Baidashree

Doddakere Bettu Mane Garodi, Bommarabettu

ದೊಡ್ಡಕೆರೆಬೆಟ್ಟು ಮನೆ ಗರೋಡಿ, ಬೊಮ್ಮರಬೆಟ್ಟು

ಈ ಮನೆ ಗರೋಡಿಯು ಬೊಮ್ಮರಬೆಟ್ಟು ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರೋಡಿಯ ಹತ್ತಿರದಲ್ಲಿದೆ.
ಈ ಮನೆಗರೋಡಿ ಹಾಗೂ ಬೊಮ್ಮರಬೆಟ್ಟು ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರೋಡಿಯ ಐತಿಹ್ಯಕ್ಕೂ ನಿಕಟ ಸಂಬಂಧವಿದೆ. ಜೈನರ ಬೀಡು ಇಲ್ಲಿ ಇದ್ದ ಕಾರಣ ಬೀಡನ್ನು ಅರಸಿ ಬಂದ ಕೋಟಿಚೆನ್ನಯರು ಮೊದಲು ಭೇಟಿ ನೀಡಿದ್ದು ದೊಡ್ಡಕೆರೆಬೆಟ್ಟು ಪೂಜಾರಿಯವರ ಮನೆಗೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಅಂದು ಕೋಟಿಚೆನ್ನಯರು ಬೆಳಗ್ಗೆ ಬಂದು ಬೀಡಿನ ದಾರಿ ಕೇಳುವಾಗ ದೊಡ್ಡಕೆರೆಬೆಟ್ಟು ಮನೆ ಪೂಜಾರಿಯವರು ಏನೋ ಕೆಲಸದಲ್ಲಿ ನಿರತರಾಗಿದ್ದರು. ಕೆಲಸ ಮುಗಿದ ಮೇಲೆ ದಾರಿ ತೋರಿಸುವುದಾಗಿ ಸ್ವಲ್ಪ ಹೊತ್ತು ಕುಳಿತು ಕೊಳ್ಳುವಂತೆ ಹೇಳಿದರು. ಒಂದು ಕ್ಷಣ ಕುಳಿತ ಕೋಟಿಚೆನ್ನಯರು ಮತ್ತೊಂದು ಕ್ಷಣದಲ್ಲಿ ಮಾಯವಾಗಿದ್ದರು. ನಂತರ ಅವರು ಅಂಗಡಿಬೆಟ್ಟು ಪೂಜಾರಿಯವರ ಮನೆಗೆ ಹೋಗಿ ದಾರಿ ಕೇಳಿ, ಪೂಜಾರಿಯವರು ದಾರಿ ತೋರಿಸುತ್ತಾರೆ. ಮುಂದೆ ಬೀಡಿನ ಯಜಮಾನರು, ಮೈಂದಾಳ ಪಟ್ಟದವರು, ಊರಮಂದಿ ಸೇರಿ ಬೊಮ್ಮರಬೆಟ್ಟು ಗರಡಿ ನಿರ್ಮಾಣವಾಗುತ್ತದೆ.
ದೊಡ್ಡಕೆರೆಬೆಟ್ಟು ಪೂಜಾರಿಯವರಿಗೆ ತನ್ನ ಮನೆಗೆ ಬಂದಿದ್ದ ಇಬ್ಬರು ಸುಂದರ ದೃಢಕಾಯರು ಕೋಟಿಚೆನ್ನಯರೆಂಬುದು ತಡವಾಗಿ ಅರಿವಾಗಿ ನೊಂದುಕೊಳ್ಳುತ್ತಾರೆ. ಕೋಟಿಚೆನ್ನಯರು ತನ್ನ ಮನೆಗೆ ಬಂದಿದ್ದು ತನ್ನ ಭಾಗ್ಯವೆಂದು ಕೊಳ್ಳುತ್ತಾರೆ. ಮನೆ ಮಂದಿ ಕೂಡಿ ಕೋಟಿಚೆನ್ನಯರು ಕುಳಿತ ಆ ಪುಣ್ಯ ನೆಲವನ್ನು ಗರೋಡಿಯೆಂದು ಭಾವಿಸುತ್ತಾರೆ. ಅಂದಿನಿಂದ ಗರೋಡಿಯಲ್ಲಿ ನಡೆಯುವ ಎಲ್ಲಾ ಪೂಜೆ ಪುರಸ್ಕಾರಗಳು ಈ ಮನೆಯಲ್ಲೂ ನಡೆಯುತ್ತದೆ.
ಈ ಮನೆ ಗರೋಡಿಯ ಕೋಣೆಯಲ್ಲಿ ಕಟ್ಟಿದ ಉಯ್ಯಾಲೆಯಲ್ಲಿ ಕೋಟಿಚೆನ್ನಯ ಭಾವ ಚಿತ್ರದ ಮುಂದೆ ಎರಡು ಕಲಶ, ದೀಪಗಳನ್ನಿಟ್ಟು ಪೂಜಿಸುತ್ತಾರೆ. ಉಯ್ಯಾಲೆಯ ಹಿಂದಿನ ಗೋಡೆಯಲ್ಲಿ ಬ್ರಹ್ಮರ ಗುಂಡದ ಕಲ್ಪನೆಯುಳ್ಳ ಚಿತ್ರವಿದೆ. ಮೂಲ ಮೈಸಂದಾಯ, ಜುಮಾದಿ ಬಂಟ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ವರ್ತೆ ಕಲ್ಕುಡ ದೈವಗಳ ಆರಾಧನೆಯೂ ಇದೆ.

ಗೋಪಾಲ ಪೂಜಾರಿ

ಗೋಪಾಲ ಪೂಜಾರಿಯವರು ಈ ಮನೆಯ ಮುಖ್ಯಸ್ಥರು. ಇವರ ಮೊದಲು ಹಿರಿಯರು ಬಾಬು ಪೂಜಾರಿ, ಬೊಳ್ಳು ಪೂಜಾರಿ, (ದರ್ಶನ ಪಾತ್ರಿ) ಬೊಗ್ಗು ಪೂಜಾರಿ, (ದರ್ಶನ ಪಾತ್ರಿ) ದುಗ್ಗಪ್ಪ ಪೂಜಾರಿ, ಕೋಟಿ ಪೂಜಾರಿ, ರಾಮ ಪೂಜಾರಿಯವರು.

ಸಚಿನ್ ಪೂಜಾರಿ

ಸಚಿನ್ ಪೂಜಾರಿಯವರು ಈ ಮನೆ ಗರೋಡಿಯ ಪೂ ಪೂಜನೆಯವರು.
ದೊಡ್ಡಕೆರೆಬೆಟ್ಟು ಮನೆ ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮಗಳಿವೆ. ಎರಡು ವರ್ಷಗಳಿಗೊಮ್ಮೆ ಅಗೆಲು, ಅನ್ನ ನೈವೇದ್ಯ ಸೇವೆ ಬೊಮ್ಮರಬೆಟ್ಟು ಗರೋಡಿಯಲ್ಲಿ ನಡೆಯುತ್ತದೆ. ಆ ದಿನ ಇಲ್ಲಿ ಮನೆ ಗರೋಡಿಯಲ್ಲಿ ಸಾಂಕೇತಿಕವಾಗಿ ಅಗೆಲ್ ನಡೆಯುತ್ತದೆ. ವ್ರತ ಫಲಾಹಾರದಲ್ಲಿ ಕುಳಿತ ಮನೆಯ ಹೆಣ್ಣು ಮಗಳೊಬ್ಬಳನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಕೈಯಲ್ಲಿ ವೀಳ್ಯದೆಲೆ, ಅಡಿಕೆ, ಪಿಂಗಾರ ಹೂ ಹಿಡಿದುಕೊಂಡು ಕೂರಿಸುತ್ತಾರೆ. ಜೋಡು ದೀಪಗಳನ್ನು ಬೆಳಗಿಸಿ ಇಡಲಾಗುತ್ತದೆ. ಬೊಮ್ಮರಬೆಟ್ಟು ಗರೋಡಿಯಲ್ಲಿ ಅನ್ನ ನೈವೇದ್ಯವಾದ ಬಳಿಕ ಇಲ್ಲಿ ಕುಳಿತ ಹೆಣ್ಣು ಮಗಳನ್ನು ಗರೋಡಿಯ ಅರ್ಚಕರೇ ಬಂದು ಎಬ್ಬಿಸುವ ಕ್ರಮ ಇದೆ.

ಗರೋಡಿಯ ವಿಳಾಸ:

ದೊಡ್ಡಕೆರೆಬೆಟ್ಟು ಮನೆ,
ಬೊಮ್ಮರಬೆಟ್ಟು ಗ್ರಾಮ,
ಅಂಚೆ ಹಿರಿಯಡ್ಕ 576113.

ಪೂ ಪೂಜನೆಯವರು:

ಸಚಿನ್ ಪೂಜಾರಿ:
ಮೊಬೈಲ್: 9739968443

ಮಾಹಿತಿ ಸಂಗ್ರಹಿಸಿದ ದಿನಾಂಕ:

25-07-2022

Shree Brahma Baidarkala Garodi Majoor

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಮಜೂರು

ಉಡುಪಿಯಿಂದ ಕಾಪು ಪೇಟೆಯಲ್ಲಿ ಎಡಕ್ಕೆ ಶಿರ್ವ ರಸ್ತೆಯ ಮೂಲಕ ಸುಮಾರು 1.5 ಕಿ. ಮೀ. ಸಾಗಿ ಮಜೂರು ಸರ್ಕಲ್‌ಗೆ ಮೊದಲೇ ಎಡಭಾಗದಲ್ಲಿ ಸಿಗುವ ಮಜೂರು ಗರೋಡಿಯ ಸ್ವಾಗತ ಗೋಪುರದ ಮೂಲಕ ಹೋಗಿ ಈ ಗರೋಡಿ ತಲುಪ ಬಹುದು.

