Baidashree

Moodraguttu Mane Garodi

ಮೂಡ್ರಗುತ್ತು ಮನೆ ಗರೋಡಿ ಅಡ್ವೆ

ಉಡುಪಿಯಿಂದ ಪಡುಬಿದ್ರಿ ತಲುಪಿ, ಪಡುಬಿದ್ರಿ – ಕಾರ್ಕಳ ಮಾರ್ಗದಲ್ಲಿ ಅಡ್ವೆ ಗರೋಡಿಯ ನಂತರ ಸುಮಾರು 200ಮೀಟರ್ ದೂರದಲ್ಲಿ ಎಡಕ್ಕೆ ತಿರುಗಿ ಒಳ ಮಾರ್ಗದಲ್ಲಿ ಸುಮಾರು 250ಮೀಟರ್ ದೂರದಲ್ಲಿ ಮೂಡ್ರಗುತ್ತು ಮನೆ ಗರೋಡಿ ಇದೆ.
ಕೋಟಿಚೆನ್ನಯರು ಮೂಡ್ರಗುತ್ತು ಮನೆಯ ಹತ್ತಿರದಲ್ಲೇ ಇರುವ ಚೆಕ್ ಪಾದೆಯಲ್ಲಿ ನಿಂತು ಮೂಡ್ರಗುತ್ತಿನ ಯಜಮಾನರನ್ನು ಕರೆದಾಗ ಅವರು ಅಸಡ್ಡೆ ತೋರಿ ತಾನು ಹೊರ ಬರದೆ ಮನೆಯ ಹೆಂಗಸರನ್ನು ನೋಡಲು ಕಳುಹಿಸಿದ್ದರಿಂದ ಆ ಮನೆಯಲ್ಲಿ ಹೆಣ್ಣು ಸಂತಾನವೇ ಆಗುಬಂತೆ ಶಾಪಗ್ರಸ್ತವಾಯಿತು. ರಾತ್ರಿ ಯಜಮಾನನಿಗೆ ಕೋಟಿಚೆನ್ನಯರು ಕನಸಿನಲ್ಲಿ ಬಂದು ಆದೇಶವಿತ್ತಂತೆ ಬಿಲ್ಲವನೋರ್ವನು ಆವೇಶದಲ್ಲಿ ತೆಂಗಿನ ಕಾಯಿ ಹಾರಿಸಿ ಅದು ಬಿದ್ದ ಸ್ಥಳದಲ್ಲಿ ಮುಂದೆ ಅಡ್ವೆ ಗರೋಡಿಯ ನಿರ್ಮಾಣವಾಯಿತು. ಮೂಡ್ರಗುತ್ತು ಮನೆಯ ಪಕ್ಕದಲ್ಲಿರುವ ಚೆಕ್ ಪಾದೆಯಲ್ಲಿ ಕೋಟಿಚೆನ್ನಯರು ಬಂದ ಕುರುಹಾಗಿ ಅವರ ಪಾದದ ಅಚ್ಚು ಇದೆಯಂತೆ. ಮುಳ್ಳುಗಂಟಿಗಳಿಂದ ಆವೃತವಾದಿರುವುದರಿಂದ ಪಾದೆಯ ಮೇಲೆ ಹೋಗುವಂತಿರಲಿಲ್ಲ.
ಮೂಡ್ರಗುತ್ತಿನ ಮನೆಯಲ್ಲಿ ಕೋಟಿಚೆನ್ನಯರಿಗ ಮಣೆ ಮಂಚದಲ್ಲಿ ಎರಡು ಗಿಂಡೆ ಹಾಗೂ ದೀಪಗಳನ್ನಿಟ್ಟು ಈಗಲೂ ಆರಾಧನೆಯಿದೆ.

ಸುಮಾರು 6ಕವರುಗಳಲ್ಲಿ 700ಜನರಿರುವ ಮೂಡ್ರಗುತ್ತಿನ ಕುಟುಂಬಸ್ಥರ ಈ ಮನೆಯಲ್ಲಿ ಈಗ ಶ್ರೀಮತಿ ಪ್ರೇಮಾ ಎಸ್ ಶೆಟ್ಟಿ ಹಾಗೂ ಮಗ ವಿಜಯ ಶೆಟ್ಟಿ ಇವರು ವಾಸ್ತವ್ಯವಿದ್ದಾರೆ.

ಮನೆಯ ಚಾವಡಿಯಲ್ಲಿ ಪ್ರತ್ಯೇಕ ಗುಡಿಯ ಒಳಗಿನ ಉಯ್ಯಾಲೆಯಲ್ಲಿರುವ ಕೋಟಿಚೆನ್ನಯರ ಪ್ರತೀಕವಾಗಿ ಎರಡು ಗಿಂಡೆಗಳಿಗೆ ದಿನಕ್ಕೆ ಎರಡು ಸಲ ಪೂಜೆ, ಸಂಕ್ರಾಂತಿ ಪೂಜೆ, ಚೌತಿ, ಅಷ್ಟಮಿ, ಹಾಗೂ ದೀಪಾವಳಿ ಹಬ್ಬಗಳಂದು ಪೂಜೆ ನಡೆಯುತ್ತದೆ.

ಹಿಂದೆ ಇಲ್ಲಿ ಬೈದೇರುಗಳಿಗೆ ಅಗೆಲು ಸೇವೆ ನಡೆಯುತ್ತಿತ್ತು ಎಂದು ಪ್ರೇಮಾ ಶೆಟ್ಟಿಯವರು ನೆನಪಿಸಿಕೊಂಡು ಈಗ ಸುಮಾರು ಇಪ್ಪತ್ತು ವರ್ಷಗಳಿಂದ ಈ ಸೇವೆಯು ನಡೆಯುತ್ತಿಲ್ಲ ಎನ್ನುತ್ತಾರೆ.

ಮನೆಯ ವಿಳಾಸ:

ಮೂಡ್ರಗುತ್ತು ಮನಡ ಗರೋಡಿ ಅಡ್ವೆ,
ಅಡ್ವೆ ಮೂಡ್ರಗುತ್ತು, ನಂದಿಕೂರು ಗ್ರಾಮ,
ಉಡುಪಿ 574111
ಮೊಬೈಲ್: ಪ್ರೇಮಾ ಎಸ್ ಶೆಟ್ಟಿ – 9320134808
ವಿಜಯ ಶೆಟ್ಟಿ – 9082918510

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Santoor-Kodangala Shree Brahma Baidarkala Garodi

ಸಾಂತೂರು – ಕೊಡಂಗಳ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ

ಉಡುಪಿಯಿಂದ ಎರ್ಮಾಳು ಮುದರಂಗಡಿ ತಲುಪಿ, ಮುದರಂಗಡಿಯಿಂದ ಸುಮಾರು 7 ಕಿ.ಮೀ.ದೂರದಲ್ಲಿ ಈ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವಕ್ಕೂ ಇನ್ನೊಂದು ದ್ವಾರವು ಉತ್ತರ ದಿಕ್ಕಿಗೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚ ಲೋಹದ ಬೆಳ್ಳಿಯ ಪ್ರಭಾವಳಿ ಇರುವ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಕೂಚಿ ಹಾಗೂ ದೀಪವನ್ನಿಟ್ಟು ಆರಾಧನೆ ಇದೆ.
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರ ಮಣೆ ಮಂಚವಿದೆ.
ಗುಂಡದ ಬಲಭಾಗದಲ್ಲಿ ಜೋಗಿ ಪುರುಷ ಹಾಗೂ ಒಕ್ಕುಬಲ್ಲಾಳರ ಮಣೆ ಮಂಚವಿದೆ.

ಬ್ರಹ್ಮ ಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಬಲಬದಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿ, ಎಡಬದಿಯಲ್ಲಿ ಮಣೆ ಮಂಚದಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳಿಗೆ ಪೂಜೆಯಿದೆ. ಬ್ರಹ್ಮ ಗುಡಿಯ ಎಡಭಾಗದಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಪಾಪೆಯಿದೆ.

ಬ್ರಹ್ಮಗುಡಿಯ ಎದುರಿಗೆ ಉತ್ತದಿಕ್ಕಿನಲ್ಲಿ ಗುರುಕಂಭಕ್ಕೂ ಪೂಜೆ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಅಯ್ಯಕಲ್ಲು, ಹಾಗೂ ಪಾರಿಜಾತ ಹಾಗೂ ಸಂಪಿಗೆ ಮರಗಳಿರುವ ಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಭರತ್ ಪೂಜಾರಿ

ಮಾರ್ಚ್ 8, 2018ರಿಂದ ಭರತ್ ಪೂಜಾರಿಯಾನೆ ರಾಜು ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರಿಗಿಂತ ಮೊದಲು ನಾರಾಯಣ ಪೂಜಾರಿ, ಬೇಚು ಪೂಜಾರಿ, ಕೋಟಿ ಪೂಜಾರಿಯವರು ಈ ಸೇವೆ ಮಾಡುತ್ತಿದ್ದರು. ಬೈದೇರುಗಳ ದರ್ಶನಕ್ಕೆ ಸ್ಥಳ ಪಾತ್ರಿ ಇಲ್ಲಿ ಇಲ್ಲ.

