Baidashree

Sri Bantara Kotichennaiyya Garodi and Panjurli and Mari Shivaraya Temple Kaipadi – Vaderahobali

ಶ್ರೀ ಬಂಟರ ಕೋಟಿಚೆನ್ನಯ್ಯ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ ಕೈಪಾಡಿ – ವಡೇರಹೋಬಳಿ

ಉಡುಪಿಯಿಂದ ಸಾಲಿಗ್ರಾಮ – ಕೋಟೇಶ್ವರ ನಂತರ ಕುಂದಾಪುರಕ್ಕೆ ಮೊದಲು ಟಿ.ಟಿ. ರೋಡ್ ನಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಒಳಗೆ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಬಿಮುಖವಾಗಿದೆ.
ಬ್ರಹ್ಮಗುಂಡವನ್ನು ಗ್ರಾನೈಟ್ ಹಾಕಿ ನಿರ್ಮಿಸಲಾಗಿದೆ. ಗರೋಡಿಯ ಬ್ರಹ್ಮಗುಡಿಯಲ್ಲಿ ಒಳಗೆ ಗುಂಡದ ಎದುರಿನಲ್ಲಿ ನಾಗಬ್ರಹ್ಮರ ಕುದುರೆ ಮಾತ್ರವಿರುವ ಪಂಚಲೋಹದ ಮೂರ್ತಿ ಇದೆ. ಬ್ರಹ್ಮಗುಂಡದ ಒಳಗೆ ವಿಷ್ಣುಮೂರ್ತಿ ದೇವರ ಪಂಚಲೋಹದ ಮೂರ್ತಿ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಸುಮಾರು 250 – 300 ವರ್ಷಗಳ ಹಿಂದೆ ಗರೋಡಿ ಮನೆಯ ಎರಡು ಸಂಸಾರದೊಳಗೆ ಜಗಳವಾಗಿ ಒಂದು ಕಡೆಯವರು ರಾತ್ರಿ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿಯನ್ನು ತೆಗೆದುಕೊಂಡು ಹೋಗಿ ಈ ಗರೋಡಿಯಿಂದ ಸುಮಾರು 200ಮೀ. ದೂರದಲ್ಲಿ ಇನ್ನೊಂದು ಗರೋಡಿಯನ್ನು ನಿರ್ಮಿಸಿ ಪೂಜೆ ಮಾಡಲಾರಂಭಿಸಿದರಂತೆ. ಹಾಗಾಗಿ ಈ ಗರೋಡಿಯಲ್ಲಿ ನಾಗಬ್ರಹ್ಮರ ಕುದುರೆ ಮಾತ್ರ ಉಳಿದುಕೊಂಡಿದೆ. ಇತ್ತೀಚೆಗೆ ಈ ಗರೋಡಿಯಲ್ಲಿ ನಾಗಬ್ರಹ್ಮರ ಹೊಸ ಮೂರ್ತಿ ಮಾಡಿಸುವುದೆಂದು ನಿರ್ಣಯಿಸಿ ದರ್ಶನ ಮಾಡಿಸಿ ಕೇಳಿದಾಗ ಹೊಸ ಮೂರ್ತಿ ಮಾಡುವುದು ಬೇಡವೆಂದೂ, ಹಳೆಯದನ್ನು ವಾಪಾಸು ತರಿಸುವುದಾಗಿ ಬೈದೇರುಗಳ ಅಪ್ಪಣೆಯಾಯಿತಂತೆ. ಹಾಗಾಗಿ ಹಳೆಯ ಮೂರ್ತಿ ವಾಪಾಸು ಬರುವ ಶುಭಗಳಿಗೆಗಾಗಿ ಭಕ್ತರು ಕಾಯುತ್ತಿದ್ದಾರೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಮಗುವಿನ ಮರದ ಮೂರ್ತಿ, ದೇಯಿ ಬೈದೆತಿ ಮಣೆಮಂಚವಿದೆ.
ಗುಂಡದ ಬಲಭಾಗದಲ್ಲಿ ಶಿವಲಿಂಗದ ಕಲ್ಲಿನ ಕೆತ್ತನೆ, ಬಂಟ ಮತ್ತು ಚಿಟಕರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಗದ್ದಿಗೆಯಲ್ಲಿ ಮರದ ಮೂರ್ತಿ, ಇನ್ನೊಂದು ಗದ್ದಿಗೆಯಲ್ಲಿ ಹಪ್ಪಿನ ಕೆರೆ ಹೈಗುಳಿ ದೈವದ ಮರದ ಮೂರ್ತಿಗಳಿವೆ. ಬ್ರಹ್ಮಗುಡಿಯ ಎಡಭಾಗದಲ್ಲಿ ನಂದಿಕೇಶ್ವರ, ಮೂಡುರ ಹೈಗುಳಿ, ಗೆಂಡದ ಹೈಗುಳಿ ದೈವಗಳ ಗದ್ದಿಗೆಯಲ್ಲಿ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಳ್ತಿ, ಹಳಿಯಮ್ಮ, ಚಿಕ್ಕು, ಬೊಬ್ಬರ್ಯ ದೈವಗಳ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಎದುರಿಗೆ ಪಾತ್ರಿ ವೆಂಕಟಯ್ಯ ಪೂಜಾರಿ, ಜೋಗಿಪುರುಷ, ಮಾಸ್ತಿ ಅಮ್ಮನ ಮರದ ಮೂರ್ತಿ ಹಾಗೂ ಗಣಗಳ ಮಣೆಮಂಚವಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ, ತುಳಸಿಕಟ್ಟೆ, ಬಾವಿ, ಬಲಿ ಕಲ್ಲುಗಳಿವೆ.

ಸಂಜೀವ ಪೂಜಾರಿ

ವಿಶ್ವನಾಥ ಪೂಜಾರಿ

ವಿನೋದ ಪೂಜಾರಿ

ನಾರಾಯಣ ಪೂಜಾರಿ

ಯೋಗೀಶ ಪೂಜಾರಿ

ಗರೋಡಿಯ ಅರ್ಚಕರಾಗಿ ಕೈಪಾಡಿ ಮನೆಯವರು ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಮ್ಮೆ ಬದಲಾವಣೆ ಮಾಡಿಕೊಂಡು ಸೇವೆ ಮಾಡುತ್ತಾರೆ. ಸಂಜೀವ ಪೂಜಾರಿ (65 ವರ್ಷ), ವಿಶ್ವನಾಥ (37 ವರ್ಷ), ವಿನೋದ (34 ವರ್ಷ) ಇವರು ಕೈಪಾಡಿ ಮನೆಯ ಅರ್ಚಕರಾಗಿ, ನಾರಾಯಣ ಪೂಜಾರಿ (65 ವರ್ಷ), ಯೋಗೀಶ ಪೂಜಾರಿ (40 ವರ್ಷ) ಇವರು ಪೂಜಾರಿ ಮನೆಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ಮುತ್ತ ಪೂಜಾರಿ, ಬಾಬು ಪೂಜಾರಿ, ಗಣಪ ಪೂಜಾರಿ, ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಗಣಪ ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಮೊಕ್ತೇಸರರಾಗಿ ಕೂಡಾ ಕೈಪಾಡಿ ಮನೆ ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಬ್ಬರಂತೆ ಅಧಿಕಾರ ಬದಲಾವಣೆ ಮಾಡಿಕೊಳ್ಳುತ್ತಾರೆ. ಸಂಜೀವ ಪೂಜಾರಿಯವರು ಕೈಪಾಡಿ ಮನೆಯವರು ಮೊಕ್ತೇಸರರಾದರೆ, ವೆಂಕಟ ಪೂಜಾರಿಯವರು ಪೂಜಾರಿ, ಪೂಜಾರಿ ಮನೆಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ ಸೇವೆ, ಹಾಲು ಹಬ್ಬ, ಫೆಬ್ರವರಿ ತಿಂಗಳ 5ನೇ ತಾರೀಖಿನಂದು ಗೆಂಡ ಸೇವೆ, 6ಕ್ಕೆ ತುಲಾಭಾರ ಸೇವೆ, ಕುರಿಹಾರ ಸೇವೆಗಳು ನಡೆಯುತ್ತದೆ.
ಹಂಗಳೂರು, ಕೋಣಿ, ಕೋಡಿ, ಹೊಸಬೆಟ್ಟು, ವಿಠಲವಾಡಿ, ವಡೇರಹೋಬಳಿ, ಕೋಟೇಶ್ವರ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ.
ಈ ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರವೂರ ಜನರ, ಹರಕೆ, ಕಾಣಿಕೆ, ಸಹಾಯಧನ,ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಗರೋಡಿಗೆ ಸುಮಾರು ಒಂದೂವರೆ ಎಕ್ರೆ ಜಾಗವಿದೆ. 1972 ಹಾಗೂ 2000 ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ. ೨೦೦೦ ಇಸವಿಯ ಜೀರ್ಣೋದ್ದಾರದ ಕಾರ್ಯ ಪ್ರಗತಿಯಲ್ಲಿದ್ದಾಗ ನಮ್ಮ ಸಂಸ್ಥೆಯ ಅಧ್ಯಯನ ತಂಡವು ಈ ಗರೋಡಿಗೆ ಭೇಟಿ ಕೊಟ್ಟ ಸಂದರ್ಭದ ವಿಡಿಯೋ ಚಿತ್ರೀಕರಣ ಇಲ್ಲಿದೆ. ಗರೋಡಿಯ ಅಂದಿನ ಅರ್ಚಕರಾಗಿದ್ದ ಮುತ್ತು ಪೂಜಾರಿಯವರು ಜೀರ್ಣೋದ್ದಾರದ ಬಗ್ಗೆ ಮಾಹಿತಿ ನೀಡಿದ್ದರು.
ವಡೇರ ಹೋಬಳಿಯ ಸೀತ ಮಡಿವಾಳರ ಮಗ ಮಡಿವಾಳರಾಗಿ, ಮಂಜುನಾಥ ದೇವಾಡಿಗ ಕೋಟೇಶ್ವರ ವಾಧ್ಯದವರಾಗಿ, ವಿಠಲವಾಡಿಯ ರಂಗ ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮೂಲ ಗರೋಡಿಯಿಂದ ವಿವಾದದ ಕಾರಣ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿ ತಂದು ಸ್ಥಾಪಿಸಿದ ಗರೋಡಿ ಹತ್ತಿರದಲ್ಲಿದೆ.
ಈ ಗರೋಡಿಯನ್ನು ಶ್ರೀ ಬ್ರಹ್ಮಬೈದರ್ಕಳ ಪಂಜುರ್ಲಿ ಗರೋಡಿ ಕೈಪಾಡಿ ಎಂದು ಹೆಸರಿಸಲಾಗಿದೆ.
ಇದರ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ನಿರ್ಮಿಸಿ ಟೈಲ್ಸ್ ಹಾಕಲಾದ ಗುಂಡದಂತಿರುವ ಮಂಟಪದಲ್ಲಿ ನಾಗಬ್ರಹ್ಮರ ಮೂರ್ತಿ ಇದೆ. ಕುದುರೆಯ ಬದಲಿಗೆ ಕಂಚಿನಿಂದ ನಿರ್ಮಿಸಿದ ಪೀಠದ ಮೇಲೆ ಮೂರ್ತಿಯನ್ನಿಡಲಾಗಿದೆ.
ಬ್ರಹ್ಮಗುಡಿಯ ಹೊರಗೆ ಪಂಜುರ್ಲಿ, ಗೆಂಡದ ಹೈಗುಳಿ, ಮಾರಿ ಶಿವರಾಯ, ಮಾಸ್ತಿಯಮ್ಮ ದೈವಗಳ ಮರದ ಮೂರ್ತಿ, ಶ್ರೀ ಮರ್ಲುಚಿಕ್ಕು ಹಾಗೂ ಪರಿವಾರ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಗರೋಡಿಯ ವಿಳಾಸ:

ಶ್ರೀ ಬಂಟರ ಕೋಟಿಚೆನ್ನಯರ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ,
ಕೈಪಾಡಿ, ಟ.ಟ.ರಸ್ತೆ, ವಡೇರಹೋಬಳಿ, ಕುಂದಾಪುರ – 576201.

ಅರ್ಚಕರು:

ಕೈಪಾಡಿ ಮನೆ ವಿಶ್ವನಾಥ ಪೂಜಾರಿ – 8105669153
ಕೈಪಾಡಿ ಮನೆ ವಿನೋದ ಪೂಜಾರಿ – 8971427022,
ಪೂಜಾರಿ ಮನೆ ಯೋಗೀಶ ಪೂಜಾರಿ – 9164954574.

ಮಾಹಿತಿ ನೀಡಿದವರು :

ಕೈಪಾಡಿ ಮನೆ ವಿನೋದ ಪೂಜಾರಿ,
ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala, Shivaraya & Parivaara Garodi, Amavasebailu

ಶ್ರೀ ಬ್ರಹ್ಮಬೈದರ್ಕಳ ಹಾಗೂ ಶಿವರಾಯ ಮತ್ತು ಪರಿವಾರ ಗರೋಡಿ, ಅಮವಾಸೆಬೈಲು

ಉಡುಪಿಯಿಂದ ಹಾಲಾಡಿ – ರಟ್ಟಾಡಿ ಮಾರ್ಗವಾಗಿ ಅಮಾಸೆಬೈಲು ತಲುಪಿದರೆ ಅಮಾಸೆಬೈಲು ಪೇಟೆಯಿಂದ ಅರ್ಧ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಕುಜುಂಬ ಕಾಂಜವ ಹಾಗು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಎಡಬದಿಯಲ್ಲಿ ಪೆರುಮಳೆ ಬಲ್ಲಾಳ, ದೇವು ಬಲ್ಲಾಳ, ಹಾಗೂ ಬಂಟರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಅಣ್ಣಪ್ಪ ಪಂಜುರ್ಲಿ, ಜೋಡು ಪಂಜುರ್ಲಿ ಹಾಗೂ ಬಂಟರ ಮಣೆಮಂಚಗಳಿವೆ.
ಎಡಬದಿಯಲ್ಲಿ ಕಾಂತಣ್ಣ ಜುಮಾದಿ ಹಾಗೂ ಬಂಟ, ಪಂಚದೂಮಾವತಿ, ಬಂಟ, ಪಂಚಸ್ಥಾನ ಪರಿವಾರ, ತತ್ವತ್ರ ಮೈಂದಾಳಿ, ದೈವಗಳ ಮಣೆಮಂಚ, ಬಾಲಯ್ಯ, ಮೈಂದಾಳಿಯ ಮರದ ಮೂರ್ತಿಗಳಿವೆ.
ಗುಂಡದ ಎದುರಿಗೆ ಚಾಮುಂಡಿ ಮಣೆಮಂಚ, ಹೊಸಮುಂಡಿಗೆ, ನರೀಶ್ವರ ದೈವಗಳ ಮಣೆಮಂಚ ಹಾಗೂ ಜೋಗಿ ಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಉಮ್ಮಾಳ್ತಿ ದೈವಗಳ ಮಣೆಮಂಚಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿ ಇದೆ.
ಪಕ್ಕದ ಇನ್ನೊಂದು ಗುಡಿಯಲ್ಲಿ ಬಂಟರ ಹಾಗೂ ಬಂಟರ ಗದ್ದಿಗೆ, ಪಂಚ ದೂಮಾವತಿಯ ಮರದ ಮೂರ್ತಿ ಬಂಟ, ಬಂಟರ ಮಣೆಮಂಚ, ಪಂಜುರ್ಲಿಯ ಮರದ ಮೂರ್ತಿ, ವ್ಯಾಘ್ರಚಾಮುಂಡಿಯ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ಬಂಟ ಹಾಗೂ ಬಂಟ ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿ ಇದೆ.

ಭೋಜ ಪೂಜಾರಿ

ಅಪ್ಪು ಪೂಜಾರಿ

1996ರಿಂದ ಭೋಜ ಪೂಜಾರಿಯವರು (59 ವರ್ಷ) ಗರೋಡಿಯ ಅರ್ಚಕರಾಗಿದ್ದಾರೆ. ಅಪ್ಪು ಪೂಜಾರಿ (77 ವರ್ಷ)ಯವರು ಇಲ್ಲಿಯ ಇನ್ನೋರ್ವ ಅರ್ಚಕರು. ಇವರಿಬ್ಬರ ನಡುವೆ ಜುಲೈ ಒಂದಕ್ಕೆ ಅಧಿಕಾರ ಬದಲಾವಣೆ ನಡೆಯುತ್ತದೆ. ಇವರ ಮೊದಲು ಬಚ್ಚ ಪೂಜಾರಿ ಹಾಗೂ ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಅಪ್ಪು ಪೂಜಾರಿ , ರಾಜು ಪೂಜಾರಿ (74 ವರ್ಷ) ಲಕ್ಷಣ ಪೂಜಾರಿ (76 ವರ್ಷ) ನಂದಿ ಪೂಜಾರಿ (67 ವರ್ಷ) ಇವರು ಈ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳು.
ಶಂಕರನಾರಾಯಣ ಕೊಡ್ಗಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಡಿಸೆಂಬರ್ 13ರಂದು ಕಾಯ್ದೆ ಪೂಜೆ, ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, 22ಕ್ಕೆ ನೇಮ, ಜೋಗಿಪುರುಷ, ಮೈಂದಾಳಿ, ಶಿವರಾಯ ಕೋಲ, ಜೂನ್ ತಿಂಗಳಲ್ಲಿ ಶಿವರಾಯನಿಗೆ ಮಾರಿ ಸೇವೆ ನಡೆಯುತ್ತದೆ.
ಗರೋಡಿಯು ಸುಮಾರು ಒಂದು ಎಕರೆ ಸರಕಾರಿ ಭೂಮಿಯಲ್ಲಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ರಾಮ ಹೆಂಗವಳ್ಳಿ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಾಗೂ ಶ್ರೀ ವೀರ ಶಿವರಾಯ ಮತ್ತು ಸಹಪರಿವಾರ ಗರೋಡಿ,
ಅಮಾಸೆಬೈಲು ಕುಂದಾಪುರ ತಾಲೂಕು,
ಉಡುಪಿ, 576227.

ಅರ್ಚಕರು:

ಭೋಜ ಪೂಜಾರಿ – 9740967134,
ಅಪ್ಪು ಪೂಜಾರಿ – 9611802891.