ಇದು ಪುರಾತನ ಗರೋಡಿಯಾಗಿದ್ದು ಆಯದಲ್ಲಿದೆ. ಷಢಾಧಾರ ಪ್ರತಿಷ್ಟೆ ಹೊಂದಿರುವ ಈ ಗರೋಡಿಯ ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು, ಇನ್ನೊಂದು ದ್ವಾರವು ಉತ್ತರ ದಿಕ್ಕಿಗೆ ಇದೆ.
ಸ್ಥಳ ಪುರಾಣಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಕೇಂಜದಿಂದ ಎಲ್ಲೂರಿಗೆ ಬಂದು ಅಲ್ಲಿ ಗರೋಡಿ ನಿರ್ಮಾಣದ ಬಳಿಕ ಮಜೂರು ಜೈನ ಬೀಡಿಗೆ ಬಂದು ನಿಶಾನೆ ತೋರಿಸಿದ ನಂತರ ಬೀಡು ಮನೆತನದವರು ಮಜೂರಿನಲ್ಲಿ ಗರೋಡಿ ಕಟ್ಟಿಸಿ ಅದರ ಎಲ್ಲಾ ಉಸ್ತುವಾರಿಗಳನ್ನು ಅವರೇ ನೋಡಿಕೊಳ್ಳುತ್ತಿದ್ದರು. ಕ್ರಮೇಣ ಆ ಮನೆತನದವರು ನಶಿಸಿ ಊರುಬಿಟ್ಟು ಹೋದಾಗ ಗರೋಡಿಯು ಪಾಳು ಬಿತ್ತು. ಈ ಸ್ಥಳದ ಪಕ್ಕದಲ್ಲೇ ಉಂಡಾರು ವಿಷ್ಣುಮೂರ್ತಿ ದೇವಾಲಯವಿದೆ. ಈ ದೇವಾಲಯವು ಸೋದೆ ಮಠಕ್ಕೆ ಸೇರಿದ್ದು. ಒಂದು ದಿನ ಸೋದೆ ಮಠದ ಸ್ವಾಮಿಗಳು ಪಲ್ಲಕ್ಕಿಯಲ್ಲಿ ಗರೋಡಿಯ ಪಕ್ಕದ ದಾರಿಯಲ್ಲಿ ಹೋಗುತ್ತಿದ್ದಾಗ, ಪಲ್ಲಕ್ಕಿ ಇದ್ದಕ್ಕಿದ್ದಂತೆ ನಿಂತು ಬಿಡುತ್ತದೆ. ಮುಂದೆ ಸಾಗದ ಪಲ್ಲಕ್ಕಿಯನ್ನು ನಿಲ್ಲಿಸಿದವರಾರೆಂದು ಚಿಂತಿಸಿದ ಸ್ವಾಮೀಜಿಯವರಿಗೆ ಕೋಟಿಚೆನ್ನಯರ ನೆನಪಾಗುತ್ತದೆ. ಹತ್ತಿರದಲ್ಲೇ ಅಳಿದುಳಿದ ಗರೋಡಿಯ ಕುರುಹುಗಳೂ ಕಾಣ ಸಿಗುತ್ತವೆ. ಪಲ್ಲಕ್ಕಿ ಯಥಾಸ್ಥಿತಿಯಂತೆ ಮುಂದೆ ಸಾಗಿದರೆ ಗರೋಡಿಯ ಪುನರ್‌ನಿರ್ಮಾಣ ಮಾಡುವುದಾಗಿ ಸಂಕಲ್ಪಿಸುತ್ತಾರೆ. ಪಲ್ಲಕ್ಕಿ ಮುಂದುವರಿಯುತ್ತದೆ. ಸೋದೆ ಮಠದ ಸ್ವಾಮೀಜಿಯವರು ತಾವೇ ನಿಂತು ಗರೋಡಿ ಕಟ್ಟಿಸುತ್ತಾರೆ. ಪೂಜೆ ಪುರಸ್ಕಾರಗಳಿಗೆ ಜನ ನೇಮಿಸಿ ಗದ್ದೆ ಉಂಬಳಿ ಬಿಡುತ್ತಾರೆ. ಮಠದ ವತಿಯಿಂದಲೇ ಗರೋಡಿಯ ಉಸ್ತುವಾರಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಗರೋಡಿಯ ಅರ್ಚಕರಿಗೆ ಗರೋಡಿಯ ಕೀಲಿ ಕೈಯನ್ನು ಹಸ್ತಾಂತರಿಸಿದ್ದಾರೆ. ಆಯಾ ಗುತ್ತು ಬರ್ಕೆಯ ಯಜಮಾನರುಗಳಿಗೆ ಗರೋಡಿ ಆಡಳಿತದ ಗೌರವ ನೀಡಿದ್ದಾರೆ. ಗರೋಡಿಗೆ ಆಡಳಿತ ಸಮಿತಿಯೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬ್ರಹ್ಮ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಪೂಜೆಯಿದೆ. ಗುಂಡದ ಎಡಭಾಗದಲ್ಲಿ ಉಯ್ಯಾಲೆಯ ಮೇಲೆ ಕೋಟಿಚೆನ್ನಯರಿಗೆ ಎರಡು ಗಿಂಡೆ, ಇಬ್ಬರು ಮಕ್ಕಳಿಗೆ ಕೂಚಿಗಳಿವೆ. ಹತ್ತಿರದಲ್ಲೇ ಐವರು ಮಾಯಾಕಾರರ (ವಿವರ ತಿಳಿದಿಲ್ಲ) ಸಾನಿದ್ಯವಿದೆ. ಗುಂಡದ ಬಲಭಾಗದಲ್ಲಿ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವ ಮಣೆ ಮಂಚಗಳಿವೆ. ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷ, ಪಿಲ್ಚಂಡಿ, ಜುಮಾದಿ, ಜಾರಂದಾಯ ದೈವಗಳು ಹಾಗೂ ಗುರುಕಂಭದ ಆರಾಧನೆ ನಡೆಯುತ್ತದೆ. ಗರೋಡಿಯ ಆವರಣದೊಳಗಿನ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ, ಕೊಳತ ಜುಮಾದಿ ಮಣೆ ಮಂಚಗಳಿವೆ. ಅಯ್ಯ ಕಲ್ಲು ಹಾಗೂ ತುಳಸೀಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ದೋಗು ಪೂಜಾರಿ

ಗರೋಡಿ ಮನೆ ದೋಗು ಪೂಜಾರಿ (ಪ್ರಾಯ 63) ಇವರು 1989 ರಿಂದ ಪೂ ಪೂಜನೆಯ ಸೇವೆ ಮಾಡುತ್ತಿದಾರೆ. ಹಿಂದೆ ಅವರ ಅಣ್ಣ ಶೀನ ಪೂಜಾರಿ, ಮಾವ ಕಾಡ್ಯ ಪೂಜಾರಿ, ಮೋಹನ ಪೂಜಾರಿಯವರಂತಹ ಹಿರಿಯರು ಈ ಸೇವೆ ಮಾಡಿದ್ದರು. ಈಗ ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೊರಗ ಪೂಜಾರಿಯವರು ದರ್ಶನದ ಪಾತ್ರಿಯಾಗಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿಯಂದು ಆರ್ಘ್ಯ ಬಿಡುವುದು, ದೀಪಾವಳಿಯಂದು ದೀಪದ ಕಂಬವಿಟ್ಟು ಬಲಿಯೇಂದ್ರ ಕರೆಯುವ ಸಂಪ್ರದಾಯವಿದೆ. ಜನವರಿ ತಿಂಗಳ ಮೂರು, ನಾಲ್ಕನೇ ವಾರದಲ್ಲಿ ಕಾಲಾವದಿ ನೇಮೋತ್ಸವ ನಡೆಯುತ್ತದೆ. ಉಂಡಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭೂತರಾಜರಿಗೆ ಕಾಣಿಕೆಯಿಟ್ಟು ನೇಮೋತ್ಸವಕ್ಕೆ ದಿನ ನಿಗದಿ ಮಾಡುವ ಪದ್ದತಿ ಇದೆ. ಮೊದಲ ದಿನ ಅಗೆಲು ಸೇವೆ, ಎರಡನೇ ದಿನ ಬೈದರ ನೇಮೋತ್ಸವ, ಮೂರನೇ ದಿನ ಜೋಗಿಪುರುಷ ಹಾಗೂ ಮಾಯಂದಾಲ್ ಕೋಲ ನಡೆಯುತ್ತದೆ.
ಮಜೂರು ಗರೋಡಿಯ ಕೂಡುಕಟ್ಟಿಗೆ ಮಜೂರು, ಹುಲಿಯಾರು, ಕರಂದಾಡಿ, ಪಂಜಿತ್ತೂರು, ಮುಡುಂಬು, ಉಂಡಾರು ಗ್ರಾಮಗಳು ಸೇರಿವೆ. ಈ ಗ್ರಾಮಗಳಲ್ಲಿ ಸುಮಾರು 1000ಮನೆಗಳ ಮಂದಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.
01-05-2005 ರಲ್ಲಿ ಗರೋಡಿಯ ಜೀರ್ಣೋದ್ಧಾರ ಬ್ರಹ್ಮ ಕಲಶ ನಡೆದಿದೆ.
ನರಸಿಂಹ ಪರವ, ಪೇತ್ರಿ, ಸಂತೋಷ ಪರವ, ಬಾಬು ಪರವರು ಈ ಗರೋಡಿಯ ನೃತ್ಯ ವಿಶಾರದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಮಜೂರು. ಮಜೂರು ಅಂಚೆ,
ಕಾಪು ತಾಲೂಕು, ಉಡುಪಿ 574106

ಪೂ ಪೂಜನೆಯವರ ವಿಳಾಸ:

ದೋಗು ಪೂಜಾರಿ,
ಮಜೂರು ಗರೋಡಿಮನೆ,
ಮಜೂರು ಅಂಚೆ,
ಕಾಪು ತಾಲೂಕು, ಉಡುಪಿ 574106.
ಮೊಬೈಲ್ : 9611417857

ಮಾಹಿತಿ ಸಂಗ್ರಹಿಸಿದ ದಿನಾಂಕ:

28-07-2022

Kinnimulki Shree Brahma Baidarkala Garodi

ಕಿನ್ನಿಮೂಲ್ಕಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ

ಉಡುಪಿ ಕಿನ್ನಿಮೂಲ್ಕಿಯ ವೀರಭದ್ರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಎಡಕ್ಕೆ 150ಮೀ.ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು, ಷಡಾಧಾರ ಪ್ರತಿಷ್ಟೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಬಲಭಾಗದಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ (2008ರಲ್ಲಿ ಸ್ಥಾಪಿಸಲ್ಪಟ್ಟ) ಮರದ ಪಾಪೆಗಳಿವೆ. ಗುಂಡದ ಎಡಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಮಣೆ ಮಂಚಗಳಿವೆ. ಗುಂಡದ ಹಿಂಭಾಗದಲ್ಲಿ ಮೂಲಮೈಸಂತಾಯ ದೈವದ ಸಾನಿಧ್ಯವಿದೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯ ಬಲ ಭಾಗದಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ, ಪಂಚ ಧೂಮಾವತಿ ಮತ್ತು ಬಂಟ, ಹಾಗೂ ಮರ್ಲ ಧೂಮಾವತಿ ಮತ್ತು ಬಂಟರ ಮಣೆ ಮಂಚವಿದೆ. ಎಡಭಾಗದಲ್ಲಿ ಜೋಗಿ ಪುರುಷ, ಪಂಜುರ್ಲಿ, ಜೋಡು ಪಂಜುರ್ಲಿ, ಹೆಣ್ಣು ಶಕ್ತಿ (ದಾರಂಬಲ್ಲಾಳ್ತಿ ಎಂಬ ನಂಬಿಕೆ) ದೈವಗಳ ಮಣೆ ಮಂಚವಿದೆ.
ಗರೋಡಿಯ ಆವರಣದೊಳಗೆ ಪಿಲ್ಚಂಡಿ ದೈವದ ಗುಡಿ, ಅಯ್ಯಕಲ್ಲು, ತುಳಸಿಕಟ್ಟೆಗಳಿವೆ.

ಭಾಸ್ಕರ ಸುವರ್ಣ

ಭಾಸ್ಕರ ಸುವರ್ಣರವರು ಈ ಗರೋಡಿಯ ಪೂ ಪೂಜನೆಯವರಾಗಿ 2005ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಇವರ ತಂದೆ ಶೀನ ಪೂಜಾರಿಯವರು (1955ರಿಂದ 2005) ಇವರ ಮೊದಲು ತಾತ್ಕಾಲಿಕವಾಗಿ ಅಣ್ಣಯ್ಯ ಪೂಜಾರಿ, ಮೋನು ಪೂಜಾರಿ, ಬೋಳ ಪೂಜಾರಿಯವರು ಈ ಸೇವೆ ಮಾಡಿದ್ದರು. ಇವರಿಗೆ ಮೊದಲು ಶೀನ ಪೂಜಾರಿಯವರ ಮಾವ ಚೆನ್ನು ಪೂಜಾರಿ, ಚೆನ್ನು ಪೂಜಾರಿಯವರ ಮಾವ ಮುದರ ಪೂಜಾರಿ, ಮುದರ ಪೂಜಾರಿಯವರ ಮಾವ ಪರದೇಶಿ ಪೂಜಾರಿ ಮೊದಲಾದ ಹಿರಿಯರಯ ಪೂ ಪೂಜನೆ ಸೇವೆ ಮಾಡಿದ್ದರು.
ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ದಾಸು ಪೂಜಾರಿ, ಅಣ್ಣಯ್ಯ ಪೂಜಾರಿ, ಚೆನ್ನು ಪೂಜಾರಿ, ಅಣ್ಣಪ್ಪ ಪೂಜಾರಿಯವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದೆ.
ಗರೋಡಿಯಲ್ಲಿ 2005 ರಿಂದ ನಿತ್ಯ ಪೂಜೆಯಿದೆ, ಉಳಿದಂತೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಸೋಣ ತಿಂಗಳಲ್ಲಿ ಹೂವಿನ ಪೂಜೆ, ಕದಿರು ಕಟ್ಟುವ ಸಂಪ್ರದಾಯವಿದೆ. ಕಾಲಾವಧಿ ಅಗೆಲು ಸೇವೆ, ಬೈದೇರುಗಳ ನೇಮೋತ್ಸವ, ಜೋಗಿ ಪುರುಷ, ಮಾಯಂದಾಲ್, ಕೋಲ ಸೇವೆಗಳು ನಡೆಯುತ್ತವೆ.
ಕಿನ್ನಿಮೂಲ್ಕಿ, ಕನ್ನರ್ಪಾಡಿ, ಭಾಗಷ: ಬೈಲೂರು ಗ್ರಾಮಗಳು ಗರೋಡಿಯ ಕೂಡುಕಟ್ಟಿಗೆ ಸೇರುತ್ತದೆ. ಕೂಡುಕಟ್ಟಿಗೆ ಸೇರಿದ ಮಂದಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕ ಸೇವೆ, ಕಲಶ ಕಟ್ಟಿ ಶುದ್ಧ ಮಾಡುವಂತಹ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಕಿನ್ನಿಮೂಲ್ಕಿ, ಕನ್ನರ್ಪಾಡಿ, ಭಾಗಷ: ಬೈಲೂರು ಗ್ರಾಮಗಳು ಗರೋಡಿಯ ಕೂಡುಕಟ್ಟಿಗೆ ಸೇರುತ್ತದೆ. ಕೂಡುಕಟ್ಟಿಗೆ ಸೇರಿದ ಮಂದಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕ ಸೇವೆ, ಕಲಶ ಕಟ್ಟಿ ಶುದ್ಧ ಮಾಡುವಂತಹ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1960ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗುವಾಗ ಹಂಚು ಹಾಕಿ ಬ್ರಹ್ಮ ಕಲಶವಾಗಿದೆ. ನಂತರ 1982 ಹಾಗೂ 2008ರಲ್ಲಿ ಪುನ: ಬ್ರಹ್ಮ ಕಲಶಗಳಾಗಿವೆ.
ಸಂತೋಷ ಪರವ, ಜಯ ಪರವ, ಸದಾಶಿವ ಪರವ, ಇವರು ಈ ಗರೋಡಿಯ ಬೈದರ ನೃತ್ಯ ವಿಶಾರದರು. ಪಿಲ್ಚಂಡಿ ಕೋಲಕ್ಕೆ ಭಾಸ್ಕರ ಗುಜರನ್ ಪಡುಬಿದ್ರಿ ಇವರು ಸೇವೆ ಸಲ್ಲಿಸುತ್ತಾರೆ.
2002ರಿಂದ 2012ರವರೆಗೆ ಶ್ರೀ ಜಯದುರ್ಗಾ ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾಮಂಡಳಿ, ಕಿನ್ನಿಮೂಲ್ಕಿ ಎಂಬ ಹೆಸರಿನ ಯಕ್ಷಮೇಳವೊಂದು ಗರೋಡಿಗೆ ಸಂಬಂಧಪಟ್ಟು ಕೆಲಸ ಮಾಡುತ್ತಿತ್ತು. 2017ರಿಂದ ಗರೋಡಿ ಗೈಸ್ ಎಂಬ ಕೂಟವೊಂದು ಕಾರ್ಯನಿರ್ವಹಿಸುತ್ತಿದೆ. 30 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಶ್ರೀ ಬ್ರಹ್ಮ ಬೈದರ್ಕಳ ಸಭಾಗೃಹವು ಗರೋಡಿಯ ಆವರಣದೊಳಗಿದೆ.

