Skip to main content

Baidashree

Shree Brahma Baidarkala Garodi, Bola

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬೋಳ

ಉಡುಪಿಯಿಂದ ಶಿರ್ವ, ಬೆಳ್ಮಣ್ ನಂತರ ಸುಮಾರು 3ಕಿ. ಮೀ. ನಲ್ಲಿ ಬಲಕ್ಕೆ ತಿರುಗಿ 1.7 ಕಿ. ಮೀ. ದೂರ ಸಾಗಿದರೆ ಬೋಳ ಮಲ್ಲಿಗೆ ಗರೋಡಿ ಸಿಗುತ್ತದೆ.
Bola-Garodi-1
Bola-Garodi-2
Bola-Garodi-3
Bola-4
ಈ ಗರೋಡಿಗೆ ಮೂರು ದ್ವಾರಗಳಿದ್ದು ಮುಖ್ಯ ದ್ವಾರವು ಮೂಡು ಮುಖವಾಗಿದ್ದು ಇನ್ನೆರಡು ದ್ವಾರಗಳು ಬಡಗು ಹಾಗೂ ಪಡುವಣ ದಿಕ್ಕಿಗೆ ಇದೆ.
Bola-Garodi-5
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬಂಗಾರದ ಲೇಪನ ಮಾಡಿದ ನಾಗಬ್ರಹ್ಮರ ಮೂರ್ತಿ ಇದೆ. ಗುಂಡದ ಮದ್ಯದ ಅಂತಸ್ತಿನಲ್ಲಿ ಬಲ್ಲಾಳರಿಗೂ ಗಾಳಿದೇವರಿಗೂ ಪೂಜೆ ಇದೆ.
Bola-Garodi-6
ಗುಂಡದ ಎಡಭಾಗದಲ್ಲಿ ಕೋಟಿ-ಚೆನ್ನಯ ಮತ್ತು ಮಗುವಿನ ಮರದ ಮೂರ್ತಿ, ಹಾಗೂ ಮಾಯಂದಾಳ್ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಮಣೆ ಮಂಚಗಳಿವೆ.
Bola-Garodi-7
ಗುಂಡದ ಬಲಬದಿಯಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ, ಕುಜುಂಬ ಕಾಂಜವರ ಹಾಗು ಜೋಹೈ ಪುರುಷರ ಮರದ ಮೂರ್ತಿಗಳಿವೆ.
Bola-Garodi-8
ಬ್ರಹ್ಮಗುಡಿಯ ಹೊರಗೆ ಗುರುಕಂಬವಿದೆ.
Bola-Garodi-9
ಗರೋಡಿಯ ಹೊರಗೆ ಆವರಣದೊಳಗೆ ಬೊಳ್ಳಿ ಶಾಂತಿ ಮರದ ಕಟ್ಟೆ, ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ.
Bola-Garodi-10
ಗರೋಡಿಯ ಆವರಣದೊಳಗೆ ಗುಡಿಯಲ್ಲಿ ಹುಲಿಚಾಮುಂಡಿ ದೈವದ ಸಾನಿಧ್ಯವಿದೆ. ಗರೋಡಿಯ ಹೆಬ್ಬಾಗಿಲ ಹೊರಗಿನ ಗುಡಿಯಲ್ಲಿ ಕಲ್ಕುಡ, ಕಲ್ಲುರ್ಟಿ ಹಾಗೂ ತೂಕತ್ತರಿ ದೈವಗಳ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ನಾಗಬನವಿದೆ.
Bola-Garodi-11
Bola-Garodi-12
Bola-Garodi-13
ಗರೋಡಿಗೆ ಹತ್ತಿರದಲ್ಲೇ ಇರುವ ಒಂದು ಗುಡಿಯಲ್ಲಿ ಧೂಮಾವತಿ, ಸತ್ಯದೇವತೆ, ಮೈಸಂದಾಯ ಹಾಗೂ ಬಂಟ ದೈವಗಳ ಸಾನಿಧ್ಯವಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಪಂಜುರ್ಲಿ, ವರ್ತೆ ಪಂಜುರ್ಲಿ ದೈವಗಳ ಸಾನಿಧ್ಯವಿದೆ.
