Baidashree

Thobattu Shree Brahma Baidarkala Garodi

ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ.

ಉಡುಪಿಯಿಂದ ಬ್ರಹ್ಮಾವರ – ಬಾರ್ಕೂರು – ಸೈಬ್ರಕಟ್ಟೆಯಿಂದ ಗೋಳಿಯಂಗಡಿ ತಲುಪಿ ಅಲ್ಲಿಂದ ಗೋಳಿಯಂಗಡಿ – ಹೆಂಗವಳ್ಳಿ ರಸ್ತೆಯಲ್ಲಿ ಸುಮಾರು ಆರುವರೆ ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದೊಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯ, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ. ಗುಂಡದ ಹಿಂಬದಿಯಲ್ಲಿ ದೇಯಿ ಬೈದೆತಿಯ ಮುಂಡಿಗೆ ಇದೆ.
ಗುಂಡದ ಬಲಬದಿಯಲ್ಲಿ ಬಲ್ಲಾಳರ ಮಂಡಿಗೆ ಇದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಮಂಚ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮುಂಡಿಗೆ ಹಾಗೂ ಬ್ರಾಹ್ಮಣರ ಮಂಡಿಗೆಗಳಿವೆ.
ಗರೋಡಿಗೆ ಬಲಭಾಗದಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಜಿಟಕರ ಮರದ ಮೂರ್ತಿ ಇದೆ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಕಲ್ಲು ಕುಟುಗ, ವರ್ತೆ, ಪಂಜುರ್ಲಿ, ಧೂಮಾವತಿ, ಬಂಟ, ಹುಲಿದೇವರು(ಚಾಂಡಿ) ನಂದಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಎರಡು ಮುಂಡಿಗೆಗಳಿವೆ. ಗರೋಡಿಯ ಆವರಣದೊಳಗೆ ತುಳಸಿಕಟ್ಟೆ ಹಾಗೂ ಬಲಿ ಕಲ್ಲುಗಳಿವೆ.

ನಾರಾಯಣ ಪೂಜಾರಿ

ಸುಮಾರು 40 ವರ್ಷಗಳಿಂದ ನಾರಾಯಣ ಪೂಜಾರಿ (62 ವರ್ಷ) ಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಪ್ಪು ಪೂಜಾರಿ, ನಂದ ಪೂಜಾರಿಯವರು ಈ ಸೇವೆ ಮಾಡಿದ್ದರು.
ನಾರಾಯಣ ಪೂಜಾರಿ (ಅರ್ಚಕರು), ಮಂಜಪ್ಪ ಪೂಜಾರಿ (62 ವರ್ಷ), ವಿಠಲ ಪೂಜಾರಿ (60 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಕೊರಗ ಪೂಜಾರಿ, ನಂದ ಪೂಜಾರಿ, ಇವರು ಇಲ್ಲಿ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿರುತ್ತಾರೆ.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಮಂಡಿಗೆ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ , ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಹಾಲು ಹಬ್ಬ, ಏಪ್ರಿಲ್ ತಿಂಗಳ 9ನೇ ತಾರೀಖಿಗೆ ಅಗೆಲು ಸೇವೆ, 10ಕ್ಕೆ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ, ಶಿವರಾಯ ದೈವಗಳ ಕೋಲ ಸೇವೆ ನಡೆಯುತ್ತದೆ.
ಹೆಂಗವಳ್ಳಿ, ದಬ್ಲಾಡಿ ಹಾಗೂ ಭಾಗಶ: ಶೇಡಿಮನೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರು. ಈ ಗ್ರಾಮಗಳ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ 85ಸೆಂಟ್ಸ ಜಾಗ ಸರಕಾರಿ ಜಾಗವಿದ್ದು ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಅಪ್ಪು ಮಡಿವಾಳ ತೊಂಬತ್ತು ಇವರು ಮಡಿವಾಳರಾಗಿ, ಸೂರ್ಯ ಶೇರಿಗಾರ ಹೆಬ್ರಿ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ತೊಂಬತ್ತು ಹೆಂಗುವಳ್ಳಿ ಗ್ರಾಮ ಮತ್ತು ಅಂಚೆ,ಕುಂದಾಪುರ ತಾಲೂಕು, ಉಡುಪಿ 576212

ಅರ್ಚಕರು:

ನಾರಾಯಣ ಪೂಜಾರಿ – 9008757296

ಮಾಹಿತಿ ನೀಡಿದವರು :

ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Brahma Baidarkala & Sahaparivaara Daivagala Garodi, Molahalli

ಶ್ರೀ ಬ್ರಹ್ಮಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ, ಮೊಳಹಳ್ಳಿ

ಉಡುಪಿಯಿಂದ ಕೋಟೇಶ್ವರ ಬಲಕ್ಕೆ ಹಾಲಾಡಿ ರಸ್ತೆಯಲ್ಲಿ ಸಾಗಿ ಹುಣಸೆಮಕ್ಕಿ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದೂವರೆ ಕಿ. ಮೀ.ದೂರ
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಪೈಯಬೈದ ಹಾಗೂ ಜಿಟಿಕರ ಮರದ ಮೂರ್ತಿ ಹಾಗೂ ಬಲ್ಲಾಳರ ಕಲ್ಲಿನ ಕಂಬವಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಕೋಣ ಬೊಬ್ಬರ್ಯನ ಮರದ ಮೂರ್ತಿಯಿದೆ. ಎಡಬದಿಯಲ್ಲಿ ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ಮಹಾಶೇಷ, ಮೈಂದಾಳ್ತಿ ಮತ್ತು ಮಗು, ಕೋಣದ ಮರದ ಮೂರ್ತಿ ಇದೆ.
ಪಕ್ಕದಲ್ಲಿ ಕಲ್ಲಿನ ಮಾಸ್ತಿಕಂಬ, ಹಳೆಯಮ್ಮ, ಎಳೆಯಮ್ಮ, ಬಾಲಚಿಕ್ಕು, ಬಲಿಚಿಕ್ಕು, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಜಿಟಿಕರ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ, ರಾಹು ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗ ಬನ, ವೀರಭದ್ರ ನಂದಿಕೇಶ್ವರ ಹೈಗುಳಿ ದೇವಸ್ಥಾನಗಳಿವೆ.

ಸುರೇಶ್ ಪೂಜಾರಿ

ಸುರೇಶ್ ಪೂಜಾರಿ (47 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಇವರ ತಂದೆ ಬಸವ ಪೂಜಾರಿ ಹಾಗೂ ಅಜ್ಜ ಬಡಿಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಎಂ. ಮಹೇಶ್ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದು, ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಹಾಗು ಶುಕ್ರವಾರ ಪೂಜೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಹಾಲಹಬ್ಬ (ಕೈದ ಪೂಜೆ), ಎಲ್ಲಾ ದೈವಗಳ ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಶಿವರಾಯ ಮಾರಿ ಸೇವೆ ನಡೆಯುತ್ತದೆ. ಶಿವರಾಯನಿಗೆ ಮಂಗಳವಾರ ಮತ್ತು ಆದಿತ್ಯವಾರ ಊರವರು ಕೋಳಿ ಬಲಿ ಕೊಡುವ ಕ್ರಮ ಇದೆ.
ಮೊಳಹಳ್ಳಿ ಗ್ರಾಮದ ಜನರು ಈ ಗರೋಡಿಗೆ ಸೇವೆ ನೀಡುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ
ಗರೋಡಿಗೆ ಮೂರು ಮುಡಿ ಜಮೀನು ಉಂಬಳಿ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಯು ಸುಮಾರು ಒಂದೂವರೆ ಎಕ್ರೆ ಸರಕಾರಿ ಜಮೀನಿನಲ್ಲಿದೆ.
ಗರೋಡಿಯು 2023ರ ಫೆಬ್ರವರಿ ತಿಂಗಳಲ್ಲಿ ಜೀರ್ಣೋದ್ದಾರಗೊಂಡಿದೆ
ಶೀನ ದೇವಾಡಿಗ ಮೊಳಹಳ್ಳಿ ಇವರ ಪರಿವಾರಸ್ಥರು ವಾದ್ಯದವರಾಗಿ, ಹುಣಸೇ ಮಕ್ಕಿ ವೀರನ ಮಕ್ಕಳು ಡೋಳಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ,
ಮೊಳಹಳ್ಳಿ ಅಂಚೆ,
ಕುಂದಾಪುರ ತಾಲೂಕು,
ಉಡುಪಿ – 576222.

ಅರ್ಚಕರು:

ಸುರೇಶ್ ಪೂಜಾರಿ : 9945631027

ಮಾಹಿತಿ ನೀಡಿದವರು :

ಸುರೇಶ್ ಪೂಜಾರಿ,
ಅವಿನಾಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Sri Brahmabantara Kotichennaiah, Panjurli, Haiguli and the Garodi

