Baidashree

Saparivaara Arbhaka Dhareshwari Sahita Shree Brahma Baidarkala Garodi , Nayarabettu, Shiroor Muddumane

ಸಪರಿವಾರ ಅರ್ಭಕ ಧಾರೇಶ್ವರೀ ಸಹಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನಾಯರ ಬೆಟ್ಟು.ಶೀರೂರು ಮುದ್ದುಮನೆ

ಉಡುಪಿಯಿಂದ ಶೀರೂರು ಮೂರುಕೈ ತಲುಪಿ ಮೂರುಕೈ ಜಂಕ್ಷನ್ ನಿಂದ 300ಮೀ. ದೂರದಲ್ಲಿ ಬಲಕ್ಕೆ ತಿರುಗಿ ಸುಮಾರು 3.03 ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಈ ಗರೋಡಿಯು ಸಾಸ್ತಾನದ ಗೋಳಿಗರೋಡಿ ಸ್ಥಾಪನೆಯಾದ ಅನಂತರ ಸ್ಥಾಪನೆಯಾಯಿತಂತೆ. ಇಲ್ಲಿ ಪಂಜುರ್ಲಿ ದೈವವು ಪ್ರಾಮುಖ್ಯ ಪಡೆದಿದೆ. ಹೊಳೆಯ ಮಾರ್ಗವಾಗಿ ಗೋಳಿ ಗರೋಡಿಯಿಂದ ಈ ಊರಿಗೆ ಬಂದ ಪಂಜುರ್ಲಿಯ ಪ್ರಭಾವದಿಂದ ಇಲ್ಲಿ ಗರೋಡಿ ಸ್ಥಾಪನೆಯಾಗಿ ಎಲ್ಲಾ ದೈವಗಳನ್ನು ಮಣೆ ಮಂಚದಲ್ಲಿ ಪೂಜಿಸುತ್ತಿದ್ದರಂತೆ. ಮುಂದೆ ಗರೋಡಿ ಮನೆಯವರಿಗೆ ವಿವಾದ ಬಂದು ಒಂದು ಕಡೆಯವರು ಮಣೆಮಂಚಗಳನ್ನು ಹೊಳೆಗೆ ಬಿಸಾಡಿದರಂತೆ. ಗರೋಡಿ ಪೂಜಾರಿಯು ಹೊಳೆಗೆ ಸ್ಥಾನಕ್ಕೆಂದು ಹೋದಾಗ ಅಲ್ಲಿ ಮಣೆಮಂಚಗಳನ್ನು ಕಂಡು ಗಾಬರಿಗೊಂಡು ಆಗಿನ ಮೊಕ್ತೇಸರರನ್ನು ಹೊಳೆ ಬದಿಗೆ ಕರೆಸಿದರು. ಹೊಳೆಗೆ ಇಳಿದಾಗ ಅವರಿಗೆ ಮಣೆಮಂಚವು ನೀರಿನಲ್ಲಿ ಮೂರು ಸುತ್ತು ಬಂದಿತಂತೆ. ಮನೆಗೆ ತೆರಳಿದ ಮೊಕ್ತೇಸರರಿಗೆ ತೀವ್ರ ಅಸೌಖ್ಯವಾಗಿ ಕೊನೆಗೆ ಶಿವರಾಯ ದೈವದ ದರ್ಶನ ಮಾಡಿ ಕೇಳಿದಾಗ ಗರೋಡಿ ಸ್ಥಾಪನೆ ಮಾಡಬೇಕೆಂದು ಅಪ್ಪಣೆಯಾಯಿತಂತೆ. ಆ ಪ್ರಕಾರ ಪುನ: ಗೋಳಿಗರೋಡಿಗೆ ಹೋಗಿ ಅಲ್ಲಿಂದ ಸ್ವಲ್ಪ ಮಣ್ಣನ್ನು ತಂದು ಪಂಜುರ್ಲಿ, ನಾಗಬ್ರಹ್ಮ ಹಾಗೂ ಬೈದೇರುಗಳನ್ನು ಇಲ್ಲಿ ನೆಲೆಗೊಳಿಸಲಾಯಿತಂತೆ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಹಾಗೂ ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಇಬ್ಬರು ಬಲ್ಲಾಳರ ಮಣೆಮಂಚ, ಪಕ್ಕದಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರ ಮಣೆಮಂಚಗಳಿವೆ. ಗುಂಡದ ಹಿಂಭಾಗದಲ್ಲಿ ದೇಯಿ ಬೈದೆತಿಯ ಮಣೆಮಂಚಗಳಿವೆ.
ಗುಂಡದ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಚೌಂಡಿ, ಮೈಂದಾಳ್ತಿ ಮಣೆಮಂಚಗಳಿವೆ. ಪಕ್ಕದಲ್ಲಿ ಪಂಜುರ್ಲಿ ದೈವದ ಗದ್ದಿಗೆ ಇದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮೂರ್ತಿ ಇದೆ.
ಗರೋಡಿಯ ಹೊರಗೆ ಗುಡಿಯಲ್ಲಿ ಶಿವರಾಯ ದೈವದ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸಿ ಕಟ್ಟೆ, ಬಲಿಕಲ್ಲುಗಳಿವೆ.

ಕೃಷ್ಣ ಪೂಜಾರಿ

2010ರಿಂದ ಕೃಷ್ಣ ಪೂಜಾರಿಯವರು (48 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ಗೋವಿಂದ ಪೂಜಾರಿ, ಕಾಳಪೂಜಾರಿಯವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಬೈದ್ಯರ ದರ್ಶನ ಪಾತ್ರಿಗಳಿಲ್ಲ.
ಶಂಕರ ಶೆಟ್ಟಿ (ಬಚ್ಚು ಶೆಟ್ಟಿ) ಇವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ಆನಂದ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಕಾಯ್ದ ಪೂಜೆ, ದರ್ಶನ ಸೇವೆ, ಏಪ್ರಿಲ್ ತಿಂಗಳ 11ನೇ ತಾಖಿನಂದು ಗೆಂಡದ ಹಬ್ಬಗಳು ನಡೆಯುತ್ತವೆ.
ಶೀರೂರು ಮುದ್ದುಮನೆ, ಹೊರಲಾಳಿ, ನೆಂಚಾರ್, ಮಡಾಮಕ್ಕಿ ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಮುದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
08-03-2002ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು, ಈಗ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ದಿನೇಶ ಮಡಿವಾಳ ಮುದ್ದುಮನೆ ಇವರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ಇವರು ವಾದ್ಯದವರಾಗಿ, ಕರಿಯ ಮಿಯಾರು ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಸಪರಿವಾರ ಶ್ರೀ ಅರ್ಭಕ ಧಾರೇಶ್ವರೀ ಸಹಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ನಾಯರಬೆಟ್ಟು,
ಶೀರೂರು ಮುದ್ದುಮನೆ,
ಬ್ರಹ್ಮಾವರ ತಾಲೂಕು – 576223.

ಗರೋಡಿಯ ಅರ್ಚಕರು:

ಕೃಷ್ಣ ಪೂಜಾರಿ – 8105460500

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baiderugala Chikkamma Devi Garodi

ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿ ಉಗ್ಗೆಲ್ಬೆಟ್ಟು.

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪೂರು ಕಡೆ ಸಾಗುತ್ತಾ ಜಾರಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ ಸಾಗಬೇಕು. ರೈಲ್ವೆ ಸೇತುವೆ ಬುಡದಲ್ಲಿ ಎಡಕ್ಕೆ ಸುಮಾರು 3ಕಿ. ಮೀ.ದೂರದಲ್ಲಿ ಗರೋಡಿಯಿದೆ. ಬ್ರಹ್ಮಾವರ ಕೃಷಿ ಕೇಂದ್ರದ ಮಾರ್ಗವಾಗಿ ಉಗ್ಗೆಲ್ಬೆಟ್ಟು ಅಣೆಕಟ್ಟು ಮಾರ್ಗವಾಗಿಯೂ ಗರೋಡಿ ತಲುಪಬಹುದು.
ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದಲ್ಲಿರುವ ಉಗ್ಗೆಲ್ಬೆಟ್ಟು ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿಯು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆ ಗೊಂಡಿದೆ. ಮುಖ್ಯ ದ್ವಾರ ಮೂಡು ಮುಖವಾಗಿದ್ದು ಇನ್ನೊಂದು ದ್ವಾರ ಪಡುಮುಖವಿದೆ.
ಗರೋಡಿಯ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗ ಬ್ರಹ್ಮ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಗಿಂಡೆ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ದೇಯಿ ಬೈದೆತಿಯ ಪಾಪೆ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ದೇಯಿ ಬೈದೆತಿಯ ಪಾಪೆ ಇದೆ.
ವಾಲಗ ಚಾವಡಿಯಲ್ಲಿ ಮಾಯಂದಾಲ್ ಮತ್ತು ಮಗು, ಕುಲತ ಜುಮಾದಿ, ಬಹಳಷ್ಟು ಕಾರ್ಣಿಕ ಮೆರೆಯುತ್ತಿರುವ ಚಿಕ್ಕಮ್ಮದೇವಿ, ಬಗ್ಗು ಚಿಕ್ಕು, ಬಾಳ್ ಚಿಕ್ಕು, ಹೈಗುಳಿ, ಜೋಗಿಪುರುಷರ ಪಾಪೆಗಳಿವೆ. ಆಯದ ಕಂಬವೇ ಗುರುಕಂಬವಾಗಿದೆ.
ಆವರಣದಲ್ಲಿ ಹುಲಿಚಾಮುಂಡಿ, ಆಯದ ಕಲ್ಲು ಇದೆ. ಹೊರ ಆವರಣದಲ್ಲಿ ಕ್ಷೇತ್ರಪಾಲ, ನಾಗ ಸನ್ನಿಧಿ ಇದೆ.