ಗರೋಡಿಯಲ್ಲಿ ದಿನವೂ ದೀಪ ಹಾಕುತ್ತಾರೆ. ಸಂಕ್ರಾಂತಿ ಪೂಜೆ,(ಸೂಡ) ಚೌತಿ ಪೂಜೆ,ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ತುಳುವಿನ ಮಾಯಿ ತಿಂಗಳ ಹುಣ್ಣಿಮೆಯ ನಂತರದ ಏಕಾದಶಿಯಂದು ಗರೋಡಿ ಪ್ರವೇಶ, ಮರುದಿನ ಅಗೆಲು ಸೇವೆ, ಅದರ ಮರುದಿನ ಬೈದೇರುಗಳ ನೇಮ, ಜೋಗಿಪುರುಷ ಕೋಲ, ಅದರ ಮರುದಿನ ಮಾಯಂದಾಲ್ ನೇಮ ನಡೆಯುತ್ತದೆ.

ಗರೋಡಿಯಿಂದ ಸುಮಾರು 4ಕಿ.ಮೀ. ದೂರದಲ್ಲಿರುವ ಆಲ್‌ಉರಿ ಬ್ರಹ್ಮ ಸ್ಥಾನದಲ್ಲಿ 12ವರ್ಷಕ್ಕೊಮ್ಮೆ ಕೋಲ ನಡೆಯುವಾಗ ಗರೋಡಿಯಲ್ಲಿ ಅಗೆಲು ಸೇವೆ ನಡೆದ ನಂತರ ಬೈದೇರುಗಳು ದರ್ಶನದಿದಲ್ಲಿ ಬ್ರಹ್ಮಸ್ಥಾನದವರೆಗೆ ನಡೆದುಕೊಂಡು ಹೋಗಿ ಬೇಟಿಕೊಡುವ ಸಂಪ್ರದಾಯವಿದೆ. ಅಂದು ರಾತ್ರಿ ಜುಮಾದಿ ಮತ್ತು ಬಂಟ, ಜಾರಂದಾಯ ಮತ್ತು ಬಂಟ ಹಾಗೂ ಕೊಡಮಣಿತ್ತಾಯ ದೈವಗಳ ಕೋಲ ನಡೆದ ನಂತರ ಬೇರೆ ಚಪ್ಪರದಲ್ಲಿ ಬೈದೇರುಗಳ ನೇಮ ನಡೆದು ನಂತರ ಪುನ: ದರ್ಶನದಲ್ಲಿ ಹಿಂದೆ ಗರೋಡಿಗೆ ಬರುವುದು. 2011ರಲ್ಲಿ ಕೋಲ ನಡೆದಿದೆ.

ಸಾಂತೂರು ಹಾಗೂ ಪಿಲಾರ್ ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವರಡ ವಂತಿಗೆ ಕಾಣಿಕೆ ದೇಣಿಗೆಗಳಿಂದ ಭರಿಸಲಾಗುತ್ತದೆ.

11-03-2006ರಲ್ಲಿ ಮಾಯಂದಾಲ್ ಮತ್ತು ಮದುವಿನ ಮರದ ಪಾಪೆಗಳ ಪ್ರತಿಷ್ಠೆ ನಡೆದಿದೆ. 28-02-2007ರಲ್ಲಿ ಚಪ್ಪರದ ನಿರ್ಮಾಣವಾಗಿದೆ.

ಸಂತೋಷ ಪರವ ನೀರೆ ಮತ್ತು ಸಂಘಟಿಗರು ಈ ಗರೋಡಿಯಬ ನೃತ್ಯ ವಿಶಾರದರಾಗಿ ರಮೇಶ ಮಡಿವಾಳ ಮಡಿವಾಳರಾಗಿ, ಶಮ್ಮಿ ಗಫೂರ್ ಮುದರಂಗಡಿ ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಗೆ ಸಂಬಂಧಪಟ್ಟ ಕೊಡಂಗಳ ಗರೋಡಿ ಮಹಿಳಾಮಂಡಲ, ಕೊಡಂಗಳ ಗರೋಡಿ ಭಕ್ತವೃಂದಗಳೆಂಬ ಎರಡು ಸಂಘಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗರೋಡಿಯ ವಿಳಾಸ:

ಸಾಂತೂರು ಕೊಡಂಗಳ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಹಲಸಿನಕಟ್ಟೆ ಅಂಚೆ, ಕಾಪು ತಾಲೂಕು ಉಡುಪಿ – 574113
ಭರತ್ ಯಾನೆ ರಾಜು ಪೂಜಾರಿ – 9611394497

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Shree Brahma Baidarkala Garodi, Moodubelle

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಮೂಡುಬೆಳ್ಳೆ

ಉಡುಪಿಯಿಂದ ಕಟಪಾಡಿ ಸುಭಾಷ್‌ನಗರ ಮಾರ್ಗವಾಗಿ ಪಾಜಕ ಕ್ಷೇತ್ರದ ನಂತರ ಪಡುಬೆಳ್ಳೆ ಪೇಟೆಯಲ್ಲಿ ಎಡಕ್ಕೆ ತಿರುಗಿ ಪಾಪನಾಶಿನಿ ಸೇತುವೆ ದಾಟಿ ಮುಂದಕ್ಕೆ ಸುಮಾರು 400ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿರುವ ಕಾಲು ದಾರಿಯಲ್ಲಿ ಸುಮಾರು 20ಮೀ. ಬೈಲಿನ ಕಡೆಗೆ ನಡೆದು ಸಾಗಿದರೆ ಮೂಡುಬೆಳ್ಳೆ ಗರೋಡಿ ಸಿಗುವುದು.
ಇದೊಂದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವದಿಕ್ಕಿಗೂ ಪಶ್ಶಿಮಕ್ಕೆ ಇನ್ನೊಂದು ದ್ವಾರವೂ ಇದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಂಡದಲ್ಲಿ ಪಂಚಲೋಹದ ಬೆಳ್ಳಿಯ ಕವಚ ಹಾಗೂ ಮುಖಕ್ಕೆ ಬಂಗಾರ ಹೊದಿಸಿದ ಅಶ್ವಾರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಪಾಪೆ ಇದೆ ಹಾಗೂ ಮಣೆ ಮಂಚದಲ್ಲಿ ಪಿಲ್ಚಂಡಿ ದೈವಕ್ಕೆ ಪೂಜೆ ಸಲ್ಲುತ್ತದೆ.
ಬ್ರಹ್ಮ ಗುಡಿಯ ಹೊರಗೆ ವಾಲಗ ಚಾವಡಿಯ ಬಲಭಾಗದಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆ ಇದೆ. ಎಡಭಾಗದಲ್ಲಿ ಜೋಗಿ ಪುರುಷರ ಮಣೆ ಮಂಚ ಇದೆ.
ಬ್ರಹ್ಮಗುಡಿಯ ಎದುರಿಗೆ, ಉತ್ತರ ದಿಕ್ಕಿನಲ್ಲಿ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.

ಹೊನ್ನಯ್ಯ ಪೂಜಾರಿ

ಹೊನ್ನಯ್ಯ ಪೂಜಾರಿಯವರು (64ವರ್ಷ ಪ್ರಾಯ) ಪೂ ಪೂಜನೆಯವರಾಗಿದ್ದು ತಮ್ಮ 15ವರ್ಷ ಪ್ರಾಯದಲ್ಲಿದ್ದಾಗಿನಿಂದ ಈ ಸೇವೆ ಮಾಡುತ್ತಿದ್ದಾರೆ. ಇದರ ಮೊದಲು ಅಣ್ಣ ಸಂಜೀವ ಪೂಜಾರಿ, ಮಾವನವರಾದ ಕಿಟ್ಟು ಪೂಜಾರಿ, ಕರಿಯ ಪೂಜಾರಿಯವರು ಸೇವೆ ಮಾಡುತ್ತಿದ್ದರು.

ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ.

ಮೇಲ್ಮನೆ ಉದಯ ಶೆಟ್ಟಿ ಹಾಗೂ ಕೆಳಮನೆ ಭಾಸ್ಕರ ಶೆಟ್ಟಿ ಇವರುಗಳು ಗರೋಡಿಯ ಮೊಕ್ತೇಸರರಾಗಿರುವರು.

ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ವರ್ಷಾವಧಿ ಬೈದೇರಯಗಳ ಅಗೆಲು ಸೇವೆ, ನೇಮ, ಜೋಗಿ ಪುರುಷ ಹಾಗೂ ಮಾಯಂದಾಲ್ ಕೋಲ ಸೇವೆ ನಡೆಯುತ್ತದೆ.