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ, ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ, ಗುಜ್ಜಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್66 ರಲ್ಲಿ ಕುಂದಾಪುರ ದಾಟಿ, ಸೌಪರ್ಣಿಕ ನದಿಸೇತುವೆ ದಾಟಿದ ನಂತರ ಎಡಕ್ಕೆ ತಿರುಗಿ ನಾಯಕವಾಡಿ ರಸ್ತೆಯಲ್ಲಿ ಸುಮಾರು 3.5ಕಿ.ಮೀ. ಸಾಗಿದ ನಂತರ ಪುನ: ಎಡಕ್ಕೆ ತಿರುಗಿ ಸುಮಾರು 850ಮೀ. ಒಳಗೆ ಹೋದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆಯಾಗಿಲ್ಲ.
ಗರೋಡಿಯ ಬ್ರಹ್ಮಗುಡಿಯ ಎದುರು ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಗುಂಡದ ಒಳಗೊಂದು ಬೆಳ್ಳಿ ಮುಚ್ಚಿದ ಮರದ ನಾಗಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗಡೆ ಬಲಬದಿಯಲ್ಲಿ ಮೂಡೂರು ಹೈಗುಳಿ, ನಂದಿ (ಎರಡು), ಪಂಜುರ್ಲಿ ದೈವಗಳ ಗದ್ದಿಗೆ ಹಾಗೂ ಮರದ ಮೂರ್ತಿಗಳಿವೆ. ಎಡಭಾಗದಲ್ಲಿ ಹಣಾರ ಹೈಗುಳಿ, ದೈವದ ಗದ್ದಿಗೆ ಹಾಗೂ ಪಂಚಲೋಹದ ಮೂರ್ತಿ ಇದೆ.
ಪಕ್ಕದಲ್ಲಿ ಮೈಂದಾಳ್ತಿ, ಬಾಲಯ್ಯ, ಬೊಬ್ಬರ್ಯ, ದೊಡ್ಡಕಾಲಮ್ಮ, ಮೂಡೂರ ಅಮ್ಮ, ಬಚ್ಚಲಮ್ಮ ದೈವಗಳ ಮರದ ಮೂರ್ತಿ ಹಾಗೂ ಕುಂ಼ಜ್ಞಾಡಿ ಹೈಗುಳಿ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಎದರು ಸ್ಥಳದ ಮಾಸ್ತಿ, ಜೋಗಿಪುರುಷ, ಅಣ್ಣುಣ ಹೈಗುಳಿ, ಮುರಸಂಡಿ, ಸಂಕ್ರಣ ಹೈಗುಳಿ, ಹಿಂಜಾಣ ಚಿಕ್ಕು, ಮಾಸ್ತಿಕಟ್ಟೆ ಅಮ್ಮ, ಮರ್ಲುಚಿಕ್ಕು ಹಾಗೂ ಪಾತ್ರಿಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದಲ್ಲಿ ಬಾಗಿಲು ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೋಡಿಯ ಹೊರಾಂಗಣದಲ್ಲಿ ಹೊರಸುತ್ತಿನ ಹೈಗುಳಿ, ರಾಹು ಮತ್ತು ಗ್ರಾಮಕಲ್ಲು, ಕ್ಷೇತ್ರಪಾಲ, ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗೂ ನಾಗಬನಗಳಿವೆ.
ಸುಬ್ಬ ಪೂಜಾರಿ(65 ವರ್ಷ) ಹಾಗೂ ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಬುಡ್ಡು ಪೂಜಾರಿ, ಭದ್ರ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ರಾಘವೇಂದ್ರ ಪೂಜಾರಿ (40 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ಚೆನ್ನ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ರೋಹಿದಾಸ್ ನಾಯಕ್ ಇವರು ಗರೋಡಿಯ ಮೊಕ್ತೇಸರರಾಗಿ, ಪಟೇಲರ ಮನೆ ಪ್ರದೀಪ್ ಶೆಟ್ಟಿಯವರು ಮುಕ್ಕಾಲಿಯಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಶುಕ್ರ ಪೂಜಾರಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದೆ. ಶಿವರಾಮ ಪೂಜಾರಿ ಜಡ್ಡಿನಕೋಡ್ಲು ಗೌರವಾಧ್ಯಕ್ಷರಾಗಿ, ಶಿವನಾಯ್ಕ ಇವರು ಅಧ್ಯಕ್ಷರಾಗಿ, ಶುಕ್ರ ಪೂಜಾರಿಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ 24ಕ್ಕೆ ಅಗೆಲು ಸೇವೆ ದರ್ಶನ ಸೇವೆ, ಹಾಲುಹಬ್ಬ ನಡೆಯುತ್ತದೆ.
27-04-2025ಕ್ಕೆ ಪಂಜುರ್ಲಿ ಹಾಗೂ ಹೈಗುಳಿ ದೈವಗಳಿಗೆ ಮೊದಲ ಬಾರಿಗೆ ಹರಕೆಯ ಕೋಲ ಸೇವೆ ನಡೆಯಲಿದೆ.
ಗುಜ್ಜಾಡಿ, ಮಂಕಿ, ಬೆಣ್ಗೇರಿ, ಕೊಡಪಾಡಿ, ಗಂಗೊಳ್ಳಿ, ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಹರಕೆ, ಕಾಣಿಕೆ, ದೇಣಿಗೆ, ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 11 ಸೆಂಟ್ಸ ಜಾಗವಿದೆ. ಗರೋಡಿಯು 24-01-2014ರಲ್ಲಿ ಜೀರ್ಣೋದ್ಧಾರವಾಗಿದೆ,
ಮಾಲಿಂಗ ದೇವಾಡಿಗ ಗಂಗೊಳ್ಳಿ ಇವರು ಈ ಗರೋಡಿಯ ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ,
ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ,
ಗುಜ್ಜಾಡಿ,
ಕುಂದಾಪುರ ತಾಲೂಕು,
ಉಡುಪಿ – 576247.

ಗರೋಡಿಯ ಆಡಳಿತ ಸಮಿತಿ:

ಶುಕ್ರ ಪೂಜಾರಿ
ಕಾರ್ಯದರ್ಶಿ – 9341919878.

ಮಾಹಿತಿ ನೀಡಿದವರು :

ಶುಕ್ರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala Garodi, Ulloor 74

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಉಳ್ಳೂರು 74

ಶ್ರೀ ಬ್ರಹ್ಮಬೈಕರ್ದಳ ಗರೋಡಿ ಉಳ್ಳೂರು 74, ಈ ಗರೋಡಿಯು ಉಡುಪಿಯಿಂದ – ಬ್ರಹ್ಮಾವರ – ಬಾರ್ಕೂರು – ಎಡ್ತಾಡಿ – ಸೈಬ್ರಕಟ್ಟೆ – ಬಿದ್ಕಲ್ ಕಟ್ಟೆ – ಹಾಲಾಡಿ ಬಸ್ಸು ನಿಲ್ದಾಣದ ಹತ್ತಿರ ಕುಂದಾಪುರ – ಆಗುಂಬೆ ರಾಜ್ಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿ. ಮೀ. ಸಾಗಿದ ನಂತರ ಬಲಕ್ಕೆ ತಿರುಗಿ 6 ಕಿ. ಮೀ. ದೂರದಲ್ಲಿದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಬಲ್ಲಾಳರು ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಪರಿವಾರ ದೈವಗಳ ನಾಲ್ಕು ಮುಂಡಿಗೆಯಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮುಂಡಿಗೆ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ ಹಾಗೂ ಮುಂಡಿಗೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಮೋಟುಕಾಲು ಬೊಬ್ಬರ್ಯ ದೈವಗಳ ಮಂಡಿಗೆಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿನ ಶ್ರೀ ಮಾರಿ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಹುಲಿಚಾಮುಂಡಿ ದೈವಗಳ ಮರದ ಮೂರ್ತಿಯಿದೆ. ಗುಡಿಯ ಬಾಗಿಲ ಎರಡು ಬದಿಯಲ್ಲಿ ಮಂತ್ರಿಗಣ ಹಾಗೂ ಕ್ಷೇತ್ರಪಾಲ ದೈವಗಳ ಮುಂಡಿಗೆಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಶ್ರೀಕಾಂತ ಪೂಜಾರಿ

ಶ್ರೀಕಾಂತ ಪೂಜಾರಿ(35 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ಕೃಷ್ಣ ಪೂಜಾರಿ

ಕೃಷ್ಣ ಪೂಜಾರಿ (53 ವರ್ಷ), ಪ್ರಕಾಶ ಪೂಜಾರಿ, ಉಮೇಶ ಪೂಜಾರಿ ಇವರು ಇಲ್ಲಿಯ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ರಘು ಪೂಜಾರಿ, ನಾರಾಯಣ ಪೂಜಾರಿ, ರಾಜು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿಯವರು ಗರೋಡಿಯ ಮೊಕ್ತೇಸರರು. ಸುಧಾಕರ ಶೆಟ್ಟಿಯವರು ಮುಕ್ಕಾಲಿ ಶೆಟ್ಟಿಯಾಗಿದ್ದಾರೆ. ನಾರಾಯಣ ಹೆಬ್ಬಾರರು, ಸಂಜೀವ ಶೆಟ್ಟಿಯವರ ಮೊದಲು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜದ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, ಮರುದಿನ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ ಕೋಲ ನಡೆದು ಮರುದಿನ ಶಿವರಾಯ ಕೋಲ ನಡೆಯುತ್ತದೆ.
ಉಳ್ಳೂರು, ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ ಗ್ರಾಮಗಳು ಈ ಕೂಡು ಕಟ್ಟಿಗೆ ಸೇರಿವೆ. ಕೂಡುಕಟ್ಟಿನ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯು ಐವತ್ತು ಸೆಂಟ್ಸ ಸರ್ಕಾರಿ ಜಾಗದಲ್ಲಿದೆ. ಭಕ್ತಾದಿಗಳು ನೀಡುವ ಕಾಣಿಕೆ, ಬತ್ತ, ಅಡಿಕೆ, ಇವುಗಳಿಂದ ಬರುವ ಆದಾಯದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಶೇಖರ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಭುಜಂಗ ಮಡಿವಾಳ ಉಳ್ಳೂರು ಇವರು ಮಡಿವಾಳರಾಗಿ, ಬಸವ ಉಳ್ಳೂರು ಇವರು ಡೋಲಿನವರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ಪರಿಸರದಲ್ಲಿ ಉಳ್ಳೂರು ಬಿಲ್ಲವ ಸಂಘ ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಉಳ್ಳೂರು 74,
ಅಂಚೆ ಉಳ್ಳೂರು 74,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ – 576224.