ಸೋಮ ಪೂಜಾರಿ

ದಿ. ಸಂಜೀವ ಪೂಜಾರಿ

ಸುಮಾರು 22 ವರ್ಷಗಳಿಂದ ಉಗ್ಗೆಲ್ಬೆಟ್ಟು ಗರೋಡಿ ಮನೆ ಸೋಮ ಪೂಜಾರಿ (70 ವರ್ಷ) ಯವರು ಗರೋಡಿ ಅರ್ಚಕರಾಗಿದ್ದಾರೆ. ಹಿಂದೆ ಇವರ ಮಾವ ಸಂಜೀವ ಪೂಜಾರಿಯವರು ಸುಮಾರು 30 ವರ್ಷಗಳ ಕಾಲ ಅರ್ಚಕರಾಗಿದ್ದರು. ಇವರ ಮೊದಲು ಕೊರಗ ಪೂಜಾರಿ, ಗರೋಡಿ ಮನೆ ಚೆನ್ನಪ್ಪ ಪೂಜಾರಿ, ಅನಂತ ಪೂಜಾರಿ, ಕಾಳ ಪೂಜಾರಿಯವರು ಪೂ ಪೂಜನೆಯವರಾಗಿದ್ದರು.
ಸದ್ಯ ಈ ಗರೋಡಿಗೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೊರಗ ಪೂಜಾರಿಯವರು, ಕಾಳು ಪೂಜಾರಿಯವರು, ಅನಂತ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.

ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು

ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು ಇವರು ಗರೋಡಿಯ ಆಡಳಿತ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಈ ಗರೋಡಿಯಲ್ಲಿ ಪ್ರತೀ ಶುಕ್ರವಾರ ಪೂಜೆ ಇದೆ. ಉಳಿದಂತೆ ಸೂಡ ಸಂಕ್ರಮಣ ಅನುಸರಿಸಿ ಪ್ರತೀ ತಿಂಗಳ ಸಂಕ್ರಾಂತಿ ಪೂಜೆ ಜರಗುತ್ತದೆ. ಅಂದು ಅನ್ನದಾನ ಸೇವೆ ನಡೆಯುತ್ತದೆ. ಚೌತಿ ಪೂಜೆ ಇದೆ. ದೀಪಾವಳಿಯಂದು ದೀಪದ ಕಂಬವನ್ನಿಟ್ಟು ಪೂಜೆ, ಸೋಣ ತಿಂಗಳಿಡೀ ನಿತ್ಯ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಪಂಚ ಕಜ್ಜಾಯ ಸೇವೆ ಇದೆ.
ಡಿಸೆಂಬರ್ 6 ನೇ ತಾರೀಕಿನಂದು ಕೊಡಿ ತಿಂಗಳಲ್ಲಿ ಅನ್ನ ನೈವೇದ್ಯ ಅಗೆಲು ಸೇವೆ ಇದೆ. ಮರುದಿನ ನೇಮೋತ್ಸವ, ಮರುದಿನ ಮಾಯಂದಾಳ್ ನೇಮ, ಅದರ ಮರುದಿನ ಹುಲಿಚಾಮುಂಡಿ ಕೋಲವಿದೆ. ಮಾರ್ಚ 29ರಂದು ಕಾಲಾವಧಿ ಅನ್ನ ನೈವೇದ್ಯ, 30ರಂದು ನೇಮೋತ್ಸವ, ಮರುದಿನ ಮಾಯಂದಾಲ್ ನೇಮವಿದೆ.
ಇಲ್ಲಿನ ಕೂಡು ಕಟ್ಟಿಗೆ ಹೇರೂರು, ಉಪ್ಪೂರು, ಉಗ್ಗೆಲ್ಬೆಟ್ಟು, ಜಾತಬೆಟ್ಟು, ಕುದ್ರುಬೆಟ್ಟು, ತೆಂಕಬೆಟ್ಟು, ಹೆರಂಜೆ, ಅಮ್ಮುಂಜೆ ಗ್ರಾಮಗಳು ಸೇರುತ್ತವೆ. ವಂತಿಗೆ, ವರಡದ ರೂಪದಲ್ಲಿ ಖರ್ಚು ವೆಚ್ಚಗಳು ನಿಭಾಯಿಸಲ್ಪಡುತ್ತವೆ. ಇದರ ಉಸ್ತುವಾರಿಯನ್ನು ಗುರಿಕಾರರುಗಳಾದ ಗರೋಡಿ ಮನೆ ಪೂಜಾರಿ, ಕೋಟಿ ಪೂಜಾರಿ, ಶಂಕರ ಪೂಜಾರಿ, ವಿಶ್ವನಾಥ ಪೂಜಾರಿ, ಅವರು ನೋಡಿಕೊಳ್ಳುತ್ತಾರೆ.
ಕೂಡುಕಟ್ಟಿಗೆ ಸೇರಿದ ಮಂದಿ ನೀರು ಸ್ನಾನಕ್ಕೆ, ಕಂಚಿಲ್ ಸೇವೆಗಾಗಿ ಗರೋಡಿಗೆ ಬರುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಬೈದೇರುಗಳಿಗೆ ಜೋಡು ಕಾಯಿ ಕಾಣಿಕೆ ತೆಗೆದಿಡುತ್ತಾರೆ. ಪೂಜಾರಿ ಕಲಶ ಇಟ್ಟು ಶುದ್ಧ ಮಾಡುವ ಕ್ರಮ ಇದೆ.
1984 ಹಾಗೂ 1996ರಲ್ಲಿ ಗರೋಡಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶವಾಗಿದೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ದಿಯ ಯೋಜನೆಗಳನ್ನು ಗರೋಡಿ ಆಡಳಿತ ಮಂಡಳಿ ಹಮ್ಮಿಕೊಂಡಿದೆ.
ಈ ಗರೋಡಿಯಲ್ಲಿ ಬೊಗ್ಗು ಪರವ, ಜಯ ಪರವ ಅವರ ಸಂಘಟಿಗರು ನೃತ್ಯ ವಿಶಾರದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಮೆಣ್ಕ ಪರವ, ಅಮ್ಮು ಪರವ, ಪಿಜಿನ ಪರವ, ನರಂಗ ಪರವ ಇಲ್ಲಿನ ನೃತ್ಯ ವಿಶಾರದರಾಗಿದ್ದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿ ಉಗ್ಗೆಲ್ಬೆಟ್ಟು.
ಕೊಳಲಗಿರಿ ಅಂಚೆ,
ಉಪ್ಪೂರು ಗ್ರಾಮ,
ಬ್ರಹ್ಮಾವರ ತಾಲೂಕು.

ಆಡಳಿತ ಸಮಿತಿ:

ಅಧ್ಯಕ್ಷರು
ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು – 9632634704

ಮಾಹಿತಿ ನೀಡಿದವರು :

ಸೋಮ ಪೂಜಾರಿ, ಬೊಗ್ರ ಪೂಜಾರಿ, ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು

ಮಾಹಿತಿ ಸಂಗ್ರಹಿಸಿದ ದಿನಾಂಕ :

12.03.25

Shree Brahma Baidarkala Garodi, Halli, Vaddambettu

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಳ್ಳಿ, ವಡ್ಡಂಬೆಟ್ಟು

ಉಡುಪಿಯಿಂದ ಕೊಕ್ಕರ್ಣೆ ತಲುಪಿ, ಕೊಕ್ಕರ್ಣಿ ಬಸ್ ನಿಲ್ದಾಣದಿಂದ ಸುಮಾರು 2.5 ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಿ ಸುಮಾರು ಅರ್ದ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೇರೆ ಗರೋಡಿಗಳಲ್ಲಿ ನಾಗಬ್ರಹ್ಮರ ಕುದುರೆಯ ಮೇಲೆ ಕುಳಿತ ಮೂರ್ತಿಗಳಿದ್ದರೆ, ಈ ಗರೋಡಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಚತುರ್ಮುಖ ಬ್ರಹ್ಮನ ನಿಂತಿರುವ ಭಂಗಿಯ ಕಂಚಿನ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದಮೂರ್ತಿ ಹಾಗೂ ಚೌಂಡಿ ದೈವದ ಮಣೆಮಂಚವಿದೆ.
ಗುಂಡದ ಎಡಭಾಗದಲ್ಲಿ ಬಲ್ಲಾಳರು ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮಣೆಮಂಚ, ಪಂಜುರ್ಲಿ ದೈವದ ಗದ್ದಿಗೆ, ಮೈಂದಾಳ್ತಿ ಮಗು ಹಾಗೂ ತೊಟ್ಟಿಲಿನ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ಚಿಕ್ಕಮ್ಮ , ಜುಮಾದಿ, ಒಂದು ದೈವಗಳ ಮಣೆಮಂಚವಿದೆ.
ಗರೋಡಿಯ ಎದುರಿನಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಗರೋಡಿಯ ಹತ್ತಿರದಲ್ಲಿಯೇ ಶ್ರೀ ವೀರಭದ್ರ ಅಬ್ಬಗ ಧಾರಗ ದೇವಸ್ಥಾನ, ಬ್ರಹ್ಮ ಹಾಗೂ ಚಿಕ್ಕಮ್ಮ ಗುಡಿಗಳಿವೆ.
ಹತ್ತಿರದಲ್ಲಿಯೇ ಕಂಬಳ ಗದ್ದೆಗಳಿವೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿಕಲ್ಲು ಹಾಗೂ ದೀಪದ ಕಂಬಗಳಿವೆ.