ಮಾಹಿತಿ ನೀಡಿದವರು :

ಭೋಜ ಪೂಜಾರಿ,
ಅಪ್ಪು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Brahma Baidarkala Garodi Asodu

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಸೋಡು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 66ರಲ್ಲಿ ಕೋಟೇಶ್ವರ ತಲುಪಿ ಅಲ್ಲಿಂದ ಬಲಕ್ಕೆ ಹಾಲಾಡಿ ರಸ್ತೆಯಲ್ಲಿ ಸುಮಾಅರು 3.7ಕಿ. ಮೀ. ದೂರ ಸಾಗಿದರೆ ಬಲಬದಿಯಲ್ಲಿದೆ ಈ ಗರೋಡಿ.
ಈ ಗರೋಡಿಯು ಆಯದ ಗರೋಡಿಯಾಗಿದೆ. ಪೂರ್ವಾಭಿಮುಖವಾಗಿರುವ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ನಾಗಬ್ರಹ್ಮರ ಮೂರ್ತಿಯ ಹಿಂಡ ದೇವಿಯ ಮರದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ರಕ್ತಚಂದನದ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರು,ಇಬ್ಬರು ಮಕ್ಕಳ ಮರದ ಮೂರ್ತಿಯಿದೆ. ಪಕ್ಕದಲ್ಲಿ ಹುಲಿದೇವರ ಗದ್ದಿಗೆ ಹಾಗೂ ನಂದಿಕೋಣ ದೈವದ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಇಬ್ಬರು ಬಲ್ಲಾಳರ ಮರದ ಮೂರ್ತಿ ಹಾಗೂ ಇನ್ನೊಂದು (ಕುಜುಂಬ ಕಾಂಜವರ?) ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೋರು ಬೊಬ್ಬರ್ಯ ಮತ್ತು ಗಣದ ಮರದ ಮೂರ್ತಿ ಇದೆ.
ಎಡ ಬದಿಯಲ್ಲಿ ಪಂಜುರ್ಲಿ ಗದ್ದಿಗೆಯಲ್ಲಿ ಮರದ ಮೂರ್ತಿ, ಚೌಂಡಿ, ಮೈಂದಾಳ್ತಿ ಮತ್ತು ಮಗು, ಗೂರಮ್ಮ, ಕೋಣದ ಮೂರ್ತಿಗಳಿವೆ. ಪಕ್ಕದಲ್ಲಿ ಹೈಗುಳಿಯ ಮರದ ಗದ್ದಿಗೆಯಲ್ಲಿ ಮರದ ಮೂರ್ತಿ, ಚಿಕ್ಕು ಮತ್ತು ಪರಿವಾರ ದೈವಗಳ ಮೂರ್ತಿಗಳಿವೆ.
ಪಕ್ಕದಲ್ಲಿ ಜೋಗಿ ಪುರುಷ ಪಕ್ಕದಲ್ಲಿ ನಾಯಿ ಮತ್ತು ಕೋಳಿ, ಚಂಡಿ ದೈವಗಳ ಮರದ ಮೂರ್ತಿಗಳಿವೆ. ಇವಲ್ಲದೆ ಗುರುಕಂಬ, ಗದ್ದಿಗೆಯಲ್ಲಿ ನಂದಿಯ ಕಂಚಿನ ಮೂರ್ತಿ, ಎಣ್ಣೆ ಕೊಪ್ಪರಿಗೆ ಹಾರಿದ ಪಾತ್ರಿಯ ಮರದ ಮೂರ್ತಿ, ಹೈಗುಳಿ ದೈವದ ಗದ್ದಿಗೆಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಆಂಜನೇಯ ದೇವರ ಮರದ ಮೂರ್ತಿಗಳಿವೆ.
ಗರೋಡಿಯ ಹೆಬ್ಬಾಗಿಲಿನ ಎಡಬದಿಯ ಗುಡಿಯಲ್ಲಿ ಶಿವರಾಯ ಬಂಟರ ಮರದ ಮೂರ್ತಿಗಳಿವೆ. ಪಕ್ಕದಲ್ಲೇ ಗಣಗಳ ಕಲ್ಲು ಇದೆ.
ಹೆಬ್ಬಾಗಿಲ ಬಲಬದಿಯ ಗುಡಿಯಲ್ಲಿ ಹೈಗುಳಿ ದೈವಗಳ ಮಣೆಮಂಚವಿದೆ.

ಮಹಾಬಲ ಪೂಜಾರಿ

ಗರೋಡಿ ಮನೆ ಮಹಾಬಲ ಪೂಜಾರಿ (75 ವರ್ಷ) ಯವರು ಕಳೆದ 30 ವರ್ಷಗಳಿಂದ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಮಾವ ನಾರಾಯಣ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು. ಇಲ್ಲಿ ಬೈದರ ದರ್ಶನ ಸ್ಥಳ ಪಾತ್ರಿಗಳಿಲ್ಲ.
ಅಸೋಡು ಮೂಡು ಮನೆಯವರು ವರ್ಷಕ್ಕೊಬ್ಬರಂತೆ ಈ ಗರೋಡಿಯ ಮೊಕ್ತೇಸರರಾಗಿರುತ್ತಾರೆ. ಪ್ರತೀ ವರ್ಷ ಏಪ್ರಿಲ್ 8ಕ್ಕೆ ಈ ಬದಲಾವಣೆ ನಡೆಯುತ್ತದೆ. ಸದ್ಯಕ್ಕೆ ಏಪ್ರಿಲ್ 8, 2025ರವರೆಗೆ ಅಜಿತ್ ಕುಮಾರ್ ಸೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿರುತ್ತಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಡಿಸೆಂಬರ್ 2ನೇ ತಾರೀಖಿನಂದು ಅಗೆಲು ಸೇವೆ, 3ರಕ್ಕೆ ಹಾಲುಹಬ್ಬ, ದರ್ಶನ ಸೇವೆ, ತಲಾಭಾರ, ಮೇ 16ಕ್ಕೆ ಶಿವರಾಯ ಮಾರಿ ಹಬ್ಬ ನಡೆಯುತ್ತದೆ.
ಕಾಳಾವರ, ವಕ್ವಾಡಿ, ಕೆದೂರು, ಸಲ್ವಾಡಿ ಊರಿನ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ತುಲಾಭಾರ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಜನ ಪಾಲ್ಗೊಳ್ಳುತ್ತಾರೆ.
ಗರೋಡಿಗೆ 21 ಸೆಂಟ್ಸ ಜಾಗವಿದೆ. ಊರ ಜನರ ಹರಕೆ, ಕಾಣಿಕೆ, ದೇಣಿಗೆ, ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯ ಕಟ್ಟಡವು ತುಂಬಾ ಹಳೆಯದಾಗಿದ್ದು ಈಗ ಜೀರ್ಣೋದ್ಧರ ಗೊಳಿಸುವ ಯೋಜನೆಯಿದೆ.
ಹೆರಿಯ ಮಡಿವಾಳ ಅಸೋಡು ಇವರು ಮಡಿವಾಳರಾಗಿ, ಸಂಜೀವ ದೇವಾಡಿಗ ಕೋಟೆಶ್ವರ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಗರೋಡಿ, ಅಸೋಡು,
ಅಸೋಡು ಗ್ರಾಮ, ಮತ್ತು ಅಂಚೆ,
ಕುಂದಾಪುರ ತಾಲೂಕು,
ಉಡುಪಿ 576222

ಅರ್ಚಕರು:

ಮಹಾಬಲ ಪೂಜಾರಿ – 9900475529

ಮಾಹಿತಿ ನೀಡಿದವರು :

ಮಹಾಬಲ ಪೂಜಾರಿ,
ಸಂತೋಷ ಪೂಜಾರಿ
(ಮಹಾಬಲ ಪೂಜಾರಿಯವರ ಮೊಮ್ಮಗ)- 9900475529

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Shivaraya & Brahma Baidarkala Garodi – Kavadi

ಶ್ರೀ ಶಿವರಾಯ ಮತ್ತು ಬ್ರಹ್ಮ ಬೈದರ್ಕಳ ಗರೋಡಿ – ಕಾವಡಿ

ಉಡುಪಿಯಿಂದ ಬ್ರಹ್ಮಾವರಕ್ಕೆ ಬಂದು ಬಾರ್ಕೂರು ಮುಖ್ಯ ರಸ್ತೆಗೆ ತಿರುಗಿ ಬಾರ್ಕೂರು ಪೇಟೆಯಿಂದ ಸುಮಾರು 3 ಕಿ. ಮೀ. ನಂತರ ಎಡಕ್ಕೆ ತಿರುಗಿ ಸುಮಾರು 2.5 ಕಿ. ಮೀ ದೂರದಲ್ಲಿದೆ ಈ ಗರೋಡಿ.
ಇದು ತುಂಬಾ ಹಳೆಯ ಕಟ್ಟಡದ ಗರೋಡಿಯಾಗಿದ್ದು ಜೀರ್ಣೋದ್ಧಾರದ ಯೋಜನಾ ಹಂತದಲ್ಲಿದೆ. ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮ ಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಬೆಳ್ಳಿ ಕವಚದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ತಾಯಿ ದೇಯಿ ಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ನಂದಿಕೇಶ್ವರ ದೈವದ ಮರದ ಮುಖ ಮೂರ್ತಿ ಹಾಗೂ ಮಣೆಮಂಚವಿದೆ. ಪಕ್ಕದಲ್ಲಿ ಮೈಸಂದಾಯ ದೈವದ ಮಣೆಮಂಚ ಹಾಗೂ ಪಂಜ ಬೈದರ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗಡೆ ಬಲಭಾಗದಲ್ಲಿ ಪಂಜುರ್ಲಿಯ ಮರದ ಮೂರ್ತಿ ಹಾಗೂ ಪರಿವಾರ ದೈವಗಳ ಮಣೆ ಮಂಚವಿದೆ. ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮರದ ಗದ್ದ್ದಿಗೆಯಲ್ಲಿ ಕಂಚಿನ ಮೂರ್ತಿ ಇದೆ. ಪಕ್ಕದಲ್ಲಿ ಪರಿವಾರ ದೈವಗಳ ಮಣೆ ಮಂಚಗಳಿವೆ.
ಬಾಲಯ್ಯ, ಮೈಂದಾಳ್ತಿ, ಗೋರಲಮ್ಮ, ಚಿಕ್ಕು, ಮರ್ಲುಚಿಕ್ಕು, ದೈವಗಳ ಮರದ ಮೂರ್ತಿಗಳು, ಪರಿವಾರ ದೈವಗಳ ಮಣೆ ಮಂಚಗಳಿವೆ.
ಬ್ರಹ್ಮ ಗುಡಿಯ ಎದುರಿಗೆ ಜೋಗಿಪುರುಷ, ಹಳಿಯಮ್ಮ, ಬಾಲಚಿಕ್ಕುವಿನ ಮರದ ಮೂರ್ತಿ ಹಾಗೂ ಚೌ೦ಡಿ ದೈವದ ಕಲ್ಲು ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯ, ಬಬ್ಬರ್ತಿಯ ಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಮರದ ಗದ್ದಿಗೆಯೊಳಗೆ ಪಂಚಲೋಹದ ಶಿವರಾಯ ಮೂರ್ತಿಯಿದೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ, ಹೈಗುಳಿ, ಕೊರಗಜ್ಜ, 17 ಶಕ್ತಿ ಕಲ್ಲುಗಳು ಹಾಗೂ ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ರಾವು, ಕೇತು, ಹಾಗೂ ಯಕ್ಷಿಣಿ ದೈವಗಳ ಸಾನಿಧ್ಯವಿದೆ.

