗೆ ಸೇರಿದ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಈಗಿನ ಪೂಪೂಜನೆಯವರ ಮಾಹಿತಿಯಂತೆ 1964, 2006, 2022 ರಲ್ಲಿ ಗರೋಡಿಯ ಜೀರ್ಣೋದ್ಧಾರದ ನಡೆದಿವೆ.
ಬೈದೇರುಗಳ ನೇಮೋತ್ಸವದಲ್ಲಿ ಮೂವರು ನೇಮ ಕಟ್ಟುತ್ತಾರೆ. ಇಬ್ಬರು ಬೈದೇರುಗಳಾದರೆ ಮೂರನೆಯವರು ಯಾರು ಎಂಬ ಕುತೂಹಲದ
ಪ್ರಶ್ನೆ ಎಲ್ಲರದ್ದು. ಬಹುತೇಕರು ‘ಕುಜುಂಬ ಕಾಂಜವ’ಅಂತ ಹೇಳುತ್ತಾರೆ. ಈ ಕುಜುಂಬ ಕಾಂಜವ ಯಾರು ಅಂತ ಸ್ಪಷ್ಟ ಚಿತ್ರಣ ನೀಡಿದವರು ಏಣಗುಡ್ಡೆ ಗರೋಡಿಯ ಅರ್ಚಕ ಇಂಪು ಪೂಜಾರಿಯವರು.
ಕೋಟಿಚೆನ್ನಯ್ಯರ ಅವಸಾನವಾಗಿ ಅವರು ದೈವತ್ವಕ್ಕೇರಿದ ನಂತರ ಅವರ ವೀರಗಾಥೆಯನ್ನು, ಮಹಿಮೆಯನ್ನು ಪಾರ್ದನದ ರೂಪದಲ್ಲಿ ಎಣ್ಮೂರು ಬಳ್ಳಾಲರ ಚಾವಡಿಯಲ್ಲಿ ಹೇಳಲು ಆರಂಭಿಸಿದವನು ಪಂಬದ ರಾಮು. ಹರಿವಾಣದಲ್ಲಿ ಒಂದು ಸೂಜಿಯನ್ನು ನೆಟ್ಟು ಅದರ ಮೇಲೆ ಒಂದು ಹರಿವಾಣ ನಿಲ್ಲಿಸಿ ಒಂಟಿಕಾಲಲ್ಲಿ ನಿಂತು ಪಾರ್ದನ ಹೇಳಿ ಬೈದೇರುಗಳನ್ನು ಸಾಕ್ಷಾತ್ಕರಿಸಿ ಕೊಂಡವನು ಪಂಬದ ರಾಮುವಂತೆ. ಪಂಬದ ರಾಮು ಹೇಳುವಂತೆ ಕೋಟಿ ಚೆನ್ನಯರು ತಾವು ಅತೀವ ಪ್ರೀತಿಯಿಂದ ಉತ್ತು ಬೆಳೆಸಿದ ಪೈರಿನ ಫಲವನ್ನು ಉಣ್ಣುವ ಮೊದಲೇ ಅವರು ಊರು ಬಿಡಬೇಕಾಯಿತು. ಇದರಿಂದ ನೊಂದ ಅವರು ಈ ಜಾಗದಲ್ಲಿ ಮುಂದೆ ಯಾರೇ ಏನೇ ಬೆಳೆದರೂ ಅದರ ಫಲ ಅವರಿಗೆ ದಕ್ಕಲಾರದು ಅಂತ ಶಾಪ ಕೊಟ್ಟಿದ್ದರಂತೆ. ಕುಜುಂಬ ಕಾಂಜವ ಎಲ್ಕಟೆ ಕಾಂಜವ ಹಾಗೂ ಬೀರಗ ಕಾಂಜವೆದಿಯ ಪುತ್ರ. ದುರಹಂಕಾರಿ. ಕೋಟಿ ಚೆನ್ನಯರ ಶಾಪಕ್ಕೆ ತುತ್ತಾದ ಜಾಗವೆಂದು ತಿಳಿದಿದ್ದರೂ ಅದರಲ್ಲಿ ಬೇಸಾಯ ಮಾಡಲು ಹೊರಡುತ್ತಾನೆ . ‘ಏನಾಗುತ್ತದೆ ನೋಡಿಯೇ ಬಿಡೋಣ’ಎಂಬ ಉದ್ಧಟತನ. ಆ ಕ್ಷಣದಿಂದ ಆತನ ತಾಯಿ ಬೀರಗ ಕಾಂಜವೇದಿ ಮಣ್ಣಿನ ಮಡಕೆ, ಕಟ್ಟಿಗೆ, ಅಕ್ಕಿ, ವಸ್ತ್ರ ಇವೆಲ್ಲವೂ ಪದೇ ಪದೇ ಕಣ್ಣಿಗೆ ಗೋಚರಿಸುವಂತಹ ಭ್ರಮೆಗೆ ಒಳಗಾಗುತ್ತಾಳೆ. ಕನಸೂ ಬೀಳ ತೊಡಗುತ್ತದೆ. ಇದು ಅಪಶಕುನ ಎಂದರಿತ ತಾಯಿ ‘ಮಗನಲ್ಲಿ ಏನೋ ಕೆಡುಕಾಗಲಿಕ್ಕಿದೆ. ನೀನು ಆ ಜಾಗದಲ್ಲಿ ಬೇಸಾಯ ಮಾಡಬೇಡ’ಎಂದು ಗೋಗರೆಯುತ್ತಾರೆ. ತಾಯಿ ಮಾತನ್ನು