ನರಸಿಂಹ ಪೂಜಾರಿ

ಅಣ್ಣಪ್ಪ ಪೂಜಾರಿ

1) ನರಸಿಂಹ ಪೂಜಾರಿ (65 ವರ್ಷ) 2) ಅಣ್ಣಪ್ಪ ಪೂಜಾರಿ (50 ವರ್ಷ) 3) ಬಾಲ ಪೂಜಾರಿ (50 ವರ್ಷ) ಹಾಗೂ ಗಣೇಶ ಪೂಜಾರಿ ಹೀಗೆ ಗರಡಿ ಮನೆಯ ಮೂರು ಮನೆಯವರು ವರ್ಷಕ್ಕೊಂದು ಮನೆಯವರಂತೆ ಅರ್ಚಕರಾಗಿ ಸೇವೆ ಮಾಡುತ್ತಾರೆ. ಇವರ ಮೊದಲು ಈ ಮೂರು ಮನೆಗಳ ಹಿರಿಯರಾದ ಗೋಪಾಲ ಪೂಜಾರಿ, ಬುಡ್ಡ ಪೂಜಾರಿ, ರಾಮ ಪೂಜಾರಿ, ಸಾಸ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು.
ಅದೇ ರೀತಿ 1) ಹಳ್ಳಿ ಮೇಲ್ಮನೆ ರಂಜಿತ್ ಶೆಟ್ಟಿ 2) ನಡುಮನೆ ಗಣಪತಿ ಮಾಸ್ಟರ್ 3) ಕೆಳಮನೆ ಕೃಷ್ಣಯ್ಯ ಶೆಟ್ಟಿ ಇವರುಗಳು ಈ ಗರೋಡಿಯ ಮೊಕ್ತೇಸರರಾಗಿದ್ದು, ವರ್ಷಕ್ಕೊಮ್ಮೆ ಈ ಮೂರು ಮನೆಗಳ ಮಧ್ಯೆ ಈ ಜವಾಬ್ದಾರಿ ಬದಲಾಯಿಸಲಾಗುತ್ತದೆ.
ಅರ್ಚಕರಾದ ಅಣ್ಣಪ್ಪ ಪೂಜಾರಿಯವರು ಗರೋಡಿಯ ಸ್ಥಳ ಪಾತ್ರಿಯಾಗಿಯೂ ಸೇವೆ ಮಾಡುತ್ತಿದ್ದಾರೆ. ಹಿಂದೆ ಗೋಪಾಲ ಪೂಜಾರಿ, ಬುಡ್ಡ ಪೂಜಾರಿ, ಹಾಗೂ ವಿಠಲ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳ ಸಂಕ್ರಾಂತಿಯಂದು ಅಗೆಲು ಸೇವೆ, ಎಲ್ಲಾ ದೈವಗಳ ದರ್ಶನ ಸೇವೆ ನಡೆದು, ಹಳ್ಳಿ ಮೂರು ಮನೆಯವರ ವತಿಯಿಂದ ಕಂಬಳ ನಡೆಯುತ್ತದೆ. ಏಪ್ರಿಲ್ ತಿಂಗಳ 5 ನೇ ತಾರೀಖಿನಂದು ಕಂಬ ಮುಹೂರ್ತ, 6 ಕ್ಕೆ ಸ್ವಚ್ಚ ಮಾಡುವುದು, 7 ಕ್ಕೆ ಅಗೆಲು ಸೇವೆ, ದರ್ಶನ ಸೇವೆ, 8 ಕ್ಕೆ ನೇಮೋತ್ಸವ, ಜೋಗಿ ಪುರುಷ, ಮೈಂದಾಳ್ತಿಕೋಲ, ದರ್ಶನ ಸೇವೆ ನಡೆಯುತ್ತದೆ. ಏಪ್ರಿಲ್ 24 ಕ್ಕೆ ಶಿವರಾಯ ಮಾರಿ ಹಬ್ಬಗಳು ನಡೆಯುತ್ತದೆ.
ಸೂರಾಲು ಮಾಗಣೆ, ಕುದಿ, ಪೆಜಮಂಗೂರು, ಹೊಸೂರು, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಜನರು ಗರೋಡಿಯಲ್ಲಿ ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1940 ಹಾಗೂ 1979ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ ಚೇರ್ಕಾಡಿ, ಇವರು ನೃತ್ಯ ವಿಶಾರದರಾಗಿ, ರಾಮ ಮಡಿವಾಳ ಹಳ್ಳಿ ಇವರು ಮಡಿವಾಳರಾಗಿ, ಜಬ್ಬ ದೇವಾಡಿಗ ಸೂರಾಲು ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ ಗರೋಡಿ, ಹಳ್ಳಿ ವಡ್ಡಂಬೆಟ್ಟು,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576234

ಗರೋಡಿಯ ಅರ್ಚಕರು :

ಗಣೇಶ ಪೂಜಾರಿ – 9113884392

ಮಾಹಿತಿ ನೀಡಿದವರು

ಅಣ್ಣಪ್ಪ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024

Abbakka Dharakka Umamaheshwari Shree Brahma Baidarkala Garodi, Karje

ಅಬ್ಬಕ್ಕ ದಾರಕ್ಕ ಉಮಾಮಹೇಶ್ವರಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕರ್ಜೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ಭದ್ರಗಿರಿಯ ಬಲಕ್ಕೆ ತಿರುಗಿ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸುಮಾರು 17.58 ಕಿ.ಮೀ. ದೂರದ ಕರ್ಜೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರದಲ್ಲಿದೆ ಈ ಗರೋಡಿ.
ಗರೋಡಿಯು ಉತ್ತರಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಹಿಂದಿನ ಕಾಲದಲ್ಲಿ ಕೆಲವು ಭಕ್ತರು ಕಾಶಿ ಯಾತ್ರೆಗೆಂದು ಹೋಗುತ್ತಿದ್ದಾಗ, ಬೈದೇರುಗಳು ಅವರಿಗೆ ನೀವು “ಕಾಶಿಗೆ ಹೋಗುವುದು ಬೇಡ, ಇಲ್ಲಿಯೇ ಕಾಶಿಯ ತೀರ್ಥವಿದೆ“ಎಂದು ಕರ್ಜೆಯಲ್ಲಿ ನೆಲೆ ನಿಂತರಂತೆ. ಹಾಗೆ ಇಲ್ಲಿ ಗರೋಡಿಯ ಸ್ಥಾಪನೆಯಾಯಿತಂತೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕೊಡೆ (ಸತ್ತಿಗೆ) ಯನ್ನು ಹೊಂದಿದ ಮೂರ್ತಿಯಿದೆ. ಗುಂಡದ ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಟ್ಟದ ಪಂಜುರ್ಲಿ, ಮರ್ಲಚಿಕ್ಕು ದೈವಗಳ ಮಣೆಮಂಚವಿದೆ.
ಪಕ್ಕದಲ್ಲಿ ಜೋಗಿಪುರುಷರ ಮರದ ಮೂರ್ತಿ, ಹೈಗುಳಿ, ಯಕ್ಷಿ ಹಾಗೂ ಭಟ್ಟರ್ತಿ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯ ಎರಡು ಮಣೆಮಂಚಗಳಿವೆ.
ಗರೋಡಿಯ ಎದುರಿರುವ ಗುಡಿಯಲ್ಲಿ ಮಾಯಂದಾಳ್ ಮತ್ತು ಮಗು, ತೊಟ್ಟಿಲುಗಳಿವೆ.
ಗರೋಡಿಯ ಹಿಂಬದಿಯಲ್ಲಿರುವ ಗುಡಿಯಲ್ಲಿ ಕಾರ್ತಿ, ಬೈಕಾಡ್ತಿ ದೈವಗಳ ಮರದ ಮೂರ್ತಿಗಳಿರುವ ಸಾನಿಧ್ಯವಿದೆ. ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಬಲಿಕಲ್ಲು, ನೇಮ ಚಾವಡಿಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಅನುರಾಗ ಎಸ್. ಪೂಜಾರಿ