ಗರೋಡಿಯ ವಿಳಾಸ:

ಕಿನ್ನಿಮೂಲ್ಕಿ ಶ್ರಿ ಬ್ರಹ್ಮ ಬೈದರ್ಕಳ ಗರೋಡಿ,
ಅಂಚೆ ಕಿನ್ನಿಮೂಲ್ಕಿ,
ಉಡುಪಿ ತಾಲೂಕು – ಜಿಲ್ಲೆ.

ಪೂ ಪೂಜನೆಯವರು:

ಭಾಸ್ಕರ ಸುವರ್ಣ, “ಚೇತನ“ ಗರೋಡಿಮನೆ ಕನ್ನರ್ಪಾಡಿ ,
ಕಡೆಕಾರ್ ಅಂಚೆ,
ಉಡುಪಿ ತಾಲೂಕು – ಜಿಲ್ಲೆ.
ಮೊಬೈಲ್: 9902211049

ಮಾಹಿತಿ ಸಂಗ್ರಹಿಸಿದ ದಿನಾಂಕ:

25-07-2022

Shree Brahma Baidarkala Garodi Marpalli

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮಾರ್ಪಳ್ಳಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 66ರಲ್ಲಿ ಉದ್ಯಾವರ ಬಲಾಯಿಪಾದೆಯ ನಂತರ ಕೊರಂಗ್ರಪಾಡಿ – ಅಲೆವೂರು ರಸ್ತೆಗೆ ಎಡಕ್ಕೆ ತಿರುಗಿ ಸುಮಾರು 2.5ಕಿ. ಮೀ.ಸಾಗಿ ನಂತರ ಮಾರ್ಪಳ್ಳಿ ಗರೋಡಿ ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 1/2ಕಿ. ಮೀ. ಸಾಗಿದರೆ ಮಾರ್ಪಳ್ಳಿ ಗರೋಡಿ ಸಿಗುವುದು.
ಇದೊಂದು ಆಯದ ಗರೋಡಿಯಾಗಿದ್ದು, ಷಡಾಧಾರ ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಕುದುರೆಯೇರಿ ಕುಳಿತ ಪಂಚ ಲೋಹದ ವಿಗ್ರಹವಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಪೂಜೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ. ಬಲಭಾಗದಲ್ಲಿ ಕುದುರೆಯೇರಿ ಕುಳಿತ ಒಕ್ಕು ಬಲ್ಲಾಳ, ಕುಜುಂಬ ಕಾಂಜವ ಮರದ ಪಾಪೆಯಿದೆ.
ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಎಡಭಾಗದಲ್ಲಿ ಮಾಯಂದಾಳ್ ಮತ್ತು ಮಗು, ಕೊಳತ ಜುಮಾದಿಯ ಮರದ ಪಾಪೆ, ಬಲಭಾಗದಲ್ಲಿ ಜೋಗಿ ಪರುಷರ ಮರದ ಪಾಪೆ, ಪಿಲ್ಚಂಡಿ ಹಾಗೂ ಬಂಟರ ಮಣೆ ಮಂಚವಿದೆ.
ಬ್ರಹ್ಮ ಗುಡಿಯ ಎದುರಿಗೆ ಗುರುಕಂಬ, ಚಿಕ್ಕಮ್ಮದೇವಿ ಹಾಗೂ ಬಿಳಿ ಕುದುರೆಯ ಮರದ ಪಾಪೆಗಳಿವೆ
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿ ಗ್ರಾಮದ ಪಿಲ್ಚಂಡಿ, ಬೊಬ್ಬರ್ಯ ಸನ್ನಿಧಿಯ ಕಂಬ, ಅಯ್ಯಕಲ್ಲು ತುಳಸಿಕಟ್ಟೆಗಳಿವೆ.
ಗರೋಡಿಯ ಆವರಣದ ಹೊರಗೆ ನಾಗ ಸನ್ನಿಧಿ, ಕ್ಷೇತ್ರಪಾಲ, ರಕ್ತೇಶ್ವರಿ ದೈವಗಳಿಗೆ ಪೂಜೆಯಿದೆ. ಇನ್ನೊಂದು ಗುಡಿಯಲ್ಲಿ ಗರೋಡಿ ಮನೆಗೆ ಸಂಬಂಧಪಟ್ಟ ಮೂಲ ಮೈಸಂದಾಯ, ಪಂಜುರ್ಲಿ, ದೂಮಾವತಿ, ದಾರಂಬಲ್ಲಾಳ್ತಿ, ಮತ್ತಿತರ ದೈವಗಳಿವೆ.

ಮಹಾಬಲ ಪೂಜಾರಿ

ಮಹಾಬಲ ಪೂಜಾರಿ ಗರೋಡಿ ಮನೆ ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರಗಿಂತ ಮೊದಲು ಬೊಗ್ಗು ಪೂಜಾರಿ (ಮಹಾಬಲ ಪೂಜಾರಿಯವರ ತಮ್ಮ) ಚಂದು ಪೂಜಾರಿ (ಮಹಾಬಲ ಪೂಜಾರಿಯವರ ಮಾವ) ಗಿರಿಯ ಪೂಜಾರಿ (ಚಂದು ಪೂಜಾರಿಯವರ ಅಣ್ಣ) ಇವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಈಗ ಸ್ಥಳ ಪಾತ್ರಿಗಳಿಲ್ಲ. ಮೊದಲು ಅಣ್ಣ ತಮ್ಮಂದಿರಾದ ತುಕ್ರ ಪೂಜಾರಿ ಹಾಗೂ ಕಾಯಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ಈ ಗರೋಡಿಗೆ ಸಂಬಂಧಪಟ್ಟ ಗರೋಡಿ ಅಭಿವೃದ್ದಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ಕೆ.ಸುಂದರ ಶೆಟ್ಟಿ, ಕೆಮ್ತೂರು, ರಮೇಶ್ ಎ.ಬಂಗೇರ ಬೈಲೂರು, ಜಯರಾಮ ಶೆಟ್ಟಿ, ಮಾರ್ಪಳ್ಳಿ ಇವರುಗಳು ಗೌ.ಅಧ್ಯಕ್ಷರಾಗಿಯೂ, ಕೆ.ಪ್ರಭಾಕರ ಹೆಗ್ಡೆ ಕೆಮ್ತೂರು ಇವರು ಅದ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ 2002ರಿಂದ ನಿತ್ಯಪೂಜೆ ನಡೆಯುತ್ತದೆ. ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿಪೂಜೆ, ಅಷ್ಟಮಿಯಂದು ಆರ್ಘ್ಯ ಬಿಡುವುದು, ದೀಪಾವಳಿಯಂದು ದೀಪ ಕಂಬ ಇಟ್ಟು ಬಲಿಯೇಂದ್ರ ಕರೆಯುವುದು, ಹೂವಿನ ಪೂಜೆ, ಕದಿರುಲಟ್ಟುವುದು, ಸೋಣ ಸಂಕ್ರಾಂತಿಗೆ ಊರು ಸೇರಿ ಗಜ್ಜೆಯಿ ಸೇವೆ, ಅಗೆಲು ಸೇವೆ, ಕಾಲಾವಧಿ ಬೈದೇರುಗಳ ನೇಮೋತ್ಸವ, ಮಾಯಂದಾಲ್ ಕೋಲ, ಪಿಲ್ಚಂಡಿ ಕೋಲ ನಡೆಯುತ್ತದೆ. ಗರೋಡಿಯಲ್ಲಿ ಪಿಲ್ಚಂಡಿಯ ಹುಲಿ ಬಂಡಿ ಇದೆ.
ಕೊರಂಗ್ರಾಡಿ, ಕೆಮ್ತೂರು, ಬೈಲೂರು, ಚಿಟ್ಪಾಡಿ, ಮಾರ್ಪಳ್ಳಿ, ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರಜನರು ಈ ಗರೋಡಿಯಲ್ಲಿ ನಡೆಯುವ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಕಾರ್ಯಗಳ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಕಲಶಕಟ್ಟಿ ಶುದ್ದ ಮಾಡುವ ಕ್ರಮ ಮುಂತಾದ ಹರಕಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ, ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
1974ರಲ್ಲಿ ಗರೋಡಿಯ ಬೈ ಹುಲ್ಲು ತೆಗೆದು ಹಂಚು ಹಾಕಿ ಜೀರ್ಣೋದ್ದಾವಾಗಿದೆ. ನಂತರ 2002ರಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಸ ನಡೆದಿದೆ.
ಸಂತೋಷ ಪರವ, ಬೂಬ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ. ಹಿಂದೆ ಮೆಣ್ಕ, ಪಿಜಿನ, ಚೆಲ್ಲ, ಅಮ್ಮು, ನರಂಗ ಪರವರು ಈ ಸೇವೆ ಮಾಡಿದ್ದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಮಾರ್ಪಳ್ಳಿ, ಉದ್ಯಾವರ – ಕೊರಂಗ್ರಪಾಡಿ ಅಂಚೆ.
ಉಡುಪಿ ತಾಲೂಕು, ಜಿಲ್ಲೆ.

ಗರೋಡಿಯ ಪೂಪೂಜನೆಯವರು :

ಮಹಾಬಲ ಪೂಜಾರಿ
ಮೊಬೈಲ್ : 9611516726

ಮಾಹಿತಿ ಸಂಗ್ರಹಿಸಿದ ದಿನಾಂಕ:

26-07-2022

Shree Brahma Baidarkala Garodi Moodanidambur

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮೂಡನಿಡಂಬೂರು

ಉಡುಪಿ ಮಲ್ಪೆ ರಸ್ತೆಯಲ್ಲಿ ಬನ್ನಂಜೆಯಲ್ಲಿ ಬಲಕ್ಕೆ ತಿರುಗಿ ಸುಮಾರು 1ಕಿ.ಮೀ. ದೂರದಲ್ಲಿದೆ ಮೂಡನಿಡಂಬೂರು ಗರೋಡಿ.
ಇದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಇನ್ನೊಂದು ದ್ವಾರವು ಪಶ್ಚಿಮ ದಿಕ್ಕಿಗೆ ಇದೆ. ಪಶ್ಚಿಮ ದ್ವಾರದ ಮೂಲಕ ಹೊರ ಹೋಗುವಂತಿಲ್ಲ. ಒಂದು ವೇಳೆ ಹೊರಗೆ ಹೋದರೂ ಅದೇ ಬಾಗಿಲಲ್ಲಿ ಒಳಗೆ ವಾಪಾಸು ಬರಬೇಕೆಂಬುದು ಇಲ್ಲಿಯ ಸಂಪ್ರದಾಯ.
ಸ್ಥಳ ಪುರಾಣ ತಿಳಿದು ಬಂದಂತೆ ಪುಳಿಮಾರು ಮಡಸ್ಥಾನಕ್ಕೆ ಹೋಗಿ ಬೈದೇರುಗಳು ಕೇಳಿದಾಗ ಇಲ್ಲಿ ಜಾಗ ಕೊಟ್ಟಿದ್ದರಿಂದ ಇಲ್ಲಿ ಗರೋಡಿ ನಿರ್ಮಾಣವಾಯಿತು. ಗರೋಡಿಯ ಅಎದುರು ಇರುವ ಜೋಡು ಅಶ್ವಸ್ಥ ಮರಗಳು ವಿಶೇಷ ಶಕ್ತಿಯ ಪ್ರತೀಕವಾಗಿದೆ. ಅಶ್ವಸ್ಥ ಮರಗಳು ಹಿಂದೊಮ್ಮೆ ಬಿದ್ದು ಹೋಗಿದ್ದವು. ಪುನ: ಅಲ್ಲಿ ಅವಳಿ ಮರಗಳು ಹುಟ್ಟಿ ಬಂದಿವೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ ಗುಂಡದಲ್ಲಿ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಸಾನಿಧ್ಯವಿದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಉಯ್ಯಾಲೆ, ಬಲಭಾಗದಲ್ಲಿ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರ ಉಯ್ಯಾಲೆಗಳಿವೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಪಂಚ ಜುಮಾದಿ ದೈವಗಳು ಹಾಗೂ ಬಂಟ, ಜೋಗಿ ಪುರುಷ, ಪಂಜುರ್ಲಿ ದೈವ ಹಾಗೂ
ಗುರು ಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗಿನ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಹಾಗೂ ಕುಲತ ಜುಮಾದಿ ಕಲ್ಲಿನ ಮಂಟಪವಿದೆ. ಗರೋಡಿಯ ಆವರಣದೊಳಗೆ ಜೋಡು ಅಶ್ವಸ್ಥ ಕಟ್ಟೆ, ಹಾಗೂ ಕ್ಷೇತ್ರಪಾಲ ಸನ್ನಿಧಿ, ಅಯ್ಯಕಲ್ಲು, ತುಳಸೀಕಟ್ಟೆಗಳಿವೆ.
ಗರೋಡಿಯ ಹೊರಾಂಗಣದಲ್ಲಿ ನಾಗಬನವಿದೆ.

ಗಂಗಾಧರ ಪೂಜಾರಿ

2014ರಿಂದ ಗರೋಡಿ ಮನೆ ಗಂಗಾಧರ ಪೂಜಾರಿಯವರು ಈ ಗರೋಡಿಯ ಪೂ ಪೂಜನೆಯವರು. ಇವರು ಮೊದಲು ಶಿವ ಪೂಜಾರಿ, ಅಂತಯ್ಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈಗ ಈ ಗರೋಡಿಯಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಶಿವ ಪೂಜಾರಿ ಹಾಗೂ ಅಂತಯ್ಯ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿಯೂ ಸೇವೆ ಮಾಡಿದ್ದರು. ಗರೋಡಿಯ ಆಡಳಿತ ನೋಡಿಕೊಳ್ಳಲು ಆಡಳಿತ ಸಮಿತಿ ಇದೆ.
ಗರೋಡಿಯಲ್ಲಿ ನಿತ್ಯ ಪೂಜೆ, ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಸೋಣ ತಿಂಗಳಲ್ಲಿ ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜಯಿ ಪೂಜೆ, ಅಗೆಲ್ ಸೇವೆ, ಬೈದರ ನೇಮೋತ್ಸವ, ಮಾಯಂದಾಲ್ ಕೋಲ ನಡೆಯುತ್ತದೆ.
ಮೂಡನಿಡಂಬೂರು, ಬನ್ನಂಜೆ, ನಿಟ್ಟೂರು, ಕುಂಜಿಬೆಟ್ಟು (ಭಾಗಷ), ಕೊಡಂಕೂರು, ಗುಂಡಿಬೈಲು, ಮಠದಬೆಟ್ಟು, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಈ ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಕಲಶ ಕಟ್ಟಿ ಶುದ್ದಮಾಡುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತೆ.
1971 ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು 1980 ಮತ್ತು 1995ರಲ್ಲಿ ಬ್ರಹ್ಮ ಕಲಶ ನಡೆದಿದೆ. ಪುನ: ಗರೋಡಿಯ ಜೀರ್ಣೋದ್ಧಾರದ ಯೋಜನಾವಸ್ಥೆಯಲ್ಲಿದೆ.
ನೀರೆ ಜಯ ಪರವ ಮತ್ತು ಸಂಘಡಿಗರು ಹಾಗೂ ಕಿಟ್ಟ ಪಂಬದ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಮೂಡನಿಡಂಬೂರು,
ಉಡುಪಿ ಪೋಸ್ಟ,
ಉಡುಪಿ ತಾಲೂಕು – ಜಿಲ್ಲೆ.

ಪೂ ಪೂಜನೆಯವರ ವಿಳಾಸ:

ಗಂಗಾಧರ ಪೂಜಾರಿ,
ಮೊಬೈಲ್:9448842943.

ಮಾಹಿತಿ ಸಂಗ್ರಹಿಸಿದ ದಿನಾಂಕ:

27-09-2022

Shree Brahma Baidarkala Garodi Budnar

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಬುಡ್ನಾರು

ಉಡುಪಿ ಇಂದ್ರಾಳಿ ರೈಲ್ವೆ ಸ್ಟೇಷನ್ ಎದುರಿನ ರಸ್ತೆಯಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಇಂದಿಗೆ ಸುಮಾರು 300 ವರ್ಷಗಳ ಹಿಂದೆ ಬುಡ್ನಾರಿನ ದೊಡ್ಡ ಮನೆಯ ಯಜಮಾನರು ನಿಟ್ಟೂರಿನಿಂದ ಬುಡ್ನಾರಿಗೆ ಬಂದು ಮನೆ ಕಟ್ಟಿಸುತ್ತಿದ್ದರು. ಮೇಸ್ತಿç ಮನೆ ಕಟ್ಟುವಾಗ ಏನು ಉಪಾಯ ಮಾಡಿದರೂ ಕಟ್ಟಿದ ಗೋಡೆ ಮತ್ತೆ ಮತ್ತೆ ಕುಸಿದು ಬೀಳುತ್ತಿತ್ತು. ಯಜಮಾನರು ಪ್ರಶ್ನಾ ಚಿಂತನೆ ಮಾಡಿಸಿದರು. ಆಗ ಕೋಟಿಚೆನ್ನಯರು ಜಾಗದ ಹತ್ತಿರದಲ್ಲೇ ನೆಲೆಯಾಗಿದ್ದಾರೆ. ನಿಮ್ಮಿಂದ ಗರೋಡಿ ನಿರ್ಮಾಣ ಬಯಸುತ್ತಾರೆ. ಆಗ ಯಜಮಾನರು ಗರೋಡಿ ಕಟ್ಟಿಸಲು ಸೂಕ್ತ ಜಾಗ ತೋರಿಸುವಂತೆ ಕೇಳುತ್ತಾರೆ. ಆಗ ಹತ್ತಿರದಲ್ಲೇ ಇರುವ ಬಾವಿಯನ್ನು ಶುದ್ಧಗೊಳಿಸುವಂತೆ ತೋರಿ ಬರುತ್ತದೆ.
ಬಾವಿ ಶುದ್ಧಗೊಳಿಸುವಾಗ ಕೋಟಿಚೆನ್ನಯರು ನೆಲೆಯಾಗಿದ್ದ ಕುರುವಾಗಿ ಬಾವಿಯಲ್ಲಿ ನಾಗ ಬ್ರಹ್ಮರ ಮೂರ್ತಿ, ಸುರಿಯಗಳು ದೊರೆಯುತ್ತವೆ. ಯಜಮಾನರು ಊರವರನ್ನು ಸೇರಿಸಿ ಬಾವಿಯ ಪಕ್ಕದಲ್ಲೇ ಗರೋಡಿ ಕಟ್ಟಿಸುತ್ತಾರೆ. ಯಜಮಾನರ ಮನೆಯ ನಿರ್ಮಾಣವೂ ಆಗುತ್ತದೆ. ಲವರು ತನ್ನ ಮನೆಗೆ ನೇರ ಗರೋಡಿ ಕಾಣುವಂತೆ ಹೆಬ್ಬಾಗಿಲನ್ನು ಇರಿಸಿದ್ದು ಈಗಲೂ ಹಾಗೆಯೇ ಇದೆ. ನಾಗ ಬ್ರಹ್ಮರ ಮೂರ್ತಿ ಹಗೂ ಸುರಿಯ ಸಿಕ್ಕಿದ ಬಾವಿಯಲ್ಲಿ ಮಳೆಗಾಲ, ಬೇಸಿಗೆ, ಎನ್ನದೆ ಯಾವಾಗಲೂ ನೀರು ಒಂದೇ ಮಟ್ಟದಲ್ಲಿ ತುಂಬಿರುತ್ತದೆ. ಸುರಿಯವನ್ನು ಗರೋಡಿಯೊಳಗೆ ಕಪಾಟಿನಲ್ಲಿ ಜೋಪಾನವಾಗಿ ಇಡಲಾಗಿದೆ. ಇದನ್ನೆಲ್ಲಾ ಗಮನಿಸುವಾಗ ಪ್ರಾಯಶ: ಇಲ್ಲಿ ಮೊದಲೇ ಗರೋಡಿಯಿದ್ದು, ಕಾಲಾಂತರದಲ್ಲಿ ಅಳಿಗುಳಿಯಾಗುವಾಗ ಬ್ರಹ್ಮರ ಮೂರ್ತಿ ಹಾಗೂ ಸುರಿಯವನ್ನು ಬಾವಿಗೆ ಹಾಕಿರ ಬಹುದು.
ಕೋಟಿಚೆನ್ನಯರು ಉಡುಪಿ ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿಗೆ ಬಂದಿದ್ದಾಗ ಇಲ್ಲಿನ ಬಂಡಸಾಲೆ ತೋಟದಲ್ಲಿ ಸುರಿಯ ಊರಿದಾಗ ಚಿಮ್ಮಿದ ಕೆಂಪು ನೀರನ್ನು ಕಂಡು ಇಲ್ಲಿನ ಣೀರು ನಂಜು, ಇಲ್ಲಿಯ ಪೋಲಿ ಕೂಟ ನಮಗಾಗದು ಎಂದು ಬುಡ್ನಾರಿಗೆ ತೆರಳಿದ್ದರಂತೆ. ಶಿವಳ್ಳಿ ಮೂಡು ಪೆರಂಪಳ್ಳಿಯಿಂದ ಹೊರಟ ಕೋಟಿಚೆನ್ನಯರು ಕೃಷ್ಟಾಷ್ಟಮಿಯಂದು ಬುಡ್ನಾರಿಗೆ ಬಂದಿದ್ದರು ಎಂಬುದು ಪ್ರಚಾರದಲ್ಲಿದೆ. ಆ ಕಾರಣಕ್ಕಾಗಿ ಗರೋಡಿಯಲ್ಲಿ ಅಷ್ಟಮಿಯ ಮರುದಿವಸ ಅಗೆಲ್ ಅನ್ನ ನೈವೇದ್ಯ, ನೇಮೋತ್ಸವಗಳು ನಡೆಯುತ್ತವೆ.
ಗರೋಡಿಯ ಬ್ರಹ್ಮ ಗುಡಿಯೊಳಗೆ ಗುಂಡದಲ್ಲಿ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ. ಗುಂಡದ ಎಡಭಾಗದಲ್ಲಿ ಉಯ್ಯಾಲೆಯಲ್ಲಿ ಗಿಂಡೆ ಇಟ್ಟು ಕೋಟಿಚೆನ್ನಯರ ಆರಾಧನೆ ಹಾಗೂ ಜೋಗಿ ಪುರುಷರ ಮಣೆ ಮಂಚವಿದೆ. ಗುಂಡದ ಬಲಭಾಗದಲ್ಲಿ ಕುಲತ ಜುಮಾದಿಯ ಮಂಚ, ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ ಹಾಗೂ ಕುಜುಂಬ ಕಾಂಜವರ ಮಣೆ ಮಂಚಗಳಿವೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಜುಮಾದಿ ಹಾಗೂ ಬಂಟ, ಮರ್ಲಜುಮಾದಿ ಹಾಗೂ ಬಂಟ , ಪಂಚ ಭೂತ (ಐವೆರ್ ಭೂತ) ಹಾಗೂ ಗುರು ಕಂಬದ ಆರಾಧನೆಯಿದೆ.
ಗರೋಡಿಯ ಪರಿಸರದಲ್ಲಿ ನಾಗ ಬನ, ಗುಡಿಯೊಂದರಲ್ಲಿ ನಂದಿಗೋಣ, ಮೂಲ ಮೈಸಂದಾಯ, ಹಾಗೂ ಪಂಜುರ್ಲಿ ದೈವಗಳ ಆರಾಧನೆಯಿದೆ.