ಎಡ್ಮೇರ್, ಮೂಡುಬೆಳ್ಳೆ,(ತೋಕೊಳಿ) ಕುಂಟಾಲ್ ಗುಡ್ಡೆಯ ಜನರು ಈ ಕೂಡು ಕಟ್ಟಿಗೆ ಸೇರಿದವರಾಗಿದ್ದು, ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಇತ್ಯಾದಿ ಸಾಂಪ್ರದಾಯಿಕ ಹರಕೆಯ ಸೇವೆಗಳಲ್ಲಿ ಜನರು ಪಾಲ್ಗೊಳ್ಳುತ್ತಾರೆ.

ಗರೋಡಿಗೆ ಸ್ಥಿರ ಆದಾಯವಿಲ್ಲದೆ ಊರ ಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.

ಗರೋಡಿಯು 1999ರ ಮೇ ತಿಂಗಳಲ್ಲಿ ಜೀರ್ಣೋದ್ಧಾರವಾಗಿತ್ತು. ಈಗ ಗರೋಡಿಯ ಜೀರ್ಣೋದ್ದಾರದ ಯೋಜನೆಯಿದೆ.

ಬೊಗ್ಗು ಪರವ ಮೂಡುಬೆಳ್ಳೆ ಇವರು ಈ ಗರೋಡಿಯ ನೃತ್ಯ ವಿಶಾದರರಾಗಿದ್ದು, ಪ್ರಕಾಶ್ ಮಡಿವಾಳ, ಕಟಪಾಡಿ, ಇವರು ಮಡಿವಾಳರಾಗಿಯೂ, ಬೊಗ್ರ ಸೇರಿಗಾರ ಅಲೆವೂರು ಇವರು ಗರೋಡಿಯ ವಾದ್ಯದವರಾಗಿಯೂ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಬೆಳ್ಳೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮೂಡುಬೆಳ್ಳೆ,
ಮೂಡುಬೆಳ್ಳೆ ಅಂಚೆ, ಕಾಪು ತಾಲೂಕು,
ಉಡುಪಿ 576120.

ಪೂ ಪೂಜನೆಯವರ ವಿಳಾಸ:

ಹೊನ್ನಯ್ಯ ಪೂಜಾರಿ,
ದೇವರ ಗುಡ್ಡೆ,
ಮೂಡುಬೆಳ್ಳೆ ಅಂಚೆ,
ಕಾಪು ತಾಲೂಕು, ಉಡುಪಿ 576120.
ಮೊಬೈಲ್: 9483079973

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Shree Brahma Baidarkala Garodi, Pande

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಾಂದೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರಿ ತಲುಪಿ ಬಲಭಾಗದ ಸರ್ವೀಸ್ ರಸ್ತೆಯ ಮೂಲಕ ಸುಮಾರು 1 ಕಿ.ಮೀ. ದೂರ ಸಾಗಿ ಶ್ರೀಲಕ್ಷೀರಮಣ ದೇವಸ್ಥಾನದ ನಂತರ ಬಲಕ್ಕೆ ತಿರುಗಿದರೆ ಪಾಂದೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಇದೆ.
ಈ ಗರೋಡಿಯು ಆಯದ ಗರೋಡಿಯಾಗಿದ್ದು, ಮುಖ್ಯ ದ್ವಾರವು ಬಡಗು ಮುಖವಾಗಿಯೂ ಪೂರ್ವಕ್ಕೆ ಇನ್ನೊಂದು ದ್ವಾರವಿದೆ.
ಮೂತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಹೊರಗೆ ಎಡಭಾಗದಲ್ಲಿ ಕೋಟಿಚೆನ್ನಯರ ಮಣೆ ಮಂಚವಿದೆ.
ಗುಂಡದ ಹೊರಗೆ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಕೊಡಮಣಿತ್ತಾಯ ದೈವಗಳ ಮಣೆ ಮಂಚವಿದೆ.

ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಿಲ್ಚಂಡಿ, ಜೋಗಿಪುರುಷರಿಗೂ ಗುರುಕಂಭಕ್ಕೂ ಪೂಜೆ ನಡೆಯುತ್ತದೆ.

ಗರೋಡಿಯ ಆವರಣದಲ್ಲಿ ಗುಡಿಯಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆಯಿದೆ.

ಅಯ್ಯಕಲ್ಲು, ತುಳಸಿಕಟ್ಟೆ ಹಾಗೂ ಅಶ್ವತ್ತಕಟ್ಟೆಗಳು ಇವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಗರೋಡಿಯು ಪಡುಬಿದ್ರಿ ಹೊಸಮನೆ ಪ್ಯಾಮಿಲಿ ಟ್ರಸ್ಟ (ರಿ). ಇದರ ಆಡಳಿತದಲ್ಲಿದೆ. ಗರಡಿಮನೆ ಪೂ ಪೂಜನೆಯವರಾದ ಜಯ ಪೂಜಾರಿಯವರು ತೀರಿ ಕೊಂಡಿದ್ದು ಉತ್ತರಾಧಿಕಾರಿಯವರ ನೇಮಕವಾಗದೆ ಸದ್ಯ ಹೆಜಮಾಡಿ ಗರೋಡಿಯ ಗುರುರಾಜ ಪೂಜಾರಿಯವರು ಪೂ ಪೂಜನೆಯ ಕೆಲಸ ಮಾಡುತ್ತಿದ್ದಾರೆ.

ಗರೋಡಿಯಲ್ಲಿ ನಿತ್ಯಪೂಜ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು ಅಗೆಲು ಸೇವೆ, ಬೈದೇರುಗಳ ನೇಮ. ಜೋಗಿಪುರುಷ ಹಾಗೂ ಮಾಯಂದಾಲ್ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂದಾಜು 2004ರ ಆಸುಪಾಸಿನಲ್ಲಿ ಗರೋಡಿಯ ಜೀರ್ಣೋದ್ಧಾರವಾದ ಬಗ್ಗೆ ಮಾಹಿತಿಯಿದೆ.

ಸಂತೋಷ ಪರವ ನೀರೆ, ಇವರು ಗರೋಡಿಯ ನೃತ್ಯ ವಿಶಾರದರಾಗಿ, ರಮೇಶ ಮಡಿವಾಳ ಮುದರಂಗಡಿ ಇವರು ಮಡಿವಾಳರಾಗಿ ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಾಂದೆ,
ಪಡುಬಿದ್ರಿ ಅಂಚೆ, ಕಾಪು ತಾಲೂಕು,
ಉಡುಪಿ – 574111.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Garodi Hejamadi

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆಜಮಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 66ರಲ್ಲಿ ಪಡುಬಿದ್ರಿ ದಾಟಿ ಹೆಜಮಾಡಿ ಟೋಲ್ ಗೇಟಿಗಿಂತ ಸುಮಾರು 1/2ಕಿ.ಮೀ. ಮೊದಲು ರಸ್ತೆಯ ಎಡಭಾಗದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಬಡಗು ದಿಕ್ಕಿಗೆ ಇದ್ದು ಪೂರ್ವ ದಿಕ್ಕಿಗೆ ಇನ್ನೊಂದು ದ್ವಾರವಿದೆ. ಷಡಾಧಾರ ಪ್ರತಿಷ್ಠೆಯೂ ಆಗಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಮುಚ್ಚಿದ ಅಶ್ವಾ ರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮಧ್ಯದ ಅಂತಸ್ತಿನಲ್ಲಿ ಗಾಳಿ ದೇವರಿಗೆ ಹಾಗೂ ಮೇಲಂತಸ್ಥಿನಲ್ಲಿ ಗರುಡ ದೇವರಿಗೆ ಕೂಚಿ ಹಾಗೂ ದೀಪವನ್ನಿಟ್ಟು ಆರಾಧನೆ ಇದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಪಾಪೆ, ಜೋಗಿ ಪುರುಷ ಹಾಗೂ ಒಕ್ಕು ಬಲ್ಲಾಳರಿಗೆ ಮಣೆ ಮಂಚವಿದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯ ಮತ್ತು ಇಬ್ಬರು ಮಕ್ಕಳ ಮರದ ಪಾಪೆಯಿದೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿಯ ಕಂಚಿಯ ಮುಖ ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ. ಗರಡಿಯೊಳಗೆ ಗುರುಕಭಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದ ಒಳಗೆ ತುಳಸೀಕಟ್ಟೆ, ಅಯ್ಯಕಲ್ಲು, ಕ್ಷೇತ್ರಪಾಲ ದೈವದ ಕಲ್ಲಿನ ಚಿಟ್ಟೆ, ರಕ್ತೇಶ್ವರಿ ಗುಡಿ, ಜಾರಂದಾಯ ಹಾಗೂ ಬಂಟರ ಗುಡಿ, ಜುಮಾದಿ ಸಾನಗಳಿವೆ. ಗರೋಡಿಯ ಪರಿಸರದಲ್ಲೇ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಗುರುರಾಜ ಪೂಜಾರಿ

2020ರಿಂದ ಗುರುರಾಜ ಪೂಜಾರಿಯವರು ಪೂ ಪೂಜನಯ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಇವರ ತಂದೆ ಸೀನ ಪೂಜಾರಿ, ಅವರಿಗೆ ಮೊದಲು ಅಜ್ಜ ಸೋಮಯ್ಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಗರಡಿಯ ಆಡಳಿತವನ್ನು ಬಿಲ್ಲಬ ಸಂಘ ಹೆಜಮಾಡಿ ನೋಡಿ ಕೊಳ್ಳುತ್ತಿದ್ದು, ಪ್ರಸ್ತುತ ಮೋಹನದಾಸ ಹೆಜಮಡಿ ಇವರು ಅಧ್ಯಕ್ಷರಾಗಿದ್ದಾರೆ.

ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಸೋಣದ ಅಗೆಲು, ಎಳ್ಳಮವಾಸೆಯ ನಾಲ್ಕನೇ ದಿನ ಅಗೆಲು ಸೇವೆ, ಐದನೇ ದಿನ ಜೋಗಿ ಪುರುಷ ಕೋಲ, ಆರನೇ ದಿನ ಮಾಯಂದಾಲ್ ನೇಮ, ಹಾಗೂ ಜುಮಾದಿ ತಂಬಿಲಗಳು ನಡೆಯುತ್ತವೆ.

ಹೆಜಮಾಡಿ ಗ್ರಾಮದ ಸುಮಾರು 600 ಮನೆಗಳು ಈ ಗರೋಡಿಯ ಕೂಡುಕಟ್ಟಿಗೆ, ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ನಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಸಾಂಪ್ರದಾಯಿಕ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.

ಗರೋಡಿಯ ಹೆಸರಿನಲ್ಲಿ 44 ಸೆಂಟ್ಸ ಜಾಗವಿದೆ. ಸ್ಥಿರ ಆದಾಯ ಇಲ್ಲದಿರುವುದರಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವರಡ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಭರಿಸಲಾಗುತ್ತದೆ.

2012ರಲ್ಲಿ ಗರೋಡಿಯಲ್ಲಿ ಬ್ರಹ್ಮ ಕಲಶೋತ್ಸವ ನಡೆದಿದೆ.

ಬೊಗ್ಗು ಪರವ ಮೂಡುಬೆಳ್ಳೆ ಇವರು ಗರೋಡಿಯ ನೃತ್ಯ ವಿಶಾರದರಾಗಿ, ಕರುಣಾಕರ ಮಡಿವಾಳ, ಹೆಜಮಾಡಿ ಇವರು ಮಡಿವಾಳರಾಗಿ, ಹಿದಾಯತುಲ್ಲ ಎರ್ಮಾಳು ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆಜಮಾಡಿ,
ಹೆಜಮಾಡಿ ಅಂಚೆ,
ಕಾಪು ತಾಲೂಕು.- 574103
ಗುರುರಾಜ ಪೂಜಾರಿ ಮೊಬೈಲ್: 9945166869.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Kannangaar Shree Brahma Baidarkala Garodi, Padubidri

ಕಣ್ಣಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಡುಬಿದ್ರಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಎನ್‌.ಎಚ್. 66ರಲ್ಲಿ ಪಡುಬಿದ್ರಿ ತಲುಪಿ, ಪಡುಬಿದ್ರಿಯಿಂದ ಮುಲ್ಕಿ ಕಡೆಗೆ ಮತ್ತೆ ಸುಮಾರು 2ಕಿ.ಮೀ. ಸಾಗಿದಾಗ ಹೆದ್ದಾರಿಯ ಬಲಬದಿಯಲ್ಲಿ ಕಣ್ಣಂಗಾರು ಗರೋಡಿಯಿದೆ.
ಇದೊಂದು ಆಯದ ಗರೋಡಿಯಾಗಿದ್ದು, ಮುಖ್ಯದ್ವಾರವು ಬಡಗು ಮುಖವಾಗಿಯೂ ಇನ್ನೊಂದು ದ್ವಾರವು ಪೂರ್ವಾಭಿಮುಖವಾಗಿಯೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಬೆಳ್ಳಿಯ ಮೂರ್ತಿಯೂ ಇದೆ. ಗುಂಡದ ಮೇಲಿನ ಅಂತಸ್ಧಿನಲ್ಲಿ ಗಾಳಿ ದೇವರಿಗೆ ಮಣೆ ಹಾಗೂ ಕೂಚಿಯಿಟ್ಟು ಆರಾಧನೆ ಇದೆ
ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರು ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಕೊಡಮಣಿತ್ತಾಯ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಜುಮಾದಿ, ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿಗೆ ಪೂಜೆ ನಡೆಯುತ್ತದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿ ಜಾರಂದಾಯ ದೈವದ ಗುಡಿಯಲ್ಲಿ ಮಣೆ ಮಂಚದಲ್ಲಿ ಕ್ಷೇತ್ರಪಾಲ ಹಾಗೂ ರಕ್ತೇಶ್ವರಿ ದೈವಗಳಿಗೆ ಕಲ್ಲಿನ ಕಟ್ಟೆಯಲ್ಲಿ ಆರಾಧನೆಯಿದೆ.
ತುಳಸೀಕಟ್ಟೆ ಹಾಗೂ ಅಯ್ಯಕಲ್ಲು, ಅರಸುಗಳು ನೇಮೋತ್ಸವದಂದು ಕುಳಿತುಕೊಳ್ಳುವ ಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಗಿರಿಧರ ಅಂಚನ್

ಕನ್ನಂಗಾರು ಗರಡಿ ಮನೆ ಗಿರಿಧರ ಅಂಚನ್ (56 ವರ್ಷ ಪ್ರಾಯ) ಇವರು ಪೂ ಪೂಜನೆಯವರಾಗಿದ್ದಾರೆ. ಹಿಂದೆ ಚಂದಪ್ಪ ಪೂಜಾರಿ, ಕೂಕ್ರ ಪೂಜಾರಿಯವರು ಈ ಸೇವೆ ಮಾಡಿದ್ದರು.

ಗರೋಡಿಯಲ್ಲಿ ಈಗ ಬೈದ್ಯರ ದರ್ಶನಕ್ಕೆ ಸ್ಧಳ ಪಾತ್ರಿಗಳಿಲ್ಲ.

ಗರೋಡಿಯಲ್ಲಿ ನಿತ್ಯ ದೀಪ ಇಡುವ ಕ್ರಮ ಇದೆ. ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ) ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಎಳ್ಯಮಾವಾಸೆಯ ಎರಡು ದಿನ ಮೊದಲು ಅಗೆಲು ಸೇವೆ, ಮರುದಿನ ಬೈದೇರುಗಳ ನೇಮ, ಜೋಗಿಪುರುಷರ ಕೋಲ ನಡೆದು ಎಳ್ಳಮಾವಾಸ್ಯೆಯ ದಿನ ಮಾಯಂದಾಲ್ ಕೋಲ ನಡೆಯುತ್ತದೆ. ಪಡುಬಿದ್ರಿ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.

ಗರೋಡಿಗೆ ಆಡಳಿತ ಸಮಿತಿಯಿದ್ದು, ಶೀನ ಪೂಜಾರಿಯವರು ಅಧ್ಯಕ್ಷರಾಗಿಯೂ, ರವಿ ಪೂಜಾರಿಯು ಕಾರ್ಯದರ್ಶಿಯಾಗಿಯೂ, ಶ್ರೀಧರ್ ಅಂಚನ್ ಇವರು ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಗರೋಡಿಯು 04-03-2014ರಲ್ಲಿ ಜೀರ್ಣೋದ್ಧಾರವಾಗಿದೆ.

ಸಂತೋಷ ಪರವ ನೀರೆಬೈಲೂರು ಈ ಗರೋಡಿಯ ನೃತ್ಯವಿಶಾದರಾಗಿದ್ದಾರೆ. ಶರತ್ ಮಡಿವಾಳ ಹೆಜಮಾಡಿ ಇವರು ಮಡಿವಾಳರಾಗಿಯೂ, ನಜೀರ್ ಎರ್ಮಾಳ್ ತೆಂಕ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಕಣ್ಣಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಪಡುಬಿದ್ರಿ ಅಂಚೆ, ಕಾಪು ತಾಲೂಕು, ಉಡುಪಿ 574111.