ಅನುರಾಗ ಎಸ್. ಪೂಜಾರಿ (46 ವರ್ಷ) ಇವರು 2011 ರಿಂದ ಇಲ್ಲಿಯ ಅರ್ಚಕರಾಗಿದ್ದಾರೆ. ಇವರು ಮೊದಲು ಬಾಬು ಪೂಜಾರಿ, ಕೂಕ್ರ ಪೂಜಾರಿ, ಕೊರಗ ಪೂಜಾರಿ, ಮುತ್ತು ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಗುಂಡು ಪೂಜಾರಿ (55 ವರ್ಷ) ಗೋಪಾಲ ಪೂಜಾರಿ (45 ವರ್ಷ) ಮಂಜು ಪೂಜಾರಿ (38 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಶುಕ್ರ ಪೂಜಾರಿ, ಕೃಷ್ಣಯ್ಯ ಪೂಜಾರಿಯವರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಶೇಖರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿ, ಕಿರಣ್ ಕುಮಾರ್ ಶೆಟ್ಟಿ ಯವರು ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀವರ್ಷ ವೃಶ್ಚಿಕ ಸಂಕ್ರಮಣದಂದು ಹಾಲು ಹಬ್ಬ, ದರ್ಶನ ಸೇವೆ, ಅಗೆಲು ಸೇವೆ, ಫೆಬ್ರವರಿ ತಿಂಗಳ 26 ನೇ ತಾರೀಖಿಗೆ ಕಂಬ ಮುಹೂರ್ತ, 27 ಕ್ಕೆ ಅಗೆಲು ಸೇವೆ, 28 ಕ್ಕೆ ಬೈದರ್ಕಳ ನೇಮೋತ್ಸವ ಹಾಗೂ ದರ್ಶನ ಸೇವೆ ನಡೆಯುತ್ತದೆ. ಏಪ್ರಿಲ್ ತಿಂಗಳ 14ನೇ ತಾರೀಖಿನಂದು ಗೆಂಡ ಸೇವೆ, ಪಂಜುರ್ಲಿ ಕೋಲ, ಮಾಯಂದಾಲ್ ಕೋಲ, ಜೋಗಿಪರುಷ ಕೋಲ ಹಾಗೂ ತುಲಾಭಾರ ಸೇವೆಗಳು ನಡೆಯುತ್ತದೆ.
ಹೊಸೂರು, ಮೈರ್ಮಾಡಿ, ಕುರ್ಪಾಡಿ, ಸುರಾಲು, ಹಳುವಳ್ಳಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿರುತ್ತವೆ. ಕೂಡುಕಟ್ಟಿಗೆ ಸೇರಿದ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವಂತಿಗೆ, ಸಹಾಯಧನ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 1998, 2002 ರಲ್ಲಿ ಜೀರ್ಣೋದ್ಧಾರಗೊಂಡಿದ್ದು ಈಗ ಪುನ: ಜೀರ್ಣೋದ್ಧಾರವಾಗುವ ಯೋಜನೆಯಲ್ಲಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ನಾರಾಯಣ ಮಡಿವಾಳ, ಚೇರ್ಕಾಡಿ ಮಡಿವಾಳರಾಗಿ, ದಿನೇಶ ದೇವಾಡಿಗ ಸೂರಾಲು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಅಬ್ಬಕ್ಕ ದಾರಕ್ಕ ಉಮಾಮಹೇಶ್ವರಿ ಶ್ರೀ ಬ್ರಹ್ಮಬೈದರ್ಕಳಲ ಗರೋಡಿ ಕರ್ಜೆ,
ಹೊಸೂರು ಗ್ರಾಮ, ಕರ್ಜೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576215.

ಗರೋಡಿಯ ಅರ್ಚಕರು :

ಅನುರಾಗ ಎಸ್. ಪೂಜಾರಿ
ಮೊಬೈಲ್ : 8497878588, 9901878757

ಮಾಹಿತಿ ನೀಡಿದವರು :

ಅನುರಾಗ ಎಸ್. ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Shree Brahma Baidarkala, Chikkamma Devi Garodi Pilkala, Jathebettu

ಶ್ರೀ ಬ್ರಹ್ಮ ಬೈದರ್ಕಳ ಮತ್ತು ಚಿಕ್ಕಮ್ಮ ದೇವಿ ಗರೋಡಿ ಪಿಳ್ಕಲ, ಜಾತಬೆಟ್ಟು.

ಉಡುಪಿ – ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ನಡುವೆ ಜಾತ ಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ ಕೊಳಲಗಿರಿ ರಸ್ತೆಯಲ್ಲಿ ಒಂದು ಕಿ. ಮೀ. ಸಾಗುವಾಗ ‘ಬಿಲ್ಲ’ ಶಾಲೆ ಸಿಗುತ್ತದೆ. ಬಿಲ್ಲ ಶಾಲೆಯಿಂದ ಎಡಕ್ಕೆ ತಿರುಗಿ ಸುಮಾರು ಅರ್ಧ ಕಿ. ಮೀ. ಸಾಗಿದಾಗ ಪಿಳ್ಕಲ ಗರೋಡಿ ಸಿಗುತ್ತದೆ.
ಉಡುಪಿ ತಾಲೂಕು, ಉಪ್ಪೂರು ಗ್ರಾಮ ಜಾತಬೆಟ್ಟುವಿನಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಮತ್ತು ಚಿಕ್ಕಮ್ಮದೇವಿ ಗರೋಡಿ ಪಿಳ್ಕಲ ಬಹಳ ಪುರಾತನ ಗರೋಡಿಯಾಗಿದೆ. ಇದು ಆಯದ ಗರೋಡಿಯಾಗಿದ್ದು ಷಢಾದಾರ ಪ್ರತಿಷ್ಠೆಗೊಂಡಿದೆ. ಮುಖ್ಯ ದ್ವಾರ ಮೂಡು ದಿಕ್ಕಿಗಿದೆ. ಗರೋಡಿ ಹಿಂಭಾಗದಲ್ಲಿ ನಾಗ ಸನ್ನಿಧಿ ಇರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಗರೋಡಿಯಲ್ಲಿ ಪಶ್ಚಿಮ ಮುಖವಾಗಿಯೂ ಒಂದು ಬಾಗಿಲನ್ನು ಇರಿಸಲಾಗಿದೆ.
ಗರೋಡಿಯಲ್ಲಿ ಗುಂಡದ ಒಳಗೆ ಮೇಲೆ ಗಾಳಿದೇವರು, ಕೆಳಗೆ ನಾಗ ಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಎರಡು ಮಕ್ಕಳ ಪಾಪೆ, ದೇಯಿ ಬೈದೆತಿ ಪಾಪೆ ಇದೆ.
ಗುಂಡದ ಬಲಕ್ಕೆ ಕುಜುಂಬ ಕಾಂಜವ ಮತ್ತು ಒಬ್ಬ ಹುಡುಗನ ಪಾಪೆ ಇದೆ.
ವಾಲಗ ಚಾವಡಿಯಲ್ಲಿ ನಂದಿ, ಜುಮಾದಿ, ಮಾಯಂದಾಳ್ ಮತ್ತು ಮಗು, ಜೋಗಿಪುರುಷ, ಗುರುಕಂಬ, ಪ್ರಧಾನವಾಗಿ ಚಿಕ್ಕಮ್ಮ ದೇವಿ, ಮರ್ಲ ಚಿಕ್ಕು, ಬಾಳ್ ಚಿಕ್ಕು, ಹೈಗುಳಿ ದೈವಗಳ ಪಾಪೆಗಳಿವೆ.
ಗರೋಡಿಯ ಆವರಣದಲ್ಲಿ ಹುಲಿಚಾಮುಂಡಿ ದೈವ ಇದೆ. ಆಯದ ಕಲ್ಲು ಇದೆ. ಗರೋಡಿಯ ಹೊರ ಆವರಣದಲ್ಲಿ ಪಶ್ಚಿಮದಲ್ಲಿ ನಾಗ ಸನ್ನಿಧಿ ಇದೆ.

ಗೋವಿಂದ ಪೂಜಾರಿ

ಕಾಡ್ಯ ಪೂಜಾರಿ

ಈ ಗರೋಡಿಯಲ್ಲಿ 2021 ರಿಂದ ಜಾತಬೆಟ್ಟು ದೇವಿ ನಿಲಯದ ದಿ. ನಕ್ರ ಪೂಜಾರಿ ಅವರ ಪುತ್ರ ಗೋವಿಂದ ಪೂಜಾರಿ (ಪ್ರಾಯ – 60) ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸುಮಾರು ಎಂಟು ವರುಷಗಳ ಕಾಲ ಸಾಧು ಪೂಜಾರಿಯವರು ಸೇವೆ ಸಲ್ಲಿಸಿದ್ದರು. ಸಾಧು ಪೂಜಾರಿಯವರ ಮೊದಲು 1994 ರಿಂದ 20 ವರ್ಷಗಳ ಕಾಲ ಕಾಡ್ಯ ಪೂಜಾರಿಯವರು ಸೇವೆ ಸಲ್ಲಿಸಿದ್ದರು.