ಗೋಪಾಲ ಪೂಜಾರಿ

2010ರಿಂದ ಗೋಪಾಲ ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಬೊಗ್ರ ಪೂಜಾರಿ, ಕಾಡ್ಯ ಪೂಜಾರಿ, ಕಿಟ್ಟು ಪೂಜಾರಿ, ತಮ್ಮಯ್ಯ ಪೂಜಾರಿ ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ಈಗ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಸದಾನಂದ ಪೂಜಾರಿ, ಬೇಡು ಪೂಜಾರಿ, ಐತು ಪೂಜಾರಿಯವರು ಸ್ಥಳ ಪಾತ್ರಿಗಳಾಗಿ ಈ ಗರೋಡಿಯಲ್ಲಿ ಸೇವೆ ಮಾಡಿದ್ದರು.

ಶೇಖರ ಶೆಟ್ಟಿ

ಶೇಖರ ಶೆಟ್ಟಿ ಬುಡ್ನಾರು ದೊಡ್ಡಮನೆ, ಇವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಸೋಣ ತಿಂಗಳಲ್ಲಿ ಹೂವಿನ ಪೂಜೆ, ದರ್ಶನ ಸೇವೆ, ಗಜ್ಜಯಿ ಸೇವೆ, ಕದಿರುಕಟ್ಟುವ ಸಂಪ್ರದಾಯವಿದೆ. ಕೊಡಿ ತಿಂಗಳಲ್ಲಿ ಅಗೆಲ್, ಅನ್ನ ನೈವೇದ್ಯ ಸೇವೆ, ಮರುದಿವಸ ಹುಣ್ಣಿಮೆಯಂದು ಬೈದೇರುಗಳ ನೇಮೋತ್ಸವ, ಮರುದಿನ ಮದ್ಯಾಹ್ನ ನಂತರ ಮಾಯಂದಾಳ್ ನೇಮ, ರಾತ್ರಿ ಜುಮಾದಿ, ಮರ್ಲಜುಮಾದಿ, ಪಿಲ್ಚಂಡಿ, ಕೋಲಗಳು ನಡೆಯುತ್ತವೆ. ಪಗ್ಗು ತಿಂಗಳಲ್ಲಿ ಸೌರ ಮಾನ ಯುಗಾದಿಯ ಮರುದಿನ ಅಗೆಲ್ ಸೇವೆ, ಮರುದಿನ ನೇಮೋತ್ಸವ ನಡೆಯುತ್ತದೆ.
ಆವರಣದೊಳಗಿನ ಇನ್ನೊಂದು ಗುಡಿಯಲ್ಲಿ ಜಾರಂದಾಯ ಮತ್ತು ಬಂಟ, ಜುಮಾದಿ, ನಂದಿಗೋಣ, ಮೈಸಂದಾಯ, ಪಂಜುರ್ಲಿ, ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ. ಪಕ್ಕದ ಇನ್ನೊಂದು ಗುಡಿಯಲ್ಲಿ ಹುಲಿ ಚಾಮುಂಡಿ ದೈವದ ಮಣೆ ಮಂಚವಿದೆ.
ಬುಡ್ನಾರು, ಮಂಚಿ, ಚಿಟ್ಪಾಡಿ, (76 ಬಡಗಬೆಟ್ಟು) ಕಂಚಿಗಾರಗುಳಿ, ಮೂಡು ಪೆರಂಪಳ್ಳಿ, ಕುಂಜಿಬೆಟ್ಟು, ಪಣಿಯಾಡಿ, ಕಡಿಯಾಳಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಕೂಡುಕಟ್ಟಿಗೆ ಸೇರಿದವರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಬೊಗ್ಗು ಪರವ, ಜಯ ಪರವ, ಮನ್ಮಥ ಪರವ ಇವರು ಈ ಗರೋಡಿಯ ನೃತ್ಯ ವಿಶಾದರರಾಗಿ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಬುಡ್ನಾರು,
ಇಂದ್ರಾಳಿ ರೈಲ್ವೇ ಸ್ಟೇಷನ್ ಎದುರು,
ಅಂಚೆ ಕುಂಜಿಬೆಟ್ಟು, ಶಿವಳ್ಳಿ ಗ್ರಾಮ,
ಉಡುಪಿ ತಾಲೂಕು 576012.

ಪೂ ಪೂಜನೆಯವರ ವಿಳಾಸ:

ಗೋಪಾಲ ಪೂಜಾರಿ, ಬುಡ್ನಾರು ಗರೋಡಿ ಮನೆ,
ಇಂದ್ರಾಳಿ ಉಡುಪಿ
ಮೊಬೈಲ್: 9880074241.

ಮಾಹಿತಿ ಸಂಗ್ರಹಿಸಿದ ದಿನಾಂಕ:

27-07-2022

Shree Brahma Baidarkala Garodi Yellur

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಎಲ್ಲೂರು

ಉಡುಪಿಯಿಂದ ಎನ್.ಎಚ್. 66ರಲ್ಲಿ ಕಾಪು ಉಚ್ಚಿಲ ಮಾರ್ಗವಾಗಿ ಉಚ್ಚಿಲ ಮಹಾಲಕ್ಷಿ ದೇವಸ್ಥಾನದ ಹತ್ತಿರ ಎಡಕ್ಕೆ ಪಣಿಯೂರು ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದಾಗ ಎಲ್ಲೂರು ಶ್ರೀ ಮಹೋತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಎಲ್ಲೂರು ಗರೋಡಿ ಇದೆ.
ಈ ಗರೋಡಿಯು ಆಯದ ಗರೋಡಿಯಾಗಿದ್ದು ಮೂರು ಬಾಗಿಲುಗಳವೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೆರಡು ದ್ವಾರಗಳು ಪಶ್ಚಿಮ ಹಾಗೂ ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯಲ್ಲಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಕವಚ ಹೊದಿಸಿದ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಕೂಚಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಹಾಗೂ ಜೋಗಿ ಪುರುಷರ ಮಣೆ ಮಂಚ ಇದೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಮಣೆ ಮಂಚ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಕೊಡಮಣಿತ್ತಾಯ ಹಾಗೂ ಬಂಟ ದೈವಗಳ ಮಣೆ ಮಂಚವಿದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭವಿದೆ.
ಗರೋಡಿಯ ಆವರಣದೊಳಗಿರುವ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ.
ಆವರಣದೊಳಗಿನ ಇನ್ನೊಂದು ಗುಡಿಯಲ್ಲಿ ಜಾರಂದಾಯ ಮತ್ತು ಬಂಟ, ಜುಮಾದಿ, ನಂದಿಗೋಣ, ಮೈಸಂದಾಯ, ಪಂಜುರ್ಲಿ, ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ. ಪಕ್ಕದ ಇನ್ನೊಂದು ಗುಡಿಯಲ್ಲಿ ಹುಲಿ ಚಾಮುಂಡಿ ದೈವದ ಮಣೆ ಮಂಚವಿದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಹಿಂದೆ ಒಂದು ಕಾಲದಲ್ಲಿ ಕೋಟಿಚೆನ್ನಯರಿಗೆ ಮರದ ಪಾಪೆ ಮಾಡಿಸ ಬೇಕೆಂದು ಊರವರು ಮರವೊಂದನ್ನು ಗುರುತಿಸಿ ಕಡಿಯಲು ಗಂಧ ಹಾಕಿ ಪ್ರಾರ್ಥನೆ ಮಾಡಲು ಮುಂದಾದಾಗ ಮೊದಲು ಮರ ಕೊಡಲು ಒಪ್ಪಿದ ಮನೆಯವರು ಮರವನ್ನು ಕೊಡಲಾಗುವುದಿಲ್ಲ ಎಂದರಂತೆ. ನಂತರ ಬೈದೇರುಗಳು ದರ್ಶನದಲ್ಲಿ ಇನ್ನು ಮುಂದೆ ಈ ಗರೋಡಿಯಲ್ಲಿ ಯಾವ ಶಕ್ತಿಗಳಿಗೂ ಮರದ ಪಾಪೆ ಮಾಡಿಸ ಬಾರದಾಗಿ ಅಪ್ಪಣೆ ಮಾಡಿದರು. ಹಾಗಾಗಿ ಹೊರಗಿನ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿಗೆ ಬಿಟ್ಟರೆ ಗರೋಡಿಯೊಳಗೆ ಯಾವ ಶಕ್ತಿಗಳಿಗೂ ಮರದ ಪಾಪೆಗಳಿಲ್ಲ.

ಕರುಣಾಕರ ಪೂಜಾರಿ

1990ರಿಂದ ಕರುಣಾಕರ ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಅಜ್ಜ ಮೋನಪ್ಪ ಪೂಜಾರಿ, ಅದಕ್ಕೂ ಮೊದಲು ಪಕೀರ ಪೂಜಾರಿಯವರು ಸೇವೆ ಮಾಡಿದ್ದರು. ಈಗ ಬೈದರ ದರ್ಶನಕ್ಕೆ ಈ ಗರೋಡಿಯಲ್ಲಿ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಅಣ್ಣಪ್ಪ ಪೂಜಾರಿ, ಬೊಳ್ಳು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಎಲ್ಲೂರು ಗುತ್ತು ಪ್ರಪುಲ್ಲ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯವೂ ದೀಪ ಹಚ್ಚುತ್ತಾರೆ. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆಗಳು ನಡೆಯುತ್ತವೆ. ಎಳ್ಳಮಾವಾಸ್ಯೆಯ 6ನೇ ದಿನ ಅಗೆಲು ಸೇವೆ, 7ನೇ ದಿನ ಬೈದೇರುಗಳ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ, ವರ್ಷಂಪ್ರತಿ ನಡೆಯುತ್ತದೆ. ಬೇಷ ತಿಂಗಳಲ್ಲಿ ಗರಡಿಯಿಂದ ಭಂಡಾರ ಹೋಗಿ ಗರೋಡಿ ಮನೆಯಲ್ಲಿ ಮಾಯಂದಾಲ್ಗೆ ಅಗೆಲು ಸೇವೆ ನಡೆಯುತ್ತದೆ.
ಕುಂಜೂರು, ಎಲ್ಲೂರು, ಮಾಣಿಯೂರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಈ ಊರುಗಳ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
1980ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಸಂತು ಪರವ, ಬೊಗ್ಗು ಪರವ,ಮೂಡುಬೆಳ್ಳೆ, ಜಯ ಪರವ ನೀರೆ, ಇವರು ಈ ಗರೋಡಿಯ ನೃತ್ಯ ವಿಶಾರದರು. ರಮೇಶ್ ಮಡಿವಾಳ, ಎಲ್ಲೂರು ಇವರು ಮಡಿವಾಳರಾಗಿ, ಲಕ್ಷಣ ಸೇರಿಗಾರ ಎಲ್ಲೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಎಲ್ಲೂರು ಅಂಚೆ,
ಕಾಪು ತಾಲೂಕು,
ಉಡುಪಿ 574113.

ಪೂಪೂಜನೆಯವರು

ಕರುಣಾಕರ ಪೂಜಾರಿ,
ಮೊಬೈಲ್: 8088107896

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shree Brahma Baidarkala Poyya Podikalla Garodi Kaup

ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೋಡಿ, ಕಾಪು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ NH 66 ರ ಮೂಲಕ ಕಾಪು ತಲುಪಿ ಹೊಸ ಮಾರಿಗುಡಿಯ ಹತ್ತಿರ ಬಲಕ್ಕೆ ಕಾಣುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಮುಂದೆ ಹೋದರೆ ಸುಮಾರು 11/2 ಕಿ ಮೀ.ದೂರದಲ್ಲಿದೆ ಈ ಗರೋಡಿ.
ಇದು ಬಹಳ ಪುರಾತನವಾದ ಆಯದ ಗರೋಡಿಯಾಗಿದ್ದು 2010ರಲ್ಲಿ ಷಡಾಧಾರ ಪ್ರತಿಷ್ಟೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೊಂದು ದ್ವಾರವು ಬಡಗು ದಿಕ್ಕಿಗೆ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಕೇಂಜದಿಂದ ಕಾಪುವಿಗೆ ಬಂದು ಇಲ್ಲಿಯ ಬೈರ ಗುತ್ತು ಮತ್ತು ದೊರೆಗಳ ಗುತ್ತು ಎಂಬಲ್ಲಿ ಸುರಿಯವನ್ನು ನೆಲಕ್ಕೆ ತಾಗಿಸಿ ನಿಶಾನೆ ಮಾಡಿ, ಬೈರ ಗುತ್ತು ಮನೆಯ ಯಜಮಾನರಿಗೆ ಕನಸಿನಲ್ಲಿ ಬಂದು ನಿಮಗೆ ಒಂದು ಜಾಗದಲ್ಲಿ ಒಂದು ಮುದ್ದೆ ಮಣ್ಣು ಹುತ್ತವಾಗಿ ಗೋಚರಿಸುತ್ತಿದ್ದು ಆ ಜಾಗದಲ್ಲಿ ಎರಡು ಗಿಡಗಳು ಬೆಳೆದಿರುತ್ತವೆ. ಅಲ್ಲಿಯೇ ನಮಗೆ ಗರೋಡಿ ಕಟ್ಟಿಸ ಬೇಕೆಂದು ಆದೇಶವಿತ್ತರು. ಮರುದಿನ ಗುತ್ತಿನ ಮನೆಯವರು ಅಂತಹ ಜಾಗವನ್ನು ಹುಡುಕುತ್ತಾ ಹೋದಾಗ ಹೊಯಿಗೆ ಮತ್ತು ಹುಡಿಕಲ್ಲುಗಳಿಂದಾವೃತವಾದ (ಪೊಯ್ಯ ಮತ್ತು ಪೊಡಿಕಲ್ಲು) ಆ ಜಾಗ ಸಮುದ್ರ ತೀರದಲ್ಲಿ ಕಂಡು ಬಂತು. ಆಗ ಅಲ್ಲಿ ನೆರೆದ ಬೈದರ ಭಕ್ತರೊಬ್ಬರಿಗೆ ಆವೇಶ ಬಂದು ದರ್ಶನದಲ್ಲಿ ನುಡಿಯಾದಂತೆ ಅಲ್ಲಿ ಗರೋಡಿ ನಿರ್ಮಾಣವಾಗಿದೆ ಈ ಪೊಯ್ಯ ಪೊಡಿಕಲ್ಲ ಗರೋಡಿ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಪೂಜೆಯಿದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ. ಗುಂಡದ ಬಲಭಾಗದಲ್ಲಿ ಜೋಗಿ ಪುರುಷ ಹಾಗೂ ಕುದುರೆಯಲ್ಲಿ ಕುಳಿತ ಒಕ್ಕುಬಲ್ಲಾಳರ ಮರದ ಪಾಪೆ ಇದೆ.
ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಧೂಮಾವತಿ ಮತ್ತು ಬಂಟ ದೈವಗಳ ಮಣೆ ಮಂಚ, ಹುಲಿಚಾಮುಂಡಿ , ಕೊಡಮಣಿತ್ತಾಯ ದೈವಗಳ ಮಣೆ ಮಂಚಗಳಿವೆ. ಇವಲ್ಲದೆ ಗುರುಕಂಭ ಹಾಗೂ ಕಾರಣಿಕ ತೋರಿ ಗರೋಡಿಗೆ ಬಂದ ವಿಶೇಷ ಕುದುರೆಯ ಮರದ ಪಾಪೆಯಿದೆ.
ಬಹಳ ಹಿಂದೆ ತೆಂಕಣದ ಮೂಲ್ಕಿ ಸೀಮೆಯ ಅರಸು ಕಟ್ಟಿಸುತ್ತಿದ್ದ ದೇವಾಲಯ ನೋಡಲು ಹೋದ ಇಲ್ಲಿಯ ಬೈರ ಗುತ್ತಿನ ಯಜಮಾನರು, ಅಲ್ಲಿ ಶಿಲ್ಪಿಗಳು ಕೆತ್ತಿದ್ದ ಮರದ ಕುದರೆಯನ್ನು ನೋಡಿ ಇದು ನಮ್ಮ ಗರೋಡಿಯಲ್ಲಿ ಇದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡರು. ಆ ರಾತ್ರಿ ಅಲ್ಲಿಯೇ ಉಳಿದ ಬೈರಗುತ್ತು ಯಜಮಾನರಿಗೆ ಕೋಟಿಚೆನ್ನಯರು ರಾತ್ರಿ ಕನಸಲ್ಲಿ ಬಂದು, ನಾವು ಆ ಕುದುರೆಯನ್ನು ಅಪೇಕ್ಷಿಸಿದ್ದೇವೆ ಎಂದು ಅರಸರಿಗೆ ಹೇಳುವಂತೆ ಆಜ್ಙಾಪಿಸಿದರು. ಆದರೆ ಕೋಟಿಚೆನ್ನಯರ ಮಹಿಮೆಯನ್ನರಿಯದ ಅರಸರು ಕುದುರೆಯನ್ನು ಕೊಡಲು ನಿರಾಕರಿಸಿದರು. ಆ ಕ್ಷಣದಲ್ಲೇ ಅರಸರು ಸ್ಮೃತಿ ತಪ್ಪಿ ಬೀಳುವರು. ಅರಸು ಪರಿವಾರ ಹಾಗೂ ಊರವರು ಸೇರಿ ಅರಸರ ಆರೋಗ್ಯಕ್ಕಾಗಿ ಕೋಟಿಚೆನ್ನಯರಿಗೆ ಕೈ ಮುಗಿದು ಪ್ರಾರ್ಥಿಸಿ, ಅರಸರ ಆರೋಗ್ಯ ಸರಿಯಾದಲ್ಲಿ ಕುದುರೆಯನ್ನು ಹರಕೆ ರೂಪದಲ್ಲಿ ಗರೋಡಿಗೆ ಕೊಡುವುದಾಗಿ ಹರಕೆ ಹೊತ್ತರು. ಸ್ಮೃತಿ ಬಂದ ಅರಸರು ಪಟ್ಟು ಬಿಡದೆ ಕೋಟಿಚೆನ್ನಯರು ಕಾರಣೀಕ ಪುರುಷರಾದರೆ ಈ ಕುದುರೆಯು ತಾನಾಗಿಯೇ ಗರೋಡಿಗೆ ಹೋಗಲಿ ಎಂದು ಕುದುರೆಯನ್ನು ಸಮುದ್ರಕ್ಕೆ ಎಸೆಯಲು ಆಜ್ಞಾಪಿಸುತ್ತಾರೆ. ಮರುದಿನ ಕುದುರೆಯು ಕಾಪು ಕಡಲ ಕಿನಾರೆಯಲ್ಲಿ ಗರೋಡಿಯ ಹತ್ತಿರ ಕುದುರೆಯು ತೇಲುತ್ತಿರುವದನ್ನು ಕಂಡು ಸಂಭ್ರಮದಿಂದ ಮೆರವಣಿಗೆಯಲ್ಲಿ ಗರೋಡಿಗೆ ತರಲಾಯಿತು. ಆದರೆ ಅದನ್ನು ಗರೋಡಿಯ ಒಳಗೆ ತಂದು ಪ್ರತಿಷ್ಠಾಪಿಸಲು ಗರೋಡಿಯ ದ್ವಾರವು ಚಿಕ್ಕದಾದುದರಿಂದ ಸಾಧ್ಯವಾಗದೆ, ಮರುದಿನ ದ್ವಾರ ಬದಲಾಯಿಸುವುದೆಂದು ತೀರ್ಮಾನಿಸಲಾಯಿತು. ಮರುದಿನ ಬಂದು ನೋಡುವಾಗ ಕುದುರೆ ತಾನೇ ತಾನಾಗಿ ಗರೋಡಿಯ ಒಳಗೆ ಯೋಗ್ಯ ಸ್ಥಾನದಲ್ಲಿ ಸ್ಥಾಪನೆಯಾಗಿತ್ತು. ಇಂದಿಗೂ ಕುದುರೆಯು ವರ್ಷವೂ ಗಾತ್ರದಲ್ಲಿ ಹಿರಿದಾಗುತ್ತಿರುವುದು ಇಲ್ಲಿಯ ವಿಸ್ಮಯ. ಇದೇ ಕಾರಣಕ್ಕಾಗಿ ಗರೋಡಿಯ ಮೇಲ್ಮಾಡನ್ನು ಎರಡು ಸಲ ಏರಿಸಲಾಗಿದೆ ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ.
ಗರೋಡಿಯ ಆವರಣದ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗು , ಕೊಳತ ಜುಮಾದಿ ದೈವಗಳ ಸಾನಿಧ್ಯ, ಅಯ್ಯಕಲ್ಲು ಹಾಗು ತುಳಸಿ ಕಟ್ಟೆಗಳಿವೆ.
ಗರೋಡಿಯ ಪರಿಸರದಲ್ಲಿ ಬ್ರಹ್ಮಲಿಂಗೇಶ್ವರ, ನಾಗಬನ, ಬೊಬ್ಬರ್ಯ, ರಕ್ತೇಶ್ವರಿ, ನಂದಿ ಪಂಜುರ್ಲಿ ದೈವಗಳ ಸಾನಿದ್ಯವಿದೆ.

ಜಗನ್ನಾಥ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ

1980 ರಿಂದ ಗರೋಡಿ ಮನೆ ಜಗನ್ನಾಥ ಪೂಜಾರಿ (ಪ್ರಾಯ 65 ವರ್ಷ) ಯವರು ಈ ಗರೋಡಿಯ ಪೂ ಪೂಜನೆಯವರು. ಇವರ ಮೊದಲು 1973ರಿಂದ 1980ರ ವರೆಗೆ ಶ್ರೀನಿವಾಸ ಪೂಜಾರಿ, ಅದಕ್ಕೂ ಮೊದಲು ನಾಗಪ್ಪ ಪೂಜಾರಿ, ಕುಂಞ ಪೂಜಾರಿ, ಕೊರಗ ಪೂಜಾರಿ, ಬಸವ ಪೂಜಾರಿ, ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗರೋಡಿ ಮನೆಯ ಜಗನ್ನಾಥ ಪೂಜಾರಿ ಹಾಗೂ 1976ರಿಂದ ಶ್ರೀನಿವಾಸ ಪೂಜಾರಿಯವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಸೋಮಯ್ಯ ಪೂಜಾರಿ ಹಾಗೂ ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಬೈರಗುತ್ತು ರಮೇಶ್ ಶೆಟ್ಟಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಮೊದಲಾದ ಧಾರ್ಮಿಕ ಆಚರಣೆಗಳಿವೆ. ಪ್ರತೀ ವರ್ಷದ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಕಾಲಾವಧಿ ಅಗೆಲು ಸೇವೆ, ಬೈದರ ನೇಮೋತ್ಸವ ನಡೆಯುತ್ತದೆ. ಮರುದಿನ ಮಾಯಂದಾಲ್ ನೇಮ, ರಾತ್ರಿ ಹುಲಿ ಚಾಮುಂಡಿ, ಕೊಡಮಣಿತ್ತಾಯ ದೈವದ ಕೋಲ ನಡೆಯುತ್ತದೆ. ಕಾರ್ತಿ ತಿಂಗಳಲ್ಲಿ (ಮೇ ತಿಂಗಳ 7ನೇ ತಾರೀಖಿನಂದು) ಅನ್ನ ನೈವೇದ್ಯ ಸೇವೆ ನಡೆಯುತ್ತದೆ. ಕಾಪು, ಕೋತಾಲ್ಕಟ್ಟೆ, ತೊಟ್ಟಂ ಮೂಳೂರು, ಭಾಗಷ: ಪಾಂಗಾಳದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ಗರೋಡಿಗೆ ಬಂದು ತಿಂಗಳು ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ಧ ಮಾಡುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
1977 ಹಾಗೂ 2010ರಲ್ಲಿ ಗರೋಡಿಯ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶ ನಡೆದಿದೆ.
ಶೇಖರ ಪರವ, ಉಗ್ಗಪ್ಪ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ನೇಮೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯಿಂದ ಸ್ವಯಂ ಸೇವಕರಾಗಿ ದುಡಿಯುವ ಯುವಕ – ಯುವತಿಯರ ‘’ ಸೇವಾ ಯುವ ಸಮಿತಿ ‘’ ಇದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ
ಪೊಡಿಕಲ್ಲ ಗರೋಡಿ,
ಕಾಪು ತಾಲೂಕು,
ಉಡುಪಿ ಜಿಲ್ಲೆ.

ಪೂ ಪೂಜನೆಯವರು:

ಜಗನ್ನಾಥ ಪೂಜಾರಿ: ಮೊಬೈಲ್: 8722441126

ಮಾಹಿತಿ ಸಂಗ್ರಹಿಸಿದ ದಿನಾಂಕ:

26-09-2022

Kudrottu Shree Brahma Baidarkala Garodi, Yermal Bada

ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಎರ್ಮಾಳ್ ಬಡಾ.