ಸತೀಶ್ ಪೂಜಾರಿ

ತಿಮ್ಮ ಪೂಜಾರಿ

ಸತೀಶ್ ಪೂಜಾರಿ (55 ವರ್ಷ) ತಿಮ್ಮ ಪೂಜಾರಿ (67 ವರ್ಷ) ಹಾಗೂ ರಾಜು ಪೂಜಾರಿ (72 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಚಂದು ಪೂಜಾರಿ, ದೊಟ್ಟಿ ಪೂಜಾರಿ, ಬಚ್ಚ ಪೂಜಾರಿ, ಹಾಗೂ ಸಂಜೀವ ಪೂಜಾರಿ ಇವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಶಿವ ಪೂಜಾರಿ, ಬಚ್ಚ ಪೂಜಾರಿಯವರು ಈ ಸೇವೆ ಮಾಡಿದ್ದರು,
ದಿನಕರ ಶೆಟ್ಟಿ, ಶೇಖರ ಶೆಟ್ಟಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯವೂ ದೀಪ ಹಚ್ಚುವ ಕ್ರಮವಿದೆ. ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹಸರಣೆ ಪೂಜೆ, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ನಡೆಯುತ್ತದೆ. ಫೆಬ್ರವರಿ 7ರಿಂದ ಕೆಂಡ ಸೇವೆ, ಶಿವರಾಯ ಕೋಲ, ಪಂಜುರ್ಲಿ ಕೋಲ, ಮತ್ತು ತುಲಾಭಾರ ಸೇವೆ ನಡೆಯುತ್ತದೆ.
ಹವರಾಲು, ಮಾನಂಬಳ್ಳಿ, ಮೂಡುತೋಟ, ಕಾವಡಿ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆಯಂತಹ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗರೋಡಿಯ ಪರಿಸರದಲ್ಲಿ ಶಿವರಾಯ ಪ್ರೆಂಡ್ಸ ಎನ್ನುವ ಯುವಕರ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಶಿವರಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ಕಾವಡಿ,
ಅಂಚೆ ಕಾವಡಿ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಪಾತ್ರಿ:

ಸತೀಶ್ ಪೂಜಾರಿ – 9611050180
ತಿಮ್ಮ ಪೂಜಾರಿ – 7022207425
ರಾಜು ಪೂಜಾರಿ – 9743330753

ಮಾಹಿತಿ ನೀಡಿದವರು :

ಸತೀಶ್ ಪೂಜಾರಿ
ತಿಮ್ಮ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Garodi, Hosala, Barkur

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹೊಸಾಳ, ಬಾರ್ಕೂರು.

ಉಡುಪಿಯಿಂದ ಬಾರ್ಕೂರು ತಲುಪಿ ಬಾರ್ಕೂರು ಪೇಟೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಕೆಂಪು ಮುರಕಲ್ಲಿನಿಂದ ಕಟ್ಟಲ್ಪಟ್ಟು ನವೀಕೃತಗೊಂಡ ಈ ಗರೋಡಿಯ ದ್ವಾರವು ಪೂರ್ವಾಭಿಮುಖವಾಗಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಬ್ರಹ್ಮಗುಂಡವು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆಳ್ಳಿಯ ಪ್ರಭಾವಳಿಯುಳ್ಳ ಪಂಚಲೋಹದ ನಾಗಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳು, ದೇಯಿಬೈದೆತಿ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಒಕ್ಕುಬಲ್ಲಾಳ, ಕುಜುಂಬ ಕಾಂಜವರ ಮರದ ಮೂರ್ತಿ, ಮೈಸಂದಾಯ ದೈವದ ಮಣೆಮಂಚದ ಮೇಲೆ ಕಂಚಿನ ಮುಖಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೈಗುಳಿ ದೈವದ ಎರಡು ಮಣೆಮಂಚವಿದೆ. ಬ್ರಹ್ಮಗುಡಿಯ ಎಡಭಾಗದಲ್ಲಿ ಗದ್ದಿಗೆಯಲ್ಲಿ ಪಂಜುರ್ಲಿಯ ಕಂಚಿನ ಮುಖಮೂರ್ತಿ, ಹಾಗೂ ಪರಿವಾರ ದೈವಗಳ ಮೂರು ಮಣೆಮಂಚಗಳಿವೆ.
ಪಕ್ಕದಲ್ಲಿ ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿ, ಚಿಕ್ಕಮ್ಮ ಪರಿವಾರ ದೈವಗಳ ಎರಡು ಮಣೆಮಂಚ, ಚಿಕ್ಕಮ್ಮ, ಜೋಗಿಪುರುಷ, ಚೌಂಡಿಯ ಮರದ ಮೂರ್ತಿಗಳು, ಗುರುಕಂಭ, ಚೌಂಡಿ ಪರಿವಾರ ದೈವಗಳ ಎರಡು ಮಣೆಮಂಚಗಳಿವೆ.
ಗರೋಡಿಯ ದ್ವಾರದ ಎರಡು ಬದಿಗಳಲ್ಲಿ ಬಾಗಿಲ ಬೊಬ್ಬರ್ಯನ ಎರಡು ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ, ಬಂಟರ ಮರದ ಮೂರ್ತಿಗಳಿವೆ. ಈ ಮೂರ್ತಿಗಳ ಹಿಂದೆ ವನದುರ್ಗಾದೇವಿಯ ಮರದ ಹಲಗೆಯ ಮೇಲೆ ಬಿಡಿಸಿದ ವನದುರ್ಗಾದೇವಿಯ ಚಿತ್ರಣವಿದೆ.
ಗರೋಡಿಯ ಎಡಭಾಗದಲ್ಲಿರುವ ಶಿಲಾಮಯ ಗುಡಿಯಲ್ಲಿ ಕಲ್ಕುಡ, ಹಾಗೂ ಕಾಳಮ್ಮ ದೈವಗಳ ಕಂಚಿನ ಮೂರ್ತಿಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ ದೈವದ ಕಲ್ಲಿನ ಕಂಬ, ತುಳಸೀಕಟ್ಟೆ, ಮೂರು ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ರವಿ ಪೂಜಾರಿ (55 ವರ್ಷ) ಇವರು ಗರೋಡಿಯ ಅರ್ಚಕರಾಗಿರುವರು. ಇವರ ಮೊದಲು ರಘು ಪೂಜಾರಿ, ವೆಂಕಟಯ್ಯ ಪೂಜಾರಿ, ಮಂಜಯ್ಯ ಪೂಜಾರಿ, ಕುರುಡ ಪೂಜಾರಿಯವರು ಅರ್ಚಕರಾಗಿ ಈ ಗರೋಡಿಯ ಸೇವೆ ಮಾಡಿದ್ದರು.

ರಘು ಪೂಜಾರಿ

ರಘು ಪೂಜಾರಿ (63 ವರ್ಷ) ಹಾಗೂ ಕೃಷ್ಣ ಪೂಜಾರಿ (60 ವರ್ಷ) ಇವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ವೆಂಕಟಯ್ಯ ಪೂಜಾರಿ, ಬಚ್ಚ ಪೂಜಾರಿಯವರು ಈ ಸೇವೆ ಮಾಡಿದ್ದರು.
ಯೆಡ್ತರೆ ಮನೆ ಗೌತಮ ಹೆಗ್ಡೆಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ವೈ,ಎಸ್. ಹೆಗ್ಡೆ, ವಿಠಲ ಹೆಗ್ಡೆ, ಮಂಜಯ್ಯ ಹೆಗ್ಡೆಯವರು ಇಲ್ಲಿ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಗೌತಮ ಹೆಗ್ಡೆಯವರು ಅಧ್ಯಕ್ಷರಾಗಿ, ಗರೋಡಿಮನೆ ಜಗದೀಶ ಪೂಜಾರಿಯವರು ಕಾರ್ಯದರ್ಶಿಯಾಗಿ, ಪ್ರಮೋದ್ ಪೂಜಾರಿಯವರು ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಸಿರುವಾಣಿ ಪೂಜೆ, ಕದಿರುಕಟ್ಟುವುದು, ಅಷ್ಟಮಿಯಂದು ಆರ್ಘ್ಯ ಬಿಟ್ಟು ಮರುದಿನ ಅಗೆಲು ಸೇವೆ, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ತುಲಾಭಾರ ಸೇವೆ, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ಮೂರು ವರ್ಷಕ್ಕೊಮ್ಮೆ ನೇಮೋತ್ಸವ, ಜೋಗಿಪುರುಷ, ಮೈಂದಾಳ್ತಿ, ಹಾಗೂ ಶಿವರಾಯ ಕೋಲ, ಕಲ್ಕುಡ, ಪಂಜುರ್ಲಿ, ಕಾಳಮ್ಮ ಕೋಲ ನಡೆಯುತ್ತದೆ.
ಹೊಸಾಳ ಗ್ರಾಮ, ಕಚ್ಚೂರು, ಹಾಲೆಕೊಡೆ, ಹನೆಹಳ್ಳಿ, ಮೂಡುತೋಟ, ಕೂರಾಡಿ, ನೀಲಾವರ, ಯಡ್ತಾಡಿ, ಬಂಡಿಮಠ, ನಾಗರಮಠ, ನಲ್ಕುದ್ರು ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಈ ಕೂಡುಕಟ್ಟಿನ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 33 ಸೆಂಟ್ಸ ಜಾಗವು ಗರೋಡಿಯ ಹೆಸರಿನಲ್ಲಿದೆ. 1981ರಲ್ಲಿ ಜೀರ್ಣೋದ್ಧಾರಗೊಂದ ನಂತರ 26ನೇ ಮೇ 2022ರಲ್ಲಿ ಜೀರ್ಣೋದ್ಧಾರಗೊಂಡಿದೆ.
ನರಸಿಂಹ ಪರವ ಚೇರ್ಕಾಡಿ ಇವರು ಈ ಗರೋಡಿಯ ನೃತ್ಯವಿಶಾರದರಾಗಿ, ಗಣೇಶ ಮಡಿವಾಳ, ಹೊಸಾಳ ಇವರು ಮಡಿವಾಳರಾಗಿ, ರಾಮ ದೇವಾಡಿಗ ಹೊಸಾಳ ಇವರು ವಾದ್ಯದವರಾಗಿ, ಸುರೇಶ ಹೊಸಾಳ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹೊಸಾಳ, ಬಾರ್ಕೂರು,
ಬಾರ್ಕೂರು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಪಾತ್ರಿ:

ರಘು ಪೂಜಾರಿ – 9980052990.

ಮೊಕ್ತೇಸರರು:

ಗೌತಮ ಹೆಗ್ಡೆ: – 9611018893.

ಮಾಹಿತಿ ನೀಡಿದವರು :

ರಘು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi Belthadi, Kadur

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬೆಳ್ತಾಡಿ ಕಾಡೂರು

ಉಡುಪಿಯಿಂದ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸಾಗಿ ಕುಂಜಾಲಿನ ನಂತರ ನೀಲಾವರ ದೇವಸ್ಥಾನದ ರಸ್ತೆಯಲ್ಲಿ ಮುಂದುವರಿದು ಕುರಾಡಿಯ ನಂತರ ಕಾಡೂರು ತಲುಪಿ ಕಾಡಿನ ನಡುವಿನ ಮಣ್ಣಿನ ರಸ್ತೆಯಲ್ಲಿ ಸುಮಾರು 1 ಕಿ.ಮೀ ಸಾಗಿದರೆ ಬೆಳ್ತಾಡಿ ಗರೋಡಿ ಸಿದುವುದು.
ಇದು ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯೊಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ ಹಾಗೂ ಕಿನ್ನಿದಾರುವಿನ ಮಣೆಮಂಚ, ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಹಾಗೂ ಕುಜುಂಬ ಕಾಂಜವ ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿ ಹಾಗೂ ಚಾಮುಂಡೇಶ್ವರಿಯ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಕಲ್ಕುಡ ಹಾಗೂ ಹೈಗುಳಿ ಮಣೆಮಂಚಗಳಿವೆ. ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪಂಜುರ್ಲಿ ಮಣೆಮಂಚ, ಉಳಿದ ಆರು ಮಣೆಮಂಚಗಳಲ್ಲಿ ಪರಿವಾರ ದೈವಗಳು, ಮಾಯಂದಾಳ್ ಮತ್ತು ಮಗುವಿನ ಮರದ ಮೂರ್ತಿಗಳೂ ಇವೆ.
ಬ್ರಹ್ಮಗುಡಿಯ ಎದುರಿಗೆ ಚಿಕ್ಕುವಿನ ಮರದ ಮೂರ್ತಿ ಹಾಗೂ ಗುರುಕಂಭವಿದೆ. ಹಾಗೂ ಜೋಗಿಪುರುಷರ ಮರದ ಮೂರ್ತಿಗಳೂ ಇವೆ.
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಮಲಸಾವರ ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.

ಸಂತೋಷ ಪೂಜಾರಿ

2021 ರಿಂದ ಸಂತೋಷ ಪೂಜಾರಿ (41 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಜಬ್ಬ ಪೂಜಾರಿ, ಸಂಕು ಪೂಜಾರಿ, ಕೂಸ ಪೂಜಾರಿ ಇವರು ಇಲ್ಲಿಯ ಅರ್ಚಕರಾಗಿದ್ದರು.
ಮಹಾಬಲ ಪೂಜಾರಿ (62 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿ. ಹಿಂದೆ ತಿಮ್ಮ ಪೂಜಾರಿ ಹಾಗೂ ಸುಬ್ಬ ಪೂಜಾರಿ ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸತೀಶ್ ಶೆಟ್ಟಿ ಇವರು ಗರೋಡಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಹೆಗ್ಡೆಯವರು ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಒಂದು ದಿನ ಊರಿನವರಿಂದ ಅಗೆಲು ಸೇವೆ, ಮರುದಿನ ಹಾಲುಹಬ್ಬ, ಹಾಗೂ ಮೊಕ್ತೇಸರರಿಂದ ಅಗೆಲು ಸೇವೆ ನಡೆಯುತ್ತದೆ. ಅಷ್ಟಮಿಯ ಮೂರನೇ ದಿನ ಅಗೆಲು ಸೇವೆ ಮೊಕ್ತೇಸರರಿಂದ ನಡೆಯುತ್ತದೆ. ಪುನ: ಏಪ್ರಿಲ್ ತಿಂಗಳ 16ನೇ ತಾರೀಖಿನಂದು ಅಗೆಲು ಸೇವೆ, 17ಕ್ಕೆ ಬೈದೇರುಗಳ ನೇಮ, ಶಿವರಾಯ ಕೋಲ, ಮಾಯಂದಾಳ್ ಕೋಲ ಜೋಗಿಪುರುಷ ಕೋಲ ನಡೆಯುತ್ತದೆ.
ಹೆಗ್ಗುಂಜೆ, ಕಾಡೂರು, ನಡೂರು, ಮುಂಡಾಡಿ, ಮಂದಾರ್ತಿ, ಕೊತ್ತೂರು, ಬೆಳ್ತಾಡಿ ಗ್ರಾಮದ ಜನರು ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವಗಳಲ್ಲಿ ಊರಜನರು ಭಾಗವಹಿಸುತ್ತಾರೆ.
ಗರೋಡಿಗೆ ಸಂಬಂಧಪಟ್ಟ 36ಸೆಂಟ್ಸ ಜಾಗವಿದೆ. ಊರಜನರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2013 ರಲ್ಲಿ ಜೀರ್ಣೋದ್ದಾರಗೊಂಡ ಈ ಗರೋಡಿಯನ್ನು 2025-26ರಲ್ಲಿ ಜೀರ್ಣೋದ್ಧಾರಗೊಳಿಸುವ ಯೋಜನೆಯಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಬು ಮಡಿವಾಳ, ಕಾಡೂರು ಇವರು ಮಡಿವಾಳರಾಗಿ, ವಿಜೇತ ದೇವಡಿಗ ನೀಲಾವರ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಾಡೂರು, ಬೆಳ್ತಾಡಿ,
ಕಾಡೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576234.

ಗರೋಡಿಯ ಅರ್ಚಕರು:

ಸಂತೋಷ ಪೂಜಾರಿ – 9482040719

ಮಾಹಿತಿ ನೀಡಿದವರು :

ಸಂತೋಷ ಪೂಜಾರಿ, ಅಶೋಕ್ ಶೆಟ್ಟಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Saparivaara Arbhaka Dhareshwari Sahita Shree Brahma Baidarkala Garodi , Nayarabettu, Shiroor Muddumane

ಸಪರಿವಾರ ಅರ್ಭಕ ಧಾರೇಶ್ವರೀ ಸಹಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನಾಯರ ಬೆಟ್ಟು.ಶೀರೂರು ಮುದ್ದುಮನೆ