ರಾಜು ಪೂಜಾರಿ

ಉಪ್ಪೂರು ಜಾತ ಬೆಟ್ಟುವಿನ ಕೊರಗ ಪೂಜಾರಿಯವರ ಪುತ್ರ ರಾಜು ಪೂಜಾರಿಯವರು ಗರೋಡಿ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೊಳಲಗಿರಿಯ ಕೇದಿಗೆ ಜಿಡ್ಡ ಭೋಜ ಪೂಜಾರಿಯವರ ಪುತ್ರ ಅರುಣ್ ಕುಮಾರ್ ಕಾರ್ಯದರ್ಶಿಯಾಗಿದ್ದಾರೆ.
ಪ್ರಸ್ತುತ ಗರೋಡಿಗೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಿಕ್ರ ಪೂಜಾರಿಯವರು ಸ್ಥಳ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಇಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಪೂಜೆ ಇದೆ. ಪೆರ್ಡೂರು ಸಂಕ್ರಮಣವನ್ನು ಅನುಸರಿಸಿ ಸಂಕ್ರಾಂತಿ ಪೂಜೆ ಪ್ರತಿ ತಿಂಗಳು ಇದೆ. ಉಳಿದಂತೆ ಚೌತಿ ಪೂಜೆ ಇದೆ. ಸೋಣ ತಿಂಗಳಲ್ಲಿ ಹೂವಿನ ಪೂಜೆ ನಡೆಯುತ್ತದೆ. ಕದಿರು ಕಟ್ಟುವುದು ಇದೆ. ಸೋಣ ತಿಂಗಳಲ್ಲಿ ಎಂಟನೇ ದಿನ ಊರು ಸೇರಿ ಕಜ್ಜಾಯ ಸೇವೆ ಇದೆ. ಸುಮಾರು 150 ಕುಟುಂಬಗಳು ಸೇರುತ್ತಾರೆ.
ಈ ಗರೋಡಿಯಲ್ಲಿ ಕೊಡಿ ತಿಂಗಳಿನಲ್ಲಿ ಸಂಕ್ರಮಣದ 9ನೇ ದಿನ ಖಾಯಂ ಆಗಿ ಅನ್ನ ನೈವೇದ್ಯ ಸೇವೆ ಜರಗುತ್ತವೆ. ಅಂದು ದರುಶನ ಸೇವೆ ಇದೆ. ಸುಗ್ಗಿ ಸಂಕ್ರಮಣದ 2, 3 ದಿನಗಳಲ್ಲಿ ಅಗೆಲು ಸೇವೆ, ಮರುದಿನ ನೇಮೋತ್ಸವ, ಬೆಳಿಗ್ಗೆ ಮಾಯಂದಾಳ್ ನೇಮೋತ್ಸವ ಕಟ್ಟು ಕಟ್ಟಳೆಯಾಗಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ದೈವಗಳಿಗೆ ಕೋಲ ನಡೆಯುತ್ತದೆ. ಮರುದಿನ ಶುದ್ಧದ ಪಸರಣೆ ಇದೆ. ನವಕ ಪ್ರಧಾನ ಹೋಮ ಇದೆ. ಇಲ್ಲಿ ತುಲಾಭಾರ ಸೇವೆ ಇದೆ.
ಇಲ್ಲಿನ ಕೂಡುಕಟ್ಟಿಗೆ ಉಪ್ಪೂರು, ಹೇರೂರು, ಕುದ್ರುಬೆಟ್ಟು, ನಡುಬೆಟ್ಟು, ಹೇರಬೆಟ್ಟು, ತೆಂಕಬೆಟ್ಟು, ಮಾಯಾಡಿ, ಸಾಲ್ಮರ, ಲಕ್ಷೀನಗರದ ಮಂದಿ ಸೇರುತ್ತಾರೆ.
ಗರೋಡಿಯಲ್ಲಿ ನೀರು ಸ್ನಾನದ ಆಚರಣೆ ಇದೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುತ್ತಾರೆ. ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಇದೆ. ಕಲಶ ಕಟ್ಟಿ ಶುದ್ಧ ಮಾಡುವ ಪದ್ಧತಿ ಇದೆ. ನೇಮದಂದು ಗರೊಡಿಯ ಹೊರಗೆ ದಲ್ಲೆ ಹಾಕುತ್ತಾರೆ.
ಗರೋಡಿಯ ಖರ್ಚು ವೆಚ್ಚಗಳು ವಂತಿಗೆ, ವರಡದ ರೂಪದಲ್ಲಿ ನಡೆಯುತ್ತದೆ. ಪ್ರಸಕ್ತ ಸುಂದರ ಪೂಜಾರಿ, ವಾಸು ಪೂಜಾರಿ, ಸುರೇಶ್ ಪೂಜಾರಿ ಇವರು ಈ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ 45 ಸೆಂಟ್ಸ ಜಾಗ ಇದೆ. ಸುಮಾರು 75ವರ್ಷಗಳ ಕಾಲ ಗರೋಡಿ ಇದ್ದ ಕುರುಹೂ ಇಲ್ಲದ ಜಾಗದಲ್ಲಿ ಸುಸಜ್ಜಿತ ಗರೋಡಿಯನ್ನು ಪುನರ್ ನಿರ್ಮಿಸಿದ್ದು 15-5-1994ರಲ್ಲಿ ಪ್ರತಿಷ್ಟೆ ಗೊಂಡಿದೆ. ಬಳಿಕ 2006ರಲ್ಲಿ ಹಾಗೂ 2020ರಲ್ಲಿ ಬ್ರಹ್ಮಕಲಶ ಗೊಂಡಿದೆ.
ಇಲ್ಲಿ ಬೂಬ ಪರವ, ಅಂಗರ ಪರವ ಮತ್ತು ಸಂಗಡಿಗರು ನೃತ್ಯವಿಶಾರದರಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಮತ್ತು ಚಿಕ್ಕಮ್ಮ ದೇವಿ ಗರೋಡಿ ಪಿಳ್ಕಲ, ಜಾತಬೆಟ್ಟು.
ಉಪ್ಪೂರು ಗ್ರಾಮ,
ಉಡುಪಿ 576105.

ಆಡಳಿತ ಸಮಿತಿ:

ಅಧ್ಯಕ್ಷರು – ರಾಜು ಪೂಜಾರಿ – 9681842465
ಕಾರ್ಯದರ್ಶಿ: ಅರುಣ್ ಕುಮಾರ್ – 9611362284

ಮಾಹಿತಿ ನೀಡಿದವರು :

ರಾಜು ಪೂಜಾರಿ,
ಗೋವಿಂದ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

13.10.22

Shree Brahma Baidarkala Garodi, Sullod Shiruru Muddumane

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಸುಳ್ಳೋಡ್ ಶೀರೂರು ಮುದ್ದುಮನೆ

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆ ಮಾರ್ಗವಗಿ ಶೀರೂರು ಮೂರುಕೈ ತಲುಪಿ ಅಲ್ಲಿಂದ 450ಮೀ. ದೂರದಲ್ಲಿ ಬಲಕ್ಕೆ ಶೀರೂರು – ಮುದ್ದುಮನೆ ರಸ್ತೆಯಲ್ಲಿ 1ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಸುಮಾರು 300ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಯ ಮುಖ್ಯದ್ವಾರವು ಉತ್ತರಾಭಿಮುಖವಾಗಿದ್ದು ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಮೂರ್ತಿಗಳಿವೆ ಹಾಗೂ ದೇಯಿಬೈದೆತಿಯ ಮಣೆಮಂಚವಿದೆ.
ಗುಂಡದ ಬಲಭಾಗದಲ್ಲಿ ಬಲ್ಲಾಳರ ಹಾಗೂ ಕುಜುಂಬ ಕಾಂಜವರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಕೈಯಲ್ಲಿ ಮಗುವನ್ನು ಹಿಡಿದ ಮೈಂದಾಳ ಅಮ್ಮನ ಮರದ ಮೂರ್ತಿ ಹಾಗೂ ಜೋಗಿ ಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬಗಬರ್ಯನ ಮಣೆಮಂಚವಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ. ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲುಗಳಿವೆ.

ಸಂಜೀವ ಪೂಜಾರಿ

ಗರೋಡಿ ಮನೆಯ ಕುಟುಂಬಸ್ಥರಾದ ರಾಘವೇಂದ್ರ ಪೂಜಾರಿ (52 ವರ್ಷ) ಹಾಗೂ ಸಂಜೀವ ಪೂಜಾರಿ (65 ವರ್ಷ) ವರ್ಷಕ್ಕೊಬ್ಬರಂತೆ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ಇವರ ಹಿರಿಯರುಗಳಾದ ಶಿವ ಪೂಜಾರಿ ಹಾಗೂ ರಾಮ ಪೂಜಾರಿಯವರು ಅರ್ಚಕರಾಗಿ ಸೇವೆ ಮಾಡಿದ್ದರು.
ಗರೋಡಿಯಲ್ಲೀಗ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಚ್ಚು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಮೋಹನದಾಸ ಶೆಟ್ಟಿ ಹಾಗೂ ಸತೀಶ್ ಹೆಗ್ಡೆ ಇವರುಗಳು ಈ ಗರೋಡಿಯ ಮೊಕ್ತೇಸರರು. ಹಿಂದೆ ಕಲ್ಲುಮನೆ ಅಣ್ಣಪ್ಪ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ತುಳಸೀ ಪೂಜೆ, ಫೆಬ್ರವರಿ ತಿಂಗಲ್ಲಿ ಅಗೆಲು ಸೇವೆ, ಏಪ್ರಿಲ್ 9ರಂದು ಗೆಂಡ ಸೇವೆ ನಡೆಯುತ್ತದೆ.
ಈ ಗರೋಡಿಗೆ ಶೀರೂರು ಗ್ರಾಮದ ಜನರು ಸೇವೆ ಸಲ್ಲಿಸುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗರೋಡಿಯು 2013ರಲ್ಲಿ ಜೀರ್ಣೋದ್ಧಾರಗೊಂಡು ಪುನ: ಪ್ರತಿಷ್ಟೆ ನಡೆದಿದೆ.
ದಿನೇಶ ಮಡಿವಾಳ ಶೀರೂರು ಇವರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಸುಳ್ಳೋಡು,
33 ಶೀರೂರು ಮುದ್ದುಮನೆ,
ಮುದ್ದುಮನೆ ಅಂಚೆ,
ಬ್ರಹ್ಮಾವರ ತಾಲೂಕು – 576223.