ಅರ್ಚಕರು:

ಶ್ರೀಕಾಂತ ಪೂಜಾರಿ – 9741150068

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Sri Bantara Kotichennaiyya Garodi and Panjurli and Mari Shivaraya Temple Kaipadi – Vaderahobali

ಶ್ರೀ ಬಂಟರ ಕೋಟಿಚೆನ್ನಯ್ಯ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ ಕೈಪಾಡಿ – ವಡೇರಹೋಬಳಿ

ಉಡುಪಿಯಿಂದ ಸಾಲಿಗ್ರಾಮ – ಕೋಟೇಶ್ವರ ನಂತರ ಕುಂದಾಪುರಕ್ಕೆ ಮೊದಲು ಟಿ.ಟಿ. ರೋಡ್ ನಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಒಳಗೆ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಬಿಮುಖವಾಗಿದೆ.
ಬ್ರಹ್ಮಗುಂಡವನ್ನು ಗ್ರಾನೈಟ್ ಹಾಕಿ ನಿರ್ಮಿಸಲಾಗಿದೆ. ಗರೋಡಿಯ ಬ್ರಹ್ಮಗುಡಿಯಲ್ಲಿ ಒಳಗೆ ಗುಂಡದ ಎದುರಿನಲ್ಲಿ ನಾಗಬ್ರಹ್ಮರ ಕುದುರೆ ಮಾತ್ರವಿರುವ ಪಂಚಲೋಹದ ಮೂರ್ತಿ ಇದೆ. ಬ್ರಹ್ಮಗುಂಡದ ಒಳಗೆ ವಿಷ್ಣುಮೂರ್ತಿ ದೇವರ ಪಂಚಲೋಹದ ಮೂರ್ತಿ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಸುಮಾರು 250 – 300 ವರ್ಷಗಳ ಹಿಂದೆ ಗರೋಡಿ ಮನೆಯ ಎರಡು ಸಂಸಾರದೊಳಗೆ ಜಗಳವಾಗಿ ಒಂದು ಕಡೆಯವರು ರಾತ್ರಿ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿಯನ್ನು ತೆಗೆದುಕೊಂಡು ಹೋಗಿ ಈ ಗರೋಡಿಯಿಂದ ಸುಮಾರು 200ಮೀ. ದೂರದಲ್ಲಿ ಇನ್ನೊಂದು ಗರೋಡಿಯನ್ನು ನಿರ್ಮಿಸಿ ಪೂಜೆ ಮಾಡಲಾರಂಭಿಸಿದರಂತೆ. ಹಾಗಾಗಿ ಈ ಗರೋಡಿಯಲ್ಲಿ ನಾಗಬ್ರಹ್ಮರ ಕುದುರೆ ಮಾತ್ರ ಉಳಿದುಕೊಂಡಿದೆ. ಇತ್ತೀಚೆಗೆ ಈ ಗರೋಡಿಯಲ್ಲಿ ನಾಗಬ್ರಹ್ಮರ ಹೊಸ ಮೂರ್ತಿ ಮಾಡಿಸುವುದೆಂದು ನಿರ್ಣಯಿಸಿ ದರ್ಶನ ಮಾಡಿಸಿ ಕೇಳಿದಾಗ ಹೊಸ ಮೂರ್ತಿ ಮಾಡುವುದು ಬೇಡವೆಂದೂ, ಹಳೆಯದನ್ನು ವಾಪಾಸು ತರಿಸುವುದಾಗಿ ಬೈದೇರುಗಳ ಅಪ್ಪಣೆಯಾಯಿತಂತೆ. ಹಾಗಾಗಿ ಹಳೆಯ ಮೂರ್ತಿ ವಾಪಾಸು ಬರುವ ಶುಭಗಳಿಗೆಗಾಗಿ ಭಕ್ತರು ಕಾಯುತ್ತಿದ್ದಾರೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಮಗುವಿನ ಮರದ ಮೂರ್ತಿ, ದೇಯಿ ಬೈದೆತಿ ಮಣೆಮಂಚವಿದೆ.
ಗುಂಡದ ಬಲಭಾಗದಲ್ಲಿ ಶಿವಲಿಂಗದ ಕಲ್ಲಿನ ಕೆತ್ತನೆ, ಬಂಟ ಮತ್ತು ಚಿಟಕರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಗದ್ದಿಗೆಯಲ್ಲಿ ಮರದ ಮೂರ್ತಿ, ಇನ್ನೊಂದು ಗದ್ದಿಗೆಯಲ್ಲಿ ಹಪ್ಪಿನ ಕೆರೆ ಹೈಗುಳಿ ದೈವದ ಮರದ ಮೂರ್ತಿಗಳಿವೆ. ಬ್ರಹ್ಮಗುಡಿಯ ಎಡಭಾಗದಲ್ಲಿ ನಂದಿಕೇಶ್ವರ, ಮೂಡುರ ಹೈಗುಳಿ, ಗೆಂಡದ ಹೈಗುಳಿ ದೈವಗಳ ಗದ್ದಿಗೆಯಲ್ಲಿ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಳ್ತಿ, ಹಳಿಯಮ್ಮ, ಚಿಕ್ಕು, ಬೊಬ್ಬರ್ಯ ದೈವಗಳ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಎದುರಿಗೆ ಪಾತ್ರಿ ವೆಂಕಟಯ್ಯ ಪೂಜಾರಿ, ಜೋಗಿಪುರುಷ, ಮಾಸ್ತಿ ಅಮ್ಮನ ಮರದ ಮೂರ್ತಿ ಹಾಗೂ ಗಣಗಳ ಮಣೆಮಂಚವಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ, ತುಳಸಿಕಟ್ಟೆ, ಬಾವಿ, ಬಲಿ ಕಲ್ಲುಗಳಿವೆ.

ಸಂಜೀವ ಪೂಜಾರಿ

ವಿಶ್ವನಾಥ ಪೂಜಾರಿ

ವಿನೋದ ಪೂಜಾರಿ

ನಾರಾಯಣ ಪೂಜಾರಿ

ಯೋಗೀಶ ಪೂಜಾರಿ

ಗರೋಡಿಯ ಅರ್ಚಕರಾಗಿ ಕೈಪಾಡಿ ಮನೆಯವರು ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಮ್ಮೆ ಬದಲಾವಣೆ ಮಾಡಿಕೊಂಡು ಸೇವೆ ಮಾಡುತ್ತಾರೆ. ಸಂಜೀವ ಪೂಜಾರಿ (65 ವರ್ಷ), ವಿಶ್ವನಾಥ (37 ವರ್ಷ), ವಿನೋದ (34 ವರ್ಷ) ಇವರು ಕೈಪಾಡಿ ಮನೆಯ ಅರ್ಚಕರಾಗಿ, ನಾರಾಯಣ ಪೂಜಾರಿ (65 ವರ್ಷ), ಯೋಗೀಶ ಪೂಜಾರಿ (40 ವರ್ಷ) ಇವರು ಪೂಜಾರಿ ಮನೆಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ಮುತ್ತ ಪೂಜಾರಿ, ಬಾಬು ಪೂಜಾರಿ, ಗಣಪ ಪೂಜಾರಿ, ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಗಣಪ ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಮೊಕ್ತೇಸರರಾಗಿ ಕೂಡಾ ಕೈಪಾಡಿ ಮನೆ ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಬ್ಬರಂತೆ ಅಧಿಕಾರ ಬದಲಾವಣೆ ಮಾಡಿಕೊಳ್ಳುತ್ತಾರೆ. ಸಂಜೀವ ಪೂಜಾರಿಯವರು ಕೈಪಾಡಿ ಮನೆಯವರು ಮೊಕ್ತೇಸರರಾದರೆ, ವೆಂಕಟ ಪೂಜಾರಿಯವರು ಪೂಜಾರಿ, ಪೂಜಾರಿ ಮನೆಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ ಸೇವೆ, ಹಾಲು ಹಬ್ಬ, ಫೆಬ್ರವರಿ ತಿಂಗಳ 5ನೇ ತಾರೀಖಿನಂದು ಗೆಂಡ ಸೇವೆ, 6ಕ್ಕೆ ತುಲಾಭಾರ ಸೇವೆ, ಕುರಿಹಾರ ಸೇವೆಗಳು ನಡೆಯುತ್ತದೆ.
ಹಂಗಳೂರು, ಕೋಣಿ, ಕೋಡಿ, ಹೊಸಬೆಟ್ಟು, ವಿಠಲವಾಡಿ, ವಡೇರಹೋಬಳಿ, ಕೋಟೇಶ್ವರ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ.
ಈ ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರವೂರ ಜನರ, ಹರಕೆ, ಕಾಣಿಕೆ, ಸಹಾಯಧನ,ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಗರೋಡಿಗೆ ಸುಮಾರು ಒಂದೂವರೆ ಎಕ್ರೆ ಜಾಗವಿದೆ. 1972 ಹಾಗೂ 2000 ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ. ೨೦೦೦ ಇಸವಿಯ ಜೀರ್ಣೋದ್ದಾರದ ಕಾರ್ಯ ಪ್ರಗತಿಯಲ್ಲಿದ್ದಾಗ ನಮ್ಮ ಸಂಸ್ಥೆಯ ಅಧ್ಯಯನ ತಂಡವು ಈ ಗರೋಡಿಗೆ ಭೇಟಿ ಕೊಟ್ಟ ಸಂದರ್ಭದ ವಿಡಿಯೋ ಚಿತ್ರೀಕರಣ ಇಲ್ಲಿದೆ. ಗರೋಡಿಯ ಅಂದಿನ ಅರ್ಚಕರಾಗಿದ್ದ ಮುತ್ತು ಪೂಜಾರಿಯವರು ಜೀರ್ಣೋದ್ದಾರದ ಬಗ್ಗೆ ಮಾಹಿತಿ ನೀಡಿದ್ದರು.
ವಡೇರ ಹೋಬಳಿಯ ಸೀತ ಮಡಿವಾಳರ ಮಗ ಮಡಿವಾಳರಾಗಿ, ಮಂಜುನಾಥ ದೇವಾಡಿಗ ಕೋಟೇಶ್ವರ ವಾಧ್ಯದವರಾಗಿ, ವಿಠಲವಾಡಿಯ ರಂಗ ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮೂಲ ಗರೋಡಿಯಿಂದ ವಿವಾದದ ಕಾರಣ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿ ತಂದು ಸ್ಥಾಪಿಸಿದ ಗರೋಡಿ ಹತ್ತಿರದಲ್ಲಿದೆ.
ಈ ಗರೋಡಿಯನ್ನು ಶ್ರೀ ಬ್ರಹ್ಮಬೈದರ್ಕಳ ಪಂಜುರ್ಲಿ ಗರೋಡಿ ಕೈಪಾಡಿ ಎಂದು ಹೆಸರಿಸಲಾಗಿದೆ.
ಇದರ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ನಿರ್ಮಿಸಿ ಟೈಲ್ಸ್ ಹಾಕಲಾದ ಗುಂಡದಂತಿರುವ ಮಂಟಪದಲ್ಲಿ ನಾಗಬ್ರಹ್ಮರ ಮೂರ್ತಿ ಇದೆ. ಕುದುರೆಯ ಬದಲಿಗೆ ಕಂಚಿನಿಂದ ನಿರ್ಮಿಸಿದ ಪೀಠದ ಮೇಲೆ ಮೂರ್ತಿಯನ್ನಿಡಲಾಗಿದೆ.
ಬ್ರಹ್ಮಗುಡಿಯ ಹೊರಗೆ ಪಂಜುರ್ಲಿ, ಗೆಂಡದ ಹೈಗುಳಿ, ಮಾರಿ ಶಿವರಾಯ, ಮಾಸ್ತಿಯಮ್ಮ ದೈವಗಳ ಮರದ ಮೂರ್ತಿ, ಶ್ರೀ ಮರ್ಲುಚಿಕ್ಕು ಹಾಗೂ ಪರಿವಾರ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಗರೋಡಿಯ ವಿಳಾಸ:

ಶ್ರೀ ಬಂಟರ ಕೋಟಿಚೆನ್ನಯರ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ,
ಕೈಪಾಡಿ, ಟ.ಟ.ರಸ್ತೆ, ವಡೇರಹೋಬಳಿ, ಕುಂದಾಪುರ – 576201.