ಉಡುಪಿಯಿಂದ ಶೀರೂರು ಮೂರುಕೈ ತಲುಪಿ ಮೂರುಕೈ ಜಂಕ್ಷನ್ ನಿಂದ 300ಮೀ. ದೂರದಲ್ಲಿ ಬಲಕ್ಕೆ ತಿರುಗಿ ಸುಮಾರು 3.03 ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಈ ಗರೋಡಿಯು ಸಾಸ್ತಾನದ ಗೋಳಿಗರೋಡಿ ಸ್ಥಾಪನೆಯಾದ ಅನಂತರ ಸ್ಥಾಪನೆಯಾಯಿತಂತೆ. ಇಲ್ಲಿ ಪಂಜುರ್ಲಿ ದೈವವು ಪ್ರಾಮುಖ್ಯ ಪಡೆದಿದೆ. ಹೊಳೆಯ ಮಾರ್ಗವಾಗಿ ಗೋಳಿ ಗರೋಡಿಯಿಂದ ಈ ಊರಿಗೆ ಬಂದ ಪಂಜುರ್ಲಿಯ ಪ್ರಭಾವದಿಂದ ಇಲ್ಲಿ ಗರೋಡಿ ಸ್ಥಾಪನೆಯಾಗಿ ಎಲ್ಲಾ ದೈವಗಳನ್ನು ಮಣೆ ಮಂಚದಲ್ಲಿ ಪೂಜಿಸುತ್ತಿದ್ದರಂತೆ. ಮುಂದೆ ಗರೋಡಿ ಮನೆಯವರಿಗೆ ವಿವಾದ ಬಂದು ಒಂದು ಕಡೆಯವರು ಮಣೆಮಂಚಗಳನ್ನು ಹೊಳೆಗೆ ಬಿಸಾಡಿದರಂತೆ. ಗರೋಡಿ ಪೂಜಾರಿಯು ಹೊಳೆಗೆ ಸ್ಥಾನಕ್ಕೆಂದು ಹೋದಾಗ ಅಲ್ಲಿ ಮಣೆಮಂಚಗಳನ್ನು ಕಂಡು ಗಾಬರಿಗೊಂಡು ಆಗಿನ ಮೊಕ್ತೇಸರರನ್ನು ಹೊಳೆ ಬದಿಗೆ ಕರೆಸಿದರು. ಹೊಳೆಗೆ ಇಳಿದಾಗ ಅವರಿಗೆ ಮಣೆಮಂಚವು ನೀರಿನಲ್ಲಿ ಮೂರು ಸುತ್ತು ಬಂದಿತಂತೆ. ಮನೆಗೆ ತೆರಳಿದ ಮೊಕ್ತೇಸರರಿಗೆ ತೀವ್ರ ಅಸೌಖ್ಯವಾಗಿ ಕೊನೆಗೆ ಶಿವರಾಯ ದೈವದ ದರ್ಶನ ಮಾಡಿ ಕೇಳಿದಾಗ ಗರೋಡಿ ಸ್ಥಾಪನೆ ಮಾಡಬೇಕೆಂದು ಅಪ್ಪಣೆಯಾಯಿತಂತೆ. ಆ ಪ್ರಕಾರ ಪುನ: ಗೋಳಿಗರೋಡಿಗೆ ಹೋಗಿ ಅಲ್ಲಿಂದ ಸ್ವಲ್ಪ ಮಣ್ಣನ್ನು ತಂದು ಪಂಜುರ್ಲಿ, ನಾಗಬ್ರಹ್ಮ ಹಾಗೂ ಬೈದೇರುಗಳನ್ನು ಇಲ್ಲಿ ನೆಲೆಗೊಳಿಸಲಾಯಿತಂತೆ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಹಾಗೂ ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಇಬ್ಬರು ಬಲ್ಲಾಳರ ಮಣೆಮಂಚ, ಪಕ್ಕದಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರ ಮಣೆಮಂಚಗಳಿವೆ. ಗುಂಡದ ಹಿಂಭಾಗದಲ್ಲಿ ದೇಯಿ ಬೈದೆತಿಯ ಮಣೆಮಂಚಗಳಿವೆ.
ಗುಂಡದ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಚೌಂಡಿ, ಮೈಂದಾಳ್ತಿ ಮಣೆಮಂಚಗಳಿವೆ. ಪಕ್ಕದಲ್ಲಿ ಪಂಜುರ್ಲಿ ದೈವದ ಗದ್ದಿಗೆ ಇದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮೂರ್ತಿ ಇದೆ.
ಗರೋಡಿಯ ಹೊರಗೆ ಗುಡಿಯಲ್ಲಿ ಶಿವರಾಯ ದೈವದ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸಿ ಕಟ್ಟೆ, ಬಲಿಕಲ್ಲುಗಳಿವೆ.

ಕೃಷ್ಣ ಪೂಜಾರಿ

2010ರಿಂದ ಕೃಷ್ಣ ಪೂಜಾರಿಯವರು (48 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ಗೋವಿಂದ ಪೂಜಾರಿ, ಕಾಳಪೂಜಾರಿಯವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಬೈದ್ಯರ ದರ್ಶನ ಪಾತ್ರಿಗಳಿಲ್ಲ.
ಶಂಕರ ಶೆಟ್ಟಿ (ಬಚ್ಚು ಶೆಟ್ಟಿ) ಇವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ಆನಂದ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಕಾಯ್ದ ಪೂಜೆ, ದರ್ಶನ ಸೇವೆ, ಏಪ್ರಿಲ್ ತಿಂಗಳ 11ನೇ ತಾಖಿನಂದು ಗೆಂಡದ ಹಬ್ಬಗಳು ನಡೆಯುತ್ತವೆ.
ಶೀರೂರು ಮುದ್ದುಮನೆ, ಹೊರಲಾಳಿ, ನೆಂಚಾರ್, ಮಡಾಮಕ್ಕಿ ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಮುದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
08-03-2002ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು, ಈಗ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ದಿನೇಶ ಮಡಿವಾಳ ಮುದ್ದುಮನೆ ಇವರು ಮಡಿವಾಳರಾಗಿ, ರಾಜು ದೇವಾಡಿಗ ಶೀರೂರು ಇವರು ವಾದ್ಯದವರಾಗಿ, ಕರಿಯ ಮಿಯಾರು ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಸಪರಿವಾರ ಶ್ರೀ ಅರ್ಭಕ ಧಾರೇಶ್ವರೀ ಸಹಿತ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ನಾಯರಬೆಟ್ಟು,
ಶೀರೂರು ಮುದ್ದುಮನೆ,
ಬ್ರಹ್ಮಾವರ ತಾಲೂಕು – 576223.

ಗರೋಡಿಯ ಅರ್ಚಕರು:

ಕೃಷ್ಣ ಪೂಜಾರಿ – 8105460500

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baiderugala Chikkamma Devi Garodi

ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿ ಉಗ್ಗೆಲ್ಬೆಟ್ಟು.

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪೂರು ಕಡೆ ಸಾಗುತ್ತಾ ಜಾರಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ ಸಾಗಬೇಕು. ರೈಲ್ವೆ ಸೇತುವೆ ಬುಡದಲ್ಲಿ ಎಡಕ್ಕೆ ಸುಮಾರು 3ಕಿ. ಮೀ.ದೂರದಲ್ಲಿ ಗರೋಡಿಯಿದೆ. ಬ್ರಹ್ಮಾವರ ಕೃಷಿ ಕೇಂದ್ರದ ಮಾರ್ಗವಾಗಿ ಉಗ್ಗೆಲ್ಬೆಟ್ಟು ಅಣೆಕಟ್ಟು ಮಾರ್ಗವಾಗಿಯೂ ಗರೋಡಿ ತಲುಪಬಹುದು.
ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದಲ್ಲಿರುವ ಉಗ್ಗೆಲ್ಬೆಟ್ಟು ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿಯು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆ ಗೊಂಡಿದೆ. ಮುಖ್ಯ ದ್ವಾರ ಮೂಡು ಮುಖವಾಗಿದ್ದು ಇನ್ನೊಂದು ದ್ವಾರ ಪಡುಮುಖವಿದೆ.
ಗರೋಡಿಯ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗ ಬ್ರಹ್ಮ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಗಿಂಡೆ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ದೇಯಿ ಬೈದೆತಿಯ ಪಾಪೆ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ದೇಯಿ ಬೈದೆತಿಯ ಪಾಪೆ ಇದೆ.
ವಾಲಗ ಚಾವಡಿಯಲ್ಲಿ ಮಾಯಂದಾಲ್ ಮತ್ತು ಮಗು, ಕುಲತ ಜುಮಾದಿ, ಬಹಳಷ್ಟು ಕಾರ್ಣಿಕ ಮೆರೆಯುತ್ತಿರುವ ಚಿಕ್ಕಮ್ಮದೇವಿ, ಬಗ್ಗು ಚಿಕ್ಕು, ಬಾಳ್ ಚಿಕ್ಕು, ಹೈಗುಳಿ, ಜೋಗಿಪುರುಷರ ಪಾಪೆಗಳಿವೆ. ಆಯದ ಕಂಬವೇ ಗುರುಕಂಬವಾಗಿದೆ.
ಆವರಣದಲ್ಲಿ ಹುಲಿಚಾಮುಂಡಿ, ಆಯದ ಕಲ್ಲು ಇದೆ. ಹೊರ ಆವರಣದಲ್ಲಿ ಕ್ಷೇತ್ರಪಾಲ, ನಾಗ ಸನ್ನಿಧಿ ಇದೆ.

ಸೋಮ ಪೂಜಾರಿ

ದಿ. ಸಂಜೀವ ಪೂಜಾರಿ

ಸುಮಾರು 22 ವರ್ಷಗಳಿಂದ ಉಗ್ಗೆಲ್ಬೆಟ್ಟು ಗರೋಡಿ ಮನೆ ಸೋಮ ಪೂಜಾರಿ (70 ವರ್ಷ) ಯವರು ಗರೋಡಿ ಅರ್ಚಕರಾಗಿದ್ದಾರೆ. ಹಿಂದೆ ಇವರ ಮಾವ ಸಂಜೀವ ಪೂಜಾರಿಯವರು ಸುಮಾರು 30 ವರ್ಷಗಳ ಕಾಲ ಅರ್ಚಕರಾಗಿದ್ದರು. ಇವರ ಮೊದಲು ಕೊರಗ ಪೂಜಾರಿ, ಗರೋಡಿ ಮನೆ ಚೆನ್ನಪ್ಪ ಪೂಜಾರಿ, ಅನಂತ ಪೂಜಾರಿ, ಕಾಳ ಪೂಜಾರಿಯವರು ಪೂ ಪೂಜನೆಯವರಾಗಿದ್ದರು.
ಸದ್ಯ ಈ ಗರೋಡಿಗೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೊರಗ ಪೂಜಾರಿಯವರು, ಕಾಳು ಪೂಜಾರಿಯವರು, ಅನಂತ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.

ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು

ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು ಇವರು ಗರೋಡಿಯ ಆಡಳಿತ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಈ ಗರೋಡಿಯಲ್ಲಿ ಪ್ರತೀ ಶುಕ್ರವಾರ ಪೂಜೆ ಇದೆ. ಉಳಿದಂತೆ ಸೂಡ ಸಂಕ್ರಮಣ ಅನುಸರಿಸಿ ಪ್ರತೀ ತಿಂಗಳ ಸಂಕ್ರಾಂತಿ ಪೂಜೆ ಜರಗುತ್ತದೆ. ಅಂದು ಅನ್ನದಾನ ಸೇವೆ ನಡೆಯುತ್ತದೆ. ಚೌತಿ ಪೂಜೆ ಇದೆ. ದೀಪಾವಳಿಯಂದು ದೀಪದ ಕಂಬವನ್ನಿಟ್ಟು ಪೂಜೆ, ಸೋಣ ತಿಂಗಳಿಡೀ ನಿತ್ಯ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಪಂಚ ಕಜ್ಜಾಯ ಸೇವೆ ಇದೆ.
ಡಿಸೆಂಬರ್ 6 ನೇ ತಾರೀಕಿನಂದು ಕೊಡಿ ತಿಂಗಳಲ್ಲಿ ಅನ್ನ ನೈವೇದ್ಯ ಅಗೆಲು ಸೇವೆ ಇದೆ. ಮರುದಿನ ನೇಮೋತ್ಸವ, ಮರುದಿನ ಮಾಯಂದಾಳ್ ನೇಮ, ಅದರ ಮರುದಿನ ಹುಲಿಚಾಮುಂಡಿ ಕೋಲವಿದೆ. ಮಾರ್ಚ 29ರಂದು ಕಾಲಾವಧಿ ಅನ್ನ ನೈವೇದ್ಯ, 30ರಂದು ನೇಮೋತ್ಸವ, ಮರುದಿನ ಮಾಯಂದಾಲ್ ನೇಮವಿದೆ.
ಇಲ್ಲಿನ ಕೂಡು ಕಟ್ಟಿಗೆ ಹೇರೂರು, ಉಪ್ಪೂರು, ಉಗ್ಗೆಲ್ಬೆಟ್ಟು, ಜಾತಬೆಟ್ಟು, ಕುದ್ರುಬೆಟ್ಟು, ತೆಂಕಬೆಟ್ಟು, ಹೆರಂಜೆ, ಅಮ್ಮುಂಜೆ ಗ್ರಾಮಗಳು ಸೇರುತ್ತವೆ. ವಂತಿಗೆ, ವರಡದ ರೂಪದಲ್ಲಿ ಖರ್ಚು ವೆಚ್ಚಗಳು ನಿಭಾಯಿಸಲ್ಪಡುತ್ತವೆ. ಇದರ ಉಸ್ತುವಾರಿಯನ್ನು ಗುರಿಕಾರರುಗಳಾದ ಗರೋಡಿ ಮನೆ ಪೂಜಾರಿ, ಕೋಟಿ ಪೂಜಾರಿ, ಶಂಕರ ಪೂಜಾರಿ, ವಿಶ್ವನಾಥ ಪೂಜಾರಿ, ಅವರು ನೋಡಿಕೊಳ್ಳುತ್ತಾರೆ.
ಕೂಡುಕಟ್ಟಿಗೆ ಸೇರಿದ ಮಂದಿ ನೀರು ಸ್ನಾನಕ್ಕೆ, ಕಂಚಿಲ್ ಸೇವೆಗಾಗಿ ಗರೋಡಿಗೆ ಬರುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಬೈದೇರುಗಳಿಗೆ ಜೋಡು ಕಾಯಿ ಕಾಣಿಕೆ ತೆಗೆದಿಡುತ್ತಾರೆ. ಪೂಜಾರಿ ಕಲಶ ಇಟ್ಟು ಶುದ್ಧ ಮಾಡುವ ಕ್ರಮ ಇದೆ.
1984 ಹಾಗೂ 1996ರಲ್ಲಿ ಗರೋಡಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶವಾಗಿದೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ದಿಯ ಯೋಜನೆಗಳನ್ನು ಗರೋಡಿ ಆಡಳಿತ ಮಂಡಳಿ ಹಮ್ಮಿಕೊಂಡಿದೆ.
ಈ ಗರೋಡಿಯಲ್ಲಿ ಬೊಗ್ಗು ಪರವ, ಜಯ ಪರವ ಅವರ ಸಂಘಟಿಗರು ನೃತ್ಯ ವಿಶಾರದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಮೆಣ್ಕ ಪರವ, ಅಮ್ಮು ಪರವ, ಪಿಜಿನ ಪರವ, ನರಂಗ ಪರವ ಇಲ್ಲಿನ ನೃತ್ಯ ವಿಶಾರದರಾಗಿದ್ದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿ ಉಗ್ಗೆಲ್ಬೆಟ್ಟು.
ಕೊಳಲಗಿರಿ ಅಂಚೆ,
ಉಪ್ಪೂರು ಗ್ರಾಮ,
ಬ್ರಹ್ಮಾವರ ತಾಲೂಕು.

ಆಡಳಿತ ಸಮಿತಿ:

ಅಧ್ಯಕ್ಷರು
ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು – 9632634704

ಮಾಹಿತಿ ನೀಡಿದವರು :

ಸೋಮ ಪೂಜಾರಿ, ಬೊಗ್ರ ಪೂಜಾರಿ, ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು

ಮಾಹಿತಿ ಸಂಗ್ರಹಿಸಿದ ದಿನಾಂಕ :

12.03.25

Shree Brahma Baidarkala Garodi, Halli, Vaddambettu

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಳ್ಳಿ, ವಡ್ಡಂಬೆಟ್ಟು

ಉಡುಪಿಯಿಂದ ಕೊಕ್ಕರ್ಣೆ ತಲುಪಿ, ಕೊಕ್ಕರ್ಣಿ ಬಸ್ ನಿಲ್ದಾಣದಿಂದ ಸುಮಾರು 2.5 ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಿ ಸುಮಾರು ಅರ್ದ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೇರೆ ಗರೋಡಿಗಳಲ್ಲಿ ನಾಗಬ್ರಹ್ಮರ ಕುದುರೆಯ ಮೇಲೆ ಕುಳಿತ ಮೂರ್ತಿಗಳಿದ್ದರೆ, ಈ ಗರೋಡಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಚತುರ್ಮುಖ ಬ್ರಹ್ಮನ ನಿಂತಿರುವ ಭಂಗಿಯ ಕಂಚಿನ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದಮೂರ್ತಿ ಹಾಗೂ ಚೌಂಡಿ ದೈವದ ಮಣೆಮಂಚವಿದೆ.
ಗುಂಡದ ಎಡಭಾಗದಲ್ಲಿ ಬಲ್ಲಾಳರು ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮಣೆಮಂಚ, ಪಂಜುರ್ಲಿ ದೈವದ ಗದ್ದಿಗೆ, ಮೈಂದಾಳ್ತಿ ಮಗು ಹಾಗೂ ತೊಟ್ಟಿಲಿನ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ಚಿಕ್ಕಮ್ಮ , ಜುಮಾದಿ, ಒಂದು ದೈವಗಳ ಮಣೆಮಂಚವಿದೆ.
ಗರೋಡಿಯ ಎದುರಿನಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಗರೋಡಿಯ ಹತ್ತಿರದಲ್ಲಿಯೇ ಶ್ರೀ ವೀರಭದ್ರ ಅಬ್ಬಗ ಧಾರಗ ದೇವಸ್ಥಾನ, ಬ್ರಹ್ಮ ಹಾಗೂ ಚಿಕ್ಕಮ್ಮ ಗುಡಿಗಳಿವೆ.
ಹತ್ತಿರದಲ್ಲಿಯೇ ಕಂಬಳ ಗದ್ದೆಗಳಿವೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿಕಲ್ಲು ಹಾಗೂ ದೀಪದ ಕಂಬಗಳಿವೆ.