ಅರ್ಚಕರು:

ರಾಘವೇಂದ್ರ – 9164732539,
ಸಂಜೀವ ಪೂಜಾರಿ – 9591160615

ಮಾಹಿತಿ ನೀಡಿದವರು :

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi Shiruru, Holebagilu

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಶೀರೂರು, ಹೊಳೆಬಾಗಿಲು

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆ – ಮಾರ್ಗವಾಗಿ ಶೀರೂರು ಮೂರುಕೈ ಸರ್ಕಲ್ನಿಂದ ಸುಮಾರು 450ಮೀ. ದೂರದಲ್ಲಿ ಬಲಕ್ಕೆ ಶೀರೂರು- ಮುದ್ದುಮನೆ ಮಾರ್ಗದಲ್ಲಿ ಸುಮಾರು 4ಕಿ.ಮೀ. ದೂರದಲ್ಲಿ ಸೀತಾನದಿ ದಡದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಮುಖ್ಯದ್ವಾರವು ಉತ್ತರ ದಿಕ್ಕಿಕೆ ಇದೆ. ಬ್ರಹ್ಮಗುಡಿಯು ಪೂವಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರಡಿಮನೆಯ ಪೂರ್ವಜ ಪೂಜಾರಿಯೊಬ್ಬರಿಗೆ ಬಿದ್ದ ಕನಸಿನಂತೆ, ಕೋಟಿಚೆನ್ನಯರು ತೆಂಕಣದಿಕ್ಕಿನಿಂದ ಹೊಸಾಳ ಚಾಂತಾರು ಮೂಲಕ ಮಂದಾರ್ತಿಗೆ ಬಂದು ದೇವಿಯ ಹತ್ತಿರ ಗರಡಿ ಕಟ್ಟಲು ಸ್ಥಳ ಕೇಳಿದಾಗ ಮೂರು ಕೈ ಶೀರೂರು ಸೀತಾನದಿ ಹತ್ತಿರ ನೆಲೆಯಾಗ ಬೇಕೆಂಬ ಅಪ್ಪಣೆಯಾಯಿತಂತೆ. ಅಲ್ಲಿ ಕೋಟಿಚೆನ್ನಯರ ಹೆಜ್ಜೆಯ ಗುರುತು, ಸುರಿಯ ಊರಿದ ನಿಶಾನೆ ತೋರಿ ಬಂದಲ್ಲಿ ಈ ಗರೋಡಿ ಕಟ್ಟಲಾಯಿತೆಂದು ಸ್ಥಳ ಪುರಾಣದಲ್ಲಿ ತಿಳಿದು ಬರುತ್ತದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿಯ ಕಿರೀಟ ಹಾಗೂ ಕತ್ತಿಯನ್ನು ಹೊಂದಿದ ನಾಗ ಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಮೈಸಂದಾಯ, ಕುಜುಂಬ ಕಾಂಜವ, ಹಾಗೂ ಬಲ್ಲಾಳರ ಮಣೆಮಂಚ ಮತ್ತು ದೇಯಿಬೈದೆತಿಯ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಎರಡು ಮುಕ್ಕಾಲಿ ಮಂಚ, ಚೌ೦ಡಿ ಮಣೆಮಂಚ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿ, ಜೋಗಿಪುರುಷ ಮರದ ಮೂರ್ತಿ ಹಾಗೂ ಗುರುಕಂಭಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಬಂಟರ ಮರದ ಮೂರ್ತಿ ಹಾಗೂ ಕಾಳಿಯ ಮರದ ಗದ್ದಿಗೆಯಿದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಅವಳಿ ನಾಗ ಸಂಪಿಗೆ ಮರಗಳ ಕಟ್ಟೆಯಿದೆ.

ಬಾಲಕೃಷ್ಣ ಪೂಜಾರಿ

ನಿತ್ಯಾನಂದ ಪೂಜಾರಿ

2014ರಿಂದ ಬಾಲಕೃಷ್ಣ ಪೂಜಾರಿ (47 ವರ್ಷ) ಹಾಗೂ 2024ರಿಂದ ನಿತ್ಯಾನಂದ ಪೂಜಾರಿ (40 ವರ್ಷ) ಇವರುಗಳು ಇಲ್ಲಿ ಅರ್ಚಕರಾಗಿದ್ದಾರೆ. ಇವರ ಮೊದಲು ಕೃಷ್ಣ ಪೂಜಾರಿ (ಮಾವ) ಗಿರಿಯ ಪೂಜಾರಿ, (ಅಜ್ಜ) ಇಲ್ಲಿಯ ಅರ್ಚಕರಾಗಿದ್ದರು.

ಬಸವ ಪೂಜಾರಿ (60 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿ. ಹಿಂದೆ ಗಿರಿಯ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯೂ ಆಗಿದ್ದರು. ಪಾರ್ವತಿ ಪೂಜಾರಿ ಎಂಬ ಮಹಿಳೆಯೊಬ್ಬರು ಇಲ್ಲಿ ಮೈಂದಾಳ್ತಿಯ ದರ್ಶನ ಸೇವೆಯ ಪಾತ್ರಿಯಾಗಿದ್ದಾರೆ.
ರಾಮಣ್ಣ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಹಿಂದೆ ಪಟೇಲ್ ಶೀನಪ್ಪ ಶೆಟ್ಟಿಯವರು ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಕಾಯಿದೆ ಪೂಜೆ, ಅಗೆಲು ಸೇವೆ, ಪ್ರತೀ ವರ್ಷವೂ ಏಪ್ರಿಲ್ 10ಕ್ಕೆ ಹಾಲು ಹಬ್ಬ, ಗೆಂಡ ಸೇವೆ, ದರ್ಶನ, ತುಲಾಭಾರ ಸೇವೆಗಳು ನಡೆಯುತ್ತವೆ.
ಶೀರೂರು, ಹೊರಲಾಳಿ, ಭಾಗದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರವರ ವಂತಿಗೆ, ಸಹಾಯ ಧನಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಯು ಮಾರ್ಚ 2024ರಲ್ಲಿ ಜೀರ್ಣೋದ್ಧಾರಗೊಂಡಿದೆ. ಜೀರ್ಣೋದ್ಧಾರಕ್ಕೆ ಮೊದಲು, 2003 ರಲ್ಲಿ ಬೈದಶ್ರೀಯಿಂದ ಪ್ರಕಾಶಿತ ಪುಸ್ತಕ “ಬೈದ ದರ್ಶನ” ಪುಸ್ತಕದಲ್ಲಿ ಪ್ರಕಟಿತ, ಈ ಗರೋಡಿಯ ಛಾಯಾಚಿತ್ರ ಇಲ್ಲಿದೆ.
ದಿನೇಶ ಮಡಿವಾಳ ಶೀರೂರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ವಾದ್ಯದವರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಶೀರೂರು ಹೊಳೆಬಾಗಿಲು,
33ನೇ ಶೀರೂರು ಮುದ್ದುಮನೆ,
ಮುದ್ದುಮನೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576223.

ಅರ್ಚಕರು:

ಬಾಲಕೃಷ್ಣ ಪೂಜಾರಿ – 9901446734
ನಿತ್ಯಾನಂದ ಪೂಜಾರಿ – 9900469117

ಮಾಹಿತಿ ನೀಡಿದವರು :

ನಿತ್ಯಾನಂದ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi, Hiliyana

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಹಿಲಿಯಾಣ

ಉಡುಪಿಯಿಂದ ಬಾರ್ಕೂರು – ಸೈಬ್ರಕಟೆ – ಶೀರೂರು ಮೂರುಕೈ – ವಂಡಾರು – ಮಾವಿನಕಟ್ಟೆ – ಆವರ್ಸೆಯಿಂದ ಮುಖ್ಯರಸ್ತೆಯಲ್ಲಿ ಹಿಲಿಯಾಣ ತಲುಪಿ ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ಸುಮಾರು 1.2ಕಿ.ಮೀ. ಒಳಗೆ ಹೋದರೆ ಹಿಲಿಯಾಣ ಗರೋಡಿ ಸಿಗುವುದು.
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಮುಖ್ಯದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು, ಷಢಾಧಾರ ಪ್ರತಿಷ್ಠೆಯಲ್ಲಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದ ಕೆಳಗಿನ ಅಂತಸ್ತಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ವಿಷ್ಣುವಿಗೂ ಮೇಲಂತಸ್ತಿನಲ್ಲಿ ಮಹೇಶ್ವರರಿಗೂ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ನಿಗಳದ ಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ಬಲ್ಲಾಳರ, ಬ್ರಾಂಚ ಹಾಗೂ ದೇಯಿಬೈದೆತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಮೈಂದಾಳ್ತಿ ಮತ್ತು ಮಗು, ಜುಮಾದಿ, ಧೂಮಾವತಿ, ಜೋಗಿಪುರುಷ, ಹಾಗೂ ಚಿಕ್ಕುವಿನ ಮರದ ಮೂರ್ತಿ ಇದೆ.
ಗರೋಡಿಯ ಬಾಗಿಲ ಪಕ್ಕದಲ್ಲಿ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯನ ಮರದ ಮೂರ್ತಿಯಿದೆ.
ಇನ್ನೊಂದು ಗುಡಿ “ಭೂತ ಗರಡಿ” ಯಲ್ಲಿ ಪಂಜುರ್ಲಿ, ಹೈಗುಳಿ, ನಂದಿಕೇಶ್ವರ, ಹುಲಿರಾಯನ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲುಗಳಿವೆ. ಗರೋಡಿ ಪರಿಸರದಲ್ಲಿರುವ ನಾಗಬನದಲ್ಲಿ ನಾಗ ಮತ್ತು ಬೊಬ್ಬರ್ಯನ ಸಾನಿಧ್ಯಗಳಿವೆ.
ಗರೋಡಿಯ ಪ್ರಾಂಗಣದಲ್ಲಿ ವೇದಿಕೆ ಹಾಗು ಭೋಜನ ಶಾಲೆಗಳಿದ್ದು, ಶುಭ ಕಾರ್ಯಕ್ರಮಗಳು ನಡೆಯುತ್ತವೆ.
ಗರೋಡಿಯಿಂದ ಕಾಣುತ್ತಿರುವ ಗರೋಡಿಮನೆಯ ನೋಟ.

