Baidashree

Shree Brahma Baidarkala Garodi, Palli

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಳ್ಳಿ

ಉಡುಪಿ ಮೂಡುಬೆಳ್ಳೆ ಮಾರ್ಗವಾಗಿ ಪಳ್ಳಿ ತಲುಪಿ ಈ ಗರೋಡಿಗೆ ಹೋಗಬಹುದು.
Palli-Garadi-1
Palli-Garadi-2
Palli-Garadi-3
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾಗಿರುವ ಮುಖ್ಯದ್ವಾರ ಬಡಗು ಮುಖವಾಗಿರುವ ಇನ್ನೊಂದು ದ್ವಾರವಿದೆ. ಬ್ರಹಗುಡಿಯು ಬಡಗು ಮುಖವಾಗಿದೆ. ಮಂಗಳವಾರ ಹಾಗೂ ಸಂಕ್ರಾಂತಿಯ ದಿನಗಳಲ್ಲಿ ಬೆಳಿಗ್ಗೆ ಈ ಗರೋಡಿಯಲ್ಲಿ ಇತರ ಭಕ್ತಿಗೀತೆಗಳಿಗೆ ಬದಲಾಗಿ ಕೋಟಿ-ಚೆನ್ನಯರ ಪಾರ್ಧನವನ್ನು ದ್ವನಿವರ್ದಕದಲ್ಲಿ ಹಾಕುವುದು ಈ ಗರೋಡಿಯ ವಿಶೇಷತೆ.
Palli-Garadi-4
Palli-Garadi-5
ಗರೋಡಿಯ ಬ್ರಹ್ಮಗುಡಿಯ ಒಳಗೆ ಮರದ ಹಿತ್ತಾಳೆ ಕವಚವಿರುವ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಪ್ರಭಾವಳಿಯನ್ನು ಹೊಂದಿದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
Palli-Garadi-6
ಗುಂಡದ ಎಡಬದಿಯಲ್ಲಿ ಉಯ್ಯಾಲೆಯಲ್ಲಿ ಕೋಟಿ-ಚೆನ್ನಯರಿಗೆ ಪೂಜೆ ಇದೆ. ಪಕ್ಕದಲ್ಲಿ ಜೋಗಿ ಪುರುಷರ ಮಣೆ ಮಂಚವಿದೆ.
Palli-Garadi-7
ಗುಂಡದ ಬಲಬದಿಯಲ್ಲಿ ಉಯ್ಯಲೆಯಲ್ಲಿ ಕಾಂಜವರ ಹಾಗೂ ಪಕ್ಕದಲ್ಲಿ ಪಿಲ್ಚಂಡಿ ದೈವದ ಮಣೆಮಂಚವಿದೆ.
Palli-Garadi-8
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Palli-Garadi-9
ಗರೋಡಿಯ ಹೊರಗೆ ಅಂಗಣದಲ್ಲಿರುವ ಕಲ್ಲಿನ ಕಂಬದ ಮೇಲಿರುವ ಗುಡಿಯಲ್ಲಿ ಮರ್ಲು ಜುಮಾದಿ ಹಾಗೂ ಬಂಟರ ಸಾನಿದ್ಯವಿದೆ.