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಉಚ್ಚಿಲ ದೇವಸ್ಥಾನದಿಂದ ಸುಮಾರು 1.28 ಕಿ. ಮೀ.ದೂರದಲ್ಲಿ ಎಡಬದಿಗಿರುವ ರಸ್ತೆಯಲ್ಲಿ ಸುಮಾರು ಅರ್ದ ಕಿ. ಮೀ. ಒಳಗೆ ಹೋದರೆ ಈ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಶಿಲಾಮಯವಾಗಿದೆ. ಷಡಾಧಾರ ಪ್ರತಿಷ್ಟೆಯಲ್ಲಿರುವ ಈ ಗರೋಡಿಯ ಮುಖ್ಯ ದ್ವಾರವು ಪಡುವಣ ದಿಕ್ಕಿಗೆ ಇದ್ದು ಇನ್ನೊಂದು ದ್ವಾರವು ಮೂಡಣ ದಿಕ್ಕಿಗೆ ಇದೆ.
ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕಾಯಬಿಟ್ಟು ಮಾಯಕ್ಕೆ ಸಂದ ಬಳಿಕ ಕೋಟಿಚೆನ್ನಯರು ಅಗೋಚರ ಚೇತನರಾಗಿ ಭಕ್ತರ ಪರಿಪಾಲನೆಗೆ ಸಂಚಾರ ಹೊರಡುತ್ತಾರೆ. ಎನ್ಮೂರಿನಿಂದ ಉತ್ತರ ಕಾಶಿಗೆ ತೀರ್ಥಯಾತ್ರೆ ಹೋಗುತ್ತಿರಲು ದಾರಿ ಮಧ್ಯದಲ್ಲಿ ಕುತ್ಯಾರು ಅರಸ್ತಾನ ಕಾಣುತ್ತದೆ. ಕುತ್ಯಾರಿನಲ್ಲಿ ಕೇಂಜ ಗರೋಡಿ ಉಂಟು ಮಾಡುತ್ತಾರೆ. ಎಲ್ಲೂರಿನ ವಿಶ್ವನಾಥ ದೇವರ ದರ್ಶನ ಮಾಡಿ ಎಲ್ಲೂರು ಗರೋಡಿ ಸ್ಥಾಪಿಸುತ್ತಾರೆ. ಅಲ್ಲಿಂದ ಎರ್ಮಾಳಿನ ಶ್ರೀ ಲಕ್ಷ್ಮೀ ಜನಾರ್ಧನ ಸನ್ನಿಧಿಗೆ ಬಂದು ದೇವರ ದರ್ಶನ ಮಾಡುತ್ತಾರೆ. ಎರ್ಮಾಳಿನಲ್ಲಿ ತಮ್ಮ ಸಾನಿಧ್ಯ(ಗರೋಡಿ) ಸ್ಥಾಪಿಸುತ್ತಾರೆ.
ಎರ್ಮಾಳು ಕುದ್ರೊಟ್ಟಿನ ಮೂಲ ಗರಡಿ ಮನೆತನದ ಮನೆಯಂಗಳದಲ್ಲಿ ಮಾನವ ರೂಪಿಗಳಾಗಿ ಕಾಣಿಸಿಕೊಂಡು ಅಸರ್ ಕೇಳುತ್ತಾರೆ. ಮನೆಯವರು ಅಸರಿನೊಂದಿಗೆ ಮನೆಯೊಳಗಿನಿಂದ ಬರುವಾಗ ಕಾಯ ರೂಪಗಳು ಮರೆಯಾಗುತ್ತವೆ. ನಿಮಿತ್ತ ಕೇಳಿದಾಗ ಬೈದೇರುಗಳು ಸ್ಥಳೀಯವಾಗಿ ಮೆಚ್ಚಿ ನೆಲೆಯೂರುವ ಸಂಕಲ್ಪದ ಸೂಚನೆ ಇದೆಂದು ತಿಳಿದು ಬರುತ್ತದೆ. ಅದರ ಗೌರವ ಸೂಚಕವಾಗಿ ಕಾಲಕ್ರಮೇಣ ಅಲ್ಲಿ ಸ್ಥಳಾಭಾವ ಉಂಟಾಗುವುದೆಂದು ತೋರಿದಾಗ ಗರಡಿ ಸ್ಥಾಪನೆಯ ಸಂಕಲ್ಪ ಮೂಡುತ್ತದೆ.
ಈ ಗರೋಡಿ ಇರುವ ಪ್ರದೇಶಕ್ಕೆ ಕುದ್ರೊಟ್ಟು ಎಂಬ ಹೆಸರು ಬರಲು ಕಾರಣವಿದೆ. ಮೂಲ್ಕಿ ಸಾವಂತರ ಆಳ್ವಿಕೆ ಕಾಲ. ಕುತ್ಯಾರು, ಕಟಪಾಡಿ, ಎರ್ಮಾಳ್ ಹೀಗೆ ಕರಾವಳಿಯುದ್ದಕ್ಕೂ ಅರಸರ ಬೀಡುಗಳಿದ್ದವು. ಒಮ್ಮೆ ಕುತ್ಯಾರು ಬೀಡಿನ ಅರಸರು ಬಿಳಿ ಕುದುರೆಯ ಮೇಲೆ ಕುಳಿತು ತನ್ನ ಪತ್ನಿಯ ಮನೆಯಾದ ಎರ್ಮಾಳು ಬೀಡಿಗೆ ವಿಹಾರ ಹೋಗುವ ಸಮಯದಲ್ಲಿ ಈ ಗರೋಡಿಯ ಮೂಡು ದಿಕ್ಕಿನಲ್ಲಿ ಮೂಡುಬೆಟ್ಟು ಎಂಬಲ್ಲಿಗೆ ಬರುವಾಗ ಕುದುರೆ ಎಡವಿ ಮುಗ್ಗರಿಸಿ ದೊಗ್ಗಾಲು(ಮೊಣ ಕಾಲು) ಬೀಳುತ್ತದೆ. ಕುದುರೆಯ ಮೇಲಿಂದ ಕೆಳಗುರುಳಿ ಸ್ಮೃತಿ ತಪ್ಪಿದ ಸಮಯ ಅರಸರಿಗೆ ಇಬ್ಬರು ಕಾರಣಿಕ ಪುರುಷರು ನಿಜ ರೂಪದಲ್ಲಿ ಅಲೌಕಿಕ ದರ್ಶನ ನೀಡಿದ ಅನುಭವವಾಗುತ್ತದೆ. ಮೂರ್ಚೆಯಿಂದೆದ್ದ ಅರಸರು ಸುತ್ತ ನೆರೆದಿದ್ದ ತನ್ನ ಪರಿವಾರ ಸೇವಕರಲ್ಲಿ ಈ ವಿಶೇಷ ಅಲೌಕಿಕ ಘಟನೆಯ ಬಗ್ಗೆ ಹೇಳಿ ಇದರಲ್ಲೇನೋ ವಿಶೇಷವಿರಬೇಕು ಎಂದರು. ಬೈದರ್ಕಳ ಕಾರ್ಣಿಕ ಶಕ್ತಿಗಳು ಸ್ಥಳೀಯವಾಗಿ 16 ಕೋಲು ಆಯದ ಗರಡಿಯಲ್ಲಿ ನೆಲೆಯಾಗಿರುವ ಸಂಕಲ್ಪವಿರುವುದಾಗಿ ಅಲ್ಲಿ ನೆರೆದವರ ಚಿಂತನೆಯಲ್ಲಿ ತಿಳಿಯಿತು.
ಭಕ್ತರ ಮೂಲಕವಾಗಿ ಅರಸರು ಬೈದೇರುಗಳನ್ನು ಪ್ರಾರ್ಥಿಸಿದರು. ಅವರ ಕುದುರೆಯ ಕಾಲು ನೋವು ಮಾಯವಾಗಿ ಎದ್ದು ನಿಂತಿತು. ಅರಸು ಬಳ್ಳಾಲರು ಊರಿನ ಹತ್ತು ಸಮಸ್ತರನ್ನು ಒಟ್ಟು ಸೇರಿಸಿ ವಿಚಾರ ವಿನಿಮಯ ಮಾಡಿದರು. ಭಕ್ತರೊಬ್ಬರಿಗೆ ದರ್ಶನಾವೇಶವಾಗಿ ಹಾರಿಸಿದ ಕಲ್ಪಫಲವು (ತೆಂಗಿನ ಕಾಯಿ) ಈಗ ಗರಡಿಯಿರುವ ಜಾಗದಲ್ಲಿ ಎಂದರೆ ಮೂಡಬೆಟ್ಟು ತುಂಬೆನ್ನೇಯ ಪರಿಸರ ಜಾಗದಲ್ಲಿ ಬಂದು ಬಿತ್ತು. 16 ಕೋಲು ಆಯದ ಗರಡಿಯನ್ನು ನಿರ್ಮಾಣ ಮಾಡಲಾಯಿತು. ಅರಸರು ಈ ಜಮೀನನ್ನು ಗರಡಿಗೆ ಉಂಬಳಿ ನೀಡಿದರು. ಆರಾಧನೆಗಾಗಿ ಸ್ಥಳೀಯ ಚನಿಲ ಬನ್ನಾಯ (ಸನಿಲ್) ಮನೆತನದವರನ್ನು ನೇಮಿಸಿದರು. ಕುದುರೆ ಬಿದ್ದ ಬೆಟ್ಟು ಸ್ಥಳವು ಕುದುರೆಬೆಟ್ಟು – ಕುದುರೊಟ್ಟು ಎಂಬುದಾಗಿ ಪ್ರತೀತಿಗೆ ಬಂತು. ಹಿಂದೆ ಗರೋಡಿಯ ಸ್ಥಳ ಮರ್ಯಾದೆ ಕುತ್ಯಾರು ಬೀಡಿಗೆ ಸಂದಾಯವಾಗುತ್ತಿತ್ತು. ಕಾಲಾಂತರದಲ್ಲಿ ಅದು ಎರ್ಮಾಳು ಬೀಡಿಗೆ ವರ್ಗಾವಣೆ ಹೊಂದಿತು.
ಚನಿಲ ಬನ್ನಾಯ ಅಥವಾ ಸನಿಲ್ ಸಂತತಿಯ ಮನೆತನ “ನಾಯ್ಗ” ರೆಂಬ ಅಭಿದಾನ ಹೊಂದಿದವರು. ಅಲೂಪ ವಂಶ ಮತ್ತು ವಿಜಯನಗರ ಆಳ್ವಿಕೆಯ ಕಾಲದಿಂದಲೂ ತುಳುನಾಡಿನಲ್ಲಿ ಕೆಲವು ಬಿಲ್ಲವ ಮನೆತನಗಳಿಗೆ ನಾಯಕ (ಸೇನಾ ನಾಯಕ ಇತ್ಯಾದಿ) ರೆಂಬ ನೆಲೆಯಲ್ಲಿ ನಾಯ್ಗ ಎಂಬ ಹೆಸರಿದ್ದಿತು. ಅಂಥವರಲ್ಲಿ ಹಳೆಯಂಗಡಿ ಬಂಕಿ ನಾಯ್ಕ, ಉಳಿಪಾಡಿ ಗುಡ್ಡೆ ನಾಯ್ಗ, ಕಾರ್ನಾಡಿನ ಮಾಗಂದಡಿ ನಾಯ್ಗ, ಮುಂತಾದುವು ಪ್ರಖ್ಯಾತ ಮನೆತನಗಳು.
ಸುಮಾರು 150 – 200 ವರ್ಷಗಳ ಹಿಂದಿನವರಾದ ಬಸ ನಾಯ್ಗ ಎಂಬವರು ಈ ಚನಿಲ ಬನ್ನಾಯನ ಮನೆತನದ ಅಂದಿನ ಹಿರಿಯರು, ಧೂಮ ನಾಯ್ಗ, ಅಂಗರ ನಾಯ್ಗ, ಅಣ್ಣಪ್ಪ ನಾಯ್ಗ, ಮೈಂದಪ್ಪ ನಾಯ್ಗ, ಮುದ್ದು ನಾಯ್ಗ, ಗಿರಿಯಪ್ಪ ನಾಯ್ಗ, ಮೊದಲಾದವರು ಪ್ರಮುಖರು.
ಪೂ ಪೂಜನೆಯಲ್ಲಿ ಈ ಮನೆತನದ ಈಗಿನ ಪೂ ಪೂಜನೆಯವರು ಸದಾನಂದ ನಾಯ್ಗರು. ಇದು ಊರಿನಲ್ಲಿ ಒಂದನೇ ಸ್ಥಾನದ ಮನೆ. ಇದು ನಡಿಕೆರೆ, ಉಚ್ಚಿಲಕರೆ, ತೋಟದಕರೆ, ಮೂಡುಬೆಟ್ಟು ಕರೆಗಳ ಕೂಡುಕಟ್ಟಿಗೆ ಸೇರಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವರೂಢನಾದ ನಾಗ ಬ್ರಹ್ಮರ ಸ್ವರ್ಣಕವಚವಿರುವ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಬ್ರಹ್ಮ ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಪಾಪೆಯಿದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಒಕ್ಕು ಬಲ್ಲಾಳರ ಸಾನಿಧ್ಯವಿದೆ. ಅದರ ಎಡಭಾಗದಲ್ಲಿ ತೂಗು ಮಣೆ ಮಂಚದಲ್ಲಿ ಕೊಡಮಣಿತ್ತಾಯ ಮತ್ತು ಹುಲಿಚಾಮುಂಡಿ ದೈವಗಳ ಸಾನಿಧ್ಯವಿದೆ.
ಬ್ರಹ್ಮ ಗುಡಿಯ ಪ್ರವೇಶ ದ್ವಾರದಲ್ಲಿ ದ್ವಾರ ಪಾಲಕರ ಮರದ ಪಾಪೆಗಳಿವೆ.
ಬ್ರಹ್ಮ ಗುಡಿಯ ಹೊರಗೆ ಚಾವಡಿಯ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ ಹಾಗೂ ಬ್ರಹ್ಮ ಗುಡಿಯ ಎದುರು ಗುರುಕಂಭವಿದೆ.
ಗರೋಡಿಯ ಆವರಣದಲ್ಲಿ ಸ್ಥಳದ ಪಂಜುರ್ಲಿ, ಮರ್ಲ್ ಧೂಮಾವತಿ, ಹಾಗೂ ನಾಗಬನವಿದೆ. ಅಯ್ಯಕಲ್ಲು, ಅಶ್ವಸ್ಥ ಕಟ್ಟೆ, ತುಳಸೀಕಟ್ಟೆಗಳು ಇವೆ
ಗರೋಡಿಯಲ್ಲಿ ನಿತ್ಯಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆಗಳು ನಡೆಯುತ್ತವೆ. ಸೋಣ ತಿಂಗಳಲ್ಲಿ ಹೂವಿನ ಪೂಜಡ ನಡೆಯುತ್ತದೆ. ಸೋಣ ಸಂಕ್ರಾಂತಿಯಂದು ಕಜ್ಜಾಯ ಸೇವೆಯಿದೆ. ಪ್ರತೀ ವರ್ಷ ಪೆರಾರ್ದೆ ತಿಂಗಳಲ್ಲಿ ಪೊಸಬಾರ ಅಗೆಲ್, ನೇಮೋತ್ಸವ, ಮಾಯಂದಾಳ್ ನೇಮ, ಶುದ್ಧದ ಅಗೆಲ್ ನಡೆಯುತ್ತದೆ.
ಇಲ್ಲಿನ ಆಡಳಿತ ಮೂಡುಕರೆ, ನಡುಕೆರೆ, ಉಚ್ಚಿಲಕರೆ, ತೋಟಕರೆ ಹೀಗೆ ನಾಲ್ಕು ಕರೆ ಬಿಲ್ಲವ ಸಮುದಾಯದ ಸಹಕಾರ, ಹಿರಿಯರ ಮಾರ್ಗದರ್ಶನ, ಯುವಜನರ ದುಡಿಮೆ, ಪರಿಶ್ರಮದಿಂದ ಊರ ಪರವೂರ ಜನರ ಸಹಕಾರದಿಂದ ನಡೆಯುತ್ತದೆ. ಗರೋಡಿಗೆ ಆಡಳಿತ ಸಮಿತಿಯೂ ಇದೆ.
ಗರೋಡಿಯು 1974 ಜೀರ್ಣೋದ್ಧಾರಗೊಳ್ಳುವ ಮೊದಲು 12 ವರ್ಷಗಳ ಕಾಲ ಪಾಳು ಬಿದ್ದಿತ್ತು. ನಂತರ 2013 ರಲ್ಲಿ ಜೀರ್ಣೋದ್ಧಾರವಾಗಿದೆ.
ಗರೋಡಿಯಲ್ಲಿ ಈಗ ಬೈದದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಬ್ಬು ಪೂಜಾರಿ ಎಂಬವರು ಸ್ಥಳ ಪಾತ್ರಿಗಳಿದ್ದರು.
ಬೊಗ್ಗು ಪರವ, ಸಂತೋಷ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಬಿಲ್ಲವ ಯೂನಿಯನ್ ಎರ್ಮಾಳು ಕಾರ್ಯನಿರ್ವಹಿಸುತ್ತದೆ.