ಕರುಣಾಕರ ಪೂಜಾರಿ

1986ರಿಂದ ಕರುಣಾಕರ ಪೂಜಾರಿಯವರು (77 ವರ್ಷ) ಗರೋಡಿಯ ಅರ್ಚಕರಾಗಿರುವರು. ಇವರ ಮೊದಲು ಶೀನ ಪೂಜಾರಿ, ಬಡಿಯ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಕೇಶವ ಪೂಜಾರಿ (40 ವರ್ಷ) ಹಾಗೂ ಶಂಕರ ಪೂಜಾರಿ (50 ವರ್ಷ) ಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಶೇಷ ಪೂಜಾರಿ ಹಾಗೂ ನಂದಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಹಿಲಿಯಾಣ ದೊಡ್ಮನೆ ತಾರಾನಾಥ ಶೆಟ್ಟಿಯವರು ಗರೋಡಿಯ ಮುಕ್ಕಾಲಿ, ವೈ. ಕರುಣಾಕರ ಶೆಟ್ಟಿ ಯರುಕೋಣ್ ಇವರು ಗರೋಡಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ 6ನೇ ತಾರೀಖಿನಂದು ಹಾಲುಹಬ್ಬ, ದೀಪೋತ್ಸವ, ಅಗೆಲು ಸೇವೆ, ತುಲಾಭಾರಸೇವೆ, ತುಳಸೀಪೂಜೆ ನಡೆಯುತ್ತದೆ. ಮಾರ್ಚ ತಿಂಗಳಲ್ಲಿ ಅಗೆಲು ಸೇವೆ, ನೇಮೋತ್ಸವ, ಶಿವರಾಯ ಕೋಲ, ಗೆಂಡ ಸೇವೆ, ಮಾರಿಹಬ್ಬ ನಡೆಯುತ್ತದೆ.
ಹಿಲಿಯಾಣ, ಹಳ್ಳಿ, ಹೆಸ್ಕುಂದ, ಆವರ್ಸೆಯ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 1ಎಕರೆ 25ಸೆಂಟ್ಸ ಜಾಗವಿದ್ದು ಗರೋಡಿಯ ಹೆಸರಿನಲ್ಲಿದೆ.
1961 ರಲ್ಲಿ ಮರ ಬಿದ್ದು ಶಿಥಿಲಗೊಂಡ ಗರೋಡಿಯನ್ನು 1986ರಲ್ಲಿ ಬಾಲಾಲಯಕ್ಕೆ ಸ್ಥಳಾಂತರಗೊಳಿಸಲಾಯಿತು. 2013 ರಲ್ಲಿ ಬಾಲಾಲಯದಲ್ಲಿದ್ದ ಗರೋಡಿಯನ್ನು ಪುನ: ತಂದು ಸ್ಥಾಪಿಸಲಾಯಿತು.

2003 ರಲ್ಲಿ ಬೈದಶ್ರೀಯಿಂದ ಪ್ರಕಾಶಿತ ಪುಸ್ತಕ "ಬೈದ ದರ್ಶನ" ಪುಸ್ತಕದಲ್ಲಿ ಬಾಲಾಲಯದಲ್ಲಿದ್ದ ಹಿಲಿಯಾಣ ಗರೋಡಿಯ ಛಾಯಾಚಿತ್ರ

ನರಸಿಂಹ ಪರವ ಚೇರ್ಕಾಡಿ ಇವರು ಬೈದರ ನೇಮದ ನೃತ್ಯವಿಶಾರದರಾಗಿ, ಗಿರಿಜ ಮಡಿವಾಳ್ತಿಯ ಮಕ್ಕಳು ಮಡಿವಾಳರಾಗಿ, ರಾಜು ಮತ್ತು ಬಳಗದವರು ವಾಧ್ಯದವರಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹಿಲಿಯಾಣ,
ಹಿಲಿಯಾಣ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ – 576212.

ಅರ್ಚಕರು:

ಕರುಣಾಕರ ಪೂಜಾರಿ – 9731106663

ಮಾಹಿತಿ ನೀಡಿದವರು :

ಕರುಣಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi, Manikallu (Billadi)

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಣಿಕಲ್ಲು (ಬಿಲ್ಲಾಡಿ)

ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆಯಲ್ಲಿ ಬಲಕ್ಕೆ ತಿರುಗಿ ಶೀರೂರು ಮೂರುಕೈ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು 1ಕಿ.ಮೀ. ಒಳಗೆ ಸಾಗಿದರೆ ಶ್ರೀ ಅರ್ಭಕ ಧಾರಕೇಶ್ವರಿ ದೇವಸ್ಥಾನದ ಹತ್ತಿರದಲ್ಲಿದೆ ಈ ಗರೋಡಿ.
ಇದೊಂದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಇಲ್ಲಿ ಷಢಾಧಾರ ಪ್ರತಿಷ್ಠೆಯಾಗಿಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಬಿಲ್ಲಾಡಿಯ ಚಿತ್ತಾರಿಗೆ ಬಂದಾಗ ಅಲ್ಲಿ ಮೊದಲೇ ನೆಲೆನಿಂತಿದ್ದ ಹಲವಾರು ಸ್ಥಳೀಯ ಶಕ್ತಿ, ದೈವ ದೇವರುಗಳಿರುವುದರಿಂದ ಮುಂದೆ ಸಾಗಿ ಮಣಿಕಲ್ಲು ಅರ್ಬಕ ಧಾರಕೇಶ್ವರಿಯ ಆಶ್ರಯ ಪಡೆದು ಮಣಿಕಲ್ಲಿನ ಈ ಪ್ರದೇಶದಲ್ಲಿ ನೆಲೆ ನಿಂತರಂತೆ. ಆ ಸಮಯದಲ್ಲಿ ಗರೋಡಿ ಮನೆಯ ಹಿರಿಯ ಶೀನ ಪೂಜಾರಿಯವರ ಮುತ್ತಜ್ಜನ ಕನಸಿನಲ್ಲಿ ಈರ್ವರು ತರುಣರು ಬಂದು ಮಣಿಕಲ್ಲು ಪ್ರದೇಶದಲ್ಲಿ ನಿಂತಿದ್ದ ಅನುಭವವಾಗಿ ಮರುದಿನ ಆ ಸ್ಥಳದಲ್ಲಿ ಪರೀಕ್ಷಿಸಿದಾಗ ಕೋಟಿಚೆನ್ನಯರ ಪಾದದ ಗುರುತು ಮತ್ತು ಸುರಿಯ ಊರಿದ ಗುರುತು ತೋರಿ ಬಂತು. ಆ ಸಮಾಚಾರವನ್ನು ಸ್ಥಳದ ಮಾಲಿಕರಾಗಿದ್ದ ಜೈನ ಬಲ್ಲಾಳ ಸೆಟ್ಟಿಯ ಬಳಿ ತಿಳಿಸಿದಾಗ ಅವರು ಈ ವಿಚಾರ ಸತ್ಯವಾದರೆ ತನಗೆ ಕೂಡಾ ಕನಸಿನಲ್ಲಿ ಬೈದರು ತೋರಿ ಬರಲಿ ಎಂದರಂತೆ. ಆ ಪ್ರಕಾರ ಕೋಟಿಚೆನ್ನಯರು ಬಲ್ಲಾಳ ಸೆಟ್ಟಿಯ ಕನಸಿನಲ್ಲಿ ತೋರಿದಾಗ ಅವರಿಗೆ ವಿಶ್ವಾಸ ಮೂಡಿ ಗರಡಿ ಕಟ್ಟಲು ಒಪ್ಪಿಕೊಂಡರು. ನಂತರ ಸೀನ ಪೂಜಾರಿಯವರ ಮನೆತನದ ಹಿರಿಯರಾದ ಊರವರ ಸಹಕಾರದಿಂದ ಗರೋಡಿ ಕಟ್ಟಿದರಂತೆ. ಪೂಜೆ ಯಾವ ರೀತಿ ಆಚರಿಸುವುದೆಂದು ಯೋಚಿಸುತ್ತಿದ್ದಾಗ ರಾತ್ರಿ ಪೂಜಾರಿಗೆ ಕನಸಿನಲ್ಲಿ ಕೋಟಿಚೆನ್ನಯರು ಬಂದು ಒಂದು ಶ್ರೀ ಗಂಧದ ತುಂಡು ಐದು ಅಶ್ವತ್ಥದ ಎಲೆ, ಅಡಿಕೆ ಇವೆಲ್ಲವನ್ನು ಸ್ಥಳೀಯ ಹಲಸಿನ ಮರದಲ್ಲಿ ಕಟ್ಟಿ ಅದೇ ಹಲಸಿನ ಮರದಿಂದ ತಮ್ಮ ಪಾಪೆ ತಯಾರಿಸ ಬೇಕೆಂದು ಅಪ್ಪಣೆಯಾಯಿತು.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರು ಅಂತಸ್ತಿನ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರ ಇಬ್ಬರು ಮಕ್ಕಳ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಬಲ್ಲಾಳರ ಮಣೆ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಹುಲಿದೇವರು, ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ ಹಾಗು ಜೋಗಿಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಹಿಂಬದಿಯಲ್ಲಿರುವ ಗುಡಿಯಲ್ಲಿ ಮೈಂದಾಳತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನಲ್ಲಿರುವ ಗುಡಿಯಲ್ಲಿ ಶಿವರಾಯನ ಮರದ ಮೂರ್ತಿಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಆವರದಲ್ಲಿ ತುಳಸೀಕಟ್ಟೆ, ಬಲಿಕಲ್ಲು ಇದೆ.

ಕೊಲ್ಲ ಪೂಜಾರಿ

ಗರೋಡಿ ಮನೆ ಕೊಲ್ಲ ಪೂಜಾರಿ (55 ವರ್ಷ ಪ್ರಾಯ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಬಸವ ಪೂಜಾರಿ, ವೆಂಕಟ ಪೂಜಾರಿಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೋಟಿ ಪೂಜಾರಿ, ಕೊಲ್ಲ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.