ಊರಿನ ಬೂದ ಪೂಜಾರಿ ಎಂಬವರ ಮನೆಯಲ್ಲಿ ಪುಚ್ಚೊಟ್ಟುವಿನ ಭೂತ ಸದಾಕಾಲ ಕಿರುಕುಳ ಕೊಡುತ್ತಿತ್ತು. ಮನೆಯವರು ಈ ಭೂತದ ಉಪಟಳ ತಡೆಯಲಾರದೆ ಬೈದೇರುಗಳಲ್ಲಿ ದೂರಿತ್ತಾಗ ಅವರ ಅಣತಿಯಂತೆ ಗರೋಡಿಯಲ್ಲಿ ಈ ಕಂಬದಲ್ಲಿ ಆ ಭೂತವನ್ನು ನೆಲೆಗೊಳಿಸಿದ ನಂತರ ಆ ಭೂತದ ಉಪದ್ರವ ನಿಂತು ಹೋಯಿತಂತೆ.
Palli-Garadi-10
ಗರೋಡಿಯ ಬಲಬದಿಯಲ್ಲಿರುವ ಗುಡಿಯಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ.
Palli-Garadi-11
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ.
ಸ್ಥಳ ಪುರಾಣದಲ್ಲಿ ತಿಳಿಯುವಂತೆ ಪೂರ್ವದಲ್ಲಿ ಕೋಟಿಚೆನ್ನಯರು ಪಳ್ಳಿ ಗ್ರಾಮದ ನಿಂಜೂರಿಗೆ ಬಂದು ಅಲ್ಲಿ ಕೊಡಮಣಿತ್ತಾಯ ದೈವವಿದ್ದುದರಿಂದ ಮುಂದೆ ಸಾಗಿ ಪಳ್ಳಿಯ ಪಾದೆ (ಶಿಲೆ ಕಲ್ಲು) ಯ ಮೇಲೆ ಸುರಿಯ ಊರಿ ಗುರುತು ಹಾಕಿದರು. ಅನಂತರ ಕೋಟಿ-ಚೆನ್ನಯರು ಪಳ್ಳಿಯ ಪಿಜಕೊಡಂಗೆ ಮನೆಗೆ ಬಂದು ಕುಡಿಯಲು ನೀರು ಕೇಳಿದಾಗ ಅವರು ಹಾಲುಕೊಟ್ಟು ಸತ್ಕರಿಸಿದರು. ಅಲ್ಲಿ ಸಂತೋಷದಿಂದ ಕೋಟಿ-ಚೆನ್ನಯರು ಆ ಮನೆಯಲ್ಲಿ ಹಾಲು ಉಕ್ಕಿ ಬರಲಿ ಎಂದು ವರವಿತ್ತು ಮುಂದೆ ಗುತ್ತಿನ ಮನೆಯಾದ ದೊಡ್ಡ ಮನೆಗೆ ಹೋಗಿ ಊಟ ಕೇಳಿದರು. ಅವರು ತಂಗುಳನ್ನ ಮತ್ತು ನೀರು ಮಾವಿನ ಕಾಯಿಯನ್ನು (ನೀರುಪ್ಪಡ್) ಕೆಸುವಿನ ಎಲೆಯಲ್ಲಿ ಹಾಕಿ ಕೊಟ್ಟದ್ದಕ್ಕೆ ಈ ಮನೆಯಲ್ಲಿ ಸದಾ ದಾರಿದ್ರ ತುಂಬಿ ಬರಲಿ ಎಂದು ಶಪಿಸಿ ಅದನ್ನು ತೆಗೆದು ಬಿಸಾಡಿದರು. ಈ ಸ್ಥಳದಲ್ಲಿ ಸದಾಕಾಲ ಕೆಸು ಬೆಳೆಯುತ್ತಿದೆ. ಬೈದ್ಯರ ಅಪ್ಪಣೆಯಂತೆ ಅಲ್ಲಿಂದ ಕೆಸುವನ್ನು ಈಗಲೂ ಈ ಗರೋಡಿಗೆ ಪ್ರತೀ ವರ್ಷ ತರಲಾಗುತ್ತಿದೆ.
Palli-Garadi-12
Palli-Garadi-13
Palli-Garadi-14
ಗರೋಡಿಯ ಪಕ್ಕದಲ್ಲಿ ಶಿಲಾಮಯವಾದ ಗರೋಡಿ ಮನೆಯಿದೆ.
Palli-Garadi-15