Bola-Garodi-14
Bola-Garodi-15
ಪಕ್ಕದಲ್ಲಿಯೇ ರಕ್ತೇಶ್ವರಿ ಬನ ಹಾಗೂ ತೀರ್ಧಭಾವಿಗಳಿವೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕೋಟಿ-ಚೆನ್ನಯರು ಬೆಳ್ಮಣ್ ಗ್ರಾಮದ ಕೋಡಿಮಾರ್ ಪುಂಚಡ್ಕದ ಹತ್ತಿರ ಕುದುರೆಮಾರ್ ಮತ್ತು ನೆಲಮಾರ್ ಎಂಬ ಗದ್ದೆಗಳಲ್ಲಿ ತಮ್ಮ ಸುರಿಯದಿಂದ ನೀರು ತೆಗದ ಇತಿಹಾಸವಿದೆ. ಅಲ್ಲಿನ ಗ್ರಾಮ ದೇವತೆಯಾದ ದುರ್ಗಾಪರಮೇಶ್ವರಿ ದೇವಿಯ ಹತ್ತಿರ ಇಲ್ಲಿ ಗರಡಿ ಕಟ್ಟಿಸ ಬಹುದೇ ಎಂದು ಕೇಳಿದಾಗ, ದೇವಿಯು ಪ್ರತ್ಯಕ್ಷಳಾಗಿ, ಇದು ಪುಟ್ಟ ಗ್ರಾಮ ಇಲ್ಲಿಂದ ಮೂಡು ದಿಕ್ಕಿಗೆ ಬೋಳ ಎಂಬ 6 ಕರೆಯ ದೊಡ್ಡ ಗ್ರಾಮವಿದೆ ನೀವು ಅಲ್ಲಿಗೆ ಹೋಗಿ ಇಲ್ಲಿಯ ಭಕ್ತರ ಹರಕೆಯಾಗಿ ನಿಮ್ಮ ಸನ್ನಿಧಾನಕ್ಕೆ ಸಂದಾಯವಾಗುವಂತೆ ಮಾಡುತ್ತೇನೆ ಎಂದು ವಾಗ್ದಾನವಿತ್ತರು. ಅಲ್ಲಿಂದ ಮುಂದುವಿರಿದು ಕೋಟಿ-ಚೆನ್ನಯರು ಮೂಡು ದಿಕ್ಕಿಗೆ ಬಂದು ಜಲಪಾದೆ ನರಸಿಂಹ ದೇವರ ಬೇಟಿಮಾಡಿ ಬೊಳ್ಳಿಶಾಂತಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾರೆ. ಅದೇ ಸಮಯದಲ್ಲಿ ಬೋಳ ಪರ್ತಿಮಾರು ಗುತ್ತುವಿನ ದುಗ್ಗಪ್ಪ ಶೆಟ್ಟರ ಮನೆಗೆ ನೆಂಟರು ಬಂದಾಗ ಅವರ ಮನೆಯಲ್ಲಿ ಒಂದು ಮುಷ್ಠಿ ಅಕ್ಕಿಯೂ ಇರುವುದಿಲ್ಲ. ಅಕ್ಕಿ ತರಲು ಜಲಪಾದೆಗೆ ಹೊರಟ ದುಗ್ಗಪ್ಪ ಶೆಟ್ಟಿ ದಾರಿಯಲ್ಲಿ ಬೊಳ್ಳಿಶಾಂತಿ ಮರದ ಕೆಳಗೆ ಕುಳಿತ ತರುಣರೊಂದಿಗೆ ತನ್ನ ಮನದ ನೋವನ್ನು ಹಂಚಿಕೊಂಡರು. ಆಗ ಕೋಟಿ-ಚೆನ್ನಯರು ದಾದ ಪನ್ಪರ್ ಗುತ್ತಿನಾರೇ ಅಟ್ಟೊಡು ಅರಿತ ಮುಡಿ ಉಂಡು ದಿಕ್ಕೆಲುಡು ಉರ್ಕಾರೊಂದು ಉಂಡು ಎಂದು ಹೇಳುತ್ತಾರೆ. ಅವಳಿ ವೀರರ ಮಾತಿನಂತೆ ಮನೆಗೆ ಹಿತಿರುಗಿದ ದುಗ್ಗಪ್ಪ ಶೆಟ್ಟಿಗೆ ಆಶ್ಚರ್ಯ ಕಾದಿತ್ತು. ಕೋಟಿಚೆನ್ನಯರ ಮಾತು ನಿಜವಾಗಿತ್ತು. ತಕ್ಷಣವೇ ಬೊಳ್ಳಿಶಾಂತಿ ಮರದ ಬಳಿ ಬಂದು ನೋಡಿದಾಗ ಕೋಟಿ-ಚೆನ್ನಯರು ಅಲ್ಲಿ ಇರುವುದಿಲ್ಲ. ದುಗ್ಗಪ್ಪ ಶೆಟ್ಟಿಯವರು ಜಲಪಾದೆ ತಂತ್ರಿಯವರ ಮನೆಗೆ ಬಂದು ಕೇಳಿದಾಗ ಕೋಟಿ-ಚೆನ್ನಯರಿಗೆ 16 ಕೋಲಿನ ಆಯದ ಗರೋಡಿ ಕಟ್ಟುವಂತೆ ಆಜ್ಙಾಪಿಸುತ್ತಾರೆ. ಆ ಗರೋಡಿಯೇ ಇದೀಗ ಬೋಳ ಮಲ್ಲಿಗೆ ಗರೋಡಿ ಎಂದು ಪ್ರಸಿದ್ದವಾಗಿದೆ.
Bola-Garodi-16