ಪೂ ಪೂಜನೆಯವರ ವಿಳಾಸ:

ಗಿರಿಧರ ಅಂಚನ್,
ಕಣ್ಣಂಗಾರು ಗರೋಡಿ ಮನೆ,
ಪಡುಬಿದ್ರಿ ಅಂಚೆ ಕಾಪು ತಾಲೂಕು,
ಉಡುಪಿ 574111.
ಮೊಬೈಲ್: 9880051876.

ಆಡಳಿತ ಸಮಿತಿ:

ಶೀನ ಪೂಜಾರಿ,
ಅಧ್ಯಕ್ಷರು, ಕಣ್ಣಂಗಾರು ಗರೋಡಿ ಆಡಳಿತ ಸಮಿತಿ,
ಪಡುಬಿದ್ರಿ ಅಂಚೆ, ಕಾಪು ತಾಲೂಕು,
ಉಡುಪಿ 574111.
ಮೊಬೈಲ್: 9845478932.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Garodi Kolachur

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕೊಳಚ್ಚೂರು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66ರಲ್ಲಿ ಪಡುಬಿದ್ರಿ – ಕಾರ್ಕಳ ರಸ್ತೆಯಲ್ಲಿ ಸುಮಾರು 3.5 ಕಿ.ಮೀ. ಸಾಗಿದಾಗ ರೈಲ್ವೇ ಬ್ರಿಡ್ಜ ನಂತರ ಎಡಕ್ಕೆ ತಿರುಗಿ ಸುಮಾರು 1 ಕಿ.ಮೀ. ಸಾಗಿದರೆ ರೈಲ್ವೆ ಟ್ರಾಕಿನ ಹತ್ತಿರ ಕೊಳಚ್ಚೂರು ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು, ಮೂರು ದ್ವಾರಗಳಿವೆ. ಮುಖ್ಯ ದ್ವಾರವು ದಕ್ಷಿಣಕ್ಕೂ ಇನ್ನೆರಡು ದ್ವಾರಗಳು ಪೂರ್ವ ಹಾಗೂ ಉತ್ತರಕ್ಕೆ ಇವೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬೆಳ್ಳಿಯ ಮೂರ್ತಿ ಇದೆ. ಗುಂಡದ ಮೇಲಂತತ್ತಿನಲ್ಲಿ ಗಾಳಿದೇವರ ಆರಾಧನೆಯಿದೆ. ಗುಂಡದ ಬಲಭಾಗದಲ್ಲಿ ಜುಮಾದಿ, ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರ ಮಣೆ ಮಂಚವಿದೆ. ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಬೆಳ್ಳಿಯ ಮೂರ್ತಿ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಹಾಗೂ ಹಿರಿಯರ ಮಣೆ ಮಂಚವಿದೆ.
ಗರೋಡಿಯಲ್ಲಿ ಗುರು ಕಂಬಕ್ಕೆ ಪೂಜೆ ನಡೆಯುತ್ತದೆ.

ಗರೋಡಿಯ ಆವರಣದೊಳಗೆ ಪಿಲ್ಚಂಡಿ ದೈವದ ಗುಡಿಯೊಳಗೆ ಮಣೆ ಮಂಚದಲ್ಲಿ ಪಿಲ್ಚಂಡಿಯ ಆರಾಧನೆಯಿದೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೊಂದಿದೆ.

ಪೂ ಪೂಜನೆ ಸೇವೆ ಮಾಡುತ್ತಿದ್ದ ಗರೋಡಿ ಮನೆ ಕುಟ್ಟಿ ಪೂಜಾರಿಯವರು ಇತ್ತೀಚೆಗೆ ತೀರಿ ಕೊಂಡಿದ್ದು ಪೂ ಪೂಜನೆಯ ಪೂಜಾರಿಯ ನೇಮಕವಾಗಲಿಲ್ಲ. ಸದ್ಯ ಎಲ್ಲೂರು ಗರೋಡಿಯ ಕರುಣಾಕರ ಪೂಜಾರಿಯವರು ಪೂ ಪೂಜನೆ ಮಾಡುತ್ತಿದ್ದಾರೆ. ಕುಟ್ಟಿ ಪೂಜಾರಿಯವರಿಗೆ ಮೊದಲು ಸೇಸು ಪೂಜಾರಿ, ಕುಡ್ಡು ಪೂಜಾರಿಯವರು ಈ ಸೇವೆ ಮಾಡುತ್ತಿದ್ದರು.

ಗರೋಡಿಗೆ ಆಡಳಿತ ಸಮಿತಿಯಿದ್ದು ಕೃಷ್ಣ ಅಂಚನ್ ಉಳ್ಳೂರು ಇವರು ಅಧ್ಯಕ್ಷರಾಗಿಯೂ ದಾಮೋದರ ಬಿ. ಕೋಟ್ಯಾನ್, ಪಾದೆಬೆಟ್ಟು ಇವರು ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತದ್ದಾರೆ.

ಸದ್ಯ ಈ ಗರೋಡಿಯಲ್ಲಿ ಬೈದ್ಯರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಹಿರಿಯರಾದ ಕುಡ್ಡು ಪೂಜಾರಿ, ಗುರುವ ಪೂಜಾರಿ ಸ್ಥಳ ಪಾತ್ರಿಗಳಾಗಿದ್ದರು.

ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ) ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಮಕರದ ಹುಣ್ಣಿಮೆಯಂದು ಗರಡಿ ಪ್ರವೇಶ ಮರುದಿನ ಅಗೆಲು ಸೇವೆ, ನಂತರದ ದಿನ ಬೈದೇರುಗಳ ನಮೋತ್ಸವ, ಜೋಗಿಪುರುಷರ ಕೋಲ, ಅದರ ಮರುದಿನ ಮಾಯಂದಾಲ್ ದೈವದ ಕೋಲ ಸೇವೆ ನಡೆಯುತ್ತದೆ.

ಕೊಳಚ್ಚೂರು, ಉಳ್ಳೂರು, ಕೇಮುಂಡೇಲು, ಸಜೆ ಗ್ರಾಮಗಳಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ಊರ ಪರವೂರ ಜನರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಭರಿಸಲಾಗುತ್ತಿದೆ.

24-04-2003ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು ಹಿಂದೆ 1941ರಲ್ಲಿ ಜೀರ್ಣೋದ್ಧಾರಗೊಂಡಿತ್ತು.

ಬೊಗ್ಗು ಪರವ, ಮೂಡುಬೆಳ್ಳೆ ಮತ್ತು ಸಂಗಡಿಗರು ಗರೋಡಿಯ ನೃತ್ಯ ವಿಶಾರದರಾಗಿ, ರಮೇಶ್ ಮಡಿವಾಳ ಮುದರಂಗಡಿ ಇವರು ಮಡಿವಾಳರಾಗಿ, ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕೊಳಚ್ಚೂರು,
ನಂದಿಕೂರು ಅಂಚೆ, ಕಾಪು ತಾಲೂಕು,
ಉಡುಪಿ 576111,
ದಾಮೋದರ ಬಿ.ಕೋಟ್ಯಾನ್ ಪಾದೆಬೆಟ್ಟು
ಮೊಬೈಲ್: 9880022901.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Dharmarasu Kodamanittaaua Garodi, Bommarabettu

ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಬೊಮ್ಮರಬೆಟ್ಟು

ಉಡುಪಿಯಿಂದ ಹಿರಿಯಡಕಕ್ಕೆ ಬಂದು, ಹಿರಿಯಡ್ಕದಿಂದ ಬಸ್ತಿ ಮಾರ್ಗವಾಗಿ ಸುಮಾರು ೪ ಕಿ.ಮೀ. ಮುಂದೆ ಹೋದರೆ ಬೊಮ್ಮರಬೆಟ್ಟು ಗರೋಡಿ ಇದೆ.
ಉಡುಪಿ ಹಿರಿಯಡ್ಕ ಬೊಮ್ಮರಬೆಟ್ಟುವಿನಲ್ಲಿರುವ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು, ಇದಕ್ಕೆ ಸುಮಾರು ಇನ್ನೂರು ಮೂನ್ನೂರು ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುತ್ತದೆ. ಷಡಾಧಾರ ಪ್ರತಿಷ್ಠೆಯಾದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಜೈನರ ಕಾಲದಲ್ಲಿ ಕೋಟಿಚೆನ್ನಯ್ಯರು ದೊಡ್ಡಕೆರೆ ಬೆಟ್ಟು ಬಿಲ್ಲವ ಯಜಮಾನರ ಬಳಿ ಬಂದು ಬೀಡಿಗೆ ಹೋಗುವ ದಾರಿ ತೋರಿಸಲು ಹೇಳುತ್ತಾರೆ. ತಾನು ಕೈಗೊಂಡ ಕೆಲಸ ಪೂರೈಸುವ ಅವಸರದಲ್ಲಿದ್ದ ಪೂಜಾರಿಯವರು ಬಂದವರಿಗೆ ಕುಳಿತು ಕೊಳ್ಳಲು ಹೇಳುತ್ತಾರೆ. ಕೋಟಿ ಚೆನ್ನಯ್ಯರು ಅದೃಶ್ಯರಾಗುತ್ತಾರೆ. ಹತ್ತಿರದ ಭಟ್ಟರ ಮನೆಗೆ ಹೋದಾಗ ಅಲ್ಲಿಯೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಮುಂದೆ ಅಂಗಡಿ ಬೆಟ್ಟು ಪೂಜಾರಿ ಯವರ ಮನೆಗೆ ತೆರಳುತ್ತಾರೆ. ತುಳಸಿ ಗಿಡಕ್ಕೆ ನೀರು ಹೊಯ್ಯುತ್ತಿದ್ದ ಪೂಜಾರಿಯವರು ಹೋಗುವ ಎಂದು ಹೇಳಿ ಬೀಡಿಗೆ ಕರೆದುಕೊಂಡು ಹೋಗುವರು. ದೂರದಲ್ಲೇ ಕಾಣುವ ಬೀಡನ್ನು ತೋರಿಸುತ್ತಾರೆ… ಅತ್ತ ಹೆಜ್ಜೆಯಿಟ್ಟ ಕೋಟಿ ಚೆನ್ನಯ್ಯರು ಇವರು ನೋಡುತ್ತಿದ್ದಂತೇ ಅದೃಶ್ಯರಾಗುತ್ತಾರೆ. ವಿಸ್ಮಯ ಗೊಂಡ ಪೂಜಾರಿಯವರು ಈ ವಿಷಯವನ್ನು ಬೀಡಿನ ಯಜಮಾನರಿಗೆ ತಿಳಿಸುತ್ತಾರೆ. ಅದೇ ದಿನ ರಾತ್ರಿ ಬೀಡಿನ ಯಜಮಾನರಿಗೆ ಕೋಟಿ ಚೆನ್ನಯ್ಯರು ಕನಸಿನಲ್ಲಿ ಬಂದು ನಿಶಾನೆಯಾಗಿ ಹತ್ತಿರದ ಪಾದೆಯಲ್ಲಿ ಸುರ್ಯ ಊರಿದ್ದೇವೆ. ಅಲ್ಲಿ ಗರೋಡಿ ಕಟ್ಟಿಸ ಬೇಕೆನ್ನುತ್ತಾರೆ. ಬೀಡಿನ ಯಜಮಾನರ ಆಣತಿಯಂತೆ ಇಲ್ಲಿನ ಐಂದ್ರಾಳ ಪಟ್ಟದ ಮಂದಿ ಮತ್ತು ಊರ ಹತ್ತು ಸಮಸ್ತರು ಸೇರಿ ಗರೋಡಿ ಕಟ್ಟುತ್ತಾರೆ.
ಕೋಟಿ ಚೆನ್ನಯ್ಯರು ಬೀಡಿನ ಯಜಮಾನರಿಗೆ ಕನಸಿನಲ್ಲಿ ಬಂದು ಹೇಳಿದ ಪಣೆ ಊರಿದ ಪಾದೆಯಲ್ಲಿ ಬಹುತೇಕ ವರ್ಷವಿಡೀ ನೀರು ಜಿನುಗುತ್ತದೆ. ಇಲ್ಲಿ ಕೋಟಿ ಚೆನ್ನಯ್ಯರ ಪಾದದ ಗುರುತುಗಳು ಇದೆ. ಗರೊಡಿಯಲ್ಲಿ ಏನೇ ಕೆಲಸ ಕಾರ್ಯಗಳಾಗಲಿ ಮೊದಲು ಈ ಸ್ಥಳದಲ್ಲಿ ದೀಪ ಇಡಲಾಗುವುದು. ಆವೇಶದಲ್ಲಿ ದರುಶನ ಪಾತ್ರಿಗಳು-ನೇಮ ಕಟ್ಟದ ಪರವರು ಇಲ್ಲಿಗೆ ಬಂದು ನೀರು ಜಿನುಗುವ ಸ್ಥಳದಲ್ಲಿ ದೀಪಕ್ಕೆ ಸುತ್ತು ಬಂದು ಹೋಗುವ ಪದ್ಧತಿ ಈಗಲೂ ಇದೆ. ಈ ಗರೋಡಿಗೆ ಅಗೆಲು- ನೇಮೋತ್ಸವದ ಸಂದರ್ಭ ನಿಗದಿತ ದಿನ ಮೂಡುಮಠ ಲಕ್ಷ್ಮೀ ಜನಾರ್ಧನ ದೇವರ ತೀರ್ಥ ಪ್ರಸಾದವನ್ನು ಅಲ್ಲಿನ ಅರ್ಚಕರು ತರುವ ವಾಡಿಕೆ ಈಗಲೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಮೂರ್ತಿ, ಮೇಲೆ ಗಾಳಿದೇವರು, ಮಧ್ಯದಲ್ಲಿ ಕೆಳಗಿನ ದೇವರುಗಳಿಗೆ ಪೂಜೆ ಇದೆ
ಬ್ರಹ್ಮಗುಂಡದ ಎಡಕ್ಕೆ ಕೋಟಿಚೆನ್ನಯ್ಯರು ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ.
ಗುಂಡದ ಬಲಕ್ಕೆ ಒಕ್ಕು ಬಳ್ಳಾಲರು, ಕುಜುಂಬ ಕಾಂಜವ ಮತ್ತು ಒಬ್ಬ ಹುಡುಗನ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಮಾಯಂದಾಳ್ ಮತ್ತು ಮಗು (ಪಾಪೆಗಳು), ಜುಮಾದಿ-ಬಂಟ, ಜೋಗಿಪುರುಷ-ಪರಿವಾರ ದೈವ, ಹುಲಿಚಾಮುಂಡಿ-ಬಂಟ , ಮರ್ಲ್ ಭೂತ, ಬ್ರಾಂದಿಭೂತ, ಆಚಾರಿ ಮಂಚಗಳಿವೆ.
ಗರೋಡಿಯ ಆವರಣದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳಗುಡಿ, ಆಯದ ಕಲ್ಲು, ಬೊಬ್ಬರ್ಯ ಮುಂಡಿಗೆ, ಹಲಸಿನ ಮರದ ಕಟ್ಟೆಯಲ್ಲಿ ಮಹಮ್ಮಾಯಿ ಸನ್ನಿಧಿಗಳಿವೆ.

