ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬನ್ನಾಡಿ.
ಉಡುಪಿಯಿಂದ – ಬ್ರಹ್ಮಾವರದ ಮೂಲಕ ಕೋಟ ಮೂರುಕೈಯಲ್ಲಿ ಬಲಕ್ಕೆ ಸೈಬ್ರಕಟ್ಟೆ ರಸ್ತೆಗೆ ತಿರುಗಿ ಸುಮಾರು 2.5 ಕಿ. ಮೀ. ನಂತರ ಎಡಕ್ಕೆ ತಿರುಗಿ 1.1 ಕಿ. ಮೀ. ಸಾಗಿದರೆ ಬನ್ನಾಡಿ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯ ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ದೇವಕನ್ಯೆ, ಕೋಟಿ-ಚೆನ್ನಯರು, ಇಬ್ಬರು ಕಿರುಬಂಟರು, ದೇವಕನ್ಯೆಯರ ಮರದ ಮೂರ್ತಿ, ಮೈಸಂದಾಯ ದೈವದ ಮಣೆ ಮಂಚವಿದೆ.
ಗುಂಡದ ಬಲಭಾಗದಲ್ಲಿ ಕಾಂತ ಕರ್ಟು, ಬಂಟ, ಕುದುರೆಯ ಮೇಲೆ ಕುಳಿತ ಪುರುಮಲ ಬಲ್ಲಾಳರ ಮರದ ಮೂರ್ತಿ, ನಂದಿಕೋಣ, ಹಾಗೂ ದೇವ ಬಲ್ಲಾಳರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೈಗುಳಿ, ಕಾಸಿನ ಹೈಗುಳಿ ಹಾಗೂ ಪ್ರಧಾನ ಪಂಜುರ್ಲಿ ದೈವಗಳ ಸಾನಿಧ್ಯವಿದೆ. ಎಡಬದಿಯಲ್ಲಿ ಬೊಬ್ಬರ್ಯನ ಮರದ ಮೂರ್ತಿ, ಎರಡು ಹೈಗುಳಿ ದೈವಗಳ ಮಣೆ ಮಂಚವಿದೆ.
ಪಕ್ಕದಲ್ಲಿ ಮೈಂದಾಳ್ತಿ ಬಂಟ, ಮಂದಾಳ್ತಿ, ಬಾಲಪುರುಷ, ಜುಮಾದಿ, ವರಾಹ ಪಂಜುರ್ಲಿ, ಪ್ರಧಾನ ಚಿಕ್ಕು, ಚಿಕ್ಕು, ಅವತಾರ ಚಿಕ್ಕು, ದೊಟ್ಟಿಕಾಲ ಚಿಕ್ಕು, ಹಳ್ಳಾಡಿ ಚಿಕ್ಕು, ಮಾರಣೆಕಟ್ಟೆ ಚಿಕ್ಕು, ಬಗ್ಗು ಚಿಕ್ಕು, ಹಳೆಯಮ್ಮರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರುಮುಖವಾಗಿ ಯಕ್ಷಿ, ನಂದಿಕೋಣ, ಬಾಲಚಿಕ್ಕು, ಗುರಿಕಂಬ, ಜೋಗಿಪುರುಷ, ಪ್ರಧಾನ ಹೈಗುಳಿ, ಮುರಚೌಂಡೇಶ್ವರ, ಬಂಟ, ನಂದಿಕೋಣದ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಎರಡು ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಹುಲಿರಾಯ, ಬಂಟ, ಶಿವರಾಯ, ಹೈಗುಳಿ, ಕಾಳಮ್ಮನ ಆರಾಧನೆಯಿದೆ.
ಗರೋಡಿಯ ಆವರಣದೊಳಗೆ ಹೈಗುಳಿ, ಕ್ಷೇತ್ರಪಾಲ, ತುಳಸಿಕಟ್ಟೆಗಳಿವೆ.
ಗರೋಡಿಯ ಪಕ್ಕದಲ್ಲಿ ಕೊರತಿ ಬೈಕಾಡ್ತಿ ಪರಿವಾರ ಹಾಗೂ ನೀಚ ಪರಿವಾರ ದೈವಗಳ ಕಟ್ಟೆಗಳಿವೆ.
ರಾಮ ಪೂಜಾರಿ
ರಾಮ ಪೂಜಾರಿಯವರು (55 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಗಣಪ ಪೂಜಾರಿ, ತಿಮ್ಮ ಪೂಜಾರಿ, ವೆಂಕ್ಟು ಪೂಜಾರಿಯವರು ಇಲ್ಲಿ ಅರ್ಚಕರಾಗಿದ್ದರು.
ಈ ಗರೋಡಿಯಲ್ಲಿ ಈಗ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಮೊದಲು ಬನ್ನಾಡಿ ಚಾಂಪ ಪೂಜಾರಿಯವರು, ಬಚ್ಚ ಪೂಜಾರಿ, ಕುರುಡು ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಕಂಬಳ ಗದ್ದೆ ಮನೆ ರಘುರಾಮ ಶೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರಿಗೆ ಮೊದಲು ಮಹಾಬಲ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಶೀನಪ್ಪ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲು ಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆಗಳು ನಡೆಯುತ್ತವೆ. ಮಾರ್ಚ 3ನೇ ತಾರೀಖಿನಂದು ಅಗೆಲು ಸೇವೆ, 4ನೇ ತಾರೀಖಿನಂದು ಹೈಗುಳಿ, ಶಿವರಾಯ ಹಾಗೂ ಚಿಕ್ಕಮ್ಮ ದೈವಗಳಿಗೆ ಗೆಂಡ ಸೇವೆ, ನಂತರ ಪಂಜುರ್ಲಿ ಕೋಲ ನಡೆಯುತ್ತದೆ. ನಂತರ ಶಿವರಾಯ ಕೋಲ (ಹರಕೆಯದ್ದು ಇದ್ದರೆ ಮಾತ್ರ) ನಡೆಯುತ್ತದೆ.
ವಡ್ಡರ್ಸೆ, ಗಿಳಿಯಾರು, ಬೇಳೂರು, ಕೋಟ, ಗುಲ್ವಾಡಿ, ಯಾಳಹಕ್ಲು, ಅಕಿಲಾಡಿ, ಮಧುವನ, ಉಪ್ಪಾಡಿ, ಹಾಗೂ ಬನ್ನಾಡಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ತೆಂಗಿನ ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಭಕ್ತಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. 2015ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ, ಗುಂಡು ಪರವ ಚೇರ್ಕಾಡಿ ಇವರು ಗರೋಡಿಯ ನೃತ್ಯ ವಿಶಾರದರಾಗಿ, ವೆಂಕಟೇಶ ಮಡಿವಾಳ ಸಾಲಿಗ್ರಾಮ ಇವರು ಮಡಿವಾಳರಾಗಿ, ನಾರಾಯಣ ಶೇರಿಗಾರ ವಡ್ಡರ್ಸೆ ವಾದ್ಯದವರಾಗಿ, ಐತ ವಡ್ಡರ್ಸೆ ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬನ್ನಾಡಿ,
ಬನ್ನಾಡಿ ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576225
ಬನ್ನಾಡಿ ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576225
ಗರೋಡಿಯ ಅರ್ಚಕರು:
ರಾಮ ಪೂಜಾರಿ – 9902669188
ಮಾಹಿತಿ ನೀಡಿದವರು :
ರಾಮ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
04.01.2025