ಗರೋಡಿಯ ವಿಳಾಸ:

ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ
ಗರೋಡಿ ಎರ್ಮಾಳ್ ಬಡಾ,
ಪೋಸ್ಟ್ ಎರ್ಮಾಳ್,
ಕಾಪು ತಾಲೂಕು,
ಉಡುಪಿ ಜಿಲ್ಲೆ. 574119.

ಗರೋಡಿಯ ಮೊಕ್ತೇಸರ ಮತ್ತು ಪೂ ಪೂಜನೆಯವರು:

ಸದಾನಂದ ಪೂಜಾರಿ 9964006366.

ಮಾಹಿತಿ ಸಂಗ್ರಹಿಸಿದ ದಿನಾಂಕ:

10-10-2022

Shree Brahma Baidarkala Garodi, Pangala Gudde, Pangala

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಾಂಗಾಳ ಗುಡ್ಡೆ, ಪಾಂಗಾಳ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಪಾಂಗಾಳ ಸೇತುವೆಯ ಮೊದಲು ಬಲಕ್ಕೆ ತಿರುಗಿ ಪಡುವಣ ದಿಕ್ಕಿಗೆ ಹೋಗುವ ರಸ್ತೆಯಲ್ಲಿ ಸುಮಾರು 1.5 ಕಿ. ಮೀ. ದೂರ ಸಾಗಿದಾಗ ರಸ್ತೆಯ ಎಡಭಾಗದಲ್ಲಿ ಗದ್ದೆಗಳ ನಡುವೆ ಪಾಂಗಾಳ ಗುಡ್ಡೆ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆಯಾಗಿದೆ. ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಪಶ್ಚಿಮಕ್ಕೂ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕಲ್ಲುಗುಡ್ಡೆ ಗರೋಡಿಯ ನೇಮೋತ್ಸವಕ್ಕೆ ಹೋದ ಅಮ್ಮಣ್ಣ ಬನ್ನಾಯ ಬೆರ್ಮಣ್ಣ ಬೈದರೆಂಬ ಹಿರಿಯರ ಹಿಂದೆ ಬಂದ ಕೋಟಿಚೆನ್ನಯರು, ಸೋಣ ತಿಂಗಳ ಹುಣ್ಣಿಮೆಯ ಬಹುಳಾಷ್ಟಮಿಯಂದು ಮಂಗಳವಾರದ ದಿನ ಸೂರ್ಯೋದಯದ ಹೊತ್ತಿಗೆ ಇಲ್ಲಿಯ ಗರೋಡಿಯಲ್ಲಿ ಬಂದು ನೆಲೆಸಿದರು. ಆ ನಂತರ ಇಲ್ಲಿ ಗರೋಡಿ ನಿರ್ಮಾಣವಾಯಿತು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬಂಗಾರ ಹಾಗೂ ಬೆಳ್ಳಿ ಮುಚ್ಚಿದ ಕುದುರೆಯೇರಿ ಕುಳಿತ ನಾಗ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಬಂಗಾರದ ಕವಚವಿರುವ ಮರದ ಮೂರ್ತಿಯಿದೆ.
ಬ್ರಹ್ಮ ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವರ ಮರದ ಪಾಪೆ, ಕುದುರೆ ಮೇಲೆ ಕುಳಿತ ಒಕ್ಕು ಬಲ್ಲಾಳರ ಮರದ ಪಾಪೆಗಳಿವೆ. ಬ್ರಹ್ಮ ಗುಂಡದ ಹಿಂಭಾಗದಲ್ಲಿ ಗುರುಕಂಭದ ಆರಾಧನೆಯಿದೆ.

ಬ್ರಹ್ಮ ಗುಡಿಯ ಹೊರಗೆ ಚಾವಡಿಯ ಬಲಭಾಗದಲ್ಲಿ ಪಿಲ್ಚಂಡಿ ಹಾಗೂ ಬಂಟರ ಮಣೆ ಮಂಚ, ಎಡಭಾಗದಲ್ಲಿ ಜೋಗಿಪುರುಷರ ಮರದ ಪಾಪೆ ಹಾಗೂ ಮಣೆ ಮಂಚದಲ್ಲಿ ಜುಮಾದಿ, ಬಂಟ ಹಾಗೂ ಪಂಜುರ್ಲಿ ದೈವಗಳಿಗೆ ಪೂಜೆ ನಡೆಯುತ್ತದೆ.

ಬ್ರಹ್ಮ ಗುಡಿಯ ಎದುರು ಮರದ ಕುದುರೆ ಹಾಗು ಇನ್ನೊಂದು ಗುರುಕಂಬದ ಆರಾಧನೆ ಇದೆ.
ಗರೋಡಿಯ ಎದುರು ಕಟ್ಟೆಯಲ್ಲಿ ರಕ್ತೇಶ್ವರಿ ಹಾಗೂ ಕ್ಷೇತ್ರಪಾಲ ದೈವಗಳ ಸಾನಿಧ್ಯವಿದೆ.
ಗರೋಡಿಯ ಎದರು ಬಲಭಾಗದ ಗುಡಿಯಲ್ಲಿ ಮೈಸಂದಾಯ, ನಂದಿಗೋಣ, ಅಮ್ಮಣ್ಣ ಬನ್ನಾಯ, ಬೆರ್ಮಣ ಬೈದ, ಓಲೆದ ಮಾಣಿ, ಪೊಟ್ಟು ದೈವಗಳ ಮರದ ಮೂರ್ತಿ ಇದೆ.
ಎಡಭಾಗದ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗು, ಕೊಳತ ಜುಮಾದಿಯ ಮರಸ ಪಾಪೆಗಳಿವೆ.
ಗರಡಿಯ ಆವರಣಕ್ಕೆ ತಾಗಿ, ನಾಗಬನ, ನಾಗಬ್ರಹ್ಮ, ಮತ್ತು ಬೊಬ್ಬರ್ಯ ದೈವಗಳ ಸಾನಿಧ್ಯವಿದೆ. ಗರಡಿಯ ಎದುರು ಅಶ್ವತ್ತಕಟ್ಟೆ ಹಾಗೂ ನಾಗಬನಗಳಿವೆ.

ಜಯ ಡಿ ಅಮೀನ್

1975ರಿಂದ ಜಯ ಡಿ ಅಮೀನರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಸೂರು ಪೂಜಾರಿ, ಇಸರ ಪೂಜಾರಿ, ಬೊಗ್ರ ಪೂಜಾರಿ, ಬೀರು ಪೂಜಾರಿ, ಬೀರಣ್ಣ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡುತ್ತಿದ್ದರು.

ಗರೋಡಿ ಮನೆ ಶೇಖರ ಜಿ ಅಮೀನರು ಗರೋಡಿಯ ಮೊಕ್ತೇಸರರು. ಹಿಂದೆ ಅವರ ತಂದೆ ಗುರುವ ಅಮೀನ್ ಮೊಕ್ತೇಸರರಾಗಿದ್ದರು.

ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ ಕೊನೆಯಲ್ಲಿ ಅಗೆಲು ಸೇವೆ, ಮರುದಿನ ಬೈದೇರುಗಳ ನೇಮೋತ್ಸವ, ಜೋಗಿ ಪುರುಷ ಕೋಲ, ಅದರ ಮರುದಿನ ಮಾಯಂದಾಲ್ ಕೋಲ, ಜುಮಾದಿ ಬಂಟ ಕೋಲ, ಪಿಲ್ಚಂಡಿ ಕೋಲ ನಡೆಯುತ್ತದೆ.

ಪಾಂಗಾಳ ಗ್ರಾಮದ ಗುಡ್ಡೆ ಹಾಗೂ ಆರ‍್ಯಾಡಿ ಊರುಗಳ ಮನೆಗಳು ಈ ಗರೋಡಿಯ ಮನೆಗಳು ಈ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ಹರಕೆ, ಕಾಣಿಕಡಯಿಂದ ಭರಿಸಲಾಗುತ್ತದೆ.

24.04.1955ರಲ್ಲಿ ಗುರುವಪ್ಪ ಜೆ ಅಮೀನ್ ರಿಂದ ಗರೋಡಿಯ ಜೀರ್ಣೋದ್ಧಾರವಾಗಿದ್ದು, ಅಲ್ಲಿಯವರೆಗೆ ಇದ್ದ ಮುಳಿಯ ಮಾಡನ್ನು ತೆಗೆದು ಹಂಚು ಹಾಕಲಾಯಿತು.

ಗುರುವಪ್ಪ ಜೆ ಅಮೀನ್

ಜಯ ಪರವ ನೀರೆ ಮತ್ತು ಸಂಘಡಿಗರು ನೃತ್ಯ ವಿಶಾರದರಾಗಿ, ಜಯ ಮಡಿವಾಳ ಉದ್ಯಾವರ ಇವರು ಮಡಿವಾಳರಾಗಿ, ಅಕ್ಬರ್ ಸಾಹೇಬ್ ಕಾಪು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಪಾಂಗಾಳ ಗುಡ್ಡೆ, ಪಾಂಗಾಳ ಅಂಚೆ,
ಕಾಪು ತಾಲೂಕು ಉಡುಪಿ 576122.

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024