ವಾಸು ಪೂಜಾರಿ

2007 ರಿಂದ ವಾಸು ಪೂಜಾರಿ (ಪ್ರಾಯ- 65), ಗರೋಡಿಮನೆ, ಇವರು ಪೂಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು : ವಿಠಲ ಪೂಜಾರಿ 1973-2007 ( ವಾಸು ಪೂಜಾರಿಯವರ ಮಾವ) ಕೋಟಿ ಪೂಜಾರಿ 1943-1973 (ವಿಠಲ ಪೂಜಾರಿಯವರ ಮಾವ) ಪೂವ ಪೂಜಾರಿ 1943 ರ ಮೊದಲು ( ಕೋಟಿ ಪೂಜಾರಿಯವರ ಮಾವ) ಈ ಸೇವೆ ಮಾಡಿದ್ದರು.
ಭವನ್ ಪೂಜಾರಿ ಮತ್ತು ಸದಾನಂದ ಪೂಜಾರಿಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಹಿರಿಯರಾದ ಬೊಗ್ಗು ಪೂಜಾರಿ, ಪೂವ ಪೂಜಾರಿ, ವೆಂಕಪ್ಪ ಪೂಜಾರಿ, ತನ್ಯ ಪೂಜಾರಿ, ಬೊಳ್ಳು ಪೂಜಾರಿ, ಅಪ್ಪು ಪೂಜಾರಿ, ರಾಮ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು.
ಬೊಮ್ಮರಬೆಟ್ಟು ಬೀಡು ಮನೆತನದ ಯಜಮಾನರು ಈ ಗರೋಡಿಯ ಮೊಕ್ತೇಸರರು..
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಸೋಣ ಪೂರ್ತಿ ಒಂದು ತಿಂಗಳು ಹೂವಿನ ಪೂಜೆ, ಕದಿರು ಕಟ್ಟುವುದು, ಹರಕೆ ಗಜ್ಜೆಯಿ ಸೇವೆ ಇದೆ. ಅಗೆಲ್ ಅನ್ನ ನೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ ಮಾಯಿ ಹುಣ್ಣಿಮೆಯಂದು ಜರಗುತ್ತದೆ. ನೇಮೋತ್ಸವದ ಮರುದಿನ ಬೆಳಿಗ್ಗೆ ಮಾಯಂದಾಳ ನೇಮ, ಪರಿವಾರ ದೈವಗಳ ಕೋಲ ಕಟ್ಟು ಕಟ್ಟಳೆಯಾಗಿ ನಡೆಯುತ್ತದೆ. ಗರೋಡಿಯಲ್ಲಿ ಬೀಡು ಕುಟುಂಬದ ವತಿಯಿಂದ ಪ್ರತಿವರ್ಷ ತುಳಸಿ ಪೂಜೆ, ಕಂಬಳ ಹಾಗೂ ಅಗೆಲ್ ಅನ್ನ ನೈವೇದ್ಯ ಸೇವೆ, ಕೊಡಮಣಿತ್ತಾಯ ಕೋಲವಿದೆ, ಎರಡು ವರ್ಷಗಳಿಗೊಮ್ಮೆ ಬೈದರು ನೇಮ ನಡೆಯುತ್ತದೆ. ಹೊಸ ಭತ್ತದ ಅನ್ನ ನೈವೇದ್ಯ ಸೇವೆ ಗರೋಡಿಯಲ್ಲಿ ಜರಗದೆ ಊರಿನಲ್ಲಿ ಬೇರೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಗರೋಡಿಯ ಅಂಗಣದಲ್ಲೇ ಮಹಮ್ಮಾಯಿ ಸನ್ನಿಧಾನ ಇರುವುದರಿಂದ ಮಾರಿ ಸೇವೆ ಇದೆ.
ಬೊಮ್ಮರಬೆಟ್ಟು, ಪಂಚನಬೆಟ್ಟು, ಕೈರಾಳಿ ಕೆರೆ, ಕೊಂಡಾಡಿ ಕೆರೆ, ಮಾಣ್ಯಾ ಕೆರೆ, ಮುಂಡುಜೆ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಬೊಮ್ಮರ ಬೆಟ್ಟು ಕೂಡು ಕಟ್ಟಿನಲ್ಲಿ ಸುಮಾರು 400 ಮನೆಗಳಿವೆ. ಕೂಡುಕಟ್ಟಿನ ಮಂದಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡುಕಾಯಿ ಕಾಣಿಕೆ ತೆಗೆದಿಡುವುದು. ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ಧ ಹೋಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಜಗ್ಗುಪರವ ದೊಂಡೇರಂಗಡಿ ಇವರು ಈ ಗರೋಡಿಯ ನೃತ್ಯ ವಿಷರಾದರು. ಇವರ ಮೊದಲು ಪಿಜಿನ ಪರವ, ಉಗ್ಗಪ್ಪ ಪರವ, ಮೆಣ್ಕ ಪರವ, ಬೂಬ ಪರವ, ಅಮ್ಮು ಪರವ, ಗುಡ್ಡ ಪರವ, ನರಂಗ ಪರವ, ಬಾಬು ಪರವ, ಚಲ್ಲ ಪರವ, ದೇವು ಪರವ ಇವರು ಈ ಸೇವೆ ಮಾಡಿದ್ದರು.
ಗರೋಡಿಯ ಜೀಣೋದ್ಧಾರದ ವಿವರ.
1944- ಜೀಣೋದ್ಧಾರ ಬೈ ಹುಲ್ಲಿನ ಮಾಡು ತೆಗೆದು ಹಂಚಿನ ಹೊದಿಕೆ
1978- ಜೀಣೋದ್ಧಾರ- ಬ್ರಹ್ಮಕಲಶ.
1996- ಸಂಪೂರ್ಣ ಜೀಣೋದ್ಧಾರ – ಬ್ರಹ್ಮಕಲಶ
2008- ಬ್ರಹ್ಮಕಲಶ

ಗರೋಡಿಯ ವಿಳಾಸ :

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಬೊಮ್ಮರ ಬೆಟ್ಟು,
ಅಂಚೆ ಹಿರಿಯಡ್ಕ,
ಉಡುಪಿ ತಾಲೂಕು & ಜಿಲ್ಲೆ – 576113

ಪೂಪೂಜನೆಯವರ ವಿಳಾಸ:

ವಾಸು ಪೂಜಾರಿ ಗರೋಡಿಮನೆ, ಅಂಗಡಿಬೆಟ್ಟು,
ಬೊಮ್ಮರಬೆಟ್ಟು, ಹಿರಿಯಡ್ಕ ಅಂಚೆ,
ಉಡುಪಿ-576113
ದೂರವಾಣಿ-9740689657

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2022

Shree Brahma Baidarkala Garodi, Adve

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಡ್ವೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66ರ ಮೂಲಕ ಪಡುಬಿದ್ರಿ ತಲುಪಿ, ಪಡುಬಿದ್ರಿ ಕಾರ್ಕಳ ರಸ್ತೆಗೆ ಎಡಕ್ಕೆ ತಿರುಗಿ ಸುಮಾರು 5.28ಕಿ.ಮೀ. ಸಾಗಿದಾಗ ರಸ್ತೆಯ ಬಲಬದಿಯಲ್ಲಿದೆ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ.
ಇದು ಆಯದ ಗರೋಡಿಯಾಗಿದ್ದು 3 ದ್ವಾರಗಳಿವೆ. ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಉಳಿದೆರಡು ದ್ವಾರಗಳಿದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಆಟಿ ತಿಂಗಳಲ್ಲಿ ಅಗೆಲು ಸೇವೆ ನಡೆಯುವ ಆರು ಗರೋಡಿಗಳಲ್ಲಿ ಇದೂ ಒಂದು. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಅಡ್ಡೆಯ ಚೆಕ್ ಪಾದೆಯಲ್ಲಿ ಮೂಡ್ರಗುತ್ತಿನ ಯಜಮಾನರನ್ನು ಕರೆದಾಗ ಅವರು ಅಸಡ್ಡೆ ತೋರಿಸಿ ತಾನು ಬರದೆ ಮನೆ ಹೆಂಗಸರನ್ನು ಕಳುಹಿಸಿದ್ದರಿಂದ ಆ ಮನೆಯಲ್ಲಿ ಹೆಣ್ಣು ಸಂತಾನವೇ ಆಗುವಂತೆ ಶಾಪಗ್ರಸ್ತವಾಯಿತಂತೆ. ಆ ರಾತ್ರಿ ಯಜಮಾನನ ಕನಸಿನಲ್ಲಿ ಬಂದು ಕೋಟಿಚೆನ್ನಯರು ಆದೇಶವಿತ್ತಂತೆ ತೆಂಗಿನ ಕಾಯಿ ಹಾರಿಸಿ ಅದು ಬಿದ್ದ ಜಾಗದಲ್ಲಿ ಗರೋಡಿ ಕಟ್ಟುವಂತೆ ನಿರ್ಧರಿಸಲಾಯಿತು. ಆದರೆ ತೆಂಗಿನ ಕಾಯಿ ಬಿದ್ದ ಸ್ಥಳದಲ್ಲಿ 101 ನಾಗನ ಕಲ್ಲುಗಳಿದ್ದವು. 101 ಕಲ್ಲುಗಳಲ್ಲಿ 100 ಕಲ್ಲುಗಳನ್ನು ಗರೋಡಿಯ ಬ್ರಹ್ಮಗುಂಡದ ಅಡಿಯಲ್ಲಿರುವ ಬಾವಿಗೆ ಹಾಕಿ, ಉಳಿದ ಒಂದು ಕಲ್ಲನ್ನು ಹಾರಿಸಲಾಗಿ ಅದು ಬಿದ್ದ ಸ್ಥಳದಲ್ಲಿ ನಾಗಬನ ಸ್ಥಾಪಿಸಿ ಗರೋಡಿ ಕಟ್ಟಲಾಯಿತು. ಇಂದಿಗೂ ಆ ನಾಗ ಬನದಲ್ಲಿ ಒಂದೇ ನಾಗನ ಕಲ್ಲು ಇದ್ದು ಹೆಚ್ಚಿಗೆ ಕಲ್ಲು ಹಾಕುವಂತಿಲ್ಲ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬಂಗಾರ ಮುಚ್ಚಿದ ಪಂಚ ಲೋಹದ ಬಂಗಾರದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಹಾಗೂ ಜೋಗಿಪರುಷರ ಆರಾಧನೆಯಿದೆ
ಗುಂಡದ ಬಲಭಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳ, ಕುಜುಂಬ ಕಾಂಜವರ ಆರಾಧನೆಯಿದೆ,
ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಿಲ್ಚಂಡಿ ಹಾಗೂ ಮಾಯಂದಾಲ್ ದೈವಗಳಿಗೆ ಪೂಜೆ ಸಲ್ಲುತ್ತದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನ ಹಾಗೂ ಬ್ರಹ್ಮ ಸ್ಥಾನಗಳಿವೆ.