ಅರ್ಚಕರು:

ಕೈಪಾಡಿ ಮನೆ ವಿಶ್ವನಾಥ ಪೂಜಾರಿ – 8105669153
ಕೈಪಾಡಿ ಮನೆ ವಿನೋದ ಪೂಜಾರಿ – 8971427022,
ಪೂಜಾರಿ ಮನೆ ಯೋಗೀಶ ಪೂಜಾರಿ – 9164954574.

ಮಾಹಿತಿ ನೀಡಿದವರು :

ಕೈಪಾಡಿ ಮನೆ ವಿನೋದ ಪೂಜಾರಿ,
ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala, Shivaraya & Parivaara Garodi, Amavasebailu

ಶ್ರೀ ಬ್ರಹ್ಮಬೈದರ್ಕಳ ಹಾಗೂ ಶಿವರಾಯ ಮತ್ತು ಪರಿವಾರ ಗರೋಡಿ, ಅಮವಾಸೆಬೈಲು

ಉಡುಪಿಯಿಂದ ಹಾಲಾಡಿ – ರಟ್ಟಾಡಿ ಮಾರ್ಗವಾಗಿ ಅಮಾಸೆಬೈಲು ತಲುಪಿದರೆ ಅಮಾಸೆಬೈಲು ಪೇಟೆಯಿಂದ ಅರ್ಧ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಕುಜುಂಬ ಕಾಂಜವ ಹಾಗು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಎಡಬದಿಯಲ್ಲಿ ಪೆರುಮಳೆ ಬಲ್ಲಾಳ, ದೇವು ಬಲ್ಲಾಳ, ಹಾಗೂ ಬಂಟರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಅಣ್ಣಪ್ಪ ಪಂಜುರ್ಲಿ, ಜೋಡು ಪಂಜುರ್ಲಿ ಹಾಗೂ ಬಂಟರ ಮಣೆಮಂಚಗಳಿವೆ.
ಎಡಬದಿಯಲ್ಲಿ ಕಾಂತಣ್ಣ ಜುಮಾದಿ ಹಾಗೂ ಬಂಟ, ಪಂಚದೂಮಾವತಿ, ಬಂಟ, ಪಂಚಸ್ಥಾನ ಪರಿವಾರ, ತತ್ವತ್ರ ಮೈಂದಾಳಿ, ದೈವಗಳ ಮಣೆಮಂಚ, ಬಾಲಯ್ಯ, ಮೈಂದಾಳಿಯ ಮರದ ಮೂರ್ತಿಗಳಿವೆ.
ಗುಂಡದ ಎದುರಿಗೆ ಚಾಮುಂಡಿ ಮಣೆಮಂಚ, ಹೊಸಮುಂಡಿಗೆ, ನರೀಶ್ವರ ದೈವಗಳ ಮಣೆಮಂಚ ಹಾಗೂ ಜೋಗಿ ಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಉಮ್ಮಾಳ್ತಿ ದೈವಗಳ ಮಣೆಮಂಚಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿ ಇದೆ.
ಪಕ್ಕದ ಇನ್ನೊಂದು ಗುಡಿಯಲ್ಲಿ ಬಂಟರ ಹಾಗೂ ಬಂಟರ ಗದ್ದಿಗೆ, ಪಂಚ ದೂಮಾವತಿಯ ಮರದ ಮೂರ್ತಿ ಬಂಟ, ಬಂಟರ ಮಣೆಮಂಚ, ಪಂಜುರ್ಲಿಯ ಮರದ ಮೂರ್ತಿ, ವ್ಯಾಘ್ರಚಾಮುಂಡಿಯ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ಬಂಟ ಹಾಗೂ ಬಂಟ ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿ ಇದೆ.

ಭೋಜ ಪೂಜಾರಿ

ಅಪ್ಪು ಪೂಜಾರಿ

1996ರಿಂದ ಭೋಜ ಪೂಜಾರಿಯವರು (59 ವರ್ಷ) ಗರೋಡಿಯ ಅರ್ಚಕರಾಗಿದ್ದಾರೆ. ಅಪ್ಪು ಪೂಜಾರಿ (77 ವರ್ಷ)ಯವರು ಇಲ್ಲಿಯ ಇನ್ನೋರ್ವ ಅರ್ಚಕರು. ಇವರಿಬ್ಬರ ನಡುವೆ ಜುಲೈ ಒಂದಕ್ಕೆ ಅಧಿಕಾರ ಬದಲಾವಣೆ ನಡೆಯುತ್ತದೆ. ಇವರ ಮೊದಲು ಬಚ್ಚ ಪೂಜಾರಿ ಹಾಗೂ ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಅಪ್ಪು ಪೂಜಾರಿ , ರಾಜು ಪೂಜಾರಿ (74 ವರ್ಷ) ಲಕ್ಷಣ ಪೂಜಾರಿ (76 ವರ್ಷ) ನಂದಿ ಪೂಜಾರಿ (67 ವರ್ಷ) ಇವರು ಈ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳು.
ಶಂಕರನಾರಾಯಣ ಕೊಡ್ಗಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಡಿಸೆಂಬರ್ 13ರಂದು ಕಾಯ್ದೆ ಪೂಜೆ, ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, 22ಕ್ಕೆ ನೇಮ, ಜೋಗಿಪುರುಷ, ಮೈಂದಾಳಿ, ಶಿವರಾಯ ಕೋಲ, ಜೂನ್ ತಿಂಗಳಲ್ಲಿ ಶಿವರಾಯನಿಗೆ ಮಾರಿ ಸೇವೆ ನಡೆಯುತ್ತದೆ.
ಗರೋಡಿಯು ಸುಮಾರು ಒಂದು ಎಕರೆ ಸರಕಾರಿ ಭೂಮಿಯಲ್ಲಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ರಾಮ ಹೆಂಗವಳ್ಳಿ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಾಗೂ ಶ್ರೀ ವೀರ ಶಿವರಾಯ ಮತ್ತು ಸಹಪರಿವಾರ ಗರೋಡಿ,
ಅಮಾಸೆಬೈಲು ಕುಂದಾಪುರ ತಾಲೂಕು,
ಉಡುಪಿ, 576227.

ಅರ್ಚಕರು:

ಭೋಜ ಪೂಜಾರಿ – 9740967134,
ಅಪ್ಪು ಪೂಜಾರಿ – 9611802891.

ಮಾಹಿತಿ ನೀಡಿದವರು :

ಭೋಜ ಪೂಜಾರಿ,
ಅಪ್ಪು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Brahma Baidarkala Panchadhoomavati Garodi, Thonse

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರೋಡಿ, ತೋನ್ಸೆ.