ನರಸಿಂಹ ಪೂಜಾರಿ

ಅಣ್ಣಪ್ಪ ಪೂಜಾರಿ

1) ನರಸಿಂಹ ಪೂಜಾರಿ (65 ವರ್ಷ) 2) ಅಣ್ಣಪ್ಪ ಪೂಜಾರಿ (50 ವರ್ಷ) 3) ಬಾಲ ಪೂಜಾರಿ (50 ವರ್ಷ) ಹಾಗೂ ಗಣೇಶ ಪೂಜಾರಿ ಹೀಗೆ ಗರಡಿ ಮನೆಯ ಮೂರು ಮನೆಯವರು ವರ್ಷಕ್ಕೊಂದು ಮನೆಯವರಂತೆ ಅರ್ಚಕರಾಗಿ ಸೇವೆ ಮಾಡುತ್ತಾರೆ. ಇವರ ಮೊದಲು ಈ ಮೂರು ಮನೆಗಳ ಹಿರಿಯರಾದ ಗೋಪಾಲ ಪೂಜಾರಿ, ಬುಡ್ಡ ಪೂಜಾರಿ, ರಾಮ ಪೂಜಾರಿ, ಸಾಸ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು.
ಅದೇ ರೀತಿ 1) ಹಳ್ಳಿ ಮೇಲ್ಮನೆ ರಂಜಿತ್ ಶೆಟ್ಟಿ 2) ನಡುಮನೆ ಗಣಪತಿ ಮಾಸ್ಟರ್ 3) ಕೆಳಮನೆ ಕೃಷ್ಣಯ್ಯ ಶೆಟ್ಟಿ ಇವರುಗಳು ಈ ಗರೋಡಿಯ ಮೊಕ್ತೇಸರರಾಗಿದ್ದು, ವರ್ಷಕ್ಕೊಮ್ಮೆ ಈ ಮೂರು ಮನೆಗಳ ಮಧ್ಯೆ ಈ ಜವಾಬ್ದಾರಿ ಬದಲಾಯಿಸಲಾಗುತ್ತದೆ.
ಅರ್ಚಕರಾದ ಅಣ್ಣಪ್ಪ ಪೂಜಾರಿಯವರು ಗರೋಡಿಯ ಸ್ಥಳ ಪಾತ್ರಿಯಾಗಿಯೂ ಸೇವೆ ಮಾಡುತ್ತಿದ್ದಾರೆ. ಹಿಂದೆ ಗೋಪಾಲ ಪೂಜಾರಿ, ಬುಡ್ಡ ಪೂಜಾರಿ, ಹಾಗೂ ವಿಠಲ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳ ಸಂಕ್ರಾಂತಿಯಂದು ಅಗೆಲು ಸೇವೆ, ಎಲ್ಲಾ ದೈವಗಳ ದರ್ಶನ ಸೇವೆ ನಡೆದು, ಹಳ್ಳಿ ಮೂರು ಮನೆಯವರ ವತಿಯಿಂದ ಕಂಬಳ ನಡೆಯುತ್ತದೆ. ಏಪ್ರಿಲ್ ತಿಂಗಳ 5 ನೇ ತಾರೀಖಿನಂದು ಕಂಬ ಮುಹೂರ್ತ, 6 ಕ್ಕೆ ಸ್ವಚ್ಚ ಮಾಡುವುದು, 7 ಕ್ಕೆ ಅಗೆಲು ಸೇವೆ, ದರ್ಶನ ಸೇವೆ, 8 ಕ್ಕೆ ನೇಮೋತ್ಸವ, ಜೋಗಿ ಪುರುಷ, ಮೈಂದಾಳ್ತಿಕೋಲ, ದರ್ಶನ ಸೇವೆ ನಡೆಯುತ್ತದೆ. ಏಪ್ರಿಲ್ 24 ಕ್ಕೆ ಶಿವರಾಯ ಮಾರಿ ಹಬ್ಬಗಳು ನಡೆಯುತ್ತದೆ.
ಸೂರಾಲು ಮಾಗಣೆ, ಕುದಿ, ಪೆಜಮಂಗೂರು, ಹೊಸೂರು, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಜನರು ಗರೋಡಿಯಲ್ಲಿ ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1940 ಹಾಗೂ 1979ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ ಚೇರ್ಕಾಡಿ, ಇವರು ನೃತ್ಯ ವಿಶಾರದರಾಗಿ, ರಾಮ ಮಡಿವಾಳ ಹಳ್ಳಿ ಇವರು ಮಡಿವಾಳರಾಗಿ, ಜಬ್ಬ ದೇವಾಡಿಗ ಸೂರಾಲು ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ ಗರೋಡಿ, ಹಳ್ಳಿ ವಡ್ಡಂಬೆಟ್ಟು,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576234

ಗರೋಡಿಯ ಅರ್ಚಕರು :

ಗಣೇಶ ಪೂಜಾರಿ – 9113884392

ಮಾಹಿತಿ ನೀಡಿದವರು

ಅಣ್ಣಪ್ಪ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024

Abbakka Dharakka Umamaheshwari Shree Brahma Baidarkala Garodi, Karje

ಅಬ್ಬಕ್ಕ ದಾರಕ್ಕ ಉಮಾಮಹೇಶ್ವರಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕರ್ಜೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ಭದ್ರಗಿರಿಯ ಬಲಕ್ಕೆ ತಿರುಗಿ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸುಮಾರು 17.58 ಕಿ.ಮೀ. ದೂರದ ಕರ್ಜೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರದಲ್ಲಿದೆ ಈ ಗರೋಡಿ.
ಗರೋಡಿಯು ಉತ್ತರಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಹಿಂದಿನ ಕಾಲದಲ್ಲಿ ಕೆಲವು ಭಕ್ತರು ಕಾಶಿ ಯಾತ್ರೆಗೆಂದು ಹೋಗುತ್ತಿದ್ದಾಗ, ಬೈದೇರುಗಳು ಅವರಿಗೆ ನೀವು “ಕಾಶಿಗೆ ಹೋಗುವುದು ಬೇಡ, ಇಲ್ಲಿಯೇ ಕಾಶಿಯ ತೀರ್ಥವಿದೆ“ಎಂದು ಕರ್ಜೆಯಲ್ಲಿ ನೆಲೆ ನಿಂತರಂತೆ. ಹಾಗೆ ಇಲ್ಲಿ ಗರೋಡಿಯ ಸ್ಥಾಪನೆಯಾಯಿತಂತೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕೊಡೆ (ಸತ್ತಿಗೆ) ಯನ್ನು ಹೊಂದಿದ ಮೂರ್ತಿಯಿದೆ. ಗುಂಡದ ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಟ್ಟದ ಪಂಜುರ್ಲಿ, ಮರ್ಲಚಿಕ್ಕು ದೈವಗಳ ಮಣೆಮಂಚವಿದೆ.
ಪಕ್ಕದಲ್ಲಿ ಜೋಗಿಪುರುಷರ ಮರದ ಮೂರ್ತಿ, ಹೈಗುಳಿ, ಯಕ್ಷಿ ಹಾಗೂ ಭಟ್ಟರ್ತಿ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯ ಎರಡು ಮಣೆಮಂಚಗಳಿವೆ.
ಗರೋಡಿಯ ಎದುರಿರುವ ಗುಡಿಯಲ್ಲಿ ಮಾಯಂದಾಳ್ ಮತ್ತು ಮಗು, ತೊಟ್ಟಿಲುಗಳಿವೆ.
ಗರೋಡಿಯ ಹಿಂಬದಿಯಲ್ಲಿರುವ ಗುಡಿಯಲ್ಲಿ ಕಾರ್ತಿ, ಬೈಕಾಡ್ತಿ ದೈವಗಳ ಮರದ ಮೂರ್ತಿಗಳಿರುವ ಸಾನಿಧ್ಯವಿದೆ. ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಬಲಿಕಲ್ಲು, ನೇಮ ಚಾವಡಿಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಅನುರಾಗ ಎಸ್. ಪೂಜಾರಿ

ಅನುರಾಗ ಎಸ್. ಪೂಜಾರಿ (46 ವರ್ಷ) ಇವರು 2011 ರಿಂದ ಇಲ್ಲಿಯ ಅರ್ಚಕರಾಗಿದ್ದಾರೆ. ಇವರು ಮೊದಲು ಬಾಬು ಪೂಜಾರಿ, ಕೂಕ್ರ ಪೂಜಾರಿ, ಕೊರಗ ಪೂಜಾರಿ, ಮುತ್ತು ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಗುಂಡು ಪೂಜಾರಿ (55 ವರ್ಷ) ಗೋಪಾಲ ಪೂಜಾರಿ (45 ವರ್ಷ) ಮಂಜು ಪೂಜಾರಿ (38 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಶುಕ್ರ ಪೂಜಾರಿ, ಕೃಷ್ಣಯ್ಯ ಪೂಜಾರಿಯವರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಶೇಖರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿ, ಕಿರಣ್ ಕುಮಾರ್ ಶೆಟ್ಟಿ ಯವರು ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀವರ್ಷ ವೃಶ್ಚಿಕ ಸಂಕ್ರಮಣದಂದು ಹಾಲು ಹಬ್ಬ, ದರ್ಶನ ಸೇವೆ, ಅಗೆಲು ಸೇವೆ, ಫೆಬ್ರವರಿ ತಿಂಗಳ 26 ನೇ ತಾರೀಖಿಗೆ ಕಂಬ ಮುಹೂರ್ತ, 27 ಕ್ಕೆ ಅಗೆಲು ಸೇವೆ, 28 ಕ್ಕೆ ಬೈದರ್ಕಳ ನೇಮೋತ್ಸವ ಹಾಗೂ ದರ್ಶನ ಸೇವೆ ನಡೆಯುತ್ತದೆ. ಏಪ್ರಿಲ್ ತಿಂಗಳ 14ನೇ ತಾರೀಖಿನಂದು ಗೆಂಡ ಸೇವೆ, ಪಂಜುರ್ಲಿ ಕೋಲ, ಮಾಯಂದಾಲ್ ಕೋಲ, ಜೋಗಿಪರುಷ ಕೋಲ ಹಾಗೂ ತುಲಾಭಾರ ಸೇವೆಗಳು ನಡೆಯುತ್ತದೆ.
ಹೊಸೂರು, ಮೈರ್ಮಾಡಿ, ಕುರ್ಪಾಡಿ, ಸುರಾಲು, ಹಳುವಳ್ಳಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿರುತ್ತವೆ. ಕೂಡುಕಟ್ಟಿಗೆ ಸೇರಿದ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವಂತಿಗೆ, ಸಹಾಯಧನ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯು 1998, 2002 ರಲ್ಲಿ ಜೀರ್ಣೋದ್ಧಾರಗೊಂಡಿದ್ದು ಈಗ ಪುನ: ಜೀರ್ಣೋದ್ಧಾರವಾಗುವ ಯೋಜನೆಯಲ್ಲಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ನಾರಾಯಣ ಮಡಿವಾಳ, ಚೇರ್ಕಾಡಿ ಮಡಿವಾಳರಾಗಿ, ದಿನೇಶ ದೇವಾಡಿಗ ಸೂರಾಲು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಅಬ್ಬಕ್ಕ ದಾರಕ್ಕ ಉಮಾಮಹೇಶ್ವರಿ ಶ್ರೀ ಬ್ರಹ್ಮಬೈದರ್ಕಳಲ ಗರೋಡಿ ಕರ್ಜೆ,
ಹೊಸೂರು ಗ್ರಾಮ, ಕರ್ಜೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576215.

ಗರೋಡಿಯ ಅರ್ಚಕರು :

ಅನುರಾಗ ಎಸ್. ಪೂಜಾರಿ
ಮೊಬೈಲ್ : 8497878588, 9901878757

ಮಾಹಿತಿ ನೀಡಿದವರು :

ಅನುರಾಗ ಎಸ್. ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024