ಹರೀಶ್ ಪೂಜಾರಿ

ಹರೀಶ್ ಪೂಜಾರಿ (61 ವರ್ಷ) ಇವರು ಈ ಗರೋಡಿಯ ಪೂ ಪೂಜನೆಯವರು. ಇವರ ಮೊದಲು ಶ್ರೀಧರ ಕರ್ಕೆರ, ಅಂತಪ್ಪ ಪೂಜಾರಿ, ಚೆನ್ನು ಪೂಜಾರಿ, ಮೊದಲಾದ ಹಿರಿಯರು ಸೇವೆ ಮಾಡಿದ್ದರು.
ರಾಜೇಶ್ ಪೂಜಾರಿ (42 ವರ್ಷ) ರಮೇಶ್ ಪೂಜಾರಿ (43 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಹಿಂದೆ ನೀಲಯ್ಯ ಪೂಜಾರಿ, ಪೋಂಕ್ರ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಪರ್ತಿಮಾರು ಗುತ್ತು ಸುಬ್ಬಯ್ಯ ಶೆಟ್ಟಿಯವರು ಕುಟುಂಬಸ್ತರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಗೋಪಾಲ ಶೆಟ್ಟಿ ಬೋಳ, ಪರಾಡಿ ಇವರು ಅಧ್ಯಕ್ಷರಾಗಿ, ವಿಕಾಶ ಶೆಟ್ಟಿಯವರು ಕಾರ್ಯದರ್ಶಿಯಾಗಿ, ಜಯರಾಮ ಸಾಲ್ಯಾನ್ ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಪಂಚ ಕಜ್ಜಾಯ ಸೇವೆ, ಕದಿರು ಕಟ್ಟುವುದು, ಜಾರ್ದೆ ತಿಂಗಳ ಹುಣ್ಣಿಮೆಯ ಮೊದಲ ದಿನ ಅಗೆಲು ಸೇವೆ, ಹುಣ್ಣಿಮೆಯಂದು ಬೈದರ್ಕಳ ನೇಮ, ಮರುದಿನ ಜೋಗಿ ಪುರುಷ, ಮಾಯಂದಾಲ್ ಹಾಗೂ ಪಿಲ್ಚಂಡಿ ಕೋಲಗಳು ನಡೆಯುತ್ತದೆ.
ಈ ಗರೋಡಿಯ ಕೂಡುಕಟ್ಟಿನಲ್ಲಿ 16 ಗುತ್ತು ಹಾಗೂ 16 ಬರ್ಕೆಗಳಿವೆ. ಮರಿಮಾರು ಕರೆ, ಪಾಲಿಂಗೇರಿ, ಪಿಲಿಯೂರು, ಪೊತರ‍್ಮ,, ಪರಾರಿ ಕರೆ, ಬೋಳ, ಬೆಳ್ಮಣ್ಣು, ಜಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.
ಗರೊಡಿಗೆ 2 ಎಕರೆ 40 ಸೆಂಟ್ಸ ಜಾಗವಿದ್ದು 2019ರಲ್ಲಿ ಜೀರ್ಣೋದ್ಧಾರಗೊಂಡಿದೆ.
ನಾರಾಯಣ ಪರವ ಶಿರ್ತಾಡಿ ಇವರು ಗರೋಡಿಯ ನೃತ್ಯ ವಿಶಾರದರಾಗಿ, ಬೊಗ್ಗು ಮಡಿವಾಳ ಪಾಲಿಂಗೇರಿ ಇವರು ಮಡಿವಾಳರಾಗಿ, ಸೀತಾರಾಮ ಪೂಜಾರಿ ಬರಾಬೈಲು ಇವರು ವಾಧ್ಯದವರಾಗಿ, ಬಾಬು ಬೋಳ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ವಠಾರದಲ್ಲಿ ಗರಡಿ ಪ್ರಂಡ್ಸ ಬೋಳ, ಬೋಳ ಮಲ್ಲಿಗೆ ಭಜನಾ ಮಂಡಳಿ, ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘ, ವಿಶ್ವ ಹಿಂದೂ ಪರಿಷತ್ ಬೋಳ ಘಟಕ ಮೊದಲಾದ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ.
Bola-Garodi-17

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬೋಳ,
ಕಾರ್ಕಳ ತಾಲೂಕು,
ಉಡುಪಿ – 574116

ಗರೋಡಿಯ ಪೂ ಪೂಜನೆಯವರು:

ಶ್ರೀ ಹರೀಶ್ ಪೂಜಾರಿ – 9945944302

ಮಾಹಿತಿ ನೀಡಿದವರು:

ಹರೀಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ.ಮಾಧವ ಆದಿಉಡುಪಿ
ಹರೀಶ್ ಎಮ್.ಕೆ.ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

19-06-2025