ಬಿಲ್ಲಾಡಿ ಮನೆ ಶಂಕರ ಶೆಟ್ಟಿ

ಬಿಲ್ಲಾಡಿ ಮನೆ ಶಂಕರ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ರಾಧಾಕೃಷ್ಣ ಶೆಟ್ಟಿಯವರು ಸಹ ಮೊಕ್ತೇಸರರಾಗಿದ್ದಾರೆ. ಹಿಂದೆ ಅಂತಣ್ಣ ಶೆಟ್ಟಿ ಹಾಗೂ ಬಿಲ್ಲಾಡಿ ಜಯರಾಮ ಶೆಟ್ಟಿ ಇವರು ಇಲ್ಲಿಯ ಸಹ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಮಾರ್ಚ ತಿಂಗಳ 26ನೇ ತಾರೀಖಿನಂದು ಹಾಲುಹಬ್ಬ, ದರ್ಶನ ಸೇವೆ ನಡೆಯುತ್ತದೆ.
ಬಿಲ್ಲಾಡಿ, ಶೀರೂರು, ನೈಲಾಡಿ, ಹೆಗ್ಗುಂಜೆ, ವಂಡಾರ್, ಆವರ್ಸೆ ಊರ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದಾರೆ. ಈ ಗರೋಡಿಯಲ್ಲಿ ಹೆರಿಗೆಯಾದ ನಂತರ ತಿಂಗಳು ಮಾಡುವ ಕ್ರಮ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಯು 2001 ರಲ್ಲಿ ಜೀಣೋದ್ಧಾರಗೊಂಡಿದೆ.
ಬಾಲಯ್ಯ ಮಡಿವಾಳ ಮಣಿಕಲ್ಲು ಇವರು ಮಡಿವಾಳರಾಗಿ, ರಾಜು ದೇವಾಡಿಗ ಮಣಿಕಲ್ಲು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಣಿಕಲ್ಲು, ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576223.

ಅರ್ಚಕರು:

ಕೊಲ್ಲ ಪೂಜಾರಿ – 8105379877

ಮೊಕ್ತೇಸರರು:

ಬಿಲ್ಲಾಡಿ ಮನೆ ಶಂಕರ ಶೆಟ್ಟಿ – 9632820976

ಮಾಹಿತಿ ನೀಡಿದವರು :

ಬಿಲ್ಲಾಡಿ ಮನೆ ಶಂಕರ ಶೆಟ್ಟಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahmabanta Shivaraya Garodi, Kolkebailu

ಶ್ರೀ ಬ್ರಹ್ಮಬಂಟ ಶಿವರಾಯ ಗರೋಡಿ, ಕೊಳ್ಕೆಬೈಲು

ಉಡುಪಿಯಿಂದ ಬಾರ್ಕೂರು – ಯಡ್ತಾಡಿ – ಸೈಬ್ರಕಟ್ಟೆ – ಅಲ್ಲಿಂದ ಮುಂದೆ ಶಿರಿಯಾರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 2ಕಿ.ಮೀ. ನಂತರ ಕುದುರುಕಟ್ಟೆ ಬಸ್ ನಿಲ್ದಾಣದ ಹತ್ತಿರ ಎಡಕ್ಕೆ ತಿರುಗಿ ಸುಮಾರು ಮುಕ್ಕಾಲು ಕಿ. ಮೀ. ಸಾಗಿದರೆ ಕೊಳ್ಕೆಬೈಲು ಗರೋಡಿ ಸಿಗುವುದು.
ಗರೋಡಿಯ ಮುಖ್ಯದ್ವಾರವು ಪೂರ್ವಾಭಿಮುಖವಾಗಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇದು ಆಯದ ಗರೋಡಿಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರ ಇಬ್ಬರು ಮಕ್ಕಳ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಒಂದು ಮಗುವಿನ ಮರದ ಮೂರ್ತಿ, ಮೈಸಂದಾಯ ದೈವದ ಪಂಚಲೋಹದ ಮುಖ ಮೂರ್ತಿ ಹಾಗೂ ಬಲ್ಲಾಳರ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮರದ ಗುಡಿಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ದೂಮಾವತಿಯ ಮಣೆಮಂಚ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರು ಜೋಗಿಪುರುಷ ಹಾಗೂ ಚೌಂಡೇಶ್ವರ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ. ಗುಡಿಯ ಹೊರಗೆ ಹೈಗುಳಿ ದೈವದ ಮರದ ಗದ್ದಿಗೆಯಿದೆ. ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ, ತುಳಸೀಕಟ್ಟೆ, ಕೃತಿಮಗಣ ಬೋಗಲ್ಲು(ಬಲಿಕಲ್ಲು)ಗಳಿವೆ.

ಗಿರಿಯ ಪೂಜಾರಿ

ಗರೋಡಿಮನೆ ಗಿರಿಯ ಪೂಜಾರಿ(83 ವರ್ಷ) ಇವರು ಈ ಗರೋಡಿಯ ಅರ್ಚಕರಾಗಿದ್ದಾರೆ. ರಾಘವೇಂದ್ರ ಪೂಜಾರಿ ಮತ್ತು ಕುಶಲ ಪೂಜಾರಿಯವರು ಇಲ್ಲಿಯ ಸಹ ಅರ್ಚಕರು. ಗಿರಿಯ ಪೂಜಾರಿಯವರ ಮೊದಲು ಪಂಜು ಪೂಜಾರಿ, ಅಣ್ಣಪ್ಪ ಪೂಜಾರಿ, ಕರಿಯ ಪೂಜಾರಿ ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಸೋಮ ಪೂಜಾರಿ ಮತ್ತು ಸುಕ್ರ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಬೋಳು ಪೂಜಾರಿ, ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.

ಶಿರಿಯಾರ ರಾಮಣ್ಣ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದವರು. ನಡುಮನೆ ರವೀಂದ್ರ ಶೆಟ್ಟಿಯವರು, ಹೊಸಮನೆ ಬೀನಾ ಆರ್.ಶೆಟ್ಟಿ, ಹೊಸಮನೆ ದಿವಾಕರ ಶೆಟ್ಟಿ, ಮೂಡುಹದ್ದು ಮನೆ ಕಿಶನ್ ಹೆಗ್ಡೆ ಇವರುಗಳು ರಾಮಣ್ಣ ಹೆಗ್ಡೆಯವರ ವಂಶಸ್ತರು (ಮತ್ತು ಉತ್ತರಾಧಿಕಾರಿಗಳು).

ರವೀಂದ್ರನಾಥ ಶೆಟ್ಟಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ರವೀಂದ್ರನಾಥ ಶೆಟ್ಟಿ ಅಧ್ಯಕ್ಷರಾಗಿಯೂ, ಶೇಖರ ಸುವರ್ಣ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ ಕದಿರುಕಟ್ಟುವುದು, ಶಿವರಾಯನಿಗೆ ಕುರಿ ಸೇವೆ, ಡಿಸೆಂಬರ್ ತಿಂಗಳ ಮೊದಲವಾರ ಅಗೆಲು ಸೇವೆ, ಮರುದಿನ ಹಾಲುಹಬ್ಬ, ತುಲಾಭಾರ ಸೇವೆ ನಡೆಯುತ್ತದೆ. ಗರೋಡಿಯ ಯಕ್ಷಗಾನ ಕಲಾಸಂಘ ದಿಂದ ಯಕ್ಷಗಾನ ನಡೆಯುತ್ತದೆ. ನಾರಾಯಣಗುರು ಜಯಂತಿಯನ್ನು ಗರೋಡಿಯಲ್ಲಿ ವಿಶೇಷವಾಗಿ ಆಚರಿಸುತ್ತಾರೆ.
ಶಿರಿಯಾರ ಗ್ರಾಮದ ಬಡಾಕೆರೆ, ಕಲ್ಬೆಟ್ಟು, ಕಲ್ಲಾಡಿ, ಪಡುಮುಂಡು, ಬಂಟಾಡಿ, ಕೊಡ್ಲಬೈಲು ಪ್ರದೇಶದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವಡೆಗಳನ್ನು ಸಲ್ಲಿಸುತ್ತಾರೆ. ಊರಜನರ ವರಡ ವಂತಿಗೆ ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
27-04-1990, 10-07-2003 ಹಾಗೂ 2020ನೇ ಇಸವಿಯಲ್ಲಿ ಗರೋಡಿಯ ಜೀಣೋದ್ಧಾರವಾಗಿದೆ.
ಗರೋಡಿಯಲ್ಲಿರುವ ಶ್ರೀ ಬ್ರಹ್ಮಬಂಟ ಶಿವರಾಯ ಯಕ್ಷಗಾನ ಕಲಾ ಸಂಘ ಕಳೆದ 35 ವರ್ಷಗಳಿಂದ ಇಲ್ಲಿ ಹಾಲುಹಬ್ಬದಂದು ಯಕ್ಷಗಾನ ಬಯಲಾಟ ನಡೆಸುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬಂಟ ಶಿವರಾಯ ಗರೋಡಿ, ಕೊಳ್ಕೆಬೈಲು,
ಶಿರಿಯಾರ ಗ್ರಾಮ, ಕೊಳ್ಕೆಬೈಲು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಅರ್ಚಕರು:

ಗಿರಿಯ ಪೂಜಾರಿ – 9008389120

ದರ್ಶನ ಪಾತ್ರಿಗಳು:

ಸೋಮ ಪೂಜಾರಿ – 99001001341,
ಸುಕ್ರ ಪೂಜಾರಿ – 9982915394.

ಆಡಳಿತ ಸಮಿತಿ:

ಅಧ್ಯಕ್ಷರು – ರವೀಂದ್ರನಾಥ ಶೆಟ್ಟಿ – 9741968860,
ಕಾರ್ಯದರ್ಶಿ: ಶೇಖರ ಸುವರ್ಣ- 7019674359

ಮಾಹಿತಿ ನೀಡಿದವರು :

ರವೀಂದ್ರನಾಥ ಶೆಟ್ಟಿ,
ಗಿರಿಯ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025