ಸತೀಶ್ ಪೂಜಾರಿ

ಗರೋಡಿಮನೆ ಸತೀಶ್ ಪೂಜಾರಿ(50 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಇವರ ಅಜ್ಜ ಶೇಖರ ಪೂಜಾರಿಯವರು, ಅವರಿಗೂ ಮುಂದೆ ಅವರ ತಂದೆ ದೇಜು ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡುತ್ತಿದ್ದರು. ದೇಜು ಪೂಜಾರಿಯವರಿಗೆ ಮೊದಲು ಈ ಗರೋಡಿ ಹಾಗೂ ಅದರ ಜಾಗವೆಲ್ಲವೂ ಊರ ಸೆಟ್ಟರೊಬ್ಬರ ಒಕ್ಕಲಿನಲ್ಲಿದ್ದು, ಗರೋಡಿ ಮನೆಯಲ್ಲಿ ಒಕ್ಕಲಿದ್ದವರು ಪೂಜೆ ಮಾಡುತ್ತಿದ್ದರು. ನಂತರ ದೇಜು ಪೂಜಾರಿಯವರು ಅವರ ಕಾಲದಲ್ಲಿ ಈ ಜಾಗವನ್ನು ಖರೀಧಿ ಮಾಡಿದ್ದರು.
ಪೂ ಪೂಜನೆಯ ಸತೀಶ್ ಪೂಜಾರಿ ಹಾಗೂ ರಾಜೇಶ್ ಪೂಜಾರಿ (48 ವರ್ಷ) ಇವರು ಈ ಗರೋಡಿಯ ಬೈದ್ಯರ ದರ್ಶನದ ಸ್ಥಳ ಪಾತ್ರಿಗಳು. ಇವರಿಗೆ ಮೊದಲು ರಾಜು ಪೂಜಾರಿ, ಶೀನ ಪೂಜಾರಿ, ಬೇಡು ಪೂಜಾರಿ, ಕಾಳು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಲಾಗಿದ್ದರು.
ಪೆಜಕೊಡಂಗೆ ಜಗಧೀಶ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವ ಕ್ರಮವಿದೆ. ಮಕರ ಸಂಕ್ರಾಂತಿಯಂದು ದಿನವಿಟ್ಟು ಜನವರಿ ಪೆಭ್ರವರಿ ತಿಂಗಳಲ್ಲಿ ಒಂದು ದಿನ ಭಂಡಾರ ತಂದು ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಕೋಲ ನಡೆಯುತ್ತದೆ. ಮರುದಿನ ಬೈದೇರುಗಳಿಗೆ ಅನ್ನ ನೈವೇದ್ಯದ ಅಗಲು ಸೇವೆ, ಅದರ ಮರುದಿನ ಬೈದರ್ಕಳ ನೇಮ, ಮರುದಿನ ಮಾಯಂದಾಲ್ ನೇಮ, ಜೋಗಿಪುರುಷ ಕೋಲ ನಡೆದು ಭಂಡಾರ ವಾಪಾಸು ಹೋಗುವುದು. ಇದಲ್ಲದೆ ಹರಕೆಯ ಅಗಲು ಸೇವೆ, ಹೂವಿನ ಪೂಜೆಗಳು ನಡೆಯುತ್ತವೆ.
ಎರಡು ವರ್ಷಕ್ಕೊಮ್ಮೆ ಭಂಡಾರ ಹೊರಟು ನಿಂಜೂರಿನಲ್ಲಿ ದೊಂಪದ ಬಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ರಾತ್ರಿಯಿಡೀ ಮಾಯಂದಾಲ್‌ಗೆ ಹೊರತುಪಡಿಸಿ ಎಲ್ಲಾ ದೈವಗಳ ಕೋಲ ನಡೆದು ಬೆಳಗ್ಗೆ ಭಂಡಾರ ವಾಪಾಸ್ಸು ಬರುವುದು.
ಪಳ್ಳಿ, ನಿಂಜೂರು, ಕುಂಟಾಡಿಯ ಜನರು ಈ ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮಂಗಳವಾರದಂದು ತುಪ್ಪದ ದೀಪ ಸೇವೆ ಇತ್ಯಾದಿ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಉಗ್ಗಪ್ಪ ಪರವ ಕೆರ್ವಾಶೆ, ಶೇಖರ ಪರವ ಪಾಡಿಗಾರ, ಗೋಪಾಲ ಪರವ ಪಳ್ಳಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ರಮೇಶ ಮಡಿವಾಳ, ಸತೀಶ ದೇವಾಡಿಗ ಪಳ್ಳಿ ಇವರು ಕೊಂಬಿನವರಾಗಿ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Palli-Garadi-16

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಳ್ಳಿ
ಪಳ್ಳಿ ಅಂಚೆ
ಕಾರ್ಕಳ ತಾಲೂಕು

ಪೂ ಪೂಜನೆಯವರು:

ಸತೀಶ್ ಪೂಜಾರಿ – 9686125103

ಮಾಹಿತಿ ನೀಡಿದವರು:

ಸತೀಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ.ಮಾಧವ ಆದಿಉಡುಪಿ
ಹರೀಶ್ ಎಮ್.ಕೆ.ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025