ಅಪಹಾಸ್ಯ ಮಾಡುವ ಕುಜುಂಬ ಕಾಂಜವ ಗಡಿಗೆಯನ್ನು ಒಲೆಗೆ ಇಟ್ಟರಾಯಿತು. ಕಟ್ಟಿಗೆಯಲ್ಲಿ ಬೆಂಕಿ ಮಾಡಿದರಾಯಿತು. ಅಕ್ಕಿಯಿಂದ ಅನ್ನ ಬೇಯಿಸಿದರಾಯಿತು. ಬಟ್ಟೆ ಹೊದಿಕೆಯಾಯಿತು ಅಂತ ಬೇಸಾಯವನ್ನು ಮಾಡಿಯೇ ಬಿಡುತ್ತಾನೆ. ಇದು ಆತ ಮಾಡಿದ ಮೊದಲ ತಪ್ಪು ! ಇಷ್ಟು ಮಾತ್ರವಲ್ಲ ಪಂಬದ ರಾಮು ಎಣ್ಮೂರ ಬಳ್ಳಾಲರ ಚಾವಡಿಗೆ ಬೀರ (ಪಾರ್ದನ) ಕರೆಯಲು ಹೋಗುವಾಗ ತಡೆದು ನಿಲ್ಲಿಸಿ ವ್ಯಂಗ್ಯ ಕುಹಕದ ನಗೆ ಬೀರುತ್ತಾ ‘ಏ ರಾಮು ನನ್ನನ್ನೂ ಸೇರಿಸಿ ನೀನು ಬೀರ ಕರೆಯಬೇಕು’ಎನ್ನುವನು. ಇದು ಕುಜುಂಬ ಮಾಡಿದ ಎರಡನೇ ಅಪರಾಧ. ಕೋಟಿಚೆನ್ನಯ್ಯರ ಮಹಿಮೆ ಅರಿತಿದ್ದ ಪಂಬದ ರಾಮು ಹೇಳಿದರಂತೆ ‘ಆಯಿತಲ್ಲ ಎರಡು ಹೋಗಿ ಮೂರು! ನಿನ್ನನ್ನೂ ಸೇರಿಸಿ ಕರೆಯುತ್ತೇನೆ ಬಿಡು’. ಅದರಂತೆ ಈ ಮಾತು ಸತ್ಯವಾಯಿತು. ಕುಜುಂಬ ಕಾಂಜವ ಗದ್ದೆಯಲ್ಲಿ ಪೈರು ಬೆಳೆಯುವಷ್ಟರಲ್ಲೇ ಉದರ ಬೇನೆಯ ಕಾಯಿಲೆಗೆ ಬಿದ್ದ. ಇನ್ನೇನು ಕೊನೆಯ ಕ್ಷಣ ಬಂತು ಅನ್ನುವಾಗ ಆತನ ತಾಯಿ ಬೀರಗ ಕಾಂಜವೆದಿ
ಓಡಿ ಹೋಗಿ ಆತ ಬೆಳೆದ ಭತ್ತವನ್ನು ತಂದು ಅರೆದು ಸೋಸಿ ಗಂಜಿ ಮಾಡಿ ಕುಡಿಸುವಷ್ಟರಲ್ಲಿ ಪ್ರಾಣಬಿಟ್ಟು ಕೋಟಿಚೆನ್ನಯ್ಯರನ್ನು ಸೇರಿಕೊಂಡ! ತಪ್ಪಿಗೆ ತಕ್ಕ ಪ್ರಾಯಶ್ಚಿತ್ತ ಎಂಬಂತೆ ಇದೀಗ ಕುಜುಂಬ ಕಾಂಜವ ಬೈದರನ್ನು ನೇಮೋತ್ಸವದಲ್ಲಿ ಹಿಂಬಾಲಿಸುತ್ತಿದ್ದಾನೆ. ಆತನಿಗೆ ಯಾವುದೇ ಪ್ರಾಶಸ್ತ್ಯವಿಲ್ಲ. ಇದು ಒಂಥರಾ ಶಿಕ್ಷೆಯೇ ಆಗಿದೆ. ಇದು ಕುಜುಂಬ ಕಾಂಜವನ ದುರಂತ ಕಥೆ.
ಇಂಪು ಪೂಜಾರಿಯವರು ಬೋಜು ಪೂಜಾರ್ತಿ ಹಾಗೂ ತೋಮ ಪೂಜಾರಿ ಅವರ ಪುತ್ರ. ಬಿಬ್ರಿ ಪೂಜಾರ್ತಿ ಇವರ ಚಿಕ್ಕಮ್ಮ- ಪೂವ
ಪೂಜಾರಿ ಚಿಕ್ಕಪ್ಪ. ಭೋಜು ಪೂಜಾರ್ತಿ ಹಾಗೂ ಬಿಬ್ರಿ ಪೂಜಾರ್ತಿಯವರು ಹೇಳುತ್ತಿದ್ದ ಪಾರ್ದನವನ್ನು ಕೇಳಿಸಿಕೊಂಡ ಇಂಪು ಪೂಜಾರಿಯವರು ಈ ಕುಜುಂಬ ಕಾಂಜವ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದೇರುಗಳ ಗರೋಡಿ,
ಏಣಗುಡ್ಡೆ
ಕಟಪಾಡಿ ಅಂಚೆ,
ಉಡುಪಿ – 574105
ಏಣಗುಡ್ಡೆ
ಕಟಪಾಡಿ ಅಂಚೆ,
ಉಡುಪಿ – 574105
ಮಾಹಿತಿ ಸಂಗ್ರಹಿಸಿದ ದಿನಾಂಕ:
28-11-2024