ರಾಮ ದಾದು ಪೂಜಾರಿ

ಸದಾನಂದ ಯಾನೆ ಪಕ್ಕು ಪೂಜಾರಿ

ರಾಮ ದಾದು ಪೂಜಾರಿ(72 ವರ್ಷ) ಇವರು ಗರೋಡಿಮನೆ ಮುಖ್ಯಸ್ಥರು. ಗರೋಡಿ ಮನೆಯ ಸದಾನಂದ ಯಾನೆ ಪಕ್ಕು ಪೂಜಾರಿ ಇವರು ಪೂ ಪೂಜನೆಯವರು. ಇವರಿಗೆ ಮೊದಲು ರಾಮ ದಾದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡಿದ್ದು ಅವರಿಗೂ ಮೊದಲು ಹಿರಿಯರಾದ ರಾಘು ಪೂಜಾರಿ, ತೆನ್ನಯ ಪೂಜಾರಿ, ಸೇವೆ ಮಾಡಿದ್ದರು.

ಬೈದ್ಯರ ದರ್ಶನದ ಸ್ಥಳ ಪಾತ್ರಿಗಳು ಸದ್ಯ ಈ ಗರೋಡಿಯಲ್ಲಿ ಇಲ್ಲ. ಹಿಂದೆ ಚೆನ್ನು ಪೂಜಾರಿಯವರು ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.

ಗರೋಡಿಗೆ ಸೇವಾ ಸಮಿತಿಯಿದ್ದು ಸುಂದರ ಸುವರ್ಣ ಇವರು ಅಧ್ಯಕ್ಷರಾಗಿಯೂ, ನವೀನ್ಚಂದ್ರ ಸುವರ್ಣ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪಲಿಮಾರು, ನಂದಿಕೂರು, ಅವರಾರು ಪೊಯ್ಯ ಹಾಗೂ ಅಡ್ಡೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ, ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುವುದು.

20-05-1998ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು 1960ರಲ್ಲಿಯೂ ಜೀರ್ಣೋದ್ಧಾರವಾಗಿತ್ತು.

ಚೇರ್ಕಾಡಿ ನರಸಿಂಹ ಪರವ ಸಂಗಡಿಗರು, ನೃತ್ಯ ವಿಶಾರದರಾಗಿ, ಅನಿಲ್ ಮಡಿವಾಳ, ಇವರು ಮಡಿವಾಳರಾಗಿ, ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಅಡ್ವೆ ಗರೋಡಿ ಭಜನಾ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು ಪ್ರತೀ ಶನಿವಾರ ಭಜನೆ, ಪೂಜೆಗಳು ನಡೆಯುತ್ತವೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ,
ನಂದಿಕೂರು ಅಂಚೆ, ಕಾಪು ತಾಲೂಕು,
ಉಡುಪಿ 574111.

ಗರೋಡಿ ಮನೆ ವಿಳಾಸ:

‘’ಬೈದಶ್ರೀ ”ಅಡ್ವೆ,
ನಂದಿಕೂರು ಅಂಚೆ,
ಕಾಪು ತಾಲೂಕು,
ಉಡುಪಿ 574111.
ಮೊಬೈಲ್: ರಾಮದಾದು ಪೂಜಾರಿ – 9902212950
ಮೊಬೈಲ್: ಸದಾನಂದ ಪೂಜಾರಿ – 9980947120

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Sandudaanti Garodi, Yermal Tenka

ಶ್ರೀ ಬ್ರಹ್ಮ ಬೈದೆರ್ಕಳ ಸಂದುದಾಂತಿ ಗರೋಡಿ, ಎರ್ಮಾಳ್ ತೆಂಕ

ಉಡುಪಿಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಎರ್ಮಾಳಿನಲ್ಲಿ ಹೆದ್ದಾರಿಯ ಎಡಭಾಗದಲ್ಲಿದೆ.
ಈ ಗರೋಡಿಯು ಆಯದ ಗರೋಡಿಯಾಗಿದೆ. ಈ ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪಶ್ಚಿಮಕ್ಕೂ ಇನ್ನೊಂದು ದ್ವಾರವು ಪೂರ್ವ ದಿಕ್ಕಿಗೂ ಇದೆ.
ಕೋಟಿಚೆನ್ನಯರ ಪಾಡ್ದನದಲ್ಲಿ ಉಲ್ಲೇಖಿಸಲ್ಪಟ್ಟಂತೆ 6 ಕಂಬಗಳೊಂದಿಗೆ ಸಂದು ಇಲ್ಲದ(ಸಂದುದಾಂತಿ) ಗರೊಡಿಯೆಂದು ಹೆಸರಾದ 18ನೇ ಶತಮಾನದ ಪ್ರಾಚೀನ ಗರಡಿ ಇದು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬೆಳ್ಳಿಮುಚ್ಚಿದ ಪಂಚಲೋಹದ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಪಂಚಲೋಹದ ಮೂರ್ತಿಇದೆ. ಗುಂಡದ ಬಲಭಾಗದಲ್ಲಿ ಒಕ್ಕುಬಲ್ಲಾಳರು ಕುದುರೆಯ ಮೇಲೆ ಕುಳಿತ ಮರದ ಪಾಪೆ ಹಾಗೂ ಕುಜುಂಬ ಕಾಂಜವರ ನಿಂತ ಮರದ ಪಾಪೆ ಇದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಆಳೆತ್ತರದ ಮರದ ಪಾಪೆ ಇದೆ.
ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷರ ಮರದ ಪಾಪೆ, ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆಗಳಿವೆ. ಗರೋಡಿಯ ಒಳಗೆ ಗುರು ಕಂಬಕ್ಕೂ ಪೂಜೆ ಸಲ್ಲುತ್ತದೆ.
ಗರೋಡಿಯ ಹೊರಾಣಗಣದ ಗುಡಿಯಲ್ಲಿ ಮಣೆ ಮಂಚ ಹಾಗೂ ಪಿಲಿಚಂಡಿ ದೈವದ ಪ್ರತೀಕವಾಗಿ ಮರದ ಹುಲಿಯ ಪಾಪೆಯಿದೆ. ಹೊರಗೆ ಹುಲಿ ಬಂಡಿಯೂ ಇದೆ. ಅಯ್ಯಕಲ್ಲು ಹಾಗೂ ತುಳಸೀ ಕಟ್ಟೆಗಳೂ ಇವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ವೈ. ಜಯಕರ ಪೂಜಾರಿ

ವೈ ಜಯಕರ ಪೂಜಾರಿ(87ವರ್ಷ)ಯವರು ಗರಡಿಮನೆ ಪೂ ಪೂಜನೆ ಪೂಜಾರಿಯವರಾಗಿದ್ದಾರೆ. ಹಿಂದೆ ಜಯಕರ ಪೂಜಾರಿಯವರ ಹಿರಿಯರಾದ ಗೋವಿಂದ ಪೂಜಾರಿ, ಚಿಂಗ ಪೂಜಾರಿ ಇವರುಗಳು ಪೂ ಪೂಜನೆ ಸೇವೆ ಮಾಡಿದ್ದರು.
ಗರೋಡಿಗೆ ಆಡಳಿತ ಸಮಿತಿಯಿದ್ದು ಸುಧೀರ್ ಕುಮಾರ್ ಇವರು ಅದ್ಯಕ್ಷರಾಗಿದ್ದಾರೆ. ಬೈದ್ಯರ ದರ್ಶನಕ್ಕೆ ಈ ಗರೋಡಿಯ ಸ್ಥಳಪಾತ್ರಿ ಸದ್ಯಕ್ಕೆ ಇಲ್ಲ. ಹಿಂದೆ ಹಿರಿಯರಾದ ಲಚ್ಚು ಪೂಜಾರಿಯವರು ಇಲ್ಲಿಯ ಸ್ಥಳಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಹೂವಿನ ಪೂಜೆಗಳು ನಡೆಯುತ್ತವೆ. ಏಪ್ರಿಲ್, ಮೇ, ತಿಂಗಳಲ್ಲಿ ಅಗೆಲು ಸೇವೆ, ಬೈದೇರುಗಳ ನೇಮೋತ್ಸವ, ಜೋಗಿಪುರುಷ, ಮಾಯಂದಾಲ್ ಹಾಗೂ ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ
ತೆಂಕ ಎರ್ಮಾಳಿನ ಜನ ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2022ನೇ ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು ಹಿಂದೆ 1936ರಲ್ಲಿ ಜೀರ್ಣೋದ್ಧಾರವಾಗಿತ್ತು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಸಂದು ದಾಂತಿ ಗರೋಡಿ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119.

ಪೂಪೂಜನೆಯವರು:

ವೈ. ಜಯಕರ ಪೂಜಾರಿ,
ಜಯಚಂದ್ರ ನಿವಾಸ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119. ಮೊಬೈಲ್: 9900160673,
9900160675, ಪ್ರಶಾಂತ್ (ಮಗ)

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024