ಉಡುಪಿಯಿಂದ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನೇಜಾರಿಗೆ ಹೋಗುವ ಮಾರ್ಗದಲ್ಲಿರುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಸುಮಾರು 8.3 ಕಿ. ಮೀ. ಸಾಗಿ ನಿಡಂಬಳ್ಳಿ ತಲುಪಿ ತೋನ್ಸೆ ಗರೋಡಿಗೆ ಹೋಗಬಹುದು.
ಇದು ಪುರಾತನ ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ಮುಖ್ಯ ದ್ವಾರವನ್ನು ಹೊಂದಿದೆ. ಷಡಾಧಾರ ಪ್ರತಿಷ್ಠೆಯೂ ಇದೆ.
ಇಲ್ಲಿಯ ಸ್ಥಳ ಪುರಾಣದಲ್ಲಿ ತಿಳಿದುಬಂದಂತೆ ಇಲ್ಲಿ ಗರೋಡಿಯಾಗುವ ಮೊದಲು ಇಲ್ಲಿಯವರು ಕುಕ್ಕುಡೆ ಗರೋಡಿಗೆ ಹೋಗತ್ತಿದ್ದರು. ಆವಾಗ ಒಂದು ಸಲ ಹೊನ್ನಪ್ಪ ಕುದುರುವಿನ ಬಿಲ್ಲವ ಬೀರ ಕೋಚ ಮನೆಯವರು ಕುಕ್ಕುಡೆ ಗರೋಡಿಗೆ ಪೂಜೆಗೆಂದು ಹೋಗುವಾಗ ಮನಸ್ಸಿನಲ್ಲಿ ತಮ್ಮೂರಲ್ಲೇ ಗರೋಡಿ ಆಗಿದ್ದರೆ ಒಳ್ಳೆಯದಿತ್ತು ಎಂದು ಹಂಬಲಿಸಿದ್ದರು. ಆ ದಿನ ಕುಕ್ಕುಡೆ ಗರೋಡಿಯಲ್ಲಿ ಬೈದರ ದರ್ಶನದಲ್ಲಿ “ನಾವು ಬೀರ ಕೋಚ ಮನೆಗೆ ಬರುತ್ತೇವೆ” ಎಂದು ನುಡಿಯಾಗುತ್ತದೆ. ಅಲ್ಲಿಂದಲೇ ಹಾರಿಸಿದ ತೆಂಗಿನ ಕಾಯಿ ಬೀರ ಕೋಚ ಮನೆಯ ಹತ್ತಿರದಲ್ಲಿದ್ದ ನಾಗಬನದ ಬಳಿ ಬಂದು ಬೀಳುತ್ತದೆ. ನಾಗಬನಕ್ಕೆ ತೊದರೆಯಾಗಬಾರದೆಂದು ಮನೆಯ ಹಿರಿಯರು ಬೈದೇರುಗಳಲ್ಲಿ ಪ್ರಾರ್ಥಿಸಿಕೊಂಡು ಪುನ: ಕಾಯಿ ಹಾರಿಸಿದಾಗ ಅದು ಕುದುರು ಬೈಲಿನ ಮದ್ಯದ ಕೊಳಕ್ಕೆ ಬೀಳುತ್ತದೆ. ಆ ನೀರಿನ ಕೊಳವನ್ನು ಮುಟ್ಟಿ ಅಲ್ಲಿ ಗರೋಡಿ ನಿರ್ಮಾಣವಾಗುತ್ತದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಂಡದಲ್ಲಿ ನಾಗಬ್ರಹ್ಮರ ಬಂಗಾರದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಗಿಂಡೆ ಇಟ್ಟು ಪೂಜಿಸಲಾಗುತ್ತಿದೆ. ಗುಂಡದ ಎಡ ಭಾಗದಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಪಾಪೆಗಳಿವೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಒಬ್ಬ ಬಾಲಕನ ಮರದ ಪಾಪೆಗಳಿವೆ. ಹತ್ತಿರದಲ್ಲಿ ಒಕ್ಕು ಬಲ್ಲಾಳರ ಮಣೆ ಮಂಚವಿದೆ. ಬ್ರಹ್ಮ ಗುಡಿಯ ಹೊರಗೆ ಪಂಚಧೂಮಾವತಿಯ ಮುಖವಿಟ್ಟು ಪೂಜಿಸುವ ಮಣೆ ಮಂಚವಿದೆ. ಧೂಮಾವತಿ ಬಂಟ, ಮೈಸಂದಾಯ, ಜೋಗಿಪುರುಷ ಸಾನಿಧ್ಯವಿದೆ. ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ, ಮಣೆ ಮಂಚದಲ್ಲಿ ಪಂಚ ಶಕ್ತಿಗಳು ಹಾಗೂ ಗುರುಕಂಬವಿದೆ.
ಗರೋಡಿಯ ಅಂಗಣದಲ್ಲಿ ಬಾಗಿಲು ಬೊಬ್ಬರ್ಯ, ಆಯಕಲ್ಲು, ನಾಗಬನ ಹಾಗೂ ಅಶ್ವತ್ತ ಕಟ್ಟೆಗಳಿವೆ.

ಸುರೇಶ್ ಪೂಜಾರಿ

ಗರೋಡಿ ಮನೆ (ಬೀರ ಕೋಚ ಮನೆ)

ಹೊನ್ನಪ್ಪ ಕುದ್ರು ಗರೋಡಿ ಮನೆ (ಬೀರ ಕೋಚ ಮನೆ)ಯ ಸುರೇಶ್ ಪೂಜಾರಿ (53 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿ 2007 ರಿಂದ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಅಜ್ಜ ನಾಗಪ್ಪ ಪೂಜಾರಿಯವರು ಸುಮಾರು 45 ವರ್ಷಗಳ ಕಾಲ ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೃಷ್ಣಪ್ಪ ಪೂಜಾರಿ, ಕೃಷ್ಣ ಪೂಜಾರಿ (ಕುಟ್ಟಿ ಪೂಜಾರಿ) ಇವರು ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ನಿತ್ಯ ಪೂಜೆ, ಆದಿತ್ಯವಾರ ಪೂಜೆ, ವಿಶೇಷ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿಯಂದು ಪೂಜೆ, ಮರುದಿನ ವಿಟ್ಲಪಿಂಡಿಯಂದು ಅನ್ನ ನೈವೇದ್ಯದ ಅಗೆಲು ಸೇವೆ, ಅದರ ಮರುದಿನ ಪಂಬದರಿಂದ ಕಟ್ಟುಕಟ್ಟಳೆಯ ಬೈದರ ನೇಮೋತ್ಸವ ಗರೋಡಿಯ ಒಳಗೆ ನಡೆಯುತ್ತದೆ. ಸೋಣ ಸಂಕ್ರಾಂತಿ ಸಾಮೂಹಿಕ ಹೂವಿನ ಪೂಜೆ, ಹರಕೆಯ ಹೂವಿನ ಪೂಜೆಗಳು, ಕನ್ಯ ಸಂಕ್ರಮಣದಣದಂದು ಕದಿರು ಕಟ್ಟುವ ಕಾರ್ಯಕ್ರಮವಿದೆ. ಸುಬ್ರಮಣ್ಯ ಷಷ್ಠಿಯಂದು ಹೊಸ ಫಸಲಿನ ಅಕ್ಕಿಯ ಅನ್ನ ನೈವೇದ್ಯದ ಸೇವೆ, ಮರುದಿನ ಗರೋಡಿಯ ಅಂಗಣದಲ್ಲಿ ಪರವರಿಂದ ಬೈದರ ನೇಮ, ಮರುದಿನ ಮಾಯಂದಾಳ್ ಕೋಲ ನಡೆಯುತ್ತದೆ. ಶಿವರಾತ್ರಿ ಹಬ್ಬದ ಅಮಾವಾಸ್ಯೆಯ ನಂತರದ 6ನೇ ದಿನ ಅನ್ನ ನೈವೆದ್ಯದ ಸೇವೆ, ಮರುದಿನ ಕುದುರೆ ಬಾಕ್ಯಾರಿನಲ್ಲಿ ಪರವರಿಂದ ಬೈದರ ನೇಮ, ಮರುದಿನ ಶುದ್ಧ ನಡೆಯುತ್ತದೆ. ಶುದ್ಧದ ನಂತರ ಜುಮಾದಿ ಕೋಲ ನಡೆಯುತ್ತದೆ.
ಮೂಡುತೋನ್ಸೆ, ಪಡುತೋನ್ಸೆ, ಕೆಳಾರ್ಕಳಬೆಟ್ಟು, ಬಡಾನಿಡಿಯೂರು ಹಾಗೂ ಭಾಗಷ: ತೆಂಕನಿಡಿಯೂರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ ಊರುಗಳು. ಊರ ಜನರು ಈ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಕಾರ್ಯದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರವರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಆಯವ್ಯಯಗಳನ್ನು ನೋಡಿ ಕೊಳ್ಳಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 161 ಸೆಂಟ್ಸ ಜಾಗವಿದೆ. ಗರೋಡಿಯ ಆಡಳಿತಕ್ಕೆ ಆಡಳಿತ ಮಂಡಳಿಯು 31 ಸೆಂಟ್ಸ ಜಾಗವನ್ನು ಗರೋಡಿಗೆ ಖರೀದಿಸಲಾಗಿದೆ.
ಗರೋಡಿಯು 1980ರಲ್ಲಿ ನವೀಕರಣಗೊಂಡು ಬ್ರಹ್ಮ ಕಲಶ ನಡೆದಿದೆ. ಅದಕ್ಕೆ ಮೊದಲು 1973 ಹಾಗೂ 1963ರಲ್ಲಿಯೂ ನವೀಕರಣಗೊಂಡಿದೆ. ಮುಂದಿನ ದಿನಗಳಲ್ಲಿ ಗರೋಡಿಯನ್ನು ಶಿಲಾಮಯಗೊಳಿಸಿ ನವೀಕರಿಸುವ ಸುಮಾರು 4.5ಕೋಟಿ ರೂಪಾಯಿಗಳ ಯೋಜನೆಯನ್ನು ಈಗಿನ ಆಡಳಿತ ಮಂಡಳಿಯು ಹಮ್ಮಿಕೊಂಡಿದೆ.
ಬಾಬು ಪರವ ಮತ್ತು ಸಂಘಡಿಗರು ಗರೋಡಿಯ ನೃತ್ಯ ವಿಶಾರದರಾಗಿ, ಸಗರೋಡಿಗೆ ಸಂಬಂಧಪಟ್ಟು ಬಿಲ್ಲವ ಒಕ್ಕೂಟ ಇಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರೋಡಿ ತೋನ್ಸೆ,
ಮೂಡುತೋನ್ಸೆ ಗ್ರಾಮ,
ಅಂಚೆ ಕಲ್ಯಾಣಪುರ,
ಉಡುಪಿ ತಾಲೂಕು – ಉಡುಪಿ ಜಿಲ್ಲೆ.

ಪೂ ಪೂಜನೆಯವರು:

ಸುರೇಶ್ ಪೂಜಾರಿ,
ಮೊಬೈಲ್: 944832296

ಮಾಹಿತಿ ಸಂಗ್ರಹಿಸಿದ ದಿನಾಂಕ:

11-10-2022

Boloor Shree Brahma Baidarkala Garodi Marne

ಬೋಳೂರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮರ್ಣೆ.

ಉಡುಪಿಯಿಂದ ಕುಕ್ಕಿಕಟ್ಟೆ, ಅಲೆವೂರು, ಕರ್ವಾಲು, ಕೊಡಂಗಳ ಮಾರ್ಗವಾಗಿ ಬೋಳೂರು ಗರೋಡಿ ತಲುಪ ಬಹುದು.
ಇದು ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ಒಂದು ಬಾಗಿಲನ್ನು ಹೊಂದಿದೆ. ಷಡಾಧಾರ ಮಾಹಿತಿ ಬಗ್ಗೆ ಮಾಹಿತಿ ಇಲ್ಲ.
ಗರೋಡಿಯ ಬ್ರಹ್ಮಗುಡಿಯಲ್ಲಿ ಗುಂಡದೊಳಗೆ ನಾಗಬ್ರಹ್ಮರ ಮೂರ್ತಿ, ಉಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಬಲ ಭಾಗದಲ್ಲಿ ಉಯ್ಯಾಲೆಯಲ್ಲಿ ಕೋಟಿಚೆನ್ನಯರಿಗೆ ಪೂಜೆಯಿದೆ. ಪಕ್ಕದ ಮಂಚದಲ್ಲಿ ಜೋಗಿಪುರುಷರಿಗೆ ಪೂಜೆಯಿದೆ.
ಗುಂಡದ ಬಲಭಾಗದಲ್ಲಿ ಮಣೆ ಮಂಚದಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕುಬಲ್ಲಾಳರಿಗೆ ಪೂಜೆಯಿದೆ.
ಬ್ರಹ್ಮ ಗುಡಿಯ ಚಾವಡಿಯ ಮಂಚದಲ್ಲಿ ಮಾಯಂದಾಲ್, ಪಿಲ್ಚಂಡಿ, ಕೊಲತ ಜುಮಾದಿ, ಮರ್ಲ ಜುಮಾದಿ, ಜುಮಾದಿ ಬಂಟ ದೈವಗಳ ಸಾನಿದ್ಯವಿದೆ.
ಬ್ರಹ್ಮ ಗುಡಿಯ ಎದುರಿಗೆ ಗುರುಸಂಕೇತವಾದ ಗುರುಕಂಭಕ್ಕೆ ಪೂಜೆಯಿದೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಆಯದ ಕಲ್ಲುಗಳಿವೆ.
ಗರೋಡಿ ಮನೆ ಅಶೋಕ ಪೂಜಾರಿಯವರು (ಪ್ರಾಯ 42 ವರ್ಷ) ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಗರೋಡಿ ಮನೆ ಕುಟುಂಬದ ಮೂಲ ಪುರುಷ ಕಿಟ್ಟ ಪೂಜಾರಿಯವರು ಪೂ ಪೂಜನೆಯವರಾಗಿದ್ದರು. ನಂತರ ಅವರ ತಮ್ಮ ಗುತ್ತಿಯಪ್ಪ ಪೂಜಾರಿ, ಕಿಟ್ಟ ಪೂಜಾರಿಯವರ ಮಕ್ಕಳಾದ ಸಂಪ ಪೂಜಾರಿ, ಜಾನು ಪೂಜಾರಿ, ನೀಲಯ್ಯ ಪೂಜಾರಿ, ಸಂಜೀವ ಪೂಜಾರಿ, ಕೃಷ್ಣಪ್ಪ ಪೂಜಾರಿ, ನಾಥು ಪೂಜಾರಿಯವರು ಮಾಡಿ ಕೊಂಡಿದ್ದರು. ಈಗ ಈ ಜವಾಬ್ದಾರಿಯನ್ನು ಅಶೋಕ ಪೂಜಾರಿಯವರು ನಿರ್ವಹಿಸುತ್ತಿದ್ದಾರೆ. ಸುರೇಂದ್ರ ಪೂಜಾರಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ದೀಪಾವಳಿ ಪೂಜೆ, ಸೋಣ ತಿಂಗಳಲ್ಲಿ ಹೂವಿನ ಪೂಜೆ, ಪ್ರತೀ ವರ್ಷ ಏಪ್ರಿಲ್ 6ನೇ ತಾರಿಖಿನಂದು ಪುನರ್ ಪ್ರತಿಷ್ಠಾಪನೆಯ ದಿನದ ಪ್ರಯುಕ್ತ ಹೂವಿನ ಪೂಜೆ ನಡೆಯುತ್ತದೆ. ಅದೇ ವರ್ಷ ಜನವರಿ ನಂತರ ದಿನ ಇಟ್ಟು ನೇಮೋತ್ಸವ ನಡೆಯುತ್ತದೆ. ಮೊದಲನೇ ದಿನ ಅಗೆಲು ಸೇವೆ, ನಂತರ ಮರುದಿನ ಹತ್ತು ಸಮಸ್ತರಿಂದ ಬೈದೇರುಗಳ ನೇಮೋತ್ಸವ, ಮೂರನೇ ದಿನ ಮದ್ಯಾಹ್ನದ ಮೇಲೆ ಮಾಯಂದಾಲ್ ನೇಮ, ನಂತರ ಕಟ್ಟುಕಟ್ಟಲೆಯ ಪಿಲ್ಚಂಡಿ, ಜುಮಾದಿ, ಬಂಟ ಕೋಲ ನಡೆಯುತ್ತದೆ. ಆ ದಿನ ರಾತ್ರಿ ಗುತ್ತುಮನೆತನದ ಪರವಾಗಿ ಗರಡಿ ಮನೆಯವರಿಂದ ಶುದ್ಧದ ಅಗೆಲು ಸೇವೆ ನಡೆಯುತ್ತದೆ.
ಮರ್ಣೆ, ಕರ್ವಾಲು, ಕೊಡಂಗಳ, ಕನರಾಡಿ, ಕೊಜಪಾಡಿ, ಸುಮಾರು 500 ಮನೆಗಳು ಈ ಗರೋಡಿಯ ಕೂಡುಕಟ್ಟಿಗೆ ಸ/ಎರಿದ್ದು ಊರ ಜನರ ವರಡ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳು ನಡೆಯುತ್ತವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಯು 1976ರ ವರೆಗೆ ಮಣ್ಣಿನ ಗೋಡೆ, ಬೈ ಹುಲ್ಲಿನ ಮಾಡನ್ನು ಹೊಂದಿತ್ತು. 06-04-1976ರಲ್ಲಿ ಗರೋಡಿಗೆ ಹಂಚು ಹಾಕಿ ಬ್ರಹ್ಮ ಕಲಶ ನಡೆದಿದೆ. ನಂತರ 25-03-1973 ಮರದ ಬ್ರಹ್ಮ ಗುಂಡ ಹಾಗೂ ಬ್ರಹ್ಮ ಕಲಶ ನಡೆದಿದೆ. 05-06-2006ರಲ್ಲಿ ಓಲಗ ಮಂಟಪದ ರಚನೆಯಾಗಿ 2013 ಏಪ್ರಿಲ್ನಲ್ಲಿ ಸುತ್ತು ಆವರಣ ಗೋಡೆ, ನೆಲಹಾಸಿನ ಕೆಲಸಗಳಾಗಿವೆ.
ಬೊಗ್ಗು ಪರವ ಎಡ್ಮೇರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ, ಬೋಳೂರು,
ಮರ್ಣೆ ಗ್ರಾಮ,
ವಯಾ ಮೂಡುಬೆಳ್ಳೆ,
ಅಂಚೆ ಮರ್ಣೆ,
ಉಡುಪಿ 576120.

ಪೂ ಪೂಜನೆಯವರು:

ಆಶೋಕ ಪೂಜಾರಿ,
ಬೋಳೂರು ಗರೋಡಿ ಮನೆ,
ಮರ್ಣೆ ಗ್ರಾಮ,
ವಯಾ ಮೂಡುಬೆಳ್ಳೆ,
ಅಂಚೆ ಮರ್ಣೆ,
ಉಡುಪಿ 576120.
ಮೊಬೈಲ್ ನಂ: 9844019641.

ಮಾಹಿತಿ ಸಂಗ್ರಹಿಸಿದ ದಿನಾಂಕ:

19-11-2022

Shree Brahma Baidarkala Garodi Mallar

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಮಲ್ಲಾರ್

ಉಡುಪಿಯಿಂದ ಕಾಪು ಮಾರ್ಗವಾಗಿ ಮಲ್ಲಾರ್ ತಲುಪಿದರೆ ಈ ಗರೋಡಿ ಸಿಗುವುದು. ಇದು ಆಯದ ಶಿಲಾಮಯ ಗರೋಡಿಯಾಗಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಮಂಜಾರು ಮನೆ ಮಂಜ ಪೂಜಾರಿಯವರ ಹಿಂದೆ ಬಂದು ಅವರ ಮನೆಯ ಹತ್ತಿರ ಗರೋಡಿಗೆ ಸ್ಥಳ ಕೇಳಿದಾಗ ಅಲ್ಲಿ ಮೊದಲೇ ಬಬ್ಬುವಿನ ಸಾನಿಧ್ಯವಿದ್ದುದರಿಂದ ಅಲ್ಲಿಂದ ಮುಂದೆ ಬಂದು ಈ ಸ್ಥಳದಲ್ಲಿ ಮಲ್ಲಾರು ಗುತ್ತಿನವರ ಮೂಲಕ ಇಲ್ಲಿ ಗರೋಡಿ ಸ್ಥಾಪನೆಯಾಯಿತಂತೆ. ಕೋಟಿ ಚೆನ್ನಯರು ಮಂಜಾರು ಮನೆಗೆ ಬಂದ ಕುರುಹಾಗಿ ಮಂಜಾರು ಮನೆಯಲ್ಲಿ ಇಂದಿಗೂ ಕೋಣೆಯೊಂದರಲ್ಲಿ ಕೋಟಿ ಚೆನ್ನಯರ ಬಾವಚಿತ್ರವನ್ನಿಟ್ಟು ಪೂಜಿಸುವ ಶ್ರೀ ಬ್ರಹ್ಮ ಬೈದರ್ಕಳ ಸನ್ನಿಧಿಯಿದೆ.
ಹಿಂದೆ ಒಂದು ಕಾಲದಲ್ಲಿ ಮಲ್ಲಾರು ಗುತ್ತು ದುಗ್ಗಣ್ಣ ಶೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿದ್ದ ಕಾಲದಲ್ಲಿ ಕುಟುಂಬ ಕಲಹದ ಕಾರಣದಿಂದಾಗಿ ದುಗ್ಗಣ ಶೆಟ್ಟಿಯವರು ಊರಲ್ಲಿಲ್ಲದ ಸಮಯ ಸಾಧಿಸಿ ಅವರ ವಿರೋಧಿ ಪಂಗಡದವರು ಗರೋಡಿಗೆ ಬೆಂಕಿ ಹಾಕಿ ಸುಟ್ಟು ಬಿಟ್ಟರು. ಗರೋಡಿಯಲ್ಲಿದ್ದ ಎಲ್ಲಾ ಪಾಪೆಗಳು ಸುಟ್ಟು ಹೋದರೂ ನಾಗ ಬ್ರಹ್ಮರ ಗುಂಡದ ಪೀಠದ ಕೆಂಡಗಳ ರಾಶಿಯಿಂದ ಎರಡು ಅಶ್ವತ್ಥ ಮರದ ಸಸಿಗಳು ಕಾಣಿಸಿ ಕೊಂಡವಂತೆ. ಮರುದಿನ ಈ ದುರಂತವನ್ನು ನೋಡಿದ ದುಗ್ಗಣ್ಣ ಶೆಟ್ಟಿಯವರು “ಕೋಟಿಚೆನ್ನಯರೇ ನೀವೇನೂ ಸುಟ್ಟು ಹೋಗಲಿಲ್ಲವಲ್ಲ” ಎಂದು ಆಶ್ಚರ್ಯಪಟ್ಟು ಅದೇ ಸ್ಥಾನದಲ್ಲಿ ಪುನ: ಗರೋಡಿ ಕಟ್ಟಿಸಿದರು. ವಿಶೇಷವೆಂದರೆ ಗರೋಡಿಗೆ ಬಿದ್ದ ಬೆಂಕಿ, ಬೆಂಕಿಗೆ ಆಹುತಿಯಾದ ಕೋಟಿಚೆನ್ನಯರ ಪಾಪೆಯ ರುಂಡವು ಗರೋಡಿಗೆ ಬೆಂಕಿ ಕೊಡಿಸಿದ ಮನೆಯವರ ಮುಂದೆ ಹಾರಿ ಬಿದ್ದು ಏಳು ದಿವಸಗಳ ಕಾಲ ಅದರಲ್ಲಿ ಬೆಂಕಿ ಉರಿಯುತ್ತಿತ್ತಂತೆ. ಬೆಂಕಿ ಕೊಟ್ಟ ಮನೆಯವರು ಅನಂತರದ ದಿನಗಳಲ್ಲಿ ಪಡಬಾರದ ಕಷ್ಟವನ್ನು ಅನುಭವಿಸಿ ಕೊನೆಗೆ ಪ್ರಾಯಶ್ಚಿತ್ತ ರೂಪದಲ್ಲಿ ಕೋಟಿಚೆನ್ನಯರ ಏಳು ಅಡಿ ಎತ್ತರದ ಮರದ ಪಾಪೆಗಳನ್ನು ಸೇವೆಯಾಗಿ ಅರ್ಪಿಸಿದರಂತೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ಮಾಡಿನಲ್ಲಿ ಬೆಳ್ಳಿಯ ವಿಷ್ಣುವಿನ ಮೂರ್ತಿ ಇದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಎರಡು ಮಕ್ಕಳ ಮರದ ಪಾಪೆಗಳಿವೆ. ಬಲಬದಿಯಲ್ಲಿ ಕುಜುಂಬ ಕಾಂಜವ ಮತ್ತು ಕುದುರೆಯ ಮೇಲ್ತೆ ಒಕ್ಕು ಬಲ್ಲಾಳರ ಮರದ ಪಾಪೆಗಳಿವೆ. ಮಂಜ ಪೂಜರಿಯವರಿಗೆ ಮರದ ಮಣೆ ಮಂಚವಿದೆ. ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷ, ಜುಮಾದಿ ಮಣೆ ಮಂಚ, ಗುರುಕಂಭವಿದೆ. ಗರೋಡಿಯ ಆವರಣದೊಳಗೆ ಮಾಯಂದಾಲ್, ಪಿಲ್ಚಂಡಿ, ಬಂಟ ದೈವಗಳ ಸಾನಿಧ್ಯ ಮತ್ತು ಅಯ್ಯ ಕಲ್ಲು, ತುಳಸಿಕಟ್ಟೆಗಳಿವೆ.

ಸಂಕಪ್ಪ ಪೂಜಾರಿ

1987 ರಿಂದ ಸಂಕಪ್ಪ ಪೂಜಾರಿ (65 ವರ್ಷ ಪ್ರಾಯ) ಕೋತ ಮಜಲು ಮನೆ ಇವರು ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಇನ್ನೊಬ್ಬರು ಸಂಕಪ್ಪ ಪೂಜಾರಿ, ಅಣ್ಣಪ್ಪ ಪೂಜಾರಿ, ಮಂಜ ಪೂಜಾರಿ, ಮೊದಲಾದವರು ಈ ಸೇವೆ ಮಾಡಿದ್ದರು. ಈಗ ಈ ಗರೋಡಿಯಲ್ಲಿ ಸ್ಥಳ ಪಾತ್ರಿಗಳಿಲ್ಲ. ಮೊದಲು ಶೀನ ಪೂಜಾರಿ, ಸಂಜೀವ ಪೂಜಾರಿ, ಐತ ಪೂಜಾರಿ, ಕೋಟಿ ಪೂಜಾರಿ, ಬಾಪು ಪೂಜಾರಿ ಇವರು ಇಲ್ಲಿಯ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ ಊರು ಸೇರಿ ಗಜ್ಜಯಿ ಪೂಜೆ, ಕದಿರು ಕಟ್ಟುವುದು, ಡಿಸೆಂಬರ್ – ಜನವರಿ ತಿಂಗಳಲ್ಲಿ ಅಗೆಲ್ ಸೇವೆ, ಬೈದೇರುಗಳ ನೇಮ, ಮರುದಿನ ಮಾಯಂದಾಲ್ ಕೋಲ, ಪಿಲ್ಚಂಡಿ ಕೋಲಗಳು ನಡೆಯುತ್ತದೆ. ಮಲ್ಲಾರ್ ಮೂಳೂರು ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರವರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುವರು.
ಬೊಗ್ಗು ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ.

ಜೀರ್ಣೋದ್ಧಾರಕ್ಕೆ ಮೊದಲಿನ ಗರೋಡಿಯ ಚಿತ್ರ. (ಚಿತ್ರ ಕೃಪೆ :ಮಲ್ಲಾರ್ ಗರಡಿ ಫೇಸ್ಬುಕ್ ಪೇಜ್ )

ಗುಂಡದ ಎಡಬಾಗದಲ್ಲಿ ಕೋಟಿ – ಚೆನ್ನಯರ ಆಳೆತ್ತರದ ಪಾಪೆ, ಇಬ್ಬರು ಮಕ್ಕಳ, ಜೋಗಿಪುರುಷರ ಮರದ ಪಾಪೆ ಇದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಮಲ್ಲಾರು, ಮಲ್ಲಾರು ಗ್ರಾಮ,
ಅಂಚೆ ಕಾಪು, ಕಾಪು ತಾಲೂಕು
ಉಡುಪಿ ಜಿಲ್ಲೆ.

ಪೂ ಪೂಜನೆಯವರು:

ಸಂಕಪ್ಪ ಪೂಜಾರಿ
ಮೊಬೈಲ್: 9900683663

ಮಾಹಿತಿ ಸಂಗ್ರಹಿಸಿದ ದಿನಾಂಕ:

29-07-2022

Shree Brahma Baiderugala Garodi, Kalmady

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ, ಕಲ್ಮಾಡಿ.

ಉಡುಪಿಯಿಂದ ಆದಿಉಡುಪಿ ಮಾರ್ಗವಾಗಿ ಮುಂದುವರಿದು ಕಲ್ಮಾಡಿಯಲ್ಲಿ ಎಡಕ್ಕೆ ತಿರುಗಿ ಬಂಕೇರಕಟ್ಟ ಸೇತುವೆಯ ಹತ್ತಿರ ಬಲಕ್ಕೆ ತಿರುಗಿದ ರಸ್ತೆಯಲ್ಲಿ 100 ಮೀಟರ್ ದೂರ ಸಾಗಿದರೆ ಕಲ್ಮಾಡಿ ಗರೋಡಿ ಸಿಗುವುದು.
ಇದು ಆಯದ ಗರೋಡಿಯಾಗಿದ್ದು, 1992ರ ಜೀರ್ಣೋದ್ದಾರದ ಸಮಯದಲ್ಲಿ ಷಡಾಧಾರ ಪ್ರತಿಷ್ಠೆಯೂ ನಡೆದಿದೆ.
ಸುಮಾರು 350 ವರ್ಷಗಳ ಹಿಂದೆ ಕೊಡವೂರು ಗ್ರಾಮಕ್ಕೆ ಸೇರಿದ ಊರುಗಳ ಎಂಟು ಮಂದಿ ಗುರಿಕಾರರು ಮತ್ತು ಹಿರಿಯರು ಗ್ರಾಮದ ಗರೋಡಿಯಾದ ಕಿದಿಯೂರು ಗರೋಡಿಗೆ ಶ್ರಾವಣ ಮಾಸದ ಚೌತಿ ಪೂಜೆಗೆಂದು ಕಾಯಿ ಕಾಣಿಕೆಯೊಂದಿಗೆ ಹೊರಟಿದ್ದರು. ಕಾರಣಾಂತರಗಳಿಂದ, ತುಂಬಿ ಹರಿಯುತಿದ್ದ ನದಿ ದಾಟಿ ಕಿದಿಯೂರಿಗೆ ಹೋಗಬೇಕಾದರೆ ಸಮಯ ಮೀರಿತ್ತೋ.. ಏನು ಕಾರಣವೋ ಗೊತ್ತಿಲ್ಲ, ಇವರನ್ನು ಕಾಯದೆ ಚೌತಿ ಪೂಜೆ ಮುಗಿದು ಹೋಗಿತ್ತು.
ಇದರಿಂದ ತಮಗೆ, ತಮ್ಮ ಗ್ರಾಮಕ್ಕೆ, ಕೂಡುಕಟ್ಟಿಗೆ ಸೂಕ್ತ ಮನ್ನಣೆ ಸಿಗಲಿಲ್ಲವೆಂದು ಬೇಸರಗೊಂಡ ಗುರಿಕಾರರು, ಹಿರಿಯರು ಹಿಂದಿರುಗಿ ಬರುವಾಗ ತಾವೇ ಒಂದು ಹೊಸ ಗರೋಡಿ ನಿರ್ಮಾಣಮಾಡುವ ತೀರ್ಮಾನಕ್ಕೆ ಬಂದರು. ಗರೋಡಿ ಕಟ್ಟಲು ಜಾಗಕ್ಕಾಗಿ ಹಿಡಿದ ಕಾಯಿ ಕಾಣಿಕೆಯೊಂದಿಗೆ ಧಣಿ ಕಲ್ಮಾಡಿ ರಾಯರಲ್ಲಿಗೆ ಹೋದರು. ಇದಕ್ಕೆ ಒಪ್ಪಿದ ರಾಯರು ಹೊಳೆಯ ಪಕ್ಕದ ಬಹುತೇಕ ಹೊಂಡವೇ ಆಗಿದ್ದ ಒಂದೆರಡು ಜಾಗಗಳನ್ನು ಸೂಚಿಸಿದರು.
ಊರ ಹಿರಿಯರು ಒಂದು ಜಾಗದ ಹತ್ತಿರ ಬರುವಾಗ ಅಲ್ಲಿದ್ದ ಒಂದು ಹೊಂಡದಲ್ಲಿ ತಾವರೆ ಎಲೆಯ ಮೇಲೆ ಹಕ್ಕಿಗಳೆರಡು ಕುಳಿತು ಚಿಲಿಪಿಲಿಗುಟ್ಟುತ್ತಿದ್ದವಂತೆ. ಬೈದೇರುಗಳು ಇರುವ ಜಾಗ ಇದುವೇ ಎಂದು ನಂಬಿದ ಹಿರಿಯರು ಬದಿಯಲ್ಲೇ ಹರಿಯುತ್ತಿದ್ದ ಹೊಳೆಯಿಂದ ಮಣ್ಣು ತೆಗೆದು ಹೋಂಡ ತುಂಬಿಸಿ ಕೊಡವೂರು ಗ್ರಾಮದ 13 ಕೂಡುಕಟ್ಟುಗಳಿಗೆ ಸೇರಿದ ಕಲ್ಮಾಡಿ ಗರೋಡಿಯನ್ನು ಕಟ್ಟಿದರು.
ಗರೋಡಿಯ ಗರ್ಭಗುಡಿಯ ಬ್ರಹ್ಮರ ಗುಂಡದಲ್ಲಿ ಗಾಳಿದೇವರು, ಗದ್ದುಗೆಯಲ್ಲಿ ನಾಗಬ್ರಹ್ಮರ ಜೊತೆಗೆ ಬೈದರ ಶಕ್ತಿಗಳು.
ಗುಂಡದ ಎಡಬಾಗದಲ್ಲಿ ಕೋಟಿ – ಚೆನ್ನಯರ ಆಳೆತ್ತರದ ಪಾಪೆ, ಇಬ್ಬರು ಮಕ್ಕಳ, ಜೋಗಿಪುರುಷರ ಮರದ ಪಾಪೆ ಇದೆ.
ಬಲಬಾಗದಲ್ಲಿ ಕುಜುಂಬ ಕಾಂಜವ, ಕುದುರೆಯ ಮೇಲೆ ಕುಳಿತ ಒಕ್ಕು ಬಲ್ಲಾಳ, ಜೋಗಿ ಪುರುಷ, ದೇಯಿ ಬೈದೆತಿ ಮಂಚ ಇದೆ
ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಜುಮಾದಿ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಬಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿ ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ ಹಾಗು ಕೊಳತ ಜುಮಾದಿಯ ಮಣೆಮಂಚಗಳಿವೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ, ಆಯದ ಕಲ್ಲು, ಬೊಬ್ಬರ್ಯ ಸಾನಿದ್ಯವಿದೆ.
ಗರೋಡಿಯ ಹೊರಾಂಗಣದಲ್ಲಿ ನಾಗಬನ, ಅಶ್ವತ್ಥ ಕಟ್ಟೆಗಳಿವೆ

ನಾರಾಯಣ ಪೂಜಾರಿ

ರಾಘವ ಪೂಜಾರಿ

ಗರೋಡಿಮನೆ ನಾರಾಯಣ ಪೂಜಾರಿ ಹಾಗು ಶ್ರೀ ರಾಘವ ಪೂಜಾರಿ ಇವರು ಪೂಪೂಜನೆಯ ಸೇವೆ ಮಾಡುತ್ತಿದ್ದಾರೆ.
ಸದ್ಯಕ್ಕೆ ಇಲ್ಲಿ ಸ್ಥಳ ಪಾತ್ರಿಗಳಿಲ್ಲವಾದರೂ, ಹಿಂದೆ ದಿ। ಮೆನ್ಪ ಪೂಜಾರಿ, ದಿ| ಗುಡ್ಡ ಪೂಜಾರಿ, ದಿ| ಗುರುವ ಮಾಸ್ತರ್, ದಿ| ಬಾಬು ಪೂಜಾರಿ, ದಿ| ಆಂಗರ ಮಾಸ್ತರ್ ಮುಂತಾದ ಹಿರಿಯರುಗಳು ಸ್ಥಳ ಪಾತ್ರಿಗಳಾಗಿ ಬೈದೇರುಗಳ ಸೇವೆ ಸಲ್ಲಿಸಿರುವರು.

ಸ್ಥಳ ಪಾತ್ರಿಗಳಾಗಿ ಸೇವೆ ಸಲ್ಲಿಸಿದ ಹಿರಿಯರಾದ ದಿ। ಮೆನ್ಪ ಪೂಜಾರಿ, ದಿ| ಗುಡ್ಡ ಪೂಜಾರಿ

ಈ ಗರೋಡಿಯ ಕೂಡುಕಟ್ಟಿಗೆ ಕೆಳಗಿನ 13 ಊರುಗಳು ಸೇರಿವೆ.

1. ಕಲ್ಮಾಡಿ 1
2. ಕಲ್ಮಾಡಿ 2
3. ಸಸಿತೋಟ
4. ಬಾಪುತೋಟ
5. ಕೊಳ
6. ತೊಟ್ಟಂ
7. ಉದ್ದಿನಹಿತ್ಳು
8. ಗರ್ಡೆ
9. ಮೂಡುಬೆಟ್ಟು
10. ಕೊಡವೂರು
11. ಅಂಬಲಪಾಡಿ
12. ಕೊಪ್ಪಲತೋಟ
13 ಪಡುಕೆರೆ

ಕೂಡುಕಟ್ಟಿಗೆ ಸೇರಿದ ಮಂದಿ ಗರೋಡಿಯಲ್ಲಿ ನಡೆಯುವ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಆಚರಣೆಗಳಲ್ಲಿ ಬಾಗಿಯಗುತ್ತಾರೆ .
ಗರೋಡಿಗೆ ಸಂಬಂಧಪಟ್ಟು 50 ಸೆಂಟ್ಸ್ ಜಾಗವಿದ್ದು 13 ಕೂಡುಕಟ್ಟುಗಳ ವಂತಿಗೆ, ಒಟ್ಟು ವರಡ, ಸಹಾಯಧನವು ಗರೋಡಿಗೆ ಉತ್ಪತ್ತಿಯ ಮೂಲವಾಗಿರುತ್ತದೆ.
ಗರೋಡಿಯಲ್ಲಿ ನಿತ್ಯ ಪೂಜೆ (ಆಷಾಡ ಮಾಸ ಹೊರತುಪಡಿಸಿ), ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲ್ ಸೇವೆ, ಕಟ್ಟುಕಟ್ಟಳೆ ನೇಮ / ನೇಮೋತ್ಸವ ಇತ್ಯಾದಿ ಪೂಜೆ, ಉತ್ಸವ ಜಾತ್ರೆಗಳು ನಡೆಯುತ್ತವೆ.
ಇತ್ತೀಚೆಗೆ 2009 ರಲ್ಲಿ ಜೀರ್ಣೋದ್ದಾರವಾದ ಈ ಗರೋಡಿಯ ಹಿರಿಯರು ಹೇಳಿದಂತೆ 1906 ರಲ್ಲಿ ಮುಳಿಯ ಮಾಡಿನಿಂದ ಹಂಚಿಗೆ ಬದಲಾವಣೆಯಾಯಿತಂತೆ. ನಂತರ ಕ್ರಮವಾಗಿ 1936, 1966, 1992 ರಲ್ಲಿಯೂ ಗರೋಡಿಯು ಜೀರ್ಣೋದ್ಧಾರಗೊಂಡಿದೆ.
2021 ರಲ್ಲಿ ಗರೋಡಿಯ ಪಕ್ಕದಲ್ಲೇ ಸುಸಜ್ಜಿತವಾದ “ದೇಯಿ ಬೈದೆತಿ” ಸಭಾಗ್ರಹವೂ ನಿರ್ಮಾಣವಾಗಿದೆ.
ನೃತ್ಯ ವಿಶಾರದರಾಗಿ ಈಗ ನೀರೆಯ ಜಯ ಪರವ ಮತ್ತು ಸಂಘಡಿಗರು ಸೇವೆಸಲ್ಲಿಸುತಿದ್ದು, ಹಿಂದೆ ಅವರ ಹಿರಿಯರಾದ ದಿ| ನರಂಗ ಪರವ ಮತ್ತು ದಿ| ಮೆನ್ಕ ಪರವ ಮತ್ತು ಸಂಘಡಿಗರು ಸೇವೆ ಸಲ್ಲಿಸಿದ್ದರು.

ಶಶಿಧರ ಅಮೀನ್

ಗರೋಡಿಯ ಉಸ್ತುವಾರಿ ನೋಡಿಕೊಳ್ಳಲು ಆಡಳಿತ ಸಮಿತಿಯಿದೆ. ಶಶಿಧರ ಅಮೀನ್ ವಡಭಾಂಡೇಶ್ವರ ಇವರು 2024-26 ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ, ಅಂಚೆ ಮಲ್ಪೆ,
ಉಡುಪಿ ತಾಲೂಕು
ಉಡುಪಿ ಜಿಲ್ಲೆ – ೫೭೬೧೦೮

ಪೂ ಪೂಜನೆಯವರು:

ಶ್ರೀ ನಾರಾಯಣ ಪೂಜಾರಿ / ಶ್ರೀ ರಾಘವ ಪೂಜಾರಿ
“ಗರೋಡಿ ಮನೆ” ಕಲ್ಮಾಡಿ,
ಅಂಚೆ ಮಲ್ಪೆ,
ಉಡುಪಿ ತಾಲೂಕು –
ಜಿಲ್ಲೆ – ೫೭೬೧೦೮
9164253197 / 9964069051

ಮಾಹಿತಿ ಸಂಗ್ರಹಿಸಿದ ದಿನಾಂಕ:

28-05-2022