Baidashree

Shree Brahma Baidarkala Garodi – Gudebettu Varamballi

ಶ್ರೀ ಬ್ರಹ್ಮಬೈದರ್ಕಳ ಗರೋಡಿ - ಗುಡೆಬೆಟ್ಟು ವಾರಂಬಳ್ಳಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66ರಲ್ಲಿ ಬ್ರಹ್ಮಾವರ ದಾಟಿ ಉಪ್ಪಿನಕೋಟೆಯಲ್ಲಿ ಎಡಕ್ಕೆ ಸಾಲಿಕೇರಿ ಮಾರ್ಗದಲ್ಲಿ ಸುಮಾರು 800ಮೀ. ಒಳಗೆ ಸಾಗಿದರೆ ರಸ್ತೆಯ ಬಲಭಾಗದಲ್ಲಿದೆ ಈ ಗರೋಡಿ.
ಪೂರ್ವಾಭಿಮುಖವಾಗಿರುವ ದ್ವಾರವಿರುವ ಈ ಗರೋಡಿಯ ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹಗುಡಿಯ ಒಳಗೆ ಗುಂಡದಲ್ಲಿ ಕುದುರೆಯ ಮೇಲೆ ಕುಳಿತ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಕುದುರೆಗೆ ಬೆಳ್ಳಿಯ ಕವಚವಿದೆ. ಗುಂಡದ ಮೇಲ್ಬಾಗದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಮಣೆಮಂಚದಲ್ಲಿ ಪಂಜುರ್ಲಿಯ ಪಂಚಲೋಹದ ಮೂರ್ತಿ, ಚೌಂಡಿಯ ಮರದ ಮೂರ್ತಿ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ನಂದಿಕೋಣ, ಜೋಗಿಪುರುಷರ ಮರದ ಮೂರ್ತಿ, ಗುರುಕಂಭ, ಚಿಕ್ಕಮ್ಮನ, ಹೈಗುಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಎರಡು ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ, ಬಂಟ, ಹಾಗೂ ಕಾಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ ದೈವದ ಕಲ್ಲುಕಂಬದ ಗುಡಿ, ತುಳಸೀಕಟ್ಟೆ, ಬಲಿಕಲ್ಲುಗಳಿವೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಬಿ.ಶಂಕರ ಪೂಜಾರಿ

ಬಿ.ಶಂಕರ ಪೂಜಾರಿ (71 ವರ್ಷ) ಯವರು 2014ರಿಂದ ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ನಾರಾಯಣ ಪೂಜಾರಿ, ಮುತ್ತ ಪೂಜಾರಿಯವರು ಇಲ್ಲಿ ಅರ್ಚಕರಾಗಿದ್ದರು.
ನರಸಿಂಹ ಪೂಜಾರಿ (70 ವರ್ಷ) ಹಾಗೂ ಐತ ಪೂಜಾರಿಯವರು ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಹಿಂದೆ ಕೊರಗ ಪೂಜಾರಿ, ಅಣ್ಣಯ್ಯ ಪೂಜಾರಿ, ತೌಡ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ರಾಜಾರಾಮ ಶೆಟ್ಟಿಯವರು ಗರೋಡಿಯ ಮೊಕ್ತೇಸರರು. ಹಿಂದೆ ರಘುರಾಮ ಶೆಟ್ಟಿ, ನಾಗಯ್ಯ ಶೆಟ್ಟಿ, ಸದಾಶಿವ ಮಾಸ್ತರ್ರವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ತುಲಾಭಾರ ಸೇವೆ,ಏಪ್ರಿಲ್ ತಿಂಗಳ 4ನೇ ತಾರೀಖು ಅಗೆಲು, 5ಕ್ಕೆ ನೇಮೋತ್ಸವ, ಜೋಗಿಪುರುಷ, ಮೈಂದಾಳ್ತಿ ಕೋಲ, ಶಿವರಾಯ ಮತ್ತು ಪಂಜುರ್ಲಿ ದೈವಕ್ಕೆ ಎರಡು ವರ್ಷಕ್ಕೊಮ್ಮೆ ಕೋಲ ನಡೆಯುತ್ತದೆ. ಸೋಣ ತಿಂಗಳಲ್ಲಿ ದಿನಾಲು ರಾತ್ರಿ 7-00ರಿಂದ 9-00 ರವರೆಗೆ ಸೋಣಾರತಿ ನಡೆಯುತ್ತದೆ.
ವಾರಂಬಳ್ಳಿ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು, ಗರೋಡಿಯಲ್ಲಿ ನೀರುಸ್ನಾನ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಜನರು ಭಾಗಿಯಾಗುತ್ತಾರೆ. ಊರ ಜನರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
01-04-2015ರಲ್ಲಿ ಗರೋಡಿಯ ಜೀರ್ಣೋದ್ದಾರವಗಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಲ ಬಂಡಾರಿ ಉಪ್ಪಿನಕೋಟೆ ಇವರು ಮಡಿವಾಳರಾಗಿ, ಪ್ರಭಾಕರ ನೀಲಾವರ ಇವರು ವಾದ್ಯದವರಾಗಿ, ಗಣೇಶ ಬ್ರಹ್ಮಾವರ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಗುಡೆಬೆಟ್ಟು, ವಾರಂಬಳ್ಳಿ,
ಬ್ರಹ್ಮಾವರ ಅಂಚೆ,
ಉಡುಪಿ 576213.

ಅರ್ಚಕರು:

ಬಿ.ಶಂಕರ ಪೂಜಾರಿ – 9880780359.

ಮಾಹಿತಿ ನೀಡಿದವರು :

ಬಿ